ವಲಸೆ ಕಾರ್ಮಿಕರನ್ನು ತಲುಪದ ಆತ್ಮನಿರ್ಭರ್ ಭಾರತ ಯೋಜನೆ
ರಾಷ್ಟ್ರೀಯ

ವಲಸೆ ಕಾರ್ಮಿಕರನ್ನು ತಲುಪದ ಆತ್ಮನಿರ್ಭರ್ ಭಾರತ ಯೋಜನೆ

ದೆಹಲಿ ಮತ್ತು ಮಣಿಪುರ ರಾಜ್ಯಗಳು ತಮಗೆ ಹಂಚಿಕೆಯಾದ ಆಹಾರ ಮತ್ತು ಬೇಳೆ ಕಾಳುಗಳಲ್ಲಿ ಶೇಕಡಾ ನೂರರಷ್ಟನ್ನು ವಲಸೆ ಕಾರ್ಮಿರಿಗೆ ವಿತರಿಸಿವೆ. ಉತ್ತರಾಖಂಡ, ಮಧ್ಯಪ್ರದೇಶ, ಗೋವಾ, ತೆಲಂಗಾಣ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ಲಡಾಖ್ ಮತ್ತು ಲಕ್ಷದ್ವೀಪಗಳು ಶೇಕಡಾ 10% ಕ್ಕಿಂತ ಕಡಿಮೆ ಬೇಳೆ ಕಾಳುಗಳ ವಿತರಣೆಯನ್ನು ಮಾಡಿವೆ.

ಕೋವರ್ ಕೊಲ್ಲಿ ಇಂದ್ರೇಶ್

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌ 19 ಸೋಂಕಿನ ವಿರುದ್ದ ಎಲ್ಲ ರಾಷ್ಟ್ರಗಳೂ ಹೋರಾಟವನ್ನೇ ಮಾಡುತ್ತಿವೆ. ಕಳೆದ 6 ತಿಂಗಳುಗಳಿಂದ ದೇಶದ ಅರ್ಥ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ಇದರಲ್ಲಿ ಹೆಚ್ಚು ಸಂಕಷ್ಟಕ್ಕೀಡಾಗಿರುವ ಸಮುದಾಯವೆಂದರೆ ಅದು ದೇಶದ ವಲಸೆ ಕಾರ್ಮಿಕರದ್ದು. ಹುಟ್ಟಿ ಬೆಳೆದ ಪ್ರದೇಶದಲ್ಲಿ ಉದ್ಯೋಗ ದೊರೆಯದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಸಾವಿರಾರು ಕಿಲೋಮೀಟರ್‌ ದೂರ ಪ್ರಯಾಣಿಸುವ ಇವರು ಬದುಕಿಗಾಗಿ ಕೌಟುಂಬಿಕ ಜೀವನವನ್ನು ತ್ಯಾಗ ಮಾಡಿರುತ್ತಾರೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೂ ಕೂಡ ಅವಕಾಶ ಸಿಗುವುದಿಲ್ಲ. ತಿಂಗಳಾನುಗಟ್ಟಲೆ ಅಪ್ಪ ಅಮ್ಮ , ಪತ್ನಿ ಮಕ್ಕಳ ಮುಖ ನೋಡುವುದೂ ಕಷ್ಟವೇ. ಇಂತಹ ಕಾರ್ಮಿಕ ವರ್ಗದ ಕಲ್ಯಾಣಕ್ಕೆಂದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆತ್ಮ ನಿರ್ಭರ ಭಾರತ ಯೋಜನೆಯು ಇವರನ್ನು ಸಂಪೂರ್ಣ ತಲುಪಿಲ್ಲ ಎಂದು ಅಂಕಿ ಅಂಶಗಳು ಸ್ಪಷ್ಟಪಡಿಸಿವೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ: ಎಂಟು ಲಕ್ಷ ಟನ್ ಆಹಾರ ಧಾನ್ಯಗಳಲ್ಲಿ (ಗೋಧಿ ಮತ್ತು ಅಕ್ಕಿ) ಕೇವಲ 33% ಮತ್ತು 29,132 ಟನ್ ಬೇಳೆ ಕಾಳುಗಳಲ್ಲಿ 56%, ಮಾತ್ರ ವಲಸೆ ಕಾರ್ಮಿಕರನ್ನು ತಲುಪಿದೆ. ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ವಿತರಿಸಲಾದ ಆಹಾರ ಪದಾರ್ಥಗಳು ಅರ್ಧಕ್ಕರ್ಧ ವಲಸೆ ಕಾರ್ಮಿರನ್ನೂ ತಲುಪಿಲ್ಲ ಎಂದು ತಿಳಿದು ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೋವಿಡ್‌ 19 ಸಾಂಕ್ರಾಮಿಕ ಸಮಯದಲ್ಲಿ ಮೇ ತಿಂಗಳಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ನೋಂದಾಯಿಸದ ವಲಸೆ ಕಾರ್ಮಿಕರನ್ನು ಬೆಂಬಲಿಸಲು, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಪ್ರತೀ ಕುಟುಂಬಕ್ಕೂ ತಿಂಗಳಿಗೆ ಐದು ಕೆಜಿ ಆಹಾರ ಧಾನ್ಯ ಮತ್ತು ಒಂದು ಕೆಜಿ ಬೇಳೆ ಕಾಳುಗಳ ಉಚಿತ ವಿತರಣೆಯನ್ನು ಘೋಷಿಸಿದ್ದರು. ಮೊದಲಿಗೆ ವಲಸೆ ಕಾರ್ಮಿಕ ಕುಟುಂಬಗಳಿಗೆ ಮೇ ಮತ್ತು ಜೂನ್ - ಎರಡು ತಿಂಗಳುಗಳಿಗೆ ಇದನ್ನು ಘೋಷಿಸಲಾಗಿದ್ದು ಇದನ್ನು ನಂತರ ಜುಲೈ ಮತ್ತು ಆಗಸ್ಟ್ ವರೆಗೆ ವಿಸ್ತರಿಸಲಾಯಿತು. ಈ ಯೋಜನೆಯಿಂದ ಸುಮಾರು 8 ಕೋಟಿ ವಲಸೆ ಕಾರ್ಮಿಕ ಕುಟುಂಬಗಳು ಪ್ರಯೋಜನ ಪಡೆಯುತ್ತಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಅದರಂತೆ ಅಹಾರ ಧಾನ್ಯಗಳನ್ನು ಬಿಡುಗಡೆ ಮಾಡಲಾಯಿತು. ಆದರೆ ರಾಜ್ಯಗಳು ಕೇಂದ್ರಕ್ಕೆ ನೀಡಿದ ಮಾಹಿತಿಯ ಪ್ರಕಾರ ವಿವಿಧ ರಾಜ್ಯಗಳಲ್ಲಿ ಇರುವ ವಲಸೆ ಕಾರ್ಮಿಕರ ಸಂಖ್ಯೆ ಕೇವಲ 2.8 ಕೋಟಿ ಅಗಿದೆ. ವಲಸೆ ಕಾರ್ಮಿಕರಿಗೆ ಮೀಸಲಾಗಿದ್ದ ಎಂಟು ಲಕ್ಷ ಟನ್ ಆಹಾರ ಧಾನ್ಯಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 6.38 ಲಕ್ಷ ಟನ್‌ ಗಳಷ್ಟು ಧಾನ್ಯವನ್ನು ಪಡೆದುಕೊಂಡಿವೆ. ಆದರೆ ಕಳೆದ ನಾಲ್ಕು ತಿಂಗಳಲ್ಲಿ ವಿತರಿಸಲಾಗಿರುವುದು ಕೇವಲ 2.64 ಲಕ್ಷ ಟನ್ ಮಾತ್ರ ಎಂದು ಆಗಸ್ಟ್‌ 31 ರಂದು ಕೇಂದ್ರವೇ ನೀಡಿರುವ ಮಾಹಿತಿ ತಿಳಿಸಿದೆ.

ದೇಶಧ ಒಟ್ಟು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಪ್ಪತ್ತಾರು ರಾಜ್ಯಗಳು ತಮಗೆ ನೀಡಲಾದ ಆಹಾರ ಧಾನ್ಯದ ಕೋಟಾದ ಶೇಕಡಾ 100 ರಷ್ಟನ್ನು ಪಡೆದುಕೊಂಡಿವೆ. ಈ ಪೈಕಿ ಕೇವಲ ನಾಲ್ಕು ರಾಜ್ಯಗಳು ಬಿಹಾರ, ಛತ್ತೀಸ್‌ಗಢ, ನಾಗಾಲ್ಯಾಂಡ್ ಮತ್ತು ಒಡಿಶಾ - ವಲಸೆ ಕಾರ್ಮಿಕರಿಗೆ ಸಂಪೂರ್ಣ ಆಹಾರ ಧಾನ್ಯದ ಪ್ರಮಾಣವನ್ನು ವಿತರಿಸಿದೆ. ತೆಲಂಗಾಣ ಮತ್ತು ಗೋವಾ ರಾಜ್ಯದ ವಿತರಣೆ ಕ್ರಮವಾಗಿ ಶೇಕಡಾ 1% ಮತ್ತು 3% ರಷ್ಟಿದೆ. ಗುಜರಾತ್‌ ರಾಜ್ಯವು ತನಗೆ ಹಂಚಿಕೆಯಾದ ಆಹಾರ ಧಾನ್ಯದ ಸುಮಾರು 88% ಅನ್ನು ಪಡೆದುಕೊಂಡಿದೆ ಆದರೆ ವಿತರಿಸಿದ್ದು ಕೇವಲ ಶೇಕಡಾ ಒಂದರಷ್ಟು ಮಾತ್ರ. ದೇಶಾದ್ಯಂತ ವಲಸೆ ಕಾರ್ಮಿಕರು ಮೇ ತಿಂಗಳಲ್ಲಿ 1.17 ಲಕ್ಷ ಟನ್ ಆಹಾರ ಧಾನ್ಯವನ್ನು ಪಡೆದುಕೊಂಡಿದ್ದಾರೆ . ಜೂನ್‌ನಲ್ಲಿ 1.24 ಲಕ್ಷ ಟನ್; ಜುಲೈನಲ್ಲಿ 15,223 ಟನ್; ಮತ್ತು ಆಗಸ್ಟ್‌ ತಿಂಗಳಿನಲ್ಲಿ ಕೇವಲ 7,643 ಟನ್‌ ಗಳನ್ನು ಪಡೆದುಕೊಂಡಿದ್ದಾರೆ. ಕಳೆದ ಆಗಸ್ಟ್ 31 ರವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿಟ್ಟ 29,132 ಟನ್ ಬೇಳೆ ಕಾಳುಗಳಲ್ಲಿ ಕೇವಲ 16,323 ಟನ್ ಅಂದರೆ ಶೇಕಡಾ 56 ರಷ್ಟನ್ನು ಮಾತ್ರ ವಿತರಿಸಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ದೆಹಲಿ ಮತ್ತು ಮಣಿಪುರ ರಾಜ್ಯಗಳು ತಮಗೆ ಹಂಚಿಕೆಯಾದ ಆಹಾರ ಮತ್ತು ಬೇಳೆ ಕಾಳುಗಳಲ್ಲಿ ಶೇಕಡಾ ನೂರರಷ್ಟನ್ನು ವಲಸೆ ಕಾರ್ಮಿರಿಗೆ ವಿತರಿಸಿವೆ. ಉತ್ತರಾಖಂಡ, ಮಧ್ಯಪ್ರದೇಶ, ಗೋವಾ, ತೆಲಂಗಾಣ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ಲಡಾಖ್ ಮತ್ತು ಲಕ್ಷದ್ವೀಪಗಳು ಶೇಕಡಾ 10% ಕ್ಕಿಂತ ಕಡಿಮೆ ಬೇಳೆ ಕಾಳುಗಳ ವಿತರಣೆಯನ್ನು ಮಾಡಿವೆ. ಆಹಾರ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಆಹಾರ ಧಾನ್ಯಗಳ ಈ ಯೋಜನೆ ಕಳೆದ ಸೋಮವಾರ ಕೊನೆಗೊಂಡಿದೆ. ಈ ಯೋಜನೆಯನ್ನು ವಿಸ್ತರಿಸಲು ಯಾವುದೇ ರಾಜ್ಯವೂ ಕೂಡ ಕೇಂದ್ರಕ್ಕೆ ಮನವಿ ಮಾಡಿಕೊಂಡಿಲ್ಲ. ವಲಸೆ ಕಾರ್ಮಿಕರ ಪಟ್ಟಿ ಅಥವಾ ಸರಿಯಾದ ಲೆಕ್ಕ ಇಲ್ಲದೆ, ಆಹಾರ ಧಾನ್ಯಗಳ ವಿತರಣೆಯು ಸರ್ಕಾರಕ್ಕೆ ಕಷ್ಟಕರವಾದ ಕೆಲಸವಾಗಿದೆ ಮತ್ತು ಇದರಿಂದಾಗಿ ಅವ್ಯವಸ್ಥೆ ಉಂಟಾಗಿದೆ ಎಂದು ಈ ಹಿಂದೆ ಕೆಲ ಪತ್ರಿಕೆಗಳು ವರದಿ ಮಾಡಿದ್ದವು. ಆದರೆ ಕೇಂದ್ರ ಸರ್ಕಾರದ ಪ್ರಕಾರ, ನಿಜವಾದ ಫಲಾನುಭವಿಗಳ ಗುರುತಿನ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಂಡಿತು ಅಲ್ಲದೆ ಆತ್ಮನಿರ್ಭರ್ ಯೋಜನೆಯು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಕೂಡ ಒಪ್ಪಿಕೊಂಡಿದೆ. ಗ್ರಾಹಕ ವ್ಯವಹಾರಗಳ ಹಿರಿಯ ಅಧಿಕಾರಿಗಳು ಬಿಜೆಡಿ ಸಂಸದ ಭೃತ್ರಿಹರಿ ಮಹತಾಬ್ ನೇತೃತ್ವದ ಸಂಸದೀಯ ಸಮಿತಿಗೆ ನೀಡಿರುವ ಮಾಹಿತಿಯ ಪ್ರಕಾರ ಆತ್ಮನಿರ್ಭರ ಭಾರತ್ ಪ್ಯಾಕೇಜ್ ನಲ್ಲಿ ವಲಸೆ ಕಾರ್ಮಿಕ ಕುಟುಂಬಗಳಿಗೆ ಸುಮಾರು 16,000 ಟನ್ ಉಚಿತ ಬೇಳೆ ಕಾಳುಗಳನ್ನು ವಿತರಿಸಲಾಗಿದೆ. ಈ ಸಮಿತಿಯು ಅಂತರರಾಜ್ಯ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕ್ರಮಗಳ ಬಗ್ಗೆ ಯೋಜನೆ ರೂಪಿಸುವ ಹೊಣೆಗಾರಿಕೆ ಹೊಂದಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com