ಅಮೇರಿಕಾದ ನೂತನ ಆದೇಶದಿಂದ ಭಾರತದ ಜೆನೆರಿಕ್‌ ಔಷಧ ತಯಾರಕರಿಗೆ ಲಾಭ
ರಾಷ್ಟ್ರೀಯ

ಅಮೇರಿಕಾದ ನೂತನ ಆದೇಶದಿಂದ ಭಾರತದ ಜೆನೆರಿಕ್‌ ಔಷಧ ತಯಾರಕರಿಗೆ ಲಾಭ

ಭಾರತದಲ್ಲಿ ಉತ್ಪಾದನಾ ವೆಚ್ಚವು ಈಗಲೂ ಅಮೇರಿಕಕ್ಕಿಂತಲೂ ಶೇಕಡಾ 30-40 ರಷ್ಟು ಕಡಿಮೆ ಇದೆ ಎನ್ನಲಾಗಿದೆ. ಇದೊಂದು ಷರತ್ತು ಭಾರತದಿಂದ ರಫ್ತು ಮಾಡುವ ಕಡಿಮೆ ವೆಚ್ಚದ ಜನರಿಕ್‌ ಔಷಧಿಗಳನ್ನು ನಿರ್ಬಂಧಿಸುವುದನ್ನು ತಡೆಯುತ್ತದೆ.

ಕೋವರ್ ಕೊಲ್ಲಿ ಇಂದ್ರೇಶ್

ಅಮೇರಿಕಾದ ಅದ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾದ ನಂತರ ಅಮೇರಿಕದ ಆಡಳಿತದಲ್ಲಿ, ವಿದೇಶಾಂಗ ನೀತಿಯಲ್ಲೂ ಗಣನೀಯ ಬದಲಾವಣೆ ಅಗಿದೆ. ಅದರಲ್ಲೂ ಅಮೇರಿಕಾದಲ್ಲಿ ಉದ್ಯೋಗ ಪಡೆದು ಅಲ್ಲಿನ ಗ್ರೀನ್‌ ಕಾರ್ಡ್‌ ಪಡೆಯುವ ಹೆಬ್ಬಯಕೆ ಉಳ್ಳ ಉದ್ಯೋಗಾಕಾಂಕ್ಷಿಗಳ ಕನಸಿಗೂ ಟ್ರಂಪ್‌ ಅವರ ನೀತಿ ದೊಡ್ಡ ಪೆಟ್ಟನ್ನೇ ಕೊಟ್ಟಿದೆ. ವಿದೇಶೀಯರಿಗೆ ಉದ್ಯೋಗ ಪಡೆಯಲು ವಿತರಿಸುವ ಹೆಚ್‌1 ಬಿ ವೀಸ ಅಲ್ಲದೆ ಅಮೇರಿಕಾದ ಉನ್ನತ ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಬಯಸುವ ವಿದ್ಯಾರ್ಥಿಗಳ ಆಶಯಕ್ಕೂ ಅಮೇರಿಕ ಸರ್ಕಾರದ ಬಿಗಿ ನಿಯಮಾವಳಿಗಳು ತೊಡಕನ್ನುಂಟು ಮಾಡಿವೆ. ಅದರಲ್ಲೂ ಕೋವಿಡ್‌ 19 ಸೋಂಕು ಅಮೇರಿಕದಲ್ಲಿ ಉಲ್ಪಣಗೊಂಡ ನಂತರ ವಿಶ್ವ ವಿದ್ಯಲಯಗಳು ಮುಚ್ಚಲ್ಪಟ್ಟಿದ್ದು ಅನ್‌ಲೈನ್‌ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಅದರೆ ಆನ್‌ಲೈನ್‌ ಮೂಲಕ ಶಿಕ್ಷಣ ನೀಡುತ್ತಿರುವ ವಿಶ್ವ ವಿದ್ಯಲಯಗಳಲ್ಲಿನ ವಿದೇಶೀ ವಿದ್ಯಾರ್ಥಿಗಳಿಗೆ ಕಳೆದ ತಿಂಗಳು ತಮ್ಮ ತಮ್ಮ ದೇಶಗಳಿಗೆ ಮರಳಲು ಸೂಚನೆ ನೀಡಲಾಗಿದೆ.

ಅಮೇರಿಕದಲ್ಲೆ ತಯಾರಾದ ವಸ್ತುಗಳ ಬಳಕೆಗೆ ಒತ್ತು ನೀಡುವಂತೆ ಈ ತಿಂಗಳ ಆರಂಭದಲ್ಲಿ ಅದ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆದೇಶವೊಂದನ್ನು ಹೊರಡಿಸಿ ಸರ್ಕಾರದ ಏಜೆನ್ಸಿಗಳು ಅಮೇರಿಕದಲ್ಲಿ ತಯಾರಾದ ವೈದ್ಯಕೀಯ ಮತ್ತು ಔಷಧಗಳನ್ನು ಬಳಸುವಂತೆ ಸೂಚಿಸಿದ್ದಾರೆ. ಇದರಿಂದ ಭಾರತೀಯ ಔಷಧ ತಯಾರಕರಿಗೆ ಭಾರೀ ಹೊಡೆತ ಎಂದು ಭಾವಿಸಲಾಗಿದೆ. ಕಳೆದ ಆಗಸ್ಟ್‌ 6 ರಂದು ಹೊರಡಿಸಲಾದ ಆದೇಶದಲ್ಲಿ ಅಮೇರಿಕದಲ್ಲಿ ಉತ್ಪಾದಿಸಲಾದ ಔಷಧಗಳನ್ನೆ ಖರೀದಿಸುವಂತೆ ಸರ್ಕಾರೀ ಏಜೆನ್ಸಿಗಳಿಗೆ ಸೂಚಿಸಿದ್ದು, ಭಾರತದ ಔಷಧಗಳಿಗೆ ಅಮೇರಿಕಾ ಅತ್ಯಂತ ದೊಡ್ಡ ಮಾರುಕಟ್ಟೆ ಆಗಿದ್ದು ಈ ಸಾಂಕ್ರಮಿಕ ಸಮಯದಲ್ಲಿ ಔಷಧ ರಂಗದ ರಪ್ತಿಗೆ ಹಿನ್ನಡೆ ಎನ್ನಲಾಗುತ್ತಿದೆ. ಟ್ರಂಪ್‌ ಅವರ ನೂತನ ಆದೇಶದ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ದೇಶದ ಫಾರ್ಮಾಸ್ಯೂಟಿಕಲ್ಸ್‌ ಎಕ್ಸ್‌ಪೋರ್ಟ್‌ ಪ್ರಮೋಷನ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಪ್ರತಿಕ್ರಿಯೆಯನ್ನು ಕೇಳಿತ್ತು. ಇದಕ್ಕೆ ಉತ್ತರಿಸಿದ ಕೌನ್ಸಿಲ್‌ ನ ಡೈರೆಕ್ಟರ್‌ ಜನರಲ್‌ ಉದಯ ಭಾಸ್ಕರ್‌ ಅವರ ತಂಡವು ಈ ನೂತನ ಆದೇಶದಿಂದ ದೇಶದ ಔಷಧ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ತಿಳಿಸಿದೆ. ಅಮೇರಿಕ ಸರ್ಕಾರವು ಅಲ್ಲಿನ ಔಷಧ ತಯಾರಿಕಾ ಕಂಪೆನಿಗಳಿಂದ ಕಡಿಮೆ ದರದ ಔಷಧ ಖರೀದಿ ಮಾಡಲು ಸೂಚಿಸಿದ್ದು ಸರ್ಕಾರೀ ಏಜೆನ್ಸಿಗಳು ಈ ಕುರಿತು ಕಾರ್ಯೋನ್ಮುಖವಾಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆಗಸ್ಟ್ ಎರಡನೇ ವಾರದಲ್ಲಿ ಸಚಿವಾಲಯಕ್ಕೆ ಸಲ್ಲಿಸಲಾದ ಕೌನ್ಸಿಲ್‌ ಉತ್ತರದಲ್ಲಿ ಭಾರತೀಯ ಔಷಧ ಉತ್ಪನ್ನಗಳನ್ನು ‘ಮೇಡ್ ಇನ್ ಅಮೇರಿಕಾ’ ಉತ್ಪನ್ನಗಳ ಸಮೀಪಕ್ಕೆ ಬರದಂತೆ ತಡೆಯುವ ಪ್ರಮುಖ ಷರತ್ತನ್ನು ಎತ್ತಿ ತೋರಿಸಿದೆ. ಟ್ರಂಪ್‌ ಅವರ ಕಾರ್ಯನಿರ್ವಾಹಕ ಆದೇಶದ ವಿನಾಯಿತಿ ಷರತ್ತು (2 (ಎಫ್) (ಐ) (3)) ಔಷಧ 'ಸಂಗ್ರಹಣೆಯ ವೆಚ್ಚವು ಶೇಕಡಾ 25 ಕ್ಕಿಂತ ಹೆಚ್ಚಾಗಿದ್ದರೆ ಸ್ಥಳೀಯ ಖರೀದಿಯ ನಿಬಂಧನೆಗಳು ಅನ್ವಯಿಸುವುದಿಲ್ಲ ಎಂದು ಹೇಳುತ್ತದೆ. ಈ ಅಂಶವು ಭಾರತಕ್ಕೆ ಅನುಕೂಲಕರವಾಗಿದೆ. ಏಕೆಂದರೆ ಭಾರತದಲ್ಲಿ ಉತ್ಪಾದನಾ ವೆಚ್ಚವು ಈಗಲೂ ಅಮೇರಿಕಕ್ಕಿಂತಲೂ ಶೇಕಡಾ 30-40 ರಷ್ಟು ಕಡಿಮೆ ಇದೆ ಎನ್ನಲಾಗಿದೆ. ಇದೊಂದು ಷರತ್ತು ಭಾರತದಿಂದ ರಫ್ತು ಮಾಡುವ ಕಡಿಮೆ ವೆಚ್ಚದ ಜನರಿಕ್‌ ಔಷಧಿಗಳನ್ನು ನಿರ್ಬಂದಿಸುವುದನ್ನು ತಡೆಯುತ್ತದೆ. ಏಕೆಂದರೆ ನೀತಿಯ ವಿಷಯದಲ್ಲಿ ಭಾರತ ಮತ್ತು ಅಮೇರಿಕಾ ನಡುವಿನ ಉತ್ಪಾದನಾ ವೆಚ್ಚವು ವಿವಿಧ ಕಾರಣಗಳಿಗಾಗಿ ಮಹತ್ವದ್ದಾಗಿದೆ ಮತ್ತು ಭಾರತವು ಅಮೇರಿಕಕ್ಕೆ ಹೆಚ್ಚಿನ ಪೂರೈಕೆಯ ಮೂಲವನ್ನು ಒದಗಿಸುತ್ತದೆ.

ಇತರ ಅಭಿವೃದ್ದಿ ಶೀಲ ರಾಷ್ಟ್ರಗಳಿಗೆ ಹೋಲೀಸಿದರೆ ಭಾರತದ ಔಷಧ ತಯಾರಿಕಾ ಉದ್ಯಮವು ಯುರೋಪಿಯನ್ ಯೂನಿಯನ್ (ಇಯು) ಮತ್ತು ಚೀನಾದಂತಹ ಯುಎಸ್ ಗೆ ವೈದ್ಯಕೀಯ ಉತ್ಪನ್ನಗಳನ್ನು ಪೂರೈಸುವ ಇತರ ದೇಶಗಳೊಂದಿಗೆ ಭಾರತವು ಉತ್ತಮವಾಗಿ ಸ್ಪರ್ಧಿಸಲು ಈ ಷರತ್ತು ಸಹಾಯ ಮಾಡುತ್ತದೆ, ಭಾರತದಲ್ಲಿ ಜನರಿಕ್‌ ಔಷಧ ತಯಾರಿಕಾ ವೆಚವು ಅಮೇರಿಕಾದ ಜೆನೆರಿಕ್‌ ಔಷಧ ತಯಾರಿಕಾ ವೆಚಕ್ಕಿಂತಲೂ ಕನಿಷ್ಟ ಶೇಕಡಾ 30-40 ರಷ್ಟು ಕಡಿಮೆಯಾಗಿಯೇ ಇರುವುದರಿಂದ ಅಮೇರಿಕಕ್ಕೆ ರಫ್ತು ಮಾಡುವ ಜೆನೆರಿಕ್‌ ಔಷಧಗಳ ಪ್ರಮಾಣದಲ್ಲಿ ಕಡಿತ ಆಗುವುದಿಲ್ಲ ಎನ್ನಲಾಗಿದೆ. ಅಮೇರಿಕಾದ ಜನರಿಕ್‌ ಔಷಧಗಳ ಮಾರುಕಟ್ಟೆಯಲ್ಲಿ ಭಾರತೀಯ ಔಷಧಗಳ ಪಾಲು ಶೇಕಡಾ ೧೦ ರಷ್ಟಿದೆ. ಇದರಿಂದಾಗಿ ಅಮೇರಿಕದ ಜನೆರಿಕ್‌ ಔಷಧದ ಉಳಿದ ಶೇಕಡಾ ೯೦ ನ್ನೂ ಭಾರತದ ಜನೆರಿಕ್‌ ಔಷಧ ತಯಾರಿಕ ಕಂಪೆನಿಗಳು ತಲುಪಬಹುದಾದ ಅವಕಾಶ ಇದೆ ಎಂದು ಭಾಸ್ಕರ್‌ ಹೇಳುತ್ತಾರೆ. ಅಮೇರಿಕ ಸರ್ಕಾರದ ಅಮೆರಿಕನ್ ಖರೀದಿ ಕಾಯ್ದೆ (ಬಿಎಎ) ಮತ್ತು ವ್ಯಾಪಾರ ಒಪ್ಪಂದಗಳ ಕಾಯ್ದೆ (ಟಿಎಎ) ಅಡಿಯಲ್ಲಿ ಕೆಲವು ಅಂಶಗಳು ಈ ಹಿಂದೆಯೇ ಜಾರಿಯಾಗಿದ್ದು ಅದರ ನಂತರವೂ ದೇಶದ ಜನೆರಿಕ್‌ ಔಷಧಗಳ ರಫ್ತು ಕುಸಿತ ದಾಖಲಿಸಿಲ್ಲ ಎಂದು ವಾಣಿಜ್ಯ ಸಚಿವಾಲಯಕ್ಕೆ ಕೌನ್ಸಿಲ್‌ ತಿಳಿಸಿದೆ.

ಭಾರತವು ಬಿಎಎ ಮತ್ತು ಟಿಎಎ ಒಳಗೊಳ್ಳುವ ದೇಶವಲ್ಲವಾದ್ದರಿಂದ, ಅಮೇರಿಕ ಸರ್ಕಾರದ ಔಷಧ ಸಂಗ್ರಹಣೆಯಲ್ಲಿ ಭಾರತದ ಪಾಲು ನಗಣ್ಯ ಎಂದು ಅದು ಹೇಳಿದೆ. ಹೆಚ್ಚಿನ ಭಾರತೀಯ ಮೂಲದ ಜೆನೆರಿಕ್ಸ್ ಔಷಧ ಅಮೇರಿಕದ ಖಾಸಗಿ ಮಾರುಕಟ್ಟೆಗೆ ಸರಬರಾಜು ಆಗುತ್ತಿದೆ . ಅದರೆ ದೇಶೀಯವಾಗಿ ಉತ್ಪಾದಿಸಲು ಅಮೆರಿಕ ನಿರ್ಧರಿಸುವ ಔಷಧಿಗಳ ಪಟ್ಟಿಯ ಬಗ್ಗೆ ಇನ್ನೂ ಸ್ಪಷ್ಟವಾದ ವಿವರಣೆ ಬಿಡುಗಡೆ ಮಾಡಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಹೊರಡಿಸಲಾದ ಆದೇಶವು ಅಮೇರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಗೆ ದೇಶೀಯವಾಗಿ ಉತ್ಪಾದಿಸಬೇಕಾದ ಅಗತ್ಯ ಔಷಧಿಗಳು, ವೈದ್ಯಕೀಯ ಉಪಕರಣಗಳ ಪಟ್ಟಿಯನ್ನು ತಯಾರಿಸುವಂತೆ ಸೂಚಿಸಿದೆ. ಅಗತ್ಯ ಔಷಧಿಗಳ ಪಟ್ಟಿಯನ್ನು ಎಫ್‌ಡಿಏ ಇನ್ನೂ ಗುರುತಿಸಬೇಕಾಗಿರುವುದರಿಂದ ಯಾವ ಔಷಧಿಗಳನ್ನು ಆದೇಶವು ಒಳಗೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಭಾಸ್ಕರ್ ತಿಳಿಸಿದ್ದಾರೆ. ಬೃಹತ್ ಔಷಧಿಗಳ ಉತ್ಪಾದನೆಯ ವಿಷಯದಲ್ಲಿ ಸಕ್ರಿಯ ಔಷಧೀಯ ಕಚ್ಚಾ ವಸ್ತುಗಳ ಸಂಗ್ರಹಣೆ ಯು ಏಜೆನ್ಸಿ ಸರ್ಕಾರಕ್ಕೆ ತಿಳಿಸಿದ ಸಮಯ ಮತ್ತು ವೆಚ್ಚವು ಹೆಚ್ಚಾಗಿದೆ ಮತ್ತು ಆದ್ದರಿಂದ, ಅಮೇರಿಕದಲ್ಲೇ ತಯಾರು ಮಾಡುವುದೂ ಕೂಡ ಸುಲಭವೇನಲ್ಲ ಎಂದು ಭಾಸ್ಕರ್‌ ಹೇಳಿದರು.

ಅಮೇರಿಕವು ಭಾರತದ ಸಾಂಪ್ರದಾಯಿಕ ವ್ಯವಹಾರಿಕ ಪಾಲುದಾರ ಅಗಿದ್ದು ಕೌನ್ಸಿಲ್‌ ನೀಡಿರುವ ಮಾಹಿತಿಯ ಪ್ರಕಾರ, 2019-20ರಲ್ಲಿ ಅಮೇರಿಕಾಕ್ಕೆ ಭಾರತದ ಔಷಧ ರಫ್ತು ಮೌಲ್ಯ 6.24 ಬಿಲಿಯನ್‌ ಡಾಲರ್‌ ಅಗಿತ್ತು. ಇದರಲ್ಲಿ ಜನೆರಿಕ್‌ ಔಷಧಗಳ ಮೌಲ್ಯ 6.20 ಬಿಲಿಯನ್‌ ಡಾಲರ್‌ ಗಳಷ್ಟು ಇದೆ. ಏಪ್ರಿಲ್ 2020 ರ ವರೆಗೆ ಭಾರತೀಯ ಔಷಧ ತಯಾರಕರು ಅಮೇರಿಕಾಗೆ ರಫ್ತು ಮಾಡಲು ಸಲ್ಲಿಸಿದ ಪ್ರಸ್ತಾವನೆ ಅರ್ಜಿಗಳಿಗೆ ಅಮೇರಿಕದ ಎಫ್‌ಡಿಏಯಿಂದ 5,000 ಕ್ಕೂ ಹೆಚ್ಚು ಅನುಮೋದನೆಗಳನ್ನು ಪಡೆದುಕೊಂಡಿದೆ. ಅಗತ್ಯ ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಆಮದು ಔಷಧಗಳ ಪಟ್ಟಿಯನ್ನು ಸಿದ್ಧಪಡಿಸುವಾಗ ಏಫ್‌ಡಿಎ ಭಾರತೀಯ ಕಂಪೆನಿಗಳ ಉತ್ಪನ್ನಗಳನ್ನು ನಿರ್ಲಕ್ಷಿಸಲೂ ಸಾಧ್ಯವೇ ಇಲ್ಲ. ಅದರೆ ಅಮೇರಿಕ ಸರ್ಕಾರ ಹೊರಡಿಸಿರುವ ಆದೇಶವು ದೀರ್ಘಕಾಲೀನ ದೇಶೀಯ ಉತ್ಪಾದನೆಯನ್ನು ಹೊಂದಲು ಮತ್ತು ಸಂಭಾವ್ಯ ಕೊರತೆಯನ್ನು ಕಡಿಮೆ ಮಾಡಲು ವಿದೇಶಿ ತಯಾರಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳುತ್ತದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com