ಧ್ವೇಷ ಭಾಷಣ: ಬಿಜೆಪಿ ಶಾಸಕ ರಾಜಾಸಿಂಗ್‌ ಖಾತೆಯನ್ನು ರದ್ದುಗೊಳಿಸಿದ ಫೇಸ್‌ಬುಕ್
ರಾಷ್ಟ್ರೀಯ

ಧ್ವೇಷ ಭಾಷಣ: ಬಿಜೆಪಿ ಶಾಸಕ ರಾಜಾಸಿಂಗ್‌ ಖಾತೆಯನ್ನು ರದ್ದುಗೊಳಿಸಿದ ಫೇಸ್‌ಬುಕ್

ತೆಲಂಗಾಣದ ಘೋಷ್‌ಮಹಲ್‌ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಮೂಲಕ ಪ್ರತಿನಿಧಿಸುವ‌ ರೌಡಿಶೀಟರ್ ರಾಜಾಸಿಂಗ್‌ ಮೇಲೆ 60 ಕ್ಕಿಂತಲೂ ಹೆಚ್ಚು ಪ್ರಕರಣಗಳಿವೆ. ಅದರಲ್ಲಿ ಬಹುತೇಕ ಪ್ರಕರಣಗಳಿರುವುದು ಧ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ.

ಪ್ರತಿಧ್ವನಿ ವರದಿ

ಭಾರತದಲ್ಲಿ ಫೇಸ್‌ಬುಕ್‌ ರಾಜಕೀಯ ಪಕ್ಷಗಳೊಳಗೆ ಪಕ್ಷಪಾತ ನಡೆಸುತ್ತಿದೆ ಎಂಬ ಚರ್ಚೆಗಳಾಗುತ್ತಿರುವ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣ ದಿಗ್ಗಜ ಸಂಸ್ಥೆ ಫೇಸ್‌ಬುಕ್‌ ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾರ ಫೇಸ್‌ಬುಕ್‌ ಖಾತೆಯನ್ನು ವಜಾಗೊಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಟಿ. ರಾಜಾ ಸೇರಿದಂತೆ ಹಲವು ಹಿಂದುತ್ವ ಹಾಗೂ ಬಿಜೆಪಿ ನಾಯಕರ ಧ್ವೇಷ ಭಾಷಣವನ್ನು ತಡೆಹಿಡಿಯದಂತೆ ಫೇಸ್‌ಬುಕ್‌ ಭಾರತದ ಎಕ್ಸಿಕ್ಯೂಟಿವ್‌ ಅಂಖಿ ದಾಸ್‌ ಹೇಗೆ ಪ್ರಭಾವ ಬೀರಿದ್ದರು ಎಂಬ WSJಯ (The Wall Street Journal) ತನಿಖಾ ವರದಿ ಬಂದ ಬಳಿಕ ಫೇಸ್‌ಬುಕ್‌ ಈ ಕ್ರಮ ತೆಗೆದುಕೊಂಡಿದೆ.

"ನಮ್ಮ ಪ್ಲ್ಯಾಟ್‌ಫಾರ್ಮ್‌ನಲ್ಲಿ ಧ್ವೇಷ ಹರಡುವುದನ್ನು ನಿಷೇಧಿಸುತ್ತೇವೆ ಹಾಗಾಗಿ ನಾವು ರಾಜಾ ಸಿಂಗ್ ಅವರನ್ನು ಫೇಸ್‌ಬುಕ್‌ನಿಂದ ನಿಷೇಧಿಸಿದ್ದೇವೆ, ಅವರು ನಮ್ಮ ನೀತಿ& ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಂಭಾವ್ಯ ಉಲ್ಲಂಘಿಸುವವರನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯು ವಿಸ್ತಾರವಾಗಿದೆ ಮತ್ತು ಇದು ಈ ನಿರ್ಧಾರಕ್ಕೆ ಬರಲು ನಮ್ಮನ್ನು ಕರೆದೊಯ್ಯಿತು" ಎಂದು ಫೇಸ್‌ಬುಕ್ ವಕ್ತಾರರು WSJ ಗೆ ತಿಳಿಸಿದ್ದಾರೆ.

ವರದಿಯ ಪ್ರಕಾರ ಆತನಿಗೆ ಸೇರಿರುವ 5 ಖಾತೆಗಳನ್ನು ಫೇಸ್‌ಬುಕ್‌ ವಜಾಗೊಳಿಸಿದೆ, ಅಲ್ಲದೆ ಇನ್ಸ್ಟಗ್ರಾಮ್‌ ಖಾತೆಯನ್ನೂ ರದ್ದುಗೊಳಿಸಲಾಗಿದೆ.

ತೆಲಂಗಾಣದ ಘೋಷ್‌ಮಹಲ್‌ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಮೂಲಕ ಪ್ರತಿನಿಧಿಸುವ‌ ರೌಡಿಶೀಟರ್ ರಾಜಾಸಿಂಗ್‌ ಮೇಲೆ 60 ಕ್ಕಿಂತಲೂ ಹೆಚ್ಚು ಪ್ರಕರಣಗಳಿವೆ. ಅದರಲ್ಲಿ ಬಹುತೇಕ ಪ್ರಕರಣಗಳಿರುವುದು ಧ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ.

ಧ್ವೇಷ ಭಾಷಣಕ್ಕೆ ಕುಖ್ಯಾತಿ ಈ ರಾಜಾ ಸಿಂಗ್

ಜುಲೈ 2018 ರಲ್ಲಿ ಟಿ ರಾಜಾ ಸಿಂಗ್ ರೋಹಿಂಗ್ಯಾ ಮುಸ್ಲಿಮರನ್ನು “ಕೀಟಗಳು” ಎಂದು ಕರೆದಿದ್ದರು.“ರೋಹಿಂಗ್ಯಾ ಮುಸ್ಲಿಮರನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಬೇಕು. ಇಂತಹ ಕೀಟಗಳನ್ನು ಭಾರತದಲ್ಲಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಹಿಂತಿರುಗದ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳನ್ನು ಗುಂಡಿಕ್ಕಿ ಕೊಲ್ಲಬೇಕು.” ಎಂದಿದ್ದರು.

2018 ಜನವರಿಯಲ್ಲಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್‌ ಬಿಡುಗಡೆಯಾದ ಸಂಧರ್ಭದಲ್ಲಿ ಚಲನಚಿತ್ರ ಮಂದಿರಗಳನ್ನು ಬೆಂಕಿ ಹಾಕಿ ನಾಶಗೊಳಿಸುವಂತೆ ಪ್ರಚೋದನಾತ್ಮಕ ಭಾಷಣ ಮಾಡಿದ್ದರು.

2017 ರಲ್ಲಿ, ಪಶ್ಚಿಮ ಬಂಗಾಳದಲ್ಲಿ ಕೋಮು ಸಂಘರ್ಷದ ಮಧ್ಯೆ, ರಾಜಾ ಸಿಂಗ್ ಅವರು 2002 ರ ಗುಜರಾತ್ ಗಲಭೆಯನ್ನು ಪ್ರಸ್ತಾಪಿಸಿದ್ದರು ಮತ್ತು ಹಿಂದೂಗಳು ಹಿಂದೆಯೇ ಮಾಡಿದ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಕರೆ ನೀಡಿದ್ದರು. ಗುಜರಾತ್‌ ಗಲಭೆಯ ಸಂಧರ್ಭದಲ್ಲಿ ಅಲ್ಲಿನ ಹಿಂದೂಗಳು ಮಾಡಿದಂತೆ ಬಂಗಾಳದ ಹುಲಿಗಳು ಮಾಡಬೇಕು ಎಂದು ಉದ್ರೇಕಕಾರಿ ಕರೆ ನೀಡಿದ್ದರು.

ವಿಶೇಷವೆಂದರೆ, ರಾಜಾ ಸಿಂಗ್ ಅವರು ಇತ್ತೀಚೆಗೆ ಅಧಿಕೃತ ಫೇಸ್‌ಬುಕ್ ಪುಟವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದು, ಅವರ ಖಾತೆಯನ್ನು 2018 ರಲ್ಲಿ "ಹ್ಯಾಕ್ ಮಾಡಲಾಗಿದೆ ಮತ್ತು ನಿರ್ಬಂಧಿಸಲಾಗಿದೆ" ಎಂದು ಸೇರಿಸಿದ್ದಾರೆ

Click here to follow us on Facebook , Twitter, YouTube, Telegram

Pratidhvani
www.pratidhvani.com