ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!
ರಾಷ್ಟ್ರೀಯ

ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!

ರಾಷ್ಟ್ರೀಯವಾಗಿ ಆಗಸ್ಟ್ ತಿಂಗಳಲ್ಲಿ ಶೇಕಡಾ 12ರಷ್ಟು GDP ಕುಸಿತವಾಗಿದ್ದರೆ ಕರ್ನಾಟಕದಲ್ಲಿ ಶೇಕಡಾ 11ರಷ್ಟು ಕುಸಿತವಾಗಿದೆ. ಅಂದರೆ ರಾಷ್ಟ್ರೀಯ ಕುಸಿತಕ್ಕಿಂತ ರಾಜ್ಯದ ಕುಸಿತ ಕಡಿಮೆ. ಆದರೂ ರಾಜ್ಯಕ್ಕೆ GST ಪರಿಹಾರವಿರಲಿ, ಇನ್ನಿತರೆ ನೆರೆ-ಬರಕ್ಕೆ ನೀಡುವ ಪರಿಹಾರವಾಗಲಿ ಕಮ್ಮಿ ಮತ್ತು ಅದನ್ನೂ ಕಾಡಿಬೇಡಿ ಪಡೆಯಬೇಕು. ಅನುದಾನ ಹಂಚಿಕೆ ವಿಚಾರ ಬಂದಾಗಲೆಲ್ಲಾ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ.

ಯದುನಂದನ

ಕಳೆದವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್‌ನಲ್ಲಿ ಎಲ್ಲಾ ರಾಜ್ಯಗಳು ಈ ಬಾರಿ ರಾಜ್ಯದ ಪಾಲಿನ ಜಿಎಸ್‌ಟಿ (GST) ಪರಿಹಾರದ ಪ್ರಮಾಣವನ್ನು ಹೆಚ್ಚಿಸಿ ಎಂದು ಒಕ್ಕೊರಲ ಮನವಿ ಮಾಡಿದ್ದವು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂದೇ ಏಟಿಗೆ ಕೇಂದ್ರದ ಬಳಿ ಹಣ ಇಲ್ಲ, ಕೊಡಲಾಗುವುದಿಲ್ಲ ಎಂದು ನಿವಾಳಿಸಿ ಬಿಸಾಕಿದ್ದರು. ಆರ್ಥಿಕ ವಹಿವಾಟು ನೆಟ್ಟಗೆ ನಡೆದರೆ ತಾನೇ ಸರಕು ಸೇವಾ ತೆರಿಗೆ ಸಂಗ್ರಹವಾಗುವುದು. ತೆರಿಗೆ ಸಂಗ್ರಹ ಆಗದೇ ಇರುವುದಕ್ಕೆ ಆರ್ಥಿಕ ವ್ಯವಹಾರ ನಡೆದಿಲ್ಲ ಎನ್ನುವುದು ಒಂದೇ ಕಾರಣವಾದರೆ. ಆರ್ಥಿಕ ವ್ಯವಹಾರ ನಡೆಯದೇ ಇರುವುದಕ್ಕೆ ಕರೋನಾ ಅಥವಾ ಲಾಕ್‌ಡೌನ್ ಒಂದೇ ಕಾರಣವಲ್ಲ. ನೋಟ್ ಬ್ಯಾನ್‌ನಿಂದ ಹಿಡಿದು, ಸಮರ್ಪಕವಲ್ಲದ ಜಿಎಸ್‌ಟಿ ಜಾರಿಯೂ ಸೇರಿದಂತೆ ನರೇಂದ್ರ ಮೋದಿ ಸರ್ಕಾರದ ಹತ್ತಾರು ಆರ್ಥಿಕ ನೀತಿಗಳು ಕಾರಣ. ಆದರೆ ನಿರ್ಮಲಾ ಸೀತಾರಾಮನ್ ಆರ್ಥಿಕ ಇಲಾಖೆ ನಿಭಾಯಿಸಲಾರದ ತಮ್ಮ ಅಸಮರ್ಥತೆಯನ್ನು, ತಮ್ಮ ಪ್ರಧಾನ ಮಂತ್ರಿಗಳ ದೂರದೃಷ್ಟಿ ಕೊರತೆಯನ್ನು ಬದಿಗೆ ಸರಿಸಿ 'ಕರೋನಾದಿಂದಲೇ ಈ ಪರಿಸ್ಥಿತಿ ನಿರ್ಮಣವಾಗಿದೆ' ಎಂಬ ಅರ್ಥ ಬರುವಂತೆ ‘Act of God’ (ದೇವರ ಆಟ) ಎಂದು ದೇವರ ಮೇಲೆಯೇ ಆರೋಪ ಹೊರಿಸಿಬಿಟ್ಟರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿರ್ಮಲಾ ಸೀತಾರಾಮನ್ ಅವರು ಬಡಪಾಯಿ ದೇವರ ಮೇಲೆ ಮಾಡಬಾರದ ಆರೋಪ ಮಾಡಿದ್ದೇಕೆಂದು ಮೊನ್ನೆ (ಆ. 31) ದೇಶವಾಸಿಗಳಿಗೆ ಅರ್ಥವಾಯಿತು. ಇದೇ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಜೋಡಿಯ ಕೃಪೆಯಿಂದ ದೇಶದ ಜಿಡಿಪಿ ಕಳೆದ 40 ವರ್ಷಗಳ ಬಳಿಕ -23.9ರಷ್ಟು ಕೆಳಗಿಳಿದಿದೆ. ಮರುದಿನ (ಸೆಪ್ಟೆಂಬರ್ 1) ಆಗಸ್ಟ್ ತಿಂಗಳ ಜಿಎಸ್‌ಟಿ ಸಂಗ್ರಹದ ವಿವರಗಳು ಹೊರಬಿದ್ದಿವೆ. ಆಗಸ್ಟ್ ತಿಂಗಳಲ್ಲಿ 86,449 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಪೈಕಿ 15,906 ಕೇಂದ್ರದ ಜಿಎಸ್‌ಟಿ. 21,064 ಕೋಟಿ ರೂಪಾಯಿ ರಾಜ್ಯದ ಜಿಎಸ್‌ಟಿ. ಸಂಯೋಜಿತ ಸರಕು ಸೇವಾ ತೆರಿಗೆ ರೂಪದಲ್ಲಿ ಬಂದಿರುವುದು 42,264 ಕೋಟಿ ರೂಪಾಯಿ. ಇದಲ್ಲದೆ 19,179 ಕೋಟಿ ರೂಪಾಯಿ ಆಮದು ಶುಲ್ಕ ಬಂದಿದೆ. ಆಮದು ಸೆಸ್ 673 ಕೋಟಿ ರೂಪಾಯಿ ಬಂದಿದೆ ಮತ್ತು ಇತರೆ ಸೆಸ್‌ಗಳಿಂದ 7,215 ಕೋಟಿ ರೂಪಾಯಿ ಬಂದಿದೆ. ಇಷ್ಟಾದರೂ ಕಳೆದ ಬಾರಿಗಿಂತ ಕಡಿಮೆ ಜಿಎಸ್‌ಟಿ ಸಂಗ್ರಹವಾಗಿದೆ. 2019ರ ಆಗಸ್ಟ್ ತಿಂಗಳಲ್ಲಿ 98,202 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅಂದರೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಶೇಕಡಾ 12ರಷ್ಟು ಕಡಿಮೆಯಾಗಿದೆ. ಕಳೆದ ಜುಲೈ ತಿಂಗಳಿಗೆ ಹೋಲಿಸಿಕೊಂಡರೆ ಶೇಕಡಾ 1 ರಷ್ಟು ಮಾತ್ರ ಕಡಿಮೆಯಾಗಿದೆ.

2020ರ ಆಗಸ್ಟ್ ತಿಂಗಳಲ್ಲಿ 86,449 ಕೋಟಿ ಸಂಗ್ರಹವಾಗಿದೆ, 2019ರ ಆಗಸ್ಟ್ನಲ್ಲಿ 98,202 ಕೋಟಿ ಸಂಗ್ರಹವಾಗಿತ್ತು ಎನ್ನುವುದಾದರೆ ವ್ಯತ್ಯಾಸ ಇರುವುದು 11,753 ಕೋಟಿ ರೂಪಾಯಿ ಮಾತ್ರ. ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕು. 86,449 ಕೋಟಿ ರೂಪಾಯಿಗಳಲ್ಲಿ ರಾಜ್ಯದ ಪಾಲು 21,064 ಕೋಟಿ ರೂಪಾಯಿ ಬಿಟ್ಟರೆ ಉಳಿದ 65,385 ಕೋಟಿ ರೂಪಾಯಿಗಳು ಇಡಿಯಾಗಿ ಕೇಂದ್ರ ಸರ್ಕಾರದ ತಿಜೋರಿಗೆ ಸೇರಿಕೊಳ್ಳುತ್ತವೆ. ಆ 65,385 ಕೋಟಿ ರೂಪಾಯಿಗಳಲ್ಲಿ ಈ ತಿಂಗಳಲ್ಲಿ ಕಡಿಮೆಯಾಗಿರುವ 11,753 ಕೋಟಿ ರೂಪಾಯಿಯನ್ನು ಕಳೆದರೆ ಕೇಂದ್ರ ಸರ್ಕಾರಕ್ಕೆ ಆಗಸ್ಟ್ ತಿಂಗಳಲ್ಲಿ 53,632 ಕೋಟಿ ರೂಪಾಯಿ ಉಳಿಯುತ್ತದೆ. ಆದರೂ ನಿರ್ಮಲಾ ಸೀತಾರಾಮನ್ ಅವರು 'ಕೇಂದ್ರ ಸರ್ಕಾರದ ಬಳಿ ದುಡ್ಡಿಲ್ಲ, ಇದು ದೇವರ ಆಟ' ಎನ್ನುತ್ತಾರೆ. ನಿಜ, ಕೇಂದ್ರ ಸರ್ಕಾರದ ಬಳಿ ದುಡ್ಡಿದ್ದು, ರಾಜ್ಯಗಳಿಗೆ ದರ್ದು ಇದ್ದು ನಮ್ಮದು ಒಕ್ಕೂಟ ವ್ಯವಸ್ಥೆ ಎಂಬುದನ್ನು ಮರೆತು ಅವರು ದುಡ್ಡು ಕೊಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ಎಂದರೆ ರಾಜ್ಯಗಳನ್ನು ಮತ್ತು ರಾಜ್ಯದ ಜನರನ್ನು ದೇವರೇ ಕಾಪಾಡಬೇಕು.

ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!
ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!
ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!
ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!

ಮೇಲೆ ನೀಡಲಾಗಿರುವ ಟೇಬಲ್‌ನಲ್ಲಿ ಅಂಕಿ ಅಂಶಗಳನ್ನು ಗಮನಿಸಿದರೆ ಇನ್ನೊಂದು ವಿಷಯವೂ ಸ್ಪಷ್ಟವಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳನ್ನು ಹೊರತುಪಡಸಿದರೆ ಉಳಿದ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಹೀನಾಯ ಸ್ಥಿತಿಯನ್ನೇನೂ ತಲುಪಿಲ್ಲ. 2019-20ನೇ ಆರ್ಥಿಕ ವರ್ಷಕ್ಕೆ ಹೋಲಿಸಿಕೊಂಡರೆ 2020-21ನೇ ಆರ್ಥಿಕ ವರ್ಷದಲ್ಲಿ ಕರೋನಾ ಮತ್ತು ಲಾಕ್‌ಡೌನ್ ನಡುವೆಯೂ ಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ ತೀರಾ ನಿರಾಶಾದಾಯಕವಾದುದಲ್ಲ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಜೂನ್‌ನಲ್ಲಿ 9,022 ಕೋಟಿ ರೂಪಾಯಿ ವ್ಯತ್ಯಾಸವಿದೆ. ಜುಲೈ ತಿಂಗಳಲ್ಲಿ 14,661 ಕೋಟಿ ರೂಪಾಯಿ ವ್ಯತ್ಯಾಸವಿದೆ. 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡುತ್ತಿದ್ದೇವೆ ಎಂದು ವಾರಗಟ್ಟಲೆ ಸುದ್ದಿಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತು ಅದರ ಪ್ರೇರಕ ಶಕ್ತಿ ಪ್ರಧಾನಿ ನರೇಂದ್ರ ಮೋದಿಗೆ 'ಇಷ್ಟು ಮಾತ್ರದ ಖೋತಾವನ್ನು' ಭರಿಸಲು ಸಾಧ್ಯವಾಗುತ್ತಿರಲಿಲ್ಲವೇ?

ಪ್ರತಿಬಾರಿ ರಾಜ್ಯವಾರು ಅನುದಾನ ಹಂಚಿಕೆ ವಿಚಾರ ಬಂದಾಗಲೆಲ್ಲಾ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಈಗಲೂ ರಾಷ್ಟ್ರೀಯವಾಗಿ ಆಗಸ್ಟ್ ತಿಂಗಳಲ್ಲಿ ಶೇಕಡಾ 12ರಷ್ಟು ಜಿಡಿಪಿ ಕುಸಿತವಾಗಿದ್ದರೆ ಕರ್ನಾಟಕದಲ್ಲಿ ಶೇಕಡಾ 11ರಷ್ಟು ಕುಸಿತವಾಗಿದೆ. ಅಂದರೆ ರಾಷ್ಟ್ರೀಯ ಕುಸಿತಕ್ಕಿಂತ ರಾಜ್ಯದ ಕುಸಿತ ಕಡಿಮೆ. ಆದರೂ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರವಿರಲಿ, ಇನ್ನಿತರೆ ನೆರೆ-ಬರಕ್ಕೆ ನೀಡುವ ಪರಿಹಾರವಾಗಲಿ ಕಮ್ಮಿ ಮತ್ತು ಅದನ್ನೂ ಕಾಡಿಬೇಡಿ ಪಡೆಯಬೇಕು. ಆಗಸ್ಟ್ ತಿಂಗಳಲ್ಲಿ ಕರ್ನಾಟಕದಿಂದ 5,502 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 6,201 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. ದೇಶದಲ್ಲಿ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾಗಿರುವುದು ಮಹಾರಾಷ್ಟದಿಂದ; 11,602 ಕೋಟಿ ರೂಪಾಯಿ. ನಂತರದ ಸರದಿ ಗುಜರಾತ್; 6,030 ಕೋಟಿ ರೂಪಾಯಿ. ಬಳಿಕ ಮೂರನೇ ಸ್ಥಾನದಲ್ಲಿರುವುದೇ ಕರ್ನಾಟಕ; 5,502 ಕೋಟಿ ರೂಪಾಯಿ. ಹೀಗೆ ತೆರಿಗೆ ತೆತ್ತುವುದರಲ್ಲಿ ಎತ್ತರದಲ್ಲಿದ್ದರೂ ವಾಪಸ್ ಅನುದಾನ ಪಡೆಯುವಾಗ ಮಾತ್ರ ಕೆಳಗೆ ನಿಂತು ಅಂಗಲಾಚಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಹೆಚ್ಚು ತೆರಿಗೆ ನೀಡುತ್ತಿದ್ದರೂ, ನಮ್ಮವರೇ ಕೇಂದ್ರದ ಹಣಕಾಸು ಸಚಿವರಾಗಿದ್ದರೂ (ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದಲೇ ರಾಜ್ಯಸಭೆಗೆ ಹೋಗಿರುವುದು) ನಾವು ಕೇಂದ್ರ ಸರ್ಕಾರದ ಮುಂದೆ ಕೈಕಟ್ಟಿ ನಿಲ್ಲಬೇಕಾಗಿರುವುದು ನಿಜಕ್ಕೂ 'ಆ್ಯಕ್ಟ್ ಆಫ್ ಗಾಡ್' ಅರ್ಥಾತ್ ದೇವರ ಆಟವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com