ಪ್ರಣಬ್ ‘ದಾದಾ'ನ ಮರೆಯಲಾಗದ ನೆನಪುಗಳು..!
ರಾಷ್ಟ್ರೀಯ

ಪ್ರಣಬ್ ‘ದಾದಾ'ನ ಮರೆಯಲಾಗದ ನೆನಪುಗಳು..!

ರಕ್ಷಣಾ ಸಚಿವರಾಗಿಯೂ ಪ್ರಣಬ್ ದಾದಾ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. 2004ರಲ್ಲಿ ರಕ್ಷಣಾ ಸಚಿವರಾಗಿದ್ದ ಪ್ರಣಬ್ ಮುಖರ್ಜಿ, ಅಮೆರಿಕಾದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮ ಹಾಕಿದ್ದರು. ಪ್ರಣಬ್ ನಾಯಕತ್ವದಲ್ಲಿ ಭಾರತೀಯ ಸೇನೆ ಮಹತ್ವದ ನಿಲುವುಗಳನ್ನು ತೆಗೆದುಕೊಂಡಿತು

ಕೃಷ್ಣಮಣಿ

ಭಾರತೀಯ ರಾಜಕೀಯ ರಂಗದಲ್ಲಿ ಪ್ರಣಬ್‌ ದಾದಾ ಎಂದೇ ಖ್ಯಾತಿ ಪಡೆದಿರುವ ಪ್ರಣಬ್‌ ಮುಖರ್ಜಿ, 84 ವರ್ಷದ ಸಾರ್ಥಕ ಜೀವನ ಮುಗಿಸಿ ಹೊರಟಿದ್ದಾರೆ. ಪಶ್ಚಿಮ ಬಂಗಾಳದ ಮಿರಾತಿಯಲ್ಲಿ ಜನಿಸಿದ ಪ್ರಣಬ್‌ಮುಖರ್ಜಿ, ಕೋಲ್ಕತ್ತಾ ವಿವಿಯಿಂದ BA, MA, LLB ಕಾಂಗ್ರೆಸ್ ಪಕ್ಷದ ಮೇರು ನಾಯಕನಾಗಿ ಬೆಳೆದಿದ್ದು ಇತಿಹಾಸ.

1969ರಲ್ಲಿ ರಾಜಕೀಯ ಜೀವನ ಆರಂಭ ಮಾಡಿದ ಪ್ರಣಬ್‌ ಮುಖರ್ಜಿ, ಇಂದಿರಾ ಗಾಂಧಿ ರಾಜ್ಯಸಭೆ ಟಿಕೆಟ್ ಕೊಟ್ಟು ಆಯ್ಕೆ ಮಾಡಿದರು. ಇಂದಿರಾ ಗಾಂಧಿಗೆ ನಿಷ್ಠರಾಗಿದ್ದ ಪ್ರಣಬ್‌ ಅವರನ್ನು 1973ರಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಕಾಂಗ್ರೆಸ್​ ಪಕ್ಷನಿಷ್ಠೆ, ಖಡಕ್ ರಾಜಕಾರಣಕ್ಕೆ ಹೆಸರಾದ ಪ್ರಣಬ್‌, 1975ರ ತುರ್ತು ಪರಿಸ್ಥಿತಿ ವೇಳೆ ದೇಶವ್ಯಾಪಿ ಮುಜುಗರಕ್ಕೆ ಒಳಗಾದರು. ಐದು ದಶಕಗಳ ರಾಜಕೀಯ ಜೀವನ ಪೂರೈಸಿದ ಪ್ರಣಬ್‌, ಭಾರತ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಇಂದಿರಾ ಗಾಂಧಿ ಹತ್ಯೆ ಬಳಿಕ ಪ್ರಣಬ್‌ ಕಾಂಗ್ರೆಸ್​ ಮುಖ್ಯವಾಹಿನಿಯಿಂದ ಪಕ್ಕಕ್ಕೆ​ ಸರಿದಿದ್ದರು. ರಾಜೀವ್​ ಗಾಂಧಿಗೆ ದೇಶದ ಪ್ರಧಾನಿ ಪಟ್ಟ ಒಲಿದ ಬಳಿಕ ರಾಷ್ಟ್ರೀಯ ಸಮಾಜವಾದಿ ಪಕ್ಷ ಸ್ಥಾಪನೆ ಆಯಿತು. ಆ ಬಳಿಕ ಅದು ಕಾಂಗ್ರೆಸ್​ನಲ್ಲಿ ವಿಲೀನವೂ ಆಯಿತು. ರಾಜೀವ್ ಹತ್ಯೆ ಬಳಿಕ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಪ್ರಣಬ್‌ಗೆ ಒಲಿಯಿತು. ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದು ಪ್ರಣಬ್‌ ಮುಖರ್ಜಿ ಎನ್ನುವುದು ವಿಶೇಷ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

1980 ರಲ್ಲಿ ರಾಜ್ಯಸಭೆ ನಾಯಕನಾದ ಪ್ರಣಬ್‌ ಮುಖರ್ಜಿ, 1980, 1984 ಮತ್ತು 1990 ರಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. 1982 ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಪ್ರಣಬ್‌, 1991 ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ, 1995 ರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ, 2004 ರಲ್ಲಿ ರಕ್ಷಣಾ ಖಾತೆ, 2004ರಲ್ಲಿ ಲೋಕಸಭೆ ನಾಯಕನಾಗಿ ಆಯ್ಕೆಯಾಗಿದ್ದರು. 2006 ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ, 2009 ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. ಬಳಿಕ ಅನಾರೋಗ್ಯದ ಕಾರಣಕ್ಕೆ ಸಕ್ರಿಯ ರಾಜಕಾರಣದಿಂದ ದೂರ ಉಳಿದ ಪ್ರಣಬ್‌ ದಾದಾರನ್ನು 2012 ರಿಂದ 2017 ರವರೆಗೆ 13ನೇ ರಾಷ್ಟ್ರಪತಿ ಆಗಿ ಆಯ್ಕೆ ಮಾಡಲಾಯಿತು. ಅತಿ ಹೆಚ್ಚು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಖ್ಯಾತಿ ಪ್ರಣಬ್‌ ಅವರದ್ದಾಗಿದೆ. ಇನ್ನೂ ಆರ್​ಎಸ್​ಎಸ್​ನ ಕಾರ್ಯಕ್ರಮದಲ್ಲಿ ಮಾತಾಡಿದ ಮೊದಲ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಯೂ ಪ್ರಣಬ್‌ ಮುಖರ್ಜಿ ಅವರ ಹೆಸರಿನಲ್ಲಿದೆ.

ಭಾರತ ರತ್ನ, ಪದ್ಮ ವಿಭೂಷಣ ಗೌರವ ಪಡೆದಿರುವ ಪ್ರಣಬ್‌ ಮುಖರ್ಜಿ, ಬಾಂಗ್ಲಾದೇಶ ಲಿಬರೇಶನ್​ ವಾರ್​ ಗೌರವಕ್ಕೂ ಪಾತ್ರರಾಗಿದ್ದಾರೆ. ನ್ಯಾಶನಲ್ ಆರ್ಡರ್ ಆಫ್​ ದ ಐವರಿ ಕೋಸ್ಟ್​, ಆರ್ಡರ್​ ಆಫ್ ಮಕಾರಿಯಸ್ ​- 03 ಸೇರಿದಂತೆ ಹಲವು ವಿವಿಗಳಿಂದ ಗೌರವ ಡಿ ಲಿಟ್​, ಡಾಕ್ಟರೇಟ್​, 2010ರ ಏಷ್ಯಾದ ವರ್ಷದ ಹಣಕಾಸು ಸಚಿವ ಎನ್ನುವ ಖ್ಯಾತಿಗೆ ಪಾತ್ರರಾದ ಪ್ರಣಬ್‌ ಬಗ್ಗೆ ಯೂರೋಮನಿ ಮ್ಯಾಗಜಿನ್​ನಲ್ಲಿ ಲೇಖನ ಪ್ರಕಟವಾಗಿತ್ತು.

ಕಾಂಗ್ರೆಸ್​ನ ನಿಷ್ಠಾವಂತ ನಾಯಕನಾಗಿದ್ದ ಪ್ರಣಬ್‌ ಮುಖರ್ಜಿ ಮೇರು ವ್ಯಕ್ತಿತ್ವದ ನಾಯಕ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲೂ ಸ್ಥಾನ, ಕಾಂಗ್ರೆಸ್ ಸಂಸದೀಯ ಮಂಡಳಿಯಲ್ಲೂ ಸ್ಥಾನ ಪಡೆದ ಮುಖರ್ಜಿ, ಎಐಸಿಸಿ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 1984, 1991, 1996, 1998 ಚುನಾವಣೆ ಉಸ್ತುವಾರಿಯಾಗಿದ್ದ ಪ್ರಣಬ್‌ ಮುಖರ್ಜಿ, 1998ರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿದ್ದಾಗ ಮಹತ್ತರ ಪಾತ್ರ ವಹಿಸಿ, ಕಾಂಗ್ರೆಸ್​ನ ಕಷ್ಟ ಕಾಲದಲ್ಲಿ ಸೋನಿಯಾಗೆ ಸಲಹೆ ನೀಡುವಲ್ಲಿ ನಿಷ್ಣಾತರಾಗಿದ್ದರು. ಮಹತ್ವದ ಮಸೂದೆಗಳ ಅನುಮೋದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಪ್ರಣಬ್ ‌ಮುಖರ್ಜಿ, ಪ್ರತಿಪಕ್ಷಗಳನ್ನೂ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಹೊಂದಿದ್ದರು. ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ಸಂಪುಟ ಜವಾಬ್ದಾರಿಯನ್ನೂ ನಿಭಾಯಿಸಿದ ಕೀರ್ತಿ ಪ್ರಣಬ್‌ ಮುಖರ್ಜಿ ಪಾಲಿಗಿದೆ.

ರಕ್ಷಣಾ ಸಚಿವರಾಗಿಯೂ ಪ್ರಣಬ್ ದಾದಾ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. 2004ರಲ್ಲಿ ರಕ್ಷಣಾ ಸಚಿವರಾಗಿದ್ದ ಪ್ರಣಬ್ ಮುಖರ್ಜಿ, ಅಮೆರಿಕಾದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಶ್ರಮ ಹಾಕಿದ್ದರು. ಪ್ರಣಬ್ ನಾಯಕತ್ವದಲ್ಲಿ ಭಾರತೀಯ ಸೇನೆ ಮಹತ್ವದ ನಿಲುವುಗಳನ್ನು ತೆಗೆದುಕೊಂಡಿತು. ಅಮೆರಿಕ ಹಾಗೂ ರಷ್ಯಾ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಭಾರತ, 2005ರ ಮಾಸ್ಕೋ ಸಮ್ಮೇಳನದಲ್ಲಿ ಭಾರತ-ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿತು. 2005 ರಲ್ಲಿ ರಾಜಸ್ಥಾನದಲ್ಲಿ ಭಾರತ, ರಷ್ಯಾ ಜಂಟಿ ಸಮರಭ್ಯಾಸ ನಡೆಸಲಾಯಿತು. 2006 ರಲ್ಲಿ ಭಾರತ-ಅಮೆರಿಕ ನಡುವೆ ಅಣು ಒಪ್ಪಂದ ಮಾಡಿಕೊಳ್ಳಲಾಯಿತು. 2008ರ ಮುಂಬೈ ದಾಳಿ ವೇಳೆ ಪಾಕ್​ಗೆ ಪರೋಕ್ಷ ಎಚ್ಚರಿಕೆ ಕೊಟ್ಟು ಸುಮ್ಮನಾದರೂ ಎನ್ನುವುದನ್ನು ಬಿಟ್ಟರೆ ಪಾಕಿಸ್ತಾನದ ಕುತಂತ್ರದ ಬಗ್ಗೆ ವಿಶ್ವರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು.

ರಾಜಕಾರಣದ ಜೊತೆಗೆ ಸಾಹಿತಿಯೂ ಆಗಿದ್ದ ಪ್ರಣಬ್‌ ಮುಖರ್ಜಿ, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಾಮರಸ್ಯಕ್ಕೂ ಪ್ರಣಬ್‌ ಮುಖರ್ಜಿ ಸಾಕ್ಷಿಯಾಗಿದ್ದಾರೆ. ಇದೀಗ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದರೂ ಸಾರ್ಥಕ ಬದುಕನ್ನು ಮಾದರಿಯಾಗಿ ಬಿಟ್ಟು ಹೋಗಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com