ಇಂದಿರಾ ಗಾಂಧಿಯದ್ದು ಮುಕ್ತ ಸರ್ವಾಧಿಕಾರ, ಇಂದು ಇರುವುದು ಮುಖವಾಡ ಧರಿಸಿರುವ ಸರ್ವಾಧಿಕಾರ
ರಾಷ್ಟ್ರೀಯ

ಇಂದಿರಾ ಗಾಂಧಿಯದ್ದು ಮುಕ್ತ ಸರ್ವಾಧಿಕಾರ, ಇಂದು ಇರುವುದು ಮುಖವಾಡ ಧರಿಸಿರುವ ಸರ್ವಾಧಿಕಾರ

ನ್ಯಾಯಾಂಗವೇ ಒಂದು ಆರೋಪವನ್ನು ಮಾಡುತ್ತದೆ; ವಿಚಾರಣೆಯನ್ನು ಸ್ವತಃ ಅದುವೇ ಪ್ರಾರಂಭಿಸುತ್ತದೆ ಮತ್ತು ನಂತರ ಪ್ರಕರಣವನ್ನು ಸಾಬೀತುಪಡಿಸುತ್ತದೆ, ತದನಂತರ ಸುಪ್ರೀಂ ಕೋರ್ಟ್‌ನ ಆರೋಪಗಳು ಸಾಬೀತಾಗಿದೆ ಎಂದು ಅದುವೇ ತೀರ್ಪು ನೀಡುತ್ತದೆ

ಪ್ರತಿಧ್ವನಿ ವರದಿ

ಹಿರಿಯ ಸಲಹೆಗಾರ ರವಿವರ್ಮ ಕುಮಾರ್ ಅವರೊಂದಿಗಿನ ಇತ್ತೀಚಿನ ಫೋನ್ ಸಂಭಾಷಣೆಯ ಸಮಯದಲ್ಲಿ "ಸುಪ್ರೀಂ ಕೋರ್ಟ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ?" ಎಂದು ನಾನು ಅವರನ್ನು ಕೇಳಿದೆ. ಪ್ರಶಾಂತ್‌ ಭೂಷಣ್‌ ಅವರ ಟ್ವೀಟ್‌ ಗಳು ನ್ಯಾಯಾಂಗ ನಿಂದನೆ ಎಂದು ಸುಪ್ರೀಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನಾವು ಚರ್ಚಿಸುತ್ತಿದ್ದೆವು.

“ನ್ಯಾಯಾಂಗವೇ ಒಂದು ಆರೋಪವನ್ನು ಮಾಡುತ್ತದೆ; ವಿಚಾರಣೆಯನ್ನು ಸ್ವತಃ ಅದುವೇ ಪ್ರಾರಂಭಿಸುತ್ತದೆ ಮತ್ತು ನಂತರ ಪ್ರಕರಣವನ್ನು ಸಾಬೀತುಪಡಿಸುತ್ತದೆ, ತದನಂತರ ನಮ್ಮ ಸುಪ್ರೀಂ ಕೋರ್ಟ್‌ನ ಆರೋಪಗಳು ಸಾಬೀತಾಗಿದೆ ಎಂದು ತೀರ್ಪು ನೀಡುತ್ತದೆ.” ಎಂದು ರವಿ ಹೇಳಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೂವರು ನ್ಯಾಯಾಧೀಶರ ಪೀಠವು ತನ್ನ ಆದೇಶಗಳನ್ನು ಅಂಗೀಕರಿಸುವ ಮೊದಲು ಭೂಷಣ್ ಸಲ್ಲಿಸಿದ ಉತ್ತರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಣ್ಣುಮುಚ್ಚಿ ನ್ಯಾಯತಕ್ಕಡಿಯ ಹೊತ್ತುಕೊಂಡ ನ್ಯಾಯದೇವಿಯ ಪ್ರತಿಮೆ ಅಲ್ಲೇ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಖುದ್ದು ಭೇಟಿ ನೀಡಬೇಕೆಂದು ನಾನು ಭಾವಿಸಿದ್ದೆ. ಏಕೆಂದರೆ ಈ ನ್ಯಾಯಾಲಯದ ತೀರ್ಪು ಕುರುಡಾಗಿತ್ತು.

“ಯಾವುದೇ ಎದುರಾಳಿ ಆಟಗಾರರಿಲ್ಲದೆ ಗೋಲ್‌ ಹೊಡೆಯುವ ಸಂಧರ್ಭವನ್ನು ಇದು ನೆನಪಿಸುತ್ತದೆ" ಎಂದು ‌ಸುಪ್ರೀಂ ಕೋರ್ಟ್ ವಕೀಲ ಗೌತಮ್ ಭಾಟಿಯಾ ಈ ತೀರ್ಪನ್ನು ಚೆನ್ನಾಗಿ ಒಂದು ರೂಪಕದಿಂದ ವಿಶ್ಲೇಷಿಸಿದ್ದಾರೆ

ಈ ಆಟವನ್ನು ನ್ಯಾಯಾಂಗ ಆಡಿದೆ.

ಪ್ರಶಾಂತ್‌ ಭೂಷನ್‌ ಟ್ವೀಟನ್ನು ನ್ಯಾಯಾಂಗದ ಘನತೆ ಕುಗ್ಗುವಾಗ ಅದನ್ನು ಉಳಿಸಲು ಪ್ರಯತ್ನಪಡುತ್ತಿರುವ ಓರ್ವನ ಸಂಕಟದ ಪ್ರತಿಬಿಂಬದಂತೆ ನಾವು ಕಾಣಬೇಕು. ಆದರೆ ತ್ರಿ ಸದಸ್ಯ ಪೀಠವು ಪ್ರಶಾಂತ್‌ ಅವರ ಟ್ವೀಟ್‌ಗಳನ್ನು ನ್ಯಾಯಾಂಗದ ಮೂಲವನ್ನೇ ಅಲುಗಾಡಿಸುವಂತೆ ಬಿಂಬಿಸಿದೆ. ಹಾಗೂ ಅವರ ಭಾವನೆಗಳೇ ಕಾನೂನೆಂಬಂತೆ ತೀರ್ಪು ಕೊಟ್ಟಿದ್ದಾರೆ. ಅವರು ಭಯದಿಂದ ಹೀಗೆ ವರ್ತಿಸಿದ್ದಾರೆ.

ಇಂದು, ನ್ಯಾಯಾಂಗ ಮಾತ್ರವಲ್ಲ, ಕಾರ್ಯಾಂಗ, ಶಾಸಕಾಂಗವೂ ಸೇರಿದಂತೆ ಇಡೀ ದೇಶವನ್ನು ಭಯವು ಆವರಿಸಿದೆ. ಈ ಭಯ ಮಾಧ್ಯಮಗಳನ್ನೂ ಬಿಡಲಿಲ್ಲ. ಈ ಭಯವು ಯಾವುದೇ ಸ್ವಾಯತ್ತ ಸಂಸ್ಥೆಗೆ ಸ್ವಾಯತ್ತವಾಗಿರಲು ಅವಕಾಶ ನೀಡಿಲ್ಲ. ನ್ಯಾಯಮೂರ್ತಿ ಮಾರ್ಕಂಡೆ ಕಟ್ಜು ಹೇಳಿದ ವಿಷಯದಲ್ಲಿ ಈ ಭಯದ ಬಗ್ಗೆ ನಮಗೆ ಸುಳಿವು ಸಿಗುತ್ತದೆ.

ಆದರೆ ಗೊಗೋಯ್‌ (ಅವರನ್ನು ನ್ಯಾಯಾಧೀಶ ಎಂದು ಕರೆಯಲು ನಾನು ಇಚ್ಛಿಸುವುದಿಲ್ಲ) ಪ್ರಾಯೋಗಿಕವಾಗಿ ಬಿಜೆಪಿ ಸರ್ಕಾರದ ಮುಂದೆ ತಲೆಬಾಗಿದ್ದಾರೆ ಮತ್ತು ಬಹುತೇಕ ಇಡೀ ಸುಪ್ರೀಂ ಕೋರ್ಟ್ ಅನ್ನು ರಾಜಕೀಯ ಕಾರ್ಯಕಾರಿಣಿಗೆ ಒಪ್ಪಿಸಿದ್ದಾರೆ. ಜನರ ಹಕ್ಕುಗಳನ್ನು ರಕ್ಷಿಸುವ ತನ್ನ ಗಂಭೀರ ಕರ್ತವ್ಯವನ್ನು ತ್ಯಜಿಸಿದ್ದಾರೆ.

ಅದಕ್ಕಾಗಿಯೇ, ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಆ ಪಕ್ಷದ ರಾಜಕೀಯ ನಾಯಕರು ʼನಾವು ಸಂವಿಧಾನ ಬದಲಾಯಿಸಲು ಬಂದವರುʼ ಎಂದು ಹೇಳಿದಾಗ ಯಾರಿಗೂ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಲು ಧೈರ್ಯ ಬಂದಿಲ್ಲ. ಅವರಿನ್ನು ಸಂವಿಧಾನವನ್ನು ಸುಟ್ಟರೂ ಅದು ನ್ಯಾಯಾಂಗ ನಿಂದನೆಯಾಗದು. ಆದರೆ ಪ್ರಶಾಂತ್‌ ಭೂಷಣ್‌ ಟ್ವೀಟ್‌ ನ್ಯಾಯಾಂಗ ನಿಂದನೆಯಾಗುತ್ತದೆ. ಇದನ್ನೆಲ್ಲಾ ಗಮನಿಸಿದ ನನ್ನ ತಲೆಯಲ್ಲಿ ಮಾರ್ಕಂಡೇಯ ಕಾಟ್ಜು ಅವರ ಮಾತುಗಳು ಪ್ರತಿಧ್ವನಿಸುತ್ತದೆ.

ಸ್ವತಂತ್ರ ಭಾರತ ಇಂತಹ ದುಖವನ್ನು ಎಂದೂ ಕಂಡಿರಲಿಲ್ಲ. ಇಂದಿರಾಗಾಂಧಿಯವರ ತುಉರ್ತು ಪರಿಸ್ಥಿತಿಯ ವೇಳೆಯಲ್ಲೂ ನ್ಯಾಯಾಂಗ, ಚುನಾವಣಾ ಆಯೋಗ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸಿಬಿಐ ಮೊದಲಾದವು ಕನಿಷ್ಟ ಮಟ್ಟದ ಪ್ರತಿರೋಧವನ್ನು ತೋರಿಸಿದ್ದವು. ಆ ತುರ್ತು ಪರಿಸ್ಥಿತಿ ವ್ಯಾಘ್ರನಂತಿತ್ತು, ಇಂದಿರಾ ಗಾಂಧಿ ಆಕ್ರಮಣಕಾರಿ ಸರ್ವಾಧಿಕಾರಿಯಾಗಿದ್ದರು. ಆದರೆ ಅವೆಲ್ಲವೂ ಮುಖಾಮುಖಿಯಾಗಿತ್ತು. ದಬ್ಬಾಳಿಕೆಯಾಗಿದ್ದರೂ, ಪ್ರತಿರೋಧಗಳು ಉಕ್ಕಿ ಹರಿಯುತ್ತಿದ್ದವು.

ಆದರೆ ಈಗ? ಈಗ ಅಸ್ತಿತ್ವದಲ್ಲಿರುವುದು ‘ಗೋಮುಖ ವ್ಯಾಘ್ರದ ತುರ್ತುಪರಿಸ್ಥಿತಿ’. ಇದು ಸಂರಕ್ಷಕನಾಗಿ ಮುಖವಾಡವನ್ನು ಧರಿಸುತ್ತದೆ. ಆದರೆ ಮುಖವಾಡದ ಹಿಂದೆ, ಆಡಳಿತವು ಮಾಡಬೇಕಾಗಿಲ್ಲದ ಎಲ್ಲವನ್ನೂ ಮಾಡುತ್ತದೆ. ಅದು ಎಂದಿಗೂ ಮುಖಾಮುಖಿಯಾಗಿ ಬರುವುದಿಲ್ಲ. ಬದಲಾಗಿ, ನಾವು ಸಂವಿಧಾನದ ನಾಲ್ಕು ಸ್ತಂಭಗಳು ಎಂದು ಕರೆಯುತ್ತೇವೆ, ಆ ಎಲ್ಲಾ ಸ್ವಾಯತ್ತ ಸಂಸ್ಥೆಗಳು ಮತ್ತು ದೇಶದ ಫೆಡರಲ್‌ ರಚನೆಗಳ ಕುತ್ತಿಗೆ ಹಿಸುಕಿ, ಬೆನ್ನುಮೂಲೆಯನ್ನು ಪುಡಿಮಾಡಿದೆ. ಈ ಸಂಸ್ಥೆಗಳು ಇನ್ನೂ ಅವುಗಳ ಸ್ವರೂಪವನ್ನು ಹೊಂದಿವೆ ಎಂಬುದು ನಿಜ. ಆದರೆ ಅವರು ಕೇವಲ ಅರ್ಧದಷ್ಟು ಜೀವಂತವಾಗಿದೆ. ಇದರ ಪರಿಣಾಮವಾಗಿ, ರಾಜಕೀಯ ಕಾರ್ಯಕಾರಿಣಿಯನ್ನು ನೋಡಿಕೊಳ್ಳುವ ಸರ್ವಾಧಿಕಾರಿಯಾದ ಗೋಮುಖ ವ್ಯಾಘ್ರದ ಸನ್ನೆಗಳು ಅರ್ಥಮಾಡಿಕೊಂಡು ಮತ್ತು ಅದರ ಇಚ್ಛೆಗೆ ಪೂರಕವಾಗಿ ಅದು ಕೆಲಸ ಮಾಡುತ್ತಿದೆ.

ಇದು ಇನ್ನಷ್ಟು ಹೆಚ್ಚು ಅರ್ಥವಾಗಲು, ಅಮೆರಿಕಾದಲ್ಲಿ ಏನಾಯಿತು ಎಂಬುದನ್ನು ಗಮನಿಸಬೇಕು. ಮಿನ್ನಿಯಾಪೋಲಿಸ್ ಪೊಲೀಸರು ಜಾರ್ಜ್‌ ಫ್ಲಾಯ್ಡ್‌ರನ್ನು ಹತ್ಯೆಗೈದ ಬಳಿಕ ಪರಿಸ್ಥಿತಿ ಉದ್ವಿಗ್ನವಾಗಲು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾನೂನು ಪಾಲಕರಿಗೆ ʼನೀವು ಪ್ರಾಬಲ್ಯ ಹೊಂದಿರಿʼ ಎಂದು ಕರೆ ನೀಡಿದ್ದೇ ಕಾರಣವಾಯಿತು. ಟ್ರಂಪ್‌ ಕರೆಯ ಬಳಿಕ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತು ಎಂದು ಹೂಸ್ಟನ್ ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೆಡೊ ನಿರ್ಭಯವಾಗಿ ಹೇಳಿದ್ದಾರೆ.

“ಇದು ಪ್ರಾಬಲ್ಯದ ಬಗ್ಗೆ ಅಲ್ಲ. ಇದು ಹೃದಯ ಮತ್ತು ಮನಸ್ಸುಗಳನ್ನು ಬೆಸೆಯುವ ಬಗ್ಗೆ, ನಂಬಿಕೆಯನ್ನು ಮರು ಹುಟ್ಟಿಸುವ ಬಗ್ಗೆ… ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಪ್ರಯತ್ನವನ್ನು ನಿಮ್ಮ ಅಜ್ಞಾನ ಹಾಳುಮಾಡುವುದನ್ನು ನಾವು ಬಯಸುವುದಿಲ್ಲ… ಇದನ್ನು ನಾನು ಅಮೆರಿಕಾದ ಅಧ್ಯಕ್ಷರಿಗೆ ಹೇಳುತ್ತೇನೆ… ದಯವಿಟ್ಟು, ನಿಮಗೆ ರಚನಾತ್ಮಕವಾದ ಕೆಲಸ ಏನೂ ಇಲ್ಲದಿದ್ದರೆ, ನಿಮ್ಮ ಬಾಯಿ ಮುಚ್ಚಿ” ಎಂದು ಪೊಲೀಸ್‌ ಅಧಿಕಾರಿ ನೇರವಾಗಿ ಅಮೆರಿಕಾ ಅಧ್ಯಕ್ಷರಿಗೆ ಹೇಳಿದರು.

ನೀವು ಇದನ್ನು ನಮ್ಮ ಪರಿಸ್ಥಿತಿಗೆ ಅನ್ವಯ ಮಾಡಿಕೊಂಡರೆ ಎಲ್ಲವೂ ಸ್ವಯಂ ಅರ್ಥವಾಗುತ್ತದೆ.

ಈಗ ನೀವು ಭಾರತದ ಮಟ್ಟಿಗೆ ಗಮನಿಸುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ, ಜಿಎಸ್‌ಟಿ ಇತ್ಯಾದಿ ಅಜ್ಞಾನದ ನೀತಿಯಿಂದಾಗಿ ಭಾರತವು ಹೊಡೆತಗಳ ಅಡಿಯಲ್ಲಿ ಮುಳುಗುತ್ತಿದೆ, ಅದಾಗ್ಯೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಈ ನೀತಿಗಳನ್ನು ಸ್ವಾಗತಿಸುತ್ತಾರೆ. ನಿರುದ್ಯೋಗವು ನಮ್ಮನ್ನು ಕಿತ್ತು ತಿನ್ನುತ್ತಿದೆ. ದೇಶ ಬಡತನದಿಂದ ಹಸಿವಿನತ್ತ ಸಾಗುತ್ತಿದೆ. ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವುದರ ಮೇಲೆ ಮಾತ್ರ ಸರ್ಕಾರ ನಡೆಸಬಹುದು ಎಂಬಷ್ಟರ ಮಟ್ಟಿಗೆ ಬಂದು ನಿಂತಿದೆ. ಸಾರ್ವಜನಿಕರ ಆಕ್ರೋಶವನ್ನು ನಿಯಂತ್ರಿಸಲು ನ್ಯಾಯಾಂಗ, ಮಾಧ್ಯಮ, ಸಿಬಿಐ, ಆರ್‌ಬಿಐ ಸೇರಿದಂತೆ ಎಲ್ಲಾ ಮೂಲಭೂತ ಸರ್ಕಾರಿ ಸಂಸ್ಥೆಗಳ ಮಟ್ಟದಲ್ಲಿ ಹಸ್ತಕ್ಷೇಪ ಮಾಡಲಾಗಿದೆ. ಇವೆಲ್ಲವುಗಳಿಂದಾಗಿ, ಇಂದು ಸಾರ್ವಜನಿಕ ಹಿತಾಸಕ್ತಿ ಅನಾಥವಾಗಿದೆ.

ಕೋಪ, ನೋವು, ವಿಷಾದದಿಂದ ಇದನ್ನು ಬರೆಯುತ್ತಿದ್ದೇನೆ. ಪ್ರಶಾಂತ್‌ ಭೂಷಣ್‌ ಮೇಲಿನ ಆರೋಪಗಳು, ಆನಂದ್‌ ತೇಲ್ತುಂಬ್ಡೆ ಮೊದಲಾದವರ ಬಂಧನದ ಮೂಲಕ ಈ ಮಣ್ಣಿನ ರಾಜಕೀಯ ಸಾಕ್ಷಿಪ್ರಜ್ಞೆಯ ಬಂಧನವಾದರೂ ಭಾರತ ಮಾತೆ ಗಾಂಧಿ, ಅಂಬೇಡ್ಕರ್‌, ಜೆಪಿ ಮುಂತಾದ ನಾಯಕರನ್ನು ಹಡೆದಿದ್ದಕ್ಕಾಗಿ ಧನ್ಯಪಡಬೇಕು.

ದಿ ವೈರ್‌ ನಲ್ಲಿ ಬಂದ ದೇವನೂರು ಮಹಾದೇವ ಅವರ ಲೇಖನದ ಅನುವಾದ

Click here to follow us on Facebook , Twitter, YouTube, Telegram

Pratidhvani
www.pratidhvani.com