ಅಸಂಘಟಿತ ವಲಯದ ಜನರನ್ನು ಗುಲಾಮರನ್ನಾಗಿಸುತ್ತಿರುವ ಮೋದಿ- ರಾಹುಲ್ ಆರೋಪ
ರಾಷ್ಟ್ರೀಯ

ಅಸಂಘಟಿತ ವಲಯದ ಜನರನ್ನು ಗುಲಾಮರನ್ನಾಗಿಸುತ್ತಿರುವ ಮೋದಿ- ರಾಹುಲ್ ಆರೋಪ

ಸಂಘಟಿತ ವಲಯ ದೊಡ್ಡ ದೊಡ್ಡ ಕಂಪನಿಗಳನ್ನು ಒಳಗೊಂಡಿದ್ದರೆ, ಅಸಂಘಟಿತ ವಲಯವು ರೈತರು, ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಒಳಗೊಂಡಿದೆ. ಭಾರತದ ಅಸಂಘಟಿತ ವಲಯವು ಪ್ರಬಲವಾಗಿರುವವರೆಗೆ, ಯಾವುದೇ ಆರ್ಥಿಕ ಕುಸಿತವು ಭಾರತವನ್ನು ಮುಟ್ಟಲು ಸಾಧ್ಯವಿಲ್ಲ

ಪ್ರತಿಧ್ವನಿ ವರದಿ

ಮೋದಿ ಸರ್ಕಾರವು ಆರ್ಥಿಕ ನೀತಿಯು ಅಸಂಘಟಿತ ವಲಯವನ್ನು ನಾಶಪಡಿಸುತ್ತಿದೆ ಹಾಗೂ ಆ ವಲಯವನ್ನು ಗುಲಾಮರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಸರ್ಕಾರ ಅಸಂಘಟಿತ ವಲಯದ ಮುರಿಯಲು ಬಯಸಿದೆ ಎಂದು ಆರೋಪಿಸಿದ ಅವರು, ಇದರ ವಿರುದ್ಧ ಹೋರಾಡಲು ಇಡೀ ದೇಶವೇ ಒಗ್ಗೂಡಿಬೇಕೆಂದು ಕರೆ ನೀಡಿದ್ದಾರೆ.

ಅಪನಗದೀಕರಣ, ಜಿಎಸ್‌ಟಿ ಹಾಗೂ ಲಾಕ್‌ಡೌನ್‌ ಮುಖಾಂತರ ಶೇಕಡಾ 90 ರಷ್ಟು ಜನರಿಗೆ ಉದ್ಯೋಗಗಳನ್ನು ನೀಡುವ ಅಸಂಘಟಿತ ವಲಯವನ್ನು ಸರ್ಕಾರ ನಾಶಮಾಡಿದೆ ಎಂದು ರಾಹುಲ್ ಹೇಳಿದ್ದಾರೆ. "ಬಿಜೆಪಿ ಸರ್ಕಾರ ಅಸಂಘಟಿತ ವಲಯದ ಮೇಲೆ ಮೇಲೆ ದಾಳಿ ಮಾಡಿದೆ. ಇದು ಅಸಂಘಟಿತ ವಲಯದವರನ್ನು ಗುಲಾಮರನ್ನಾಗಿ ಪರಿವರ್ತಿಸುವ ಪ್ರಯತ್ನ" ಎಂದು ಅವರು ಆರೋಪಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ 6 ವರ್ಷಗಳಿಂದ ಬಿಜೆಪಿ ಸರ್ಕಾರ ಅಸಂಘಟಿತ ವಲಯದ ಮೇಲೆ ದಾಳಿ ನಡೆಸುತ್ತಿದೆ. ನಾನು ಇದೀಗ ನಿಮಗೆ ಮೂರು ಬೃಹತ್ ಉದಾಹರಣೆಗಳನ್ನು ನೀಡುತ್ತಿದ್ದೇನೆ- ಅದು ಡೆಮೋನಿಟೈಸೇಶನ್, ತಪ್ಪಾದ ರೀತಿಯಲ್ಲಿ ಜಿಎಸ್‌ಟಿ ಮತ್ತು ಲಾಕ್‌ಡೌನ್ ಎಂದು ಅವರು ಆರ್ಥಿಕತೆಯ ಕುರಿತಂತೆ ಮಾಡಿರುವ ಹೊಸ ವೀಡಿಯೊ ಸರಣಿಯಲ್ಲಿ ಹೇಳಿದ್ದಾರೆ.

"ಲಾಕ್‌ಡೌನ್ ತಕ್ಷಣದ ನಿರ್ಧಾರ ಎಂದು ನೀವು ಭಾವಿಸಬೇಡಿ. ಕೊನೆಯ ಕ್ಷಣದಲ್ಲಿ ಇದನ್ನು ನಿರ್ಧಾರ ಮಾಡಲಾಗಿದೆ ಎಂದೂ ಭಾವಿಸಬೇಡಿ. ಇದೊಂದು ಷಡ್ಯಂತ್ರ. ಈ ಮೂರು (ಡೆಮೋನಿಟೈಸೇಶನ್, ಜಿಎಸ್‌ಟಿ ಮತ್ತು ಲಾಕ್‌ಡೌನ್) ನಿರ್ಧಾರಗಳ ಗುರಿ ನಮ್ಮ ಅಸಂಘಟಿತ ವಲಯವನ್ನು ನಾಶಪಡಿಸುವುದೇ ಆಗಿದೆ" ಎಂದು ಅವರು ಆರೋಪಿಸಿದ್ದಾರೆ.

ಬಡವರು, ರೈತರು ಮತ್ತು ಸಣ್ಣ ವ್ಯಾಪಾರಿಗಳನ್ನು ಒಳಗೊಂಡ ಅಸಂಘಟಿತ ವಲಯದಲ್ಲಿ ಅದನ್ನು ಸರ್ಕಾರ ಮುಟ್ಟಲು ಸಾಧ್ಯವಾಗದ ಸಾಕಷ್ಟು ಹಣವಿದೆ. ಹಾಗಾಗಿ ಸರ್ಕಾರ ಈ ವಲಯವನ್ನು ನಾಶಪಡಿಸಲು ಮತ್ತು ಈ ಹಣವನ್ನು ಅವರಿಂದ ಸುಲಿಗೆ ಮಾಡಲು ಸರ್ಕಾರ ಬಯಸಿದೆ, ಹಾಗಾಗಿ ಅವರನ್ನು ನಾಶಮಾಡಲು ಹವಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಸಂಘಟಿತ ವಲಯದ ಮೇಲಿನ ಈ ದಾಳಿಯ ಪರಿಣಾಮಗಳು ಶೀಘ್ರದಲ್ಲೇ ಕಂಡುಬರುತ್ತವೆ. ಇದರ ಫಲಿತಾಂಶವೆಂದರೆ ಭಾರತವು ಉದ್ಯೋಗಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಸಂಘಟಿತ ವಲಯವು 90 ಪ್ರತಿಶತದಷ್ಟು ಉದ್ಯೋಗಗಳನ್ನು ಉತ್ಪಾದಿಸುತ್ತದೆ. ಅಸಂಘಟಿತ ವಲಯ ನಾಶವಾದ ನಂತರ ಭಾರತ ಎದ್ದು ನಿಲ್ಲುವುದಿಲ್ಲ ಉದ್ಯೋಗಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

2008 ರಲ್ಲಿ ಜಗತ್ತು ಆರ್ಥಿಕ ಕುಸಿತ ಕಂಡಿತ್ತು‌, ಅದು ಅಮೇರಿಕ, ಜಪಾನ್, ಚೀನಾ ಸೇರಿದಂತೆ ಇಡೀ ವಿಶ್ವದೆಲ್ಲೆಡೆ ಪರಿಣಾಮ ಬೀರಿತ್ತು. ಅಮೇರಿಕಾ, ಯುರೋಪಿನಲ್ಲಿ ಬ್ಯಾಂಕುಗಳು ನಷ್ಟಗೊಂಡವು ಮತ್ತು ಕಂಪನಿಗಳು ಸ್ಥಗಿತಗೊಂಡವು, ಆದರೆ ಭಾರತದಲ್ಲಿ ಯಾವ ಪರಿಣಾಮವೂ ಬೀರಿರಲಿಲ್ಲ , ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ರನ್ನು ಭೇಟಿಯಾಗಿ ಇಡೀ ವಿಶ್ವವು ಆರ್ಥಿಕ ಕುಸಿತದಿಂದ ಬಳಲುತ್ತಿದ್ದರೆ ಭಾರತದ ಮೇಲೆ ಯಾಕೆ ಅದರ ಪರಿಣಾಮ ಅನುಭವಿಸಲಿಲ್ಲ ಎಂದು ಪ್ರಶ್ನಿಸಿದಾಗ ಮನಮೋಹನ್‌ ಸಿಂಗ್‌ ಅವರು, “ನೀವು ಭಾರತದ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಭಾರತವು ಎರಡು ರೀತಿಯ ಆರ್ಥಿಕ ರಚನೆಗಳನ್ನು ಹೊಂದಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಒಂದು ಸಂಘಟಿತ ವಲಯದ ಆರ್ಥಿಕತೆ ಮತ್ತು ಇನ್ನೊಂದು ಅಸಂಘಟಿತ ವಲಯದ ಆರ್ಥಿಕತೆ. ಸಂಘಟಿತ ವಲಯ ದೊಡ್ಡ ದೊಡ್ಡ ಕಂಪನಿಗಳನ್ನು ಒಳಗೊಂಡಿದ್ದರೆ, ಅಸಂಘಟಿತ ವಲಯವು ರೈತರು, ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಒಳಗೊಂಡಿದೆ. ಭಾರತದ ಅಸಂಘಟಿತ ವಲಯವು ಪ್ರಬಲವಾಗಿರುವವರೆಗೆ, ಯಾವುದೇ ಆರ್ಥಿಕ ಕುಸಿತವು ಭಾರತವನ್ನು ಮುಟ್ಟಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದರು ಎಂದು ರಾಹುಲ್‌ ಉಲ್ಲೇಖಿಸಿದ್ದಾರೆ. ಹಾಗೂ ಭಾರತದ ಆರ್ಥಿಕತೆ ಬಹುಮುಖ್ಯ ಅಂಗವಾಗಿದ್ದ ಅಸಂಘಟಿತ ವಲಯವನ್ನು ದುರ್ಬಲಗೊಳಿಸುವುದರ ಮೂಲಕ ಮೋದಿ ಸರ್ಕಾರ ಭಾರತದ ಆರ್ಥಿಕತೆಯನ್ನು ನಾಶಮಾಡಿದೆ ಎಂದಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com