ಅಮೆರಿಕಾ: ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ
Kaye Mathew
ರಾಷ್ಟ್ರೀಯ

ಅಮೆರಿಕಾ: ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ

ನಗ್ನರಾಗಿದ್ದ ಡ್ಯಾನಿಯೆಲ್‌ನ ಕುತ್ತಿಗೆಯ ಹಿಂಬಾಗದಿಂದ ಕೈಗಳನ್ನು ಬಳಸಿ ನೆಲಕ್ಕೆ ಒತ್ತಿಹಿಡಿಯುವ ವೀಡಿಯೋ ಈಗ ವೈರಲ್‌ ಆಗಿದೆ. ಆ ಸಂಧರ್ಭದಲ್ಲಿ ಡ್ಯಾನಿಯೆಲ್‌ ಕೈಗಳಿಗೆ ಕೋಳ ಹಾಕಲಾಗಿತ್ತು. ಅವರನ್ನು ನಡು ರಸ್ತೆಯಲ್ಲಿ ನೆಲಕ್ಕೆ ಒತ್ತಿ ಹಿಡಿಯಲಾಗಿತ್ತು.

ಪ್ರತಿಧ್ವನಿ ವರದಿ

ಅಮೇರಿಕಾ ಹೊತ್ತಿ ಉರಿಯಲು ಕಾರಣವಾದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ರೀತಿಯದ್ದೇ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ದೌರ್ಜನ್ಯಕ್ಕೆ ರೊಚೆಸ್ಟರ್‌ನಲ್ಲಿ ಕಪ್ಪುವರ್ಣೀಯ ವ್ಯಕ್ತಿ ಡ್ಯಾನಿಯೆಲ್‌ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಪೊಲೀಸ್‌ ವಶದಲ್ಲಿ ಕಪ್ಪು ಜನಾಂಗದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯಾಗುವುದಕ್ಕೂ ಎರಡು ತಿಂಗಳು ಮೊದಲು ಈ ಘಟನೆ ನಡೆದಿದೆ. ಆದರೆ, ಎರಡು ದಿನಗಳ ಹಿಂದೆಯಷ್ಟೇ ಪ್ರಕರಣ ಜಾಹೀರಾಗಿದೆ. ಡ್ಯಾನಿಯೆಲ್‌ ಕುಟುಂಬ ಸದಸ್ಯರು ಬುಧವಾರ ಮಾಧ್ಯಮಗೋಷ್ಠಿ ನಡೆಸಿ, ವಿಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿದ ಮೇಲೆ ಪೊಲೀಸ್‌ ಅಧಿಕಾರಿಗಳ ಅಮಾನವೀಯ ವರ್ತನೆ ಹೊರಜಗತ್ತಿಗೆ ಬಹಿರಂಗಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೊಚೆಸ್ಟರ್‌ ಮೇಯರ್, ಏಳು ಜನ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಘಟನೆ ಖಂಡಿಸಿ ವ್ಯಾಪಕ ಪ್ರತಿಭಟನೆಯೂ ವ್ಯಕ್ತವಾಗಿದೆ.

ಈ ಘಟನೆ ಮಾರ್ಚ್‌ 24ರಂದು ನಡೆದಿದ್ದು, 41 ವರ್ಷದ ಡ್ಯಾನಿಯೆಲ್‌ ಪ್ರ್ಯೂಡ್‌ ಮೃತ ವ್ಯಕ್ತಿ. ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಡ್ಯಾನಿಯೆಲ್‌ ರಲ್ಲಿ ಉಸಿರಾಟ ಸಮಸ್ಯೆ ಕಂಡುಬಂದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಏಳು ದಿನಗಳ ಕಾಲ ಸತತ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ ಡ್ಯಾನಿಯಲ್‌, ಕಡೆಗೂ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್‌ 30ರಂದು ಮೃತಪಟ್ಟಿದ್ದಾರೆ.

ಘಟನೆ ವಿವರ:

ರೊಚೆಸ್ಟರ್‌ನಲ್ಲಿದ್ದ ಸಹೋದರ ಜೋ ಪ್ರ್ಯೂಡ್‌ ಅವರನ್ನು ಭೇಟಿಯಾಗಲು ಚಿಕಾಗೊದಿಂದ ಬಂದಿದ್ದ ಡ್ಯಾನಿಯೆಲ್‌, ಮಾನಸಿಕ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ವರ್ತಿಸಿ ಮನೆಯಿಂದ ಓಡಿಹೋಗುತ್ತಾರೆ. ಸಹೋದರ ಜೋ ಇದನ್ನು ಪೊಲೀಸರಿಗೆ ತಿಳಿಸಿ ಸಹಾಯ ಕೇಳುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ಡ್ಯಾನಿಯೆಲ್‌ನನ್ನು ಬಂಧಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಪೊಲೀಸ್‌ ಮೂಲಗಳು ಹೇಳುತ್ತವೆ.

ಬಂಧನಕ್ಕೂ ಮೊದಲು, ಮೈಮೇಲೆ ಬಟ್ಟೆ ಇರದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಡ್ಯಾನಿಯೆಲ್‌, ತನಗೆ ಕರೊನಾ ಸೋಂಕು ತಗುಲಿದೆ ಎನ್ನುತ್ತಾ ರಸ್ತೆಯಲ್ಲಿ ಓಡಾಡಿ, ಕಾರೊಂದರ ಒಳಗೆ ನುಗ್ಗಲು ಯತ್ನಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಆದರೆ, ನಗ್ನರಾಗಿದ್ದ ಡ್ಯಾನಿಯೆಲ್‌ನ ಕುತ್ತಿಗೆಯ ಹಿಂಬಾಗದಿಂದ ಕೈಗಳನ್ನು ಬಳಸಿ ನೆಲಕ್ಕೆ ಒತ್ತಿಹಿಡಿಯುವ ವೀಡಿಯೋ ಈಗ ವೈರಲ್‌ ಆಗಿದೆ. ಆ ಸಂಧರ್ಭದಲ್ಲಿ ಡ್ಯಾನಿಯೆಲ್‌ ಕೈಗಳಿಗೆ ಕೋಳ ಹಾಕಲಾಗಿತ್ತು. ಅವರನ್ನು ನಡು ರಸ್ತೆಯಲ್ಲಿ ನೆಲಕ್ಕೆ ಒತ್ತಿ ಹಿಡಿಯಲಾಗಿತ್ತು. ವಿಡಿಯೊದಲ್ಲಿ ಡ್ಯಾನಿಯೆಲ್‌ ಪೊಲೀಸರ ವಿರುದ್ಧ ಕೂಗಾಡುತ್ತಿರುವುದು ಕಂಡು ಬರುತ್ತದೆ. ಸುತ್ತಲೂ ನಿಂತಿರುವ ಪೊಲೀಸರು ನಗುತ್ತಿರುವುದು ಕಂಡು ಬರುತ್ತದೆ. ಆಗ ತಾನೆ ಕರೊನಾ ಸೋಂಕು ವ್ಯಾಪಿಸುತ್ತಿದ್ದ ಕಾರಣ, ಆತ ಉಗುಳಬಾರದು ಎಂಬ ಉದ್ದೇಶಕ್ಕೆ ಆತನಿಗೆ ಮುಖಗವಸು ಹಾಕುವ ದೃಶ್ಯಗಳು ವಿಡಿಯೊದಲ್ಲಿವೆ.

ಇದಾದ ಐದು ನಿಮಿಷಗಳ ನಂತರ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆಸ್ಪತ್ರೆಗೆ ಕರೆ ತರುವಾಗಲೇ ಡ್ಯಾನಿಯಲ್‌ ಮೆದುಳು ನಿಷ್ಕ್ರಿಯಗೊಂಡಿರುತ್ತದೆ. ಒಂದು ವಾರದ ತರುವಾಯ ಡ್ಯಾನಿಯೆಲ್‌ ಕೊನೆಯುಸಿರೆಳೆಯುತ್ತಾರೆ. ‘ಡ್ಯಾನಿಯೆಲ್‌ ಉಸಿರಾಟಕ್ಕೆ ತೊಂದರೆಯಾದ ಕಾರಣ ಅವರು ಮೃತಪಟ್ಟಿದ್ದಾನೆ. ಇದೊಂದು ಕೊಲೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಮನ್ರೊ ಕೌಂಟಿಯ (Monroe County) ವೈದ್ಯರು ಹೇಳಿದ್ದಾರೆ.

ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬನನ್ನು ಪೊಲೀಸರು ನಡೆಸಿಕೊಳ್ಳಬೇಕಾದ ರೀತಿ ಇದುವೇ ಎಂದು ಡ್ಯಾನಿಯೆಲ್‌ ಸಹೋದರ ಪ್ರಶ್ನಿಸಿದ್ದಾರೆ. ಇದೊಂದು ಕೋಲ್ಡ್‌ ಬ್ಲಡ್‌ ಮರ್ಡರ್‌ ಎಂದು ಕರೆದಿದ್ದಾರೆ. ಇನ್ನೂ ಎಷ್ಟು ಮಂದಿ ನನ್ನ ಸಹೋದರರಂತಹ ಅಮಾಯಕರು ನಿರ್ದಯವಾಗಿ ಪೊಲೀಸ್‌ ದೌರ್ಜನ್ಯಗಳಿಗೆ ಬಲಿಯಾಗಬೇಕು ಎಂದು ಪ್ರಶ್ನಿಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ, ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತದೆ ಎಂದು ರೊಚೆಸ್ಟರ್‌ ಪೊಲೀಸ್‌ ಮುಖ್ಯಸ್ಥ ಲಾ ರ‍್ಯಾನ್‌ ಸಿಂಗಲ್ಟರಿ ಹೇಳಿದ್ದಾರೆ.

‘ನಮ್ಮ ಪೊಲೀಸರೇ ಡ್ಯಾನಿಯೆಲ್‌ನನ್ನು ಕೊಲೆ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಡ್ಯಾನಿಯಲ್‌ ಸಾವಿಗೆ ಅವರ ಮಾನಸಿಕ ಆರೋಗ್ಯ ವ್ಯವಸ್ಥೆ, ನಮ್ಮ ಸಮಾಜ ಅಷ್ಟೇ ಅಲ್ಲ ನಾನೂ ಕೂಡಾ ಅವರ ಸಾವಿಗೆ ಕಾರಣ’ ಎಂದು ರೊಚೆಸ್ಟರ್‌ನ ಮೇಯರ್‌ ಲವ್ಲಿ ವಾರೆನ್‌ ಕಣ್ಣೀರು ಹಾಕಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com