ಎಲ್‌ಪಿಜಿ ಸಬ್ಸಿಡಿಯಿಲ್ಲದ ನರೇಂದ್ರ ಮೋದಿಯ ಅಚ್ಛೇದಿನ್!
ರಾಷ್ಟ್ರೀಯ

ಎಲ್‌ಪಿಜಿ ಸಬ್ಸಿಡಿಯಿಲ್ಲದ ನರೇಂದ್ರ ಮೋದಿಯ ಅಚ್ಛೇದಿನ್!

ಕಳೆದ ನಾಲ್ಕು ತಿಂಗಳಿನಿಂದ ಯಾವ ಗ್ರಾಹಕನ ಖಾತೆಗೂ ಸಬ್ಸಿಡಿ ಹಣ ಸಂದಾಯವಾಗಿಲ್ಲ ಹಾಗೂ ಹಣ ಸಂದಾಯ ಆಗದಿರುವುದಕ್ಕೆ ಕೇಂದ್ರ ಸರ್ಕಾರ ಕಾರಣವನ್ನೂ ಕೊಟ್ಟಿಲ್ಲ.

ಕೃಷ್ಣಮಣಿ

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ವೇಳೆ ದೇಶಕ್ಕೆ ಒಂದೊಳ್ಳೆ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆಯನ್ನು ದೇಶದ ಬಹುಪಾಲು ಜನರು ಇಟ್ಟುಕೊಂಡಿದ್ದರು. ಆದಕ್ಕೆ ಪೂರಕ ಎನ್ನುವಂತೆ ನರೇಂದ್ರ ಮೋದಿ ಅವರೂ ಕೂಡ ಅಚ್ಛೇ ದಿನ್ ಆಯೇಂಗೆ ಎಂದಿದ್ದರು. ಜನರು ಮೋದಿ ಬಗ್ಗೆ ಆಕರ್ಷಿತರಾಗಲು ಪ್ರಮುಖ ಕಾರಣ ಸತತ 10 ವರ್ಷಗಳ ಕಾಲ ದೇಶವನ್ನು ಆಳಿತ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಅಸಹನೆ ಉಂಟಾಗಿತ್ತು. ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿತ್ತು. ಅದನ್ನು ಸೊಗಸಾಗಿ ಬಳಸಿಕೊಂಡ ನರೇಂದ್ರ ಮೋದಿ ಅಧಿಕಾರ ಹಿಡಿಯುವ ಕೆಲಸ ಮಾಡಿದ್ದರು. ಅದಾದ ಬಳಿಕ ಕಳೆದ 60 ವರ್ಷದಲ್ಲಿ ಮಾಡದೇ ಇರುವುದನ್ನು ಕೇವಲ 5 ವರ್ಷದಲ್ಲಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾ ಬಂದಿದ್ದ ಬಿಜೆಪಿ ನಾಯಕರು ಮತ್ತೊಂದು ಅವಧಿಗೆ ಆಯ್ಕೆ ಮಾಡಿದರೆ ಖಂಡಿತ ಒಳ್ಳೆ ಕೆಲಸ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅದರ ಜೊತೆಗೆ ಭಾರತೀಯರಿಗೆ ಪಾಕಿಸ್ತಾನದ ಮೇಲೆ ಉಂಟಾದ ಆಕ್ರೋಶದ ಬಳಿಕ ಏರ್‌ಸ್ಟ್ರೈಕ್‌ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದೆವು ಎಂದು ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಬಿಜೆಪಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿ ಎಗೆ ಭರ್ಜರಿ ಜಯ ದೊರಕಿಸಿತ್ತು. ಇದೀಗ ನಿಧಾನವಾಗಿ ಮೋದಿ ಮೇಲಿನ ಭರವಸೆ ಜನರಿಗೆ ಕಡಿಮೆ ಆಗುವಂತೆ ಸರ್ಕಾರವೇ ಮಾಡುತ್ತಿದೆಯೇ..? ಎನ್ನುವ ಅನುಮಾನ ಮೂಡಲು ಶುರುವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಳ್ಳೆ ದಿನಗಳನ್ನು ಎದುರು ನೋಡುತ್ತಿದ್ದ ಭಾರತೀಯರಿಗೆ ಒಳ್ಳೆ ದಿನಗಳು ಕನಸಿನ ಅಂಗಳ ಬಿಟ್ಟು ಹೊರಗೆ ಬರಲೇ ಇಲ್ಲ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಸಾಗಿತ್ತು. 72 ರೂಪಾಯಿ ಆಸುಪಾಸಿನಲ್ಲಿದ್ದ ಪೆಟ್ರೋಲ್ ಬೆಲೆ 85 ರೂಪಾಯಿ ಬಳಿಗೆ ಬಂದು ನಿಂತಿದೆ. ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಭಾರೀ ಅಂತರವೇನಿಲ್ಲ. ಪೆಟ್ರೋಲ್ ಬೆಲೆ 2013/14ರಲ್ಲಿ ಎಷ್ಟಿತ್ತು ಅಷ್ಟೇ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರು ಸಮರ್ಥನೆ ಮಾಡಿಕೊಂಡಿದ್ದರು. ಆದರೆ 2013/14 ರಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ 100 ರಿಂದ 110 ಡಾಲರ್ ಆಗಿತ್ತು. ಇದೀಗ ಅದೇ ಕ್ರೂಡ್ ಆಯಿಲ್ ಬೆಲೆ 40 ರೂಪಾಯಿ ಆಸುಪಾಸಿನಲ್ಲಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಎನ್ನುವುದನ್ನು ಮರೆತಿದ್ದರು. ಪೆಟ್ರೋಲ್ ಡೀಸೆಲ್ ಬಳಕೆ ಮಾಡುತ್ತಾ ಕಾರಿನಲ್ಲಿ ಓಡಾಡುವವರು ಬಡವರೇನಲ್ಲ, ಸರ್ಕಾರಕ್ಕೆ ಆದಾಯ ಬರಲಿ ಬಿಡಿ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಆದರೆ ಇದೀಗ ಕೇಂದ್ರ ಸರ್ಕಾರ ಬಡವರ ಮೇಲೂ ಗದಾ ಪ್ರಹಾರ ನಡೆಸಿದೆ.

ಕರೋನಾ ಸಂಕಷ್ಟ ಕಾಲದಲ್ಲಿ ಸಿಲುಕಿರುವ ಇಡೀ ದೇಶದ ಜನತೆ ಜೀವನ ನಡೆಸುವುದಕ್ಕೇ ಕಷ್ಟ ಪಡುತ್ತಿದ್ದಾರೆ. ಕೆಲಸವಿಲ್ಲದೆ ನಿರುದ್ಯೋಗ ಸಮಸ್ಯೆಯಿಂದ ಇಡೀ ದೇಶದ ಯುವ ಜನಾಂಗ ಬಳಲುತ್ತಿದೆ. ಎಂಜಿನಿಯರಿಂಗ್ ಮುಗಿಸಿದ ಯುವಕ ಯುವತಿಯರು ನರೇಗಾ ಯೋಜನೆ ಅಡಿಯಲ್ಲಿ ಮಣ್ಣು ಹೊರುವ ಕೆಲಸ ಮಾಡುತ್ತಿದ್ದಾರೆ. ಬದುಕು ನಡೆಸುವುದು ಹೇಗೆ..? ಎನ್ನುವ ಚಿಂತೆಯಲ್ಲಿ ಜನರು ಮುಳುಗಿರುವ ಈ ಸಮಯದಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇನ್ನು ಮುಂದೆ ಸಬ್ಸಿಡಿ ರಹಿತ ಹಾಗೂ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ಗಳ ಬೆಲೆ ಒಂದೇ ರೀತಿ ಇರುತ್ತದೆ. ಈಗಾಗಲೇ ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ಅಡುಗೆ ಅನಿಲ ಸಿಲಿಂಡರ್ ಗ್ರಾಹಕನ ಖಾತೆಗೆ ಸಬ್ಸಿಡಿ ಹಣವನ್ನು ಪಾವತಿ ಮಾಡಿರಲಿಲ್ಲ. ಇದೀಗ ಏಕಾಏಕಿ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ನಿಯಮ ಜಾರಿ ಮಾಡಿದೆ. ಸೆಪ್ಟೆಂಬರ್ 1 ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಕಾರಣ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.

2016, ಮೇ 01 ರಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿ ಮಾಡಿದರು. ಈ ಯೋಜನೆಯ ಅಡಿಯಲ್ಲಿ ದೇಶಾದ್ಯಂತ ಸುಮಾರು 8 ಕೋಟಿ ಜನರು ಅಡುಗೆ ಅನಿಲ ಸಂಪರ್ಕ ಪಡೆದುಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಬಹುತೇಕ ಎಲ್ಲಾ ಚುನಾವಣೆಗಳ ಪ್ರಚಾರದಲ್ಲೂ ನಾವು ಸೌಧೆಯನ್ನು ಉರುವಲಾಗಿ ಬಳಸುತ್ತಾ ಹೊಗೆಯಲ್ಲಿ ಕಣ್ಣೀರು ಹಾಕುತ್ತಾ ಕಣ್ಣು ಕಳೆದುಕೊಳ್ಳುತ್ತಿದ್ದ ಮಾತೆಯರ ಕಷ್ಟವನ್ನು ತಪ್ಪಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು. ಇದೀಗ 14.2 ಕೆ.ಜಿ 594 ರೂಪಾಯಿ ಹಣ ಕೊಟ್ಟು ಖರೀದಿ ಮಾಡಬೇಕಾಗಿದೆ. ಎಲ್ಲರಿಗೂ ಇನ್ನುಮುಂದೆ ಒಂದೇ ರೀತಿಯ ದರ ಇರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಯಾವ ಗ್ರಾಹಕನ ಖಾತೆಗೂ ಸಬ್ಸಿಡಿ ಹಣ ಸಂದಾಯವಾಗಿಲ್ಲ ಹಾಗೂ ಹಣ ಸಂದಾಯ ಆಗದಿರುವುದಕ್ಕೆ ಕೇಂದ್ರ ಸರ್ಕಾರ ಕಾರಣವನ್ನೂ ಕೊಟ್ಟಿಲ್ಲ. ಆದರೆ ಲಾಕ್‌ಡೌನ್‌ ವೇಳೆಯಲ್ಲಿ ಉಚಿತವಾಗಿ ಸಿಲಿಂಡರ್‌ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದ ಅನಿಲ ಸಿಲಿಂಡರ್‌ ಗೆ ಹಣ ಪಾವತಿ ಮಾಡುವುದಾಗಿ ತಿಳಿಸಲಾಗಿದೆ.

ದೇಶದಲ್ಲಿ ಸುಮಾರು 45 ಕೋಟಿ ಎಲ್‌ಪಿಜಿ ಗ್ರಾಹಕರಿದ್ದು, ಅದರಲ್ಲಿ 18 ಕೋಟಿ ಗ್ರಾಹಕರು ಗ್ಯಾಸ್ ಸಿಲಿಂಡರ್‌ಗಳಿಗೆ ಯಾವುದೇ ಸಬ್ಸಿಡಿ ಪಡೆಯುತ್ತಿರಲಿಲ್ಲ. ಉಳಿದ 26.12 ಕೋಟಿ ಸಿಲಿಂಡರ್‌ ಸಂಪರ್ಕಗಳಿವೆ. 'ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್‌' (ಡಿಬಿಟಿ) ಮೂಲಕ ಸಬ್ಸಡಿ ಹಣ ಸಂದಾಯ ಮಾಡಲಾಗುತ್ತಿತ್ತು. ಆದರೆ ಇದೀಗ ಸಬ್ಸಿಡಿ ತೆಗೆದು ಹಾಕಲಾಗಿದೆ. ಸದ್ಯಕ್ಕೆ ಒಂದು ಸಿಲಿಂಡರ್‌ ಬೆಲೆ 594 ರೂಪಾಯಿ ಆಗಿದೆ. ಅದು ಮುಕ್ತ ಮಾರುಕಟ್ಟೆಯಲ್ಲಿ ಇರುವ ಕಾರಣ ಮುಂದಿನ ತಿಂಗಳು 700 ರೂಪಾಯಿ ಆದರೂ ಆಗಬಹುದು. 400 ರೂಪಾಯಿ ಆದರೂ ಆಗಬಹುದು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುಂಚೆ ಇದ್ದ ದರವು ಈಗಿನ ದರವು ಸಾಕಷ್ಟು ಬದಲಾವಣೆ ಆಗಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತಾರೆ. ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮುಖ್ಯವಾಗಿ ಎರಡು ಅಂಶಗಳ ಮೇಲೆ ಅವಲಂಬಿತವಾಗಿದ್ದು, ಅಂತರರಾಷ್ಟ್ರೀಯ ಮಾನದಂಡದ ಎಲ್‌ಪಿಜಿಯ ದರ ಮತ್ತು ಯುಎಸ್ ಡಾಲರ್ ಮತ್ತು ರೂಪಾಯಿ ವಿನಿಮಯ ದರದ ಮೇಲೆ ನಿಗದಿ ಮಾಡಲಾಗುತ್ತದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಇಳಿಕೆಯಾಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯವೀಗ ಕೊಂಚ ಸುಧಾರಿಸಿದೆ. ಆದರೆ ಇನ್ನುಮುಂದೆ ಸಬ್ಸಿಡಿ ಮಾತ್ರ ಖತಂ ಆಗಿದೆ. ಇದೇನಾ ಪ್ರಧಾನಿ ನರೇಂದ್ರ ಮೋದಿ ಹೇಳಿದ ಅಚ್ಛೇ ದಿನಾ..? ಎಂದು ಪ್ರಶ್ನೆಯೆದ್ದಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com