ಸದ್ಯಕ್ಕಂತೂ ವ್ಯಾಕ್ಸಿನ್ ಸಿಗಲಾರದು, ಅಂತಹ ಭ್ರಮೆಯೂ ಬೇಡ ಎಂದ ತಜ್ಞರು!
ರಾಷ್ಟ್ರೀಯ

ಸದ್ಯಕ್ಕಂತೂ ವ್ಯಾಕ್ಸಿನ್ ಸಿಗಲಾರದು, ಅಂತಹ ಭ್ರಮೆಯೂ ಬೇಡ ಎಂದ ತಜ್ಞರು!

ಕೇಂದ್ರ ಸರ್ಕಾರವೇ ರಚಿಸಿರುವ ದೇಶದ ಪ್ರಮುಖ ವೈದ್ಯಕೀಯ ತಜ್ಞರ ಕಾರ್ಯಪಡೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು,”ಸದ್ಯಕ್ಕಂತೂ ಕೋವಿಡ್ ವಿರುದ್ಧ ಪರಿಣಾಮಕಾರಿ ವ್ಯಾಕ್ಸಿನ್ ಸಿಗಲಾರದು. ಅಂತಹ ಯಾವುದೇ ಭ್ರೆಮಗಳನ್ನು ಹಬ್ಬಿಸುವುದು ಬೇಡ. ಬದಲಾಗಿ ದೇಶದ ಆರೋಗ್ಯ ವಲಯವನ್ನು ಅಪಾಯಕಾರಿ ಸಾಂಕ್ರಾಮಿಕದ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಸಜ್ಜುಗೊಳಿಸಿ” ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ದಿನಕ್ಕೆ ಬರೋಬ್ಬರಿ 80 ಸಾವಿರ ಹೊಸ ಪ್ರಕರಣಗಳು ಮತ್ತು ಒಟ್ಟಾರೆ 38 ಲಕ್ಷ ಪ್ರಕರಣಗಳ ಮೂಲಕ ಕರೋನಾ ಸೋಂಕಿನ ವಿಷಯದಲ್ಲಿ ದೇಶ ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದೆ. ಶಂಖ, ಜಾಗಟೆ, ಘಂಟೆ, ತಟ್ಟೆಲೋಟಗಳ ಸದ್ದಾಗಲೀ, ಗೋ ಕರೋನಾ ಗೋ ಎಂಬ ಮಂತ್ರವಾಗಲೀ ಕೋವಿಡ್-19 ವೇಗಕ್ಕೆ ಕಡಿವಾಣ ಹಾಕಲಾರದು ಎಂಬುದಂತೂ ಸದ್ಯಕ್ಕೆ ಸಾಬೀತಾಗಿದೆ. ಹಾಗಾಗಿ ಈಗ ಪ್ರಧಾನಿ ಮೋದಿಯವರನ್ನೂ ಸೇರಿದಂತೆ ಆಳುವ ಮಂದಿ, ಹೊಸ ಮಂತ್ರ ಕಂಡುಕೊಂಡಿದ್ದಾರೆ. ಅದೇ, ಕೋವಿಡ್ ರಾಮಬಾಣ ವ್ಯಾಕ್ಸಿನ್ ಇನ್ನೇನು ಬಂದೇ ಬಿಡುತ್ತದೆ. ದೇಶದ ಜನರನ್ನೆಲ್ಲಾ ಪಾರುಮಾಡಿಬಿಡುತ್ತೇವೆ ಎಂಬುದು!

ಆದರೆ, ವಾಸ್ತವವಾಗಿ ಆ ವ್ಯಾಕ್ಸಿನ್ ಇವರು ಹೇಳುವಂತೆ ನಾಳೆ, ನಾಡಿದ್ದರಲ್ಲೇ ಬಂದೇ ಬಿಡುತ್ತದೆಯೇ? ಅಥವಾ ನಿಜವಾಗಿಯೂ ವ್ಯಾಕ್ಸಿನ್ ಇವರು ಊಹಿಸಿದಂತೆ ದೇಶದ ಜನರ ಜೀವ ಕಾಪಾಡಲು ಎಷ್ಟು ದಿನ ಹಿಡಿಯಬಹುದು? ವ್ಯಾಕ್ತಿನ್ ತಯಾರಿಕೆಯ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯತ್ನಗಳು ಯಾವ ಹಂತದಲ್ಲಿವೆ? ಪ್ರಧಾನಿ ಮೋದಿಯವರ ಮೊದಲ ಡೆಡ್ಲೈನ್ ಆಗಸ್ಟ್ ಹದಿನೈದು ಮುಗಿದು ಮತ್ತೆ ಹದಿನೈದು ದಿನವೂ ಕಳೆದುಹೋಗಿದೆ. ಹಾಗಾದರೆ, ಈಗ ಕರೋನಾದಿಂದ ಜೀವ ಉಳಿಸಿಕೊಳ್ಳಲು(ಕನಿಷ್ಟ ವ್ಯಾಕ್ಸಿನ್ ಬರುವವರೆಗಾದರೂ!) ಇರುವ ಮಾರ್ಗೋಪಾಯಗಳೇನು? ಎಂಬ ಕುತೂಹಲ ಸಹಜ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ನಿಟ್ಟಿನಲ್ಲಿ; ಸದ್ಯದ ಕೋವಿಡ್ ವ್ಯಾಕ್ಸಿನ್ ಸ್ಥಿತಿಗತಿ, ಅವುಗಳ ತಯಾರಿಕಾ ಹಂತ, ಪ್ರಾಯೋಗಿಕ ಯಶಸ್ಸು, ಬೇಡಿಕೆ ಮುಂತಾದ ಸಂಗತಿಗಳ ಮೇಲೆ ಕಣ್ಣಾಡಿಸಿದರೆ, ಸದ್ಯಕ್ಕಂತೂ (ಕನಿಷ್ಟ ಇನ್ನು ಆರು ತಿಂಗಳಾದರೂ) ಈ ವ್ಯಾಕ್ಸಿನ್ ಮೋದಿಯವರು ಹೇಳಿದಂತೆ ಭಾರತೀಯರ ಜೀವ ಉಳಿಸಲು ಬರುವಂತೆ ತೋರುತ್ತಿಲ್ಲ.

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಸದ್ಯ ಸುಮಾರು 175 ಕೋವಿಡ್-19 ವ್ಯಾಕ್ಸಿನ್ ಗಳು ಅಭಿವೃದ್ಧಿಯ ವಿವಿಧ ಹಂತದಲ್ಲಿವೆ. ಆ ಪೈಕಿ 33 ವ್ಯಾಕ್ಸಿನ್ ಗಳು ಕ್ಲಿನಿಕಲ್ ಪ್ರಯೋಗದ ಹಂತದಲ್ಲಿವೆ. ಈವರೆಗಿನ ವಿವಿಧ ಹಂತದ ಪರೀಕ್ಷೆಗಳ ಮೂಲಕ ಬೆರಳೆಣಿಕೆಯ ಕೆಲವು ನಿಜವಾಗಿಯೂ ಕರೋನಾದಿಂದ ಮನುಷ್ಯರಿಗೆ ಬಿಡುಗಡೆ ನೀಡುವ ಭರವಸೆ ಹುಟ್ಟಿಸಿವೆ. ಆ ಪೈಕಿ ಅಂತಿಮ ಹಂತದ ಮಾನವ ಪ್ರಯೋಗಕ್ಕೆ ಸಜ್ಜಾಗಿರುವ ಪ್ರಮುಖ ಎರಡು ವ್ಯಾಕ್ಸಿನ್ ಗಳು ಆಕ್ಸ್ ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಪಿಎಲ್ ಸಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಮತ್ತು ಮಾಡರ್ನಾ ಇಂಕಾ ಮತ್ತು ಅಮೆರಿಕಾದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸಸ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಎಂ-ಆರ್ ಎನ್ಎ ಆಧಾರಿತ ವ್ಯಾಕ್ಸಿನ್.

ಆಕ್ಸ್ ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿ ಸಂಶೋಧನೆಯ ವ್ಯಾಕ್ಸಿನ್ ಅಮೆರಿಕದಲ್ಲಿ ಮೂರನೇ ಹಂತದ ಪ್ರಯೋಗ ಪ್ರಾರಂಭಿಸಿದ್ದು, ಭಾರತದಲ್ಲಿ ಈಗಾಗಲೇ ಅದರ ಮೂರನೇ ಹಂತದ ಮಾನವ ಪ್ರಯೋಗ ಆರಂಭವಾಗಿದೆ. ಸುಮಾರು 1600 ಮಂದಿ ಭಾರತೀಯರು ಈ ವ್ಯಾಕ್ಸಿನ್ ಪ್ರಯೋಗಕ್ಕೆ ಒಳಗಾಗಿದ್ದಾರೆ. ಈ ಪ್ರಯೋಗಗಳ ಪ್ರಾಥಮಿಕ ಮಾಹಿತಿ ಅಕ್ಟೋಬರ್ ಹೊತ್ತಿಗೆ ಸಿಗಬಹುದು ಎಂದು ಸಂಶೋಧಕರು ನಿರೀಕ್ಷಿಸಿದ್ದಾರೆ. ಭಾರತದಲ್ಲಿ ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಸಹಯೋಗದಲ್ಲಿ ಎಝಡ್ ಡಿ-1222 ವ್ಯಾಕ್ಸಿನ್ ಹೆಸರಿನಲ್ಲಿ ಈ ಪ್ರಯೋಗ ನಡೆಯುತ್ತಿದೆ. ಸದ್ಯದ ಸ್ಥಿತಿಯಲ್ಲಿ ಭಾರತೀಯರಿಗೆ ಮೊದಲು ಸಿಗಬಹುದಾದ ವ್ಯಾಕ್ಸಿನ್ ಇದೇ ಆಗಲಿದೆ ಎಂಬ ನಿರೀಕ್ಷೆ ಇದೆ. ಮೂರನೇ ಹಂತದ ಪ್ರಯೋಗದ ಫಲಿತಾಂಶ ಆಶಾದಾಯಕವಾಗಿದ್ದಲ್ಲಿ, ಅಮೆರಿಕದಲ್ಲಿಇದರ ಸಾರ್ವಜನಿಕ ಬಳಕೆಗೆ ಅವಕಾಶ ನೀಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಅಲ್ಲಿನ ಅಧ್ಯಕ್ಷೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಸಂಶೋಧಕರಿಗಿಂತ, ಸರ್ಕಾರಕ್ಕೆ ಹೆಚ್ಚು ಅವಸರವಿದೆ ಎಂದು ವರದಿಗಳು ಹೇಳಿವೆ.

ಇನ್ನು ಭಾರತದ ಮಟ್ಟಿಗೆ, ಈವರೆಗೆ ಒಟ್ಟು 8 ವ್ಯಾಕ್ಸಿನ್ ತಯಾರಿ ಪ್ರಯತ್ನಗಳು ನಡೆಯುತ್ತಿವೆ. ಆ ಪೈಕಿ ಎರಡು ಕ್ಲಿನಿಕಲ್ ಪ್ರಯೋಗದ ಎರಡನೇ ಹಂತದಲ್ಲಿವೆ. ಇನ್ನು ಕಳೆದ ಹದಿನೈದು ದಿನಗಳ ಹಿಂದೆಯೇ(ಸ್ವಾತಂತ್ರ್ಯ ದಿನದಂದು) ಮೋದಿಯವರು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಸಜ್ಜಾಗಿದ್ದ ಕೋವಾಕ್ಸಿನ್ ಇನ್ನೂ ಮೂರನೇ ಹಂತದ ಪ್ರಯೋಗಕ್ಕೆ ಸಜ್ಜಾಗಿಲ್ಲ. ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಈ ವ್ಯಾಕ್ಸಿನ್ ನ ಮೊದಲ ಹಂತದ ಮಾನವ ಪ್ರಯೋಗದ ಫಲಿತಾಂಶ ಮಾತ್ರ ಸದ್ಯ ಬಹಿರಂಗಗೊಂಡಿದ್ದು, ಆ ಹಂತದಲ್ಲಿ ಅಡ್ಡಪರಿಣಾಮರಹಿತವಾದ, ವೈರಾಣು ವಿರುದ್ಧದ ಪ್ರಬಲ ರೋಗನಿರೋಧಕ ಶಕ್ತಿ ಉದ್ದೀಪಿಸುವ ಗುಣ ಹೊಂದಿರುವುದು ಪತ್ತೆಯಾಗಿದೆ. ಈ ಪ್ರಯೋಗದ ಮುಖ್ಯ ಸಂಶೋಧಕ ಡಾ ಇ ವಿ ರಾವ್ ಪ್ರಕಾರ, “ಎರಡನೇ ಹಂತದ ಪ್ರಯೋಗಗಳು ಮುಗಿದಿದ್ದು, ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ. ಸದ್ಯದಲ್ಲೇ ಮೂರನೇ ಹಂತದ ಮಾನವ ಪ್ರಯೋಗಗಳು ಆರಂಭವಾಗಲಿವೆ”.

ಈ ನಡುವೆ, ಜಗತ್ತಿನಲ್ಲೇ ಮೊಟ್ಟಮೊದಲು ಕೋವಿಡ್-19 ವ್ಯಾಕ್ಸಿನ್ ನೋಂದಣಿ ಮಾಡುವ ಮೂಲಕ ದೊಡ್ಡ ಸುದ್ದಿ ಮಾಡಿದ್ದ ರಷ್ಯಾ, ಅತಿ ವೇಗದಲ್ಲಿ ಅಭಿವೃದ್ಧಿಪಡಿಸಿದ ತನ್ನ ಸ್ಪುಟ್ನಿಕ್-5 ವ್ಯಾಕ್ಸಿನ್ ಕೂಡ ಕ್ಲಿನಿಕಲ್ ಪ್ರಯೋಗದ ಅಂತಿಮ ಹಂತದಲ್ಲಿದ್ದು, ಆಯ್ದ ಜನಸಮೂಹಕ್ಕೆ ಸಾಮೂಹಿಕವಾಗಿ ಪ್ರಾಯೋಗಿಕ ಡೋಸ್ ನೀಡಲು ಸಜ್ಜಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಆ ನಿಟ್ಟಿನಲ್ಲಿ ಪ್ರಯೋಗ ಆರಂಭವಾಗಲಿವೆ ಎಂದು ಹೇಳಲಾಗಿದೆ. ಇನ್ನು ಕರೋನಾ ವೈರಾಣು ಉಗಮ ಸ್ಥಾನ ಚೀನಾ ಕೂಡ, ಪರಿಣಾಮಕಾರಿ ವ್ಯಾಕ್ಸಿನ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದು, ಈಗಾಗಲೇ ಅಲ್ಲಿನ ಕೆಲವು ಆಯ್ದ ಜನರ ಮೇಲೆ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ ಆರಂಭಿಸಲಾಗಿದೆ. ಅಲ್ಲಿ ಸದ್ಯ ಐದು ಬೇರೆ ಬೇರೆ ವ್ಯಾಕ್ಸಿನ್ ಅಭಿವೃದ್ಧಿ ಹಂತದಲ್ಲಿದ್ದು, ಆ ಪೈಕಿ ಕ್ಯಾನಸಿನೊ ಬಯೋಲಾಜಿಕ್ಸ್ ಮತ್ತು ಎಡಿ5-ಎನ್ ಕೊವ್ ಸಾಕಷ್ಟು ಭರವಸೆ ಹುಟ್ಟಿಸಿವೆ ಎನ್ನಲಾಗಿದೆ. ಆದರೆ, ರಷ್ಯಾ ಮತ್ತು ಚೀನಾದ ವ್ಯಾಕ್ಸಿನಗಳ ವಿಷಯದಲ್ಲಿ ಅವುಗಳ ಕ್ಲಿನಿಕಲ್ ಪ್ರಯೋಗ ಸೇರಿದಂತೆ ವಿವರ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಅಲ್ಲಿನ ಆಡಳಿತಗಳ ಸೀಮಿತ ಅಧಿಕೃತ ಮಾಹಿತಿ ಹೊರತುಪಡಿಸಿ ವ್ಯಾಕ್ಸಿನ್ ಗಳ ಯಶಸ್ಸಿನ ಪ್ರಮಾಣ, ಪ್ರಯೋಗದ ಅಡ್ಡಪರಿಣಾಮ ಮುಂತಾದ ಸೂಕ್ಷ್ಮ ಸಂಗತಿಗಳು ಇನ್ನೂ ಲಭ್ಯವಿಲ್ಲ!

ಇವುಗಳಷ್ಟೇ ಅಲ್ಲದೆ, ಅಮೆರಿಕದ ಪಿಫಿಜರ್-ಬೈಯಾನ್ ಟೆಕ್ ವ್ಯಾಕ್ಸಿನ್, ನೋವಾ ವ್ಯಾಕ್ಸ್ ಕಂಪನಿಯ ಪ್ರೋಟೀನ್ ಆಧಾರಿತ ಹೊಸ ವ್ಯಾಕ್ಸಿನ್, ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸುತ್ತಿರುವ ಅಡೆನೋವೈರಸ್ ಆಧಾರಿತ ವ್ಯಾಕ್ಸಿನ್ ಸೇರಿದಂತೆ ಕೆಲವು ಕ್ಲಿನಿಕಲ್ ಪ್ರಯೋಗದ ವಿವಿಧ ಹಂತದಲ್ಲಿವೆ. ಆದರೆ, ಈ ಯಾವುದೂ ಕನಿಷ್ಟ ಇನ್ನು ಆರು ತಿಂಗಳ ಮುನ್ನ ಪ್ರಾಯೋಗಿಕ ಹಂತ ಮುಗಿಸಿ, ಅದರ ಸಾಧಕ-ಬಾಧಕಗಳ ತುಲನೆ ನಡೆಸಿ, ಅಂತಿಮವಾಗಿ ಸಾಮುದಾಯಿಕವಾಗಿ ಜನರಿಗೆ ನೀಡಬಹುದು ಎಂಬ ಹಂತಕ್ಕೆ ತಲುಪಲಾರವು ಎಂಬುದನ್ನು ಹಲವು ವರದಿಗಳು ಹೇಳುತ್ತಿವೆ.

ಆ ಹಿನ್ನೆಲೆಯಲ್ಲಿಯೇ, ಕೇಂದ್ರ ಸರ್ಕಾರವೇ ರಚಿಸಿರುವ ದೇಶದ ಪ್ರಮುಖ ವೈದ್ಯಕೀಯ ತಜ್ಞರ ಕಾರ್ಯಪಡೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು,” ಸದ್ಯಕ್ಕಂತೂ ಕೋವಿಡ್ ವಿರುದ್ಧ ಪರಿಣಾಮಕಾರಿ ವ್ಯಾಕ್ಸಿನ್ ಸಿಗಲಾರದು. ಅಂತಹ ಯಾವುದೇ ಭ್ರೆಮಗಳನ್ನು ಹಬ್ಬಿಸುವುದು ಬೇಡ. ಬದಲಾಗಿ ದೇಶದ ಆರೋಗ್ಯ ವಲಯವನ್ನು ಅಪಾಯಕಾರಿ ಸಾಂಕ್ರಾಮಿಕದ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಸಜ್ಜುಗೊಳಿಸಿ” ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್(ಐಪಿಎಚ್ ಎ), ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟೀವ್ ಅಂಡ್ ಸೋಷಿಯಲ್ ಮೆಡಿಸಿನ್(ಐಎಪಿಎಸ್ ಎಂ) ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯೋಲಾಜಿಸ್ಟ್ಸ್(ಐಎಇ) ಸಂಘಟನೆಗಳ ಪರಿಣಿತರು ಪ್ರಧಾನಿ ಮೋದಿಯವರಿಗೆ ಸೋಮವಾರ ಈ ಪತ್ರ ಬರೆದಿದ್ದಾರೆ.

“ದೇಶದ ಸದ್ಯದ ಕರೋನಾ ಸಾಂಕ್ರಾಮಿಕದ ವ್ಯಾಪಕತೆಯ ಹಿನ್ನೆಲೆಯಲ್ಲಿ ನೋಡಿದರೆ, ಕರೋನಾ ನಿಯಂತ್ರಣದ ವಿಷಯದಲ್ಲಿ ಯಾವುದೇ ವ್ಯಾಕ್ಸಿನ್ ಕೂಡ ಪರಿಣಾಮಕಾರಿ ಕ್ರಮವಾಗಲಾರದು. ಹಾಗಾಗಿ ಸದ್ಯಕ್ಕಂತೂ ಯಾವುದೇ ಪರಿಣಾಮಕಾರಿ ವ್ಯಾಕ್ಸಿನ್ ಲಭ್ಯವಾಗಲಾರದು ಎಂಬ ಸತ್ಯವನ್ನು ಒಪ್ಪಿಕೊಂಡು, ನಾಳೆ, ನಾಡಿದ್ದು, ವಾರ ಬಿಟ್ಟು, ತಿಂಗಳಲ್ಲಿ ವ್ಯಾಕ್ಸಿನ್ ಕೈಗೆ ಬಂದುಬಿಡುತ್ತದೆ ಎಂಬ ಭ್ರಮೆಯನ್ನು ಬಿಟ್ಟು ವಾಸ್ತವಾಂಶವನ್ನು ಒಪ್ಪಿಕೊಳ್ಳಬೇಕಿದೆ. ಆ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಯಲು ಮತ್ತು ಸೋಂಕಿತರ ಜೀವ ರಕ್ಷಣೆಗೆ ಬೇಕಾದ ತುರ್ತು ಕ್ರಮಗಳನ್ನು ಕೈಗೊಳ್ಳುವುದು ವಿವೇಚನೆಯ ಉಪಾಯ”ಎಂದು ತಜ್ಞರು ಪ್ರಧಾನಿಗೆ ಕಿವಿಮಾತು ಹೇಳಿದ್ದಾರೆ.

ಆ ಮೂಲಕ, ಇನ್ನೂ ಪ್ರಾಥಮಿಕ ಹಂತದ ಕ್ಲಿನಿಕಲ್ ಪ್ರಯೋಗದಲ್ಲೇ ಇರುವ ವ್ಯಾಕ್ಸಿನ್ ಬಗ್ಗೆ ದೇಶದ ಜನರಿಗೆ ದಿಕ್ಕುತಪ್ಪಿಸುವ ಭರವಸೆಗಳನ್ನು ನೀಡಿ, ಒಂದು ತಿಂಗಳಲ್ಲಿ ವ್ಯಾಕ್ಸಿನ್ ಸಿಗಲಿದೆ, ಎರಡು ತಿಂಗಳಲ್ಲಿ ಸಿಗಲಿದೆ ಎಂದು ಜನರಲ್ಲಿ ಹುಸಿ ಭ್ರಮೆ ಬಿತ್ತುವ, ಚುನಾವಣೆ ಮೇಲೆ ಕಣ್ಣಿಟ್ಟು, ಕೋವಿಡ್ ನಿರ್ವಹಣೆಯ ಅವಾಂತರಗಳನ್ನು ಶಪಿಸುವ ಜನರ ಮನಸನ್ನು ಬೇರೆಡೆ ತಿರುಗಿಸುವ ಪ್ರಯತ್ನವಾಗಿ ನಡೆಸುವ ತಂತ್ರಗಾರಿಕೆಗಳ ಪೊಳ್ಳುತನವನ್ನು ತಜ್ಞರು ಬಯಲುಮಾಡಿದ್ದಾರೆ. ಅದೇ ಹೊತ್ತಿಗೆ, ಸದ್ಯಕ್ಕೆ ದೇಶದಲ್ಲಿ ಸಮುದಾಯದ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ತುರ್ತುಕ್ರಮಗಳೇನು ಎಂಬ ಬಗ್ಗೆಯೂ ಅವರು ಸರ್ಕಾರಕ್ಕೆ ವಿವರ ಮಾಹಿತಿ ನೀಡಿದ್ದಾರೆ.

ದೇಶದ ನಗರ ಪ್ರದೇಶಗಳಿಂದ ಹಿಡಿದು ಕುಗ್ರಾಮಗಳವರೆಗೆ ಈಗ ಕರೋನಾ ವ್ಯಾಪಿಸಿದೆ. ಹಾಗಾಗಿ ಸೋಂಕಿನ ಆರಂಭಿಕ ಹಂತದಲ್ಲಿ ಸೋಂಕು ನಿಯಂತ್ರಣದ ಪರಿಣಾಮಕಾರಿ ಕ್ರಮವಾಗಿದ್ದ ಲಾಕ್ ಡೌನ್ ಕ್ರಮವನ್ನು ಕೈಬಿಡಬೇಕು. ಸೀಲ್ ಡೌನ್ ವಿಷಯದಲ್ಲಿ ಕೂಡ ಸೋಂಕು ಕಡಿಮೆ ಇರುವ ಪ್ರದೇಶದಲ್ಲಿ ಮಾತ್ರ ಅದನ್ನು ಅಳವಡಿಸುವುದು ಮತ್ತು ಸೀಲ್ ಡೌನ್ ಪ್ರದೇಶದ ನಾಗರಿಕರ ಬೇಕುಬೇಡಗಳ ಬಗ್ಗೆ ನಿಗಾ ಇಡುವುದು ಅಗತ್ಯ. ಇನ್ನು ಸೋಂಕು ಹೆಚ್ಚಿರುವ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣದ ಕ್ರಮಗಳಿಗಿಂತ ಸೋಂಕಿತರ ಜೀವ ರಕ್ಷಣೆಯ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ಏಕೆಂದರೆ, ಬಹುತೇಕ ನಗರಗಳಲ್ಲಿ ಈಗಾಗಲೇ ಸೋಂಕು ವ್ಯಾಪಕವಾಗಿ ಹರಡಿದ್ದು, ಆ ಕೆಲವರಿಗೆ ಸೋಂಕು ಲಕ್ಷಣ ಕಾಣಿಸಿಕೊಂಡಿರಬಹುದು, ಇನ್ನೂ ಕೆಲವರಿಗೆ ಯಾವುದೇ ಲಕ್ಷಣ ಕಾಣಿಸಿಕೊಳ್ಳದೇ ಇರಬಹುದು. ಹಾಗಾಗಿ ಅಂತಹ ಪ್ರದೇಶಗಳಲ್ಲಿ ಅಪಾಯಕಾರಿ ಗುಂಪುಗಳಾದ ಕೋವಿಡ್ ಸೇನಾನಿಗಳು, ವಿವಿಧ ಅಪಾಯಕಾರಿ ಖಾಯಿಲೆಪೀಡಿತ ವಯಸ್ಕರು ಮುಂತಾದವರು ಸೋಂಕಿಗೆ ಬಲಿಯಾಗದಂತೆ ತಡೆಯುವುದು ಆದ್ಯತೆಯಾಗಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಕೂಡ ನೆಗಡಿ- ಕೆಮ್ಮುನಂತಹ ಸಾಮಾನ್ಯ ರೋಗಗಳ ಬಗ್ಗೆ ಆಶಾ ಕಾರ್ಯಕರ್ತೆಯರು, ಸ್ಥಳೀಯ ಕೋವಿಡ್ ಕಾರ್ಯಪಡೆ ಮೂಲಕ ಕಣ್ಣಿಡಬೇಕು ಮತ್ತು ಮನೆಮನೆ ಸಮೀಕ್ಷೆ ಮೂಲಕ ಸೋಂಕಿತರನ್ನು ಗುರುತಿಸಿ ನಿಗಾ ಮತ್ತು ಚಿಕಿತ್ಸೆ ವ್ಯವಸ್ಥೆಯಾಗಬೇಕು. ಈ ಹಂತದಲ್ಲಿ ಸಾಧ್ಯವಾದಷ್ಟು ಲಕ್ಷಣರಹಿತ ಸೋಂಕಿತರಿಗೆ ಮನೆಯಲ್ಲೇ ನಿಗಾ ವಹಿಸುವುದು ಸೂಕ್ತ. ತೀವ್ರ ಸಮಸ್ಯೆ ಇರುವವರಿಗೆ ಮಾತ್ರ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮತ್ತು ಉಳಿದವರಿಗೆ ಆರೋಗ್ಯ ಕಾರ್ಯಕರ್ತರ ಉಸ್ತುವಾರಿಯಲ್ಲಿ ಅವರರವರ ಮನೆಯಲ್ಲೇ ನಿಗಾ ವಹಿಸುವ ವ್ಯವಸ್ಥೆ ಮಾಡುವುದು ಮುಖ್ಯ. ಸಮುದಾಯ ರೋಗ ನಿರೋಧಕ ಶಕ್ತಿ ವೃದ್ಧಿಸಲು ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳನ್ನ ಹಂತಹಂತವಾಗಿ ತೆರೆಯುವುದು ಮತ್ತೊಂದು ಪರಿಣಾಮಕಾರಿ ಕ್ರಮ. ಹೆಚ್ಚು ಹೆಚ್ಚು ಎಳೆಯರು ಸೋಂಕಿಗೆ ತೆರೆದುಕೊಂಡು ರೋಗ ನಿರೋಧಕಶಕ್ತಿ ಬೆಳೆಸಿಕೊಂಡಷ್ಟು ಸಮುದಾಯಿಕವಾಗಿ ಒಳ್ಳೆಯದು ಎಂದೂ ತಜ್ಞರು ಹೇಳಿದ್ದಾರೆ!

ಆದರೆ, ನಿಜವಾಗಿ ದೇಶದ ಜನರ ಜೀವರಕ್ಷಣೆ, ಅವರ ಉದ್ಯೋಗ- ದುಡಿಮೆ ರಕ್ಷಣೆ, ಭವಿಷ್ಯ ಸುಭದ್ರಪಡಿಸುವುದಕ್ಕಿಂತ ತತಕ್ಷಣಕ್ಕೆ ಜನರನ್ನು ಪ್ರಚೋದಿಸುವ, ರೋಚಕಗೊಳಿಸುವ ಭ್ರಮೆಯಲ್ಲಿ ತೇಲಿಸುವ ಸಂಗತಿಗಳ ಬಗ್ಗೆಯೇ ಹೆಚ್ಚು ಆಸಕ್ತಿ ಹೊಂದಿರುವ ಮತ್ತು ಚುನಾವಣಾ ಲಾಭದ ಮೇಲೆ ಮಾತ್ರ ಕಣ್ಣಿಟ್ಟಿರುವ ಪ್ರಧಾನಿಗಳು ಮತ್ತು ಅವರ ಸರ್ಕಾರ ಇಂತಹ ಜನಪರ ಕಾಳಜಿಯ ಮಾತುಗಳಿಗೆ ಕಿವಿಯೊಡ್ಡುವುದೇ ಎಂಬುದು ಅನುಮಾನ. ಏಕೆಂದರೆ, ಮಾರ್ಚ್ ಮೂರನೇ ವಾರದಲ್ಲಿ ಲಾಕ್ ಡೌನ್ ಹೇರುವಾಗಲೇ ಪ್ರಧಾನಮಂತ್ರಿಗಳು ತಾವೇ ರಚಿಸಿದ್ದ ಕೇಂದ್ರ ಕೋವಿಡ್ ಕಾರ್ಯಪಡೆಯ ತಜ್ಞರ ಮಾತಿಗೆ ಕಿವಿಗೊಟ್ಟಿದ್ದರೆ , ವಲಸೆ ಕಾರ್ಮಿಕರ ಹೆದ್ದಾರಿ ಸಾವಿನಿಂದ ಹಿಡಿದು, ಕೋವಿಡ್ ಸಾವುಗಳ ವರೆಗೆ ಸರಣಿ ಅನಾಹುತಗಳು ಸಂಭವಿಸುತ್ತಲೇ ಇರಲಿಲ್ಲ!

Click here to follow us on Facebook , Twitter, YouTube, Telegram

Pratidhvani
www.pratidhvani.com