ಫೇಸ್ಬುಕ್-ಬಿಜೆಪಿ ಒಳ ಒಪ್ಪಂದ: ತನಿಖೆಯ ಬೇಡಿಕೆಯನ್ನು ಮತ್ತೆ ಮುಂದಿಟ್ಟ ಕಾಂಗ್ರೆಸ್
ರಾಷ್ಟ್ರೀಯ

ಫೇಸ್ಬುಕ್-ಬಿಜೆಪಿ ಒಳ ಒಪ್ಪಂದ: ತನಿಖೆಯ ಬೇಡಿಕೆಯನ್ನು ಮತ್ತೆ ಮುಂದಿಟ್ಟ ಕಾಂಗ್ರೆಸ್

ಫೇಸ್ ಬುಕ್ ಮತ್ತು ಆಡಳಿತ ಪಕ್ಷದ ನಡುವಿನ ಅಪವಿತ್ರ ಮೈತ್ರಿಯ ಕುರಿತ ಈ ಪ್ರಕರಣದ ಹಿನ್ನೆಲೆಯಲ್ಲಿ ದೇಶದಲ್ಲಿ ಫೇಸ್ ಬುಕ್ ನ ದ್ವೇಷ ಭಾಷಣ ಮತ್ತು ಅಸಹಿಷ್ಣುತೆ ಕುರಿತ ನೀತಿಗಳ ಕುರಿತ ಪರಿಶೀಲನೆ ನಡೆಸುವಂತೆ 54 ಮಂದಿ ಮಾಜಿ ಐಎಎಸ್ ಅಧಿಕಾರಿಗಳ ಗುಂಪು ಫೇಸ್ ಬುಕ್ ಕಂಪನಿಯ ಸಿಇಒ ಝುಕರ್ ಬರ್ಗ್‌ಗೆ ಬಹಿರಂಗ ಪತ್ರ ಬರೆದಿದ್ದರು

ಪ್ರತಿಧ್ವನಿ ವರದಿ

ಭಾರತದ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಸಾಮರಸ್ಯದ ಮೇಲೆ ಫೇಸ್‌ಬುಕ್‌ ಹಾಗೂ ವಾಟ್ಸಪ್‌ ಮಾಡಿರುವ ʼಲಜ್ಜೆಗೆಟ್ಟ ದಾಳಿʼಯನ್ನು ಅಂತರಾಷ್ಟ್ರೀಯ ಮಾಧ್ಯಮಗಳು ಸಂಪೂರ್ಣವಾಗಿ ಬಯಲಿಗೆಳೆದಿವೆ. ವಿದೇಶಿ ಕಂಪೆನಿಯೊಂದು ನಮ್ಮ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ಒಪ್ಪಿಕೊಳ್ಳಲು ಸಾಧಯವಿಲ್ಲ. ಅವರನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು. ಹಾಗೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಆಗ್ರಹಿಸಿದ್ದಾರೆ.

ದೈತ್ಯ ಸಾಮಾಜಿಕ ಜಾಲತಾಣ ಕಂಪೆನಿಗಳ ವಿರುದ್ಧ ಟ್ವೀಟ್ ಮಾಡಿರುವ ರಾಹುಲ್‌ ಗಾಂಧಿ, ಫೇಸ್‌ಬುಕ್‌ ಹಾಗೂ ಬಿಜೆಪಿ ನಡುವಿನ ಆಂತರಿಕ ಒಳ ಒಪ್ಪಂದದ ಕುರಿತಂತೆ ವಾಲ್ ಸ್ಟ್ರೀಟ್ ಜರ್ನಲ್ ಮಾಡಿರುವ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಫೇಸ್‌ಬುಕ್‌ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬ ವದಂತಿಗಳು ಮೊದಲೇ ಕೇಳಿಬಂದಿದ್ದರೂ, ವಾಲ್ ಸ್ಟ್ರೀಟ್ ಜರ್ನಲ್ ಮಾಡಿರುವ ವರದಿ ಈ ಆರೋಪಗಳಿಗೆ ಇನ್ನಷ್ಟು ಪುಷ್ಟಿ ನೀಡಿತ್ತು. ವರದಿ ಪ್ರಕಟಗೊಂಡ ಬಳಿಕ ಸಾಕಷ್ಟು ಚರ್ಚೆಗೊಳಗಾಯಿತು. ಬಳಿಕ ಈ ಆರೋಪಗಳಿಗೆ ಸಂಬಂಧಿಸಿದಂತೆ ಒಂದೊಂದೇ ಸುಳುಹುಗಳು ಬೆಳಕಿಗೆ ಬಂದವು.

ಫೇಸ್ ಬುಕ್ ಮತ್ತು ಆಡಳಿತ ಪಕ್ಷದ ನಡುವಿನ ಅಪವಿತ್ರ ಮೈತ್ರಿಯ ಕುರಿತ ಈ ಪ್ರಕರಣದ ಹಿನ್ನೆಲೆಯಲ್ಲಿ ದೇಶದಲ್ಲಿ ಫೇಸ್ ಬುಕ್ ನ ದ್ವೇಷ ಭಾಷಣ ಮತ್ತು ಅಸಹಿಷ್ಣುತೆ ಕುರಿತ ನೀತಿಗಳ ಕುರಿತ ಪರಿಶೀಲನೆ ನಡೆಸುವಂತೆ 54 ಮಂದಿ ಮಾಜಿ ಐಎಎಸ್ ಅಧಿಕಾರಿಗಳ ಗುಂಪು ಫೇಸ್ ಬುಕ್ ಕಂಪನಿಯ ಸಿಇಒ ಝುಕರ್ ಬರ್ಗ್‌ಗೆ ಬಹಿರಂಗ ಪತ್ರ ಬರೆದಿದ್ದರು. ಒಟ್ಟಿನಲ್ಲಿ ಫೇಸ್‌ಬುಕ್‌ ಹಾಗೂ ಬಿಜೆಪಿ ನಡುವಿನ ಸಂಬಂಧದ ಕುರಿತಂತೆ ಗಂಭೀರ ಆರೋಪಗಳು ಕೇಳಿಬಂದಿರುವುದರಿಂದ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯಲು ತನಿಖೆ ನಡೆಯುವುದು ಅಗತ್ಯ ಎಂಬ ಕೂಗು ಎದ್ದುಕೇಳುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com