ಚೀನಾ-ಭಾರತ ಗಡಿ ವಿವಾದ: ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸಿದ್ದ – ಎಂ ಎಂ ನರವಾಣೆ
ರಾಷ್ಟ್ರೀಯ

ಚೀನಾ-ಭಾರತ ಗಡಿ ವಿವಾದ: ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸಿದ್ದ – ಎಂ ಎಂ ನರವಾಣೆ

ಚುಸುಲ್ ವಲಯಕ್ಕೆ ಭೇಟಿ ನೀಡಿರುವ ನರವಾಣೆ, ವಾಸ್ತಾವಿಕ ಗಡಿ ರೇಖೆಯಲ್ಲಿ ಸದ್ಯದ ಪರಿಸ್ಥಿತಿ ತುಂಬಾ ಸೂಕ್ಷ್ಮ ಹಾಗೂ ಗಂಭೀರವಾಗಿದೆ. ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಿದ್ದಾರೆ, ಎಂದು ಹೇಳಿದ್ದಾರೆ.

ಪ್ರತಿಧ್ವನಿ ವರದಿ

ಗಡಿಯಲ್ಲಿ ಭಾರತೀಯ ಸೈನಿಕರ ಸ್ಥೈರ್ಯ ಉತ್ತುಂಗದಲ್ಲಿದೆ, ವಾಸ್ತಾವಿಕ ಗಡಿರೇಖೆಯಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಅದನ್ನು ಸಂಭಾಳಿಸಲು ಸಿದ್ದರಿದ್ದಾರೆ, ಎಂದು ಭಾರತೀಯ ಸೇನಾ ಮುಖ್ಯಸ್ಥ ಎಂ ಎಂ ನರವಾಣೆ ಹೇಳಿದ್ದಾರೆ. ಚೀನಾ ತನ್ನ ಸೈನಿಕರ ಜಮಾವಣೆಯನ್ನು ಹಿಂಪಡೆಯುವ ವರೆಗೆ ಭಾರತೀಯ ಸೈನಿಕರು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಈ ಹಿಂದೆ ಸೇನೆ ಹೇಳಿತ್ತು.

ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಸೈನಿಕರು ಮತ್ತು ಭಾರತೀಯ ಯೋಧರ ನಡುವಿನ ಘರ್ಷಣೆಯ ನಂತರ ಕಳೆದ ಸುಮಾರು ಮೂರು ತಿಂಗಳಿನಿಂದ ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಿಂತಲೂ ಹಿಂದಿನಿಂದಲೇ, ಭಾರತದ ಗಡಿಯಲ್ಲಿ ತನ್ನ ಸೇನೆಯನ್ನು ಜಮಾವಣೆ ಮಾಡಲು ಆರಂಭಿಸಿತ್ತು. ಗಡಿ ರೇಖೆಯ ಒಳ ನುಸುಳಿ ಆ ಪ್ರದೇಶವು ತಮಗೆ ಸೇರಿದ್ದು ಎಂದು ಹೇಳುವ ತನ್ನ ಹಳೇ ಚಾಳಿಯನ್ನು ಮುಂದುವರೆಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗಾಲ್ವಾನ್‌ ಪ್ರದೇಶದಿಂದ ಚೀನೀ ಸೈನಿಕರು, ಹಿಂದೆ ಸರಿದ ಕುರಿತು ವರದಿಯಾಗಿದ್ದರೂ, ಈಗ ಲಡಾಖ್‌ನ ಚುಸುಲ್‌ನಲ್ಲಿ ಮತ್ತೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಎರಡೂ ಕಡೆಯ ಸೈನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಯಾಗುತ್ತಿದ್ದಾರೆ. ಯುದ್ದೋಪಕರಣಗಳ ಜಮಾವಣೆ ಕೂಡಾ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಚುಸುಲ್‌ ಪ್ರದೇಶಕ್ಕೆ ಭೇಟಿ ನೀಡಿರುವ ನರವಾಣೆ, ವಾಸ್ತಾವಿಕ ಗಡಿ ರೇಖೆಯಲ್ಲಿ ಸದ್ಯದ ಪರಿಸ್ಥಿತಿ ತುಂಬಾ ಸೂಕ್ಷ್ಮ ಹಾಗೂ ಗಂಭೀರವಾಗಿದೆ. ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಿದ್ದಾರೆ, ಎಂದು ಹೇಳಿದ್ದಾರೆ.

ನೌಕಾಸೇನೆಯ ಬಲವೃದ್ದಿ ಮಾಡುತ್ತಿರುವ ಚೀನಾ:

ಅಮೇರಿಕಾದ ಪೆಂಟಗಾನ್‌ನಿಂದ ನೀಡಲಾಗಿರುವ ವರದಿಯಲ್ಲಿ ಹೇಳಿರುವ ಪ್ರಕಾರ, ಪ್ರಪಂಚದಲ್ಲಿ ಚೀನಾ ಅತ್ಯಂತ ದೊಡ್ಡ ನೌಕಾಸೇನೆಯನ್ನು ಹೊಂದಿದೆ. ತನ್ನ ಯೋಜನೆಗಳಿಗೆ ಪೂರಕವಾಗುವಂತೆ ಸುಮಾರು 12 ದೇಶಗಳಲ್ಲಿ ತನ್ನ ನೌಕಾಸೇನಾ ನೆಲೆಯನ್ನು ಸ್ಥಾಪಿಸುವ ಇರಾದೆಯನ್ನು ಹೊಂದಿದೆ ಎಂದು ಹೇಳಿದೆ.

ಇಂಡೋ-ಪೆಸಿಫಿಕ್‌ ವಲಯದಲ್ಲಿ ಬರುವಂತಹ ಪಾಕಿಸ್ತಾನ, ಶ್ರೀಲಂಕಾ ಹಾಗೂ ಮಯನ್ಮಾರ್‌ ಸೇರಿದಂತೆ ಉತರ ರಾಷ್ಟ್ರಗಳ ಮೇಲೆ ಕಣ್ಣಿಟ್ಟಿದೆ. ಇಷ್ಟು ಮಾತ್ರವಲ್ಲದೇ, ತನ್ನಲ್ಲಿರುವ ಅಣ್ವಸ್ತ್ರಗಳ ಪ್ರಮಾಣವನ್ನು ಮುಂದಿನ ಹತ್ತು ವರ್ಷಗಳಲ್ಲಿ ದ್ವಿಗುಣಗೊಳಿಸುವ ಯೋಜನೆಯನ್ನು ಕೂಡಾ ಹಾಕಿಕೊಂಡಿದೆ, ಎಂದು ವರದಿ ಹೇಳಿದೆ.

ಭಾರತದ ಸುತ್ತಲಿರುವ ಎಲ್ಲಾ ರಾಷ್ಟ್ರಗಳಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿ ಭಾರತವನ್ನು ʼಏಕಾಂಗಿʼ ಮಾಡುವ ಹುನ್ನಾರ ಇದಾಗಿದೆ ಎನ್ನುತ್ತಾರೆ, ವಿಮರ್ಶಕರು. ಒಂದೆಡೆ ಭಾರತವನ್ನು ಗಡಿಯಲ್ಲಿ ತಲ್ಲೀನರಾಗಿರುವಂತೆ ಮಾಡಿ ತನ್ನ ಸೇನಾ ನೆಲೆಗಳನ್ನು ವಿಸ್ತರಿಸುವ ಕುಟಿಲ ಯೋಜನೆಯನ್ನು ಚೀನಾ ಹೊಂದಿರುವುದಂತೂ ಸತ್ಯ. ಆದರೆ, ಸೇನೆಗೆ ಬೇಕಾಗುವ ಪರಿಕರಗಳನ್ನು ಖರೀದಿಸಲು ದೇಶದಲ್ಲಿ ಹಣಕಾಸಿನ ಕೊರತೆಯಿದೆ ಎಂದು ಕೂಡಾ ವರದಿಯಾಗಿತ್ತು. ಇಂತಹ ಸಂದರ್ಭದಲ್ಲಿ ಭಾರತ ಯಾವ ರೀತಿಯ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com