ರಾಜಕಾರಣಿಗಳ ಇತಿಹಾಸ ತಿರುಚುವ ಷಡ್ಯಂತ್ರಕ್ಕೆ ಬಲಿಯಾದನೇ ಟಿಪ್ಪು?
ರಾಷ್ಟ್ರೀಯ

ರಾಜಕಾರಣಿಗಳ ಇತಿಹಾಸ ತಿರುಚುವ ಷಡ್ಯಂತ್ರಕ್ಕೆ ಬಲಿಯಾದನೇ ಟಿಪ್ಪು?

ಮರಾಠಿ ಸೇನೆಯೊಂದು ಶೃಂಗೇರಿಯ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿದನ್ನು ಎಲ್ಲರೂ ಸಹಿಸಿಕೊಳ್ಳುತ್ತಾರೆ. ಮರಾಠರು ಹಿಂದೂಗಳ ಪೂಜನೀಯ ಕ್ಷೇತ್ರದ ಮೇಲೆ ದಾಳಿ ಮಾಡಿ ಹೋದ ಬಳಿಕ ಮೈಸೂರು ರಾಜನಾಗಿದ್ದ ಟಿಪ್ಪು ಸುಲ್ತಾನ್‌ ಸ್ವತಃ ಕ್ಷಮೆ ಕೇಳಿ ಮರಾಠರು ಲೂಟಿ ಮಾಡಿದ್ದ ದೇವರ ಚಿನ್ನಾಭರಣಗಳನ್ನು ಮಾಡಿಸಿಕೊಟ್ಟ ಎಂಬ ಅಸಲಿ ಇತಿಹಾಸವನ್ನು ಮರೆಮಾಚುತ್ತಾರೆ.

ಕೃಷ್ಣಮಣಿ

ಮೈಸೂರಿನ ಹುಲಿ ಎಂದೇ ಇತಿಹಾಸದಲ್ಲಿ ಬಿಂಬಿತವಾಗಿರುವ, ಬ್ರಿಟೀಷರ ವಿರುದ್ಧ ಹೋರಾಡಿ ರಣಾಂಗಣದಲ್ಲೇ ಜೀವಬಿಟ್ಟ ಟಿಪ್ಪು ಸುಲ್ತಾನ್, ಕೆಲವರ ರಾಜಕೀಯ ಲಾಭಕ್ಕಾಗಿ ದುಷ್ಟ, ಹೇಡಿ, ಮತಾಂಧನಾಗಿ ನಿಂತಿದ್ದಾನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಪರವಾಗಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಜಾರಿಗೆ ತಂದರು. ಅಂದಿನಿಂದ ಟಿಪ್ಪು ಸುಲ್ತಾನ್‌ ವಿರುದ್ಧ ಒಂದು ವರ್ಗ ಸೆಟೆದು ನಿಂತಿಬಿಟ್ಟಿತು.

ಟಿಪ್ಪು ಸುಲ್ತಾನ್‌ ಮೈಸೂರು ಹುಲಿ ಎಂದು ಹೇಳಿಕೊಳ್ಳುತ್ತಿದ್ದ ಜನರೇ ಟಿಪ್ಪು ಸುಲ್ತಾನ್‌ ಹಿಂದೂ ಧರ್ಮದ ವಿರೋಧಿ, ಪರ್ಷಿಯನ್‌ ಭಾಷೆಯನ್ನೇ ಯೆಥೇಚ್ಚವಾಗಿ ಆಡಳಿತ ಭಾಷೆಯಾಗಿ ಬಳಸುತ್ತಿದ್ದ. ಕೊಡಗಿನ ರಾಜನ ಮೇಲೆ ದಾಳಿ ಮಾಡಿದ್ದಾನೆ. ಚಿತ್ರದುರ್ಗದ ಮದಕರಿ ನಾಯಕನ ಕೋಟೆ ಮೇಲೆ ದಾಳಿ ಮಾಡಿದ್ದಾನೆ. ಇದೆಲ್ಲಾ ಹಿಂದೂ ವಿರೋಧಿ ಕೃತ್ಯ ಎನ್ನುವಂತೆ ಹಣೆ ಪಟ್ಟಿ ಕಟ್ಟುತ್ತಾ ಸಾಗಿದರು.

ಈ ರೀತಿ ಟಿಪ್ಪು ಸುಲ್ತಾನ್‌ ವಿರುದ್ಧ ಇಲ್ಲಸಲ್ಲದನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತ ಸಾಗಿದ್ದು, ಬಿಜೆಪಿ ನಾಯಕರು ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಉದ್ದೇಶ ಸ್ಪಷ್ಟವಾಗಿತ್ತು. ಮುಸ್ಲಿಂ ರಾಜನಾಗಿದ್ದ ಟಿಪ್ಪು ಸುಲ್ತಾನ್‌ ಮಾಡಿರುವ ಇತಿಹಾಸವನ್ನು ಜನರ ಎದುರು ತಿರುಚುತ್ತಾ ಸಾಗಿದರೆ ವಿಶ್ವ ವಿಖ್ಯಾತಿ ಪಡೆದಿರುವ 300 ವರ್ಷ ಹಿಂದಿನ ರಾಜನನ್ನು ಸಮಾದಾಯದ ಎದುರು ಕೆಟ್ಟವನನ್ನಾಗಿ ಬಿಂಬಿಸಬಹುದು. ಈ ಮೂಲಕ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ನಾಂದಿ ಹಾಡಿದಂತೆ ಆಗುತ್ತದೆ. ಯಾವಾಗ ಮುಸ್ಲಿಂ ಸಮುದಾಯ ಟಿಪ್ಪು ಸುಲ್ತಾನ್‌ ಪರ ವಹಿಸಿ ಸೆಟೆದು ನಿಲ್ಲುತ್ತದೆಯೋ ಆಗ ಹಿಂದೂ ಸಮುದಾಯ ಸೆಟೆದು ನಿಲ್ಲುವುದರಿಂದ ಜನರ ಆ ಆಕ್ರೋಶವನ್ನು ಮತಗಳನ್ನಾಗಿ ಪರಿವರ್ತನೆ ಮಾಡುವುದು ತುಂಬಾ ಸರಳ ಎನ್ನುವುದು.

ಬಿಜೆಪಿ ಅಂದುಕೊಂಡಿದ್ದನ್ನು ಸುಲಭವಾಗಿ ಸಾಧಿಸಿಬಿಟ್ಟಿತು. ಅದೇ ಕಾರಣಕ್ಕೆ ಮಡಿಕೇರಿಯಲ್ಲಿ ಹಿಂದೂ ಮುಸ್ಲಿಂ ಗಲಾಟೆಯೂ ಆಯಿತು. ಇದೀಗ ಟಿಪ್ಪುವನ್ನು ಕೇವಲ ಮುಸ್ಲಿಮರ ನಾಯಕನನ್ನಾಗಿ ಮಾತ್ರ ಬಿಂಬಿಸುವಲ್ಲಿ ಬಹುತೇಕ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಬಿಜೆಪಿ ನಾಯಕರಲ್ಲಿ ಟಿಪ್ಪು ಬಗ್ಗೆ ಚೆನ್ನಾಗಿ ಬಲ್ಲವರೂ ಬಹಳಷ್ಟು ಜನರಿದ್ದಾರೆ. ಹಾಗಿದ್ರೆ, ಟಿಪ್ಪು ಸುಲ್ತಾನ್‌ ಕೊಡಗಿನ ರಾಜನ ಮೇಲೆ ಹಾಗೂ ಚಿತ್ರದುರ್ಗದ ಮದಕರಿ ನಾಯಕನ ಕೋಟೆ ಮೇಲೆ ದಾಳಿ ಮಾಡಲಿಲ್ಲವೇ ಎಂದರೆ, ಖಂಡಿತ ದಾಳಿ ಮಾಡಿದ್ದಾನೆ. ಹಾಗಿದ್ದರೆ ಬಿಜೆಪಿ ನಾಯಕರು ಹೇಳುತ್ತಿರುವುದರಲ್ಲಿ ತಪ್ಪೇನಿದೆ ಎನ್ನಬಹುದು.

ಟಿಪ್ಪು ಸುಲ್ತಾನ್‌, ಕೊಡವರ ಮೇಲೆ 1782 ದಾಳಿ ಮಾಡಿ ಸಾವಿರಾರು ಕೊಡವರನ್ನು ಹತ್ಯೆ ಮಾಡಿದ ಎನ್ನುವ ವಾದ ನಿಜವಾಲೂ ಸತ್ಯ ಎನ್ನುತ್ತದೆ ಇತಿಹಾಸ. ಆದರೆ, ಮೈಸೂರು ರಾಜ್ಯದ ವಿಸ್ತರಣೆಯಲ್ಲಿ ನಿರತನಾಗಿದ್ದ ರಾಜ ಟಿಪ್ಪು ಸುಲ್ತಾನ್ ಶತ್ರು ರಾಜ್ಯವಾಗಿದ್ದ ಕೊಡವರ ಮೇಲೆ ದಾಳಿ ಮಾಡಿದ್ದು ತಪ್ಪು ಎನ್ನಲು ಸಾಧ್ಯವೇ..? ಅದೇ ರೀತಿ ಅಂದು ಮೈಸೂರು ರಾಜನಾಗಿದ್ದ ಟಿಪ್ಪು ಸುಲ್ತಾನ್‌ ರಾಜ್ಯ ವಿಸ್ತರಣೆ ವೇಳೆಯಲ್ಲಿ ಕೊಡವರ ಮೇಲೆ ದಾಳಿ ಮಾಡಿದ್ದಾನೆ. ಚಿತ್ರದುರ್ಗದ ಮೇಲೂ ದಾಳಿ ಮಾಡಿದ್ದಾನೆ.

ಶಿವಾಜಿ ಮಹಾರಾಜರನ್ನು ಹೊಗಳುವಿರಿ ಏಕೆ..?

ಮರಾಠರ ಮೆಚ್ಚಿನ ರಾಜ ಶಿವಾಜಿ ಹಿಂದೂ ಎನ್ನುವ ಕಾರಣಕ್ಕೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ಮಾಡುತ್ತಾರೆ. ಆದರೆ, ಅದೇ ಮರಾಠಿ ಸೇನೆಯೊಂದು ಶೃಂಗೇರಿಯ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿದನ್ನು ಸಹಿಸಿಕೊಳ್ಳುತ್ತಾರೆ. ಮರಾಠರು ಹಿಂದೂಗಳ ಪೂಜನೀಯ ಕ್ಷೇತ್ರದ ಮೇಲೆ ದಾಳಿ ಮಾಡಿ ಹೋದ ಬಳಿಕ ಮೈಸೂರು ರಾಜನಾಗಿದ್ದ ಟಿಪ್ಪು ಸುಲ್ತಾನ್‌ ಸ್ವತಃ ಕ್ಷಮೆ ಕೇಳಿ ಮರಾಠರು ಲೂಟಿ ಮಾಡಿದ್ದ ದೇವರ ಚಿನ್ನಾಭರಣಗಳನ್ನು ಮಾಡಿಸಿಕೊಡುತ್ತಾನೆ.

ಮರಾಠಿ ಸೈನಿಕರ ಲೂಟಿಯನ್ನು ತಡೆಯಲು ಮುಂದಾದ ನೂರಾರು ಬ್ರಾಹ್ಮಣ ಕುಟುಂಬಗಳ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಹಲವರ ಹತ್ಯೆ ಮಾಡಿದವನ್ನು ನಾವು ಸಹಿಸಿಕೊಳ್ಳುತ್ತೇವೆ. ಅದಕ್ಕೆ ಕಾರಣ ಹತ್ಯೆ ಮಾಡಿದವರು ಹಿಂದೂಗಳು. ಇಡೀ ಶೃಂಗೇರಿ ಮಠಕ್ಕೆ ನಷ್ಟವಾಗಿದ್ದ ಸಂಪತನ್ನು ರಾಜ ಭರಿಸಿದ ಬಗ್ಗೆ ಶೃಂಗೇರಿಯಲ್ಲಿರುವ ದಾಖಲೆ ಹೇಳುತ್ತದೆ. ಆದರೆ ಟಿಪ್ಪುವನ್ನು ವಿರೋಧಿಸುವಂತೆ ಪ್ರಚೋದಿಸುತ್ತೇವೆ. ಯಾಕೆಂದರೆ ಆತ ಮುಸಲ್ಮಾನ ಸಮುದಾಯದ ರಾಜ.

ಟಿಪ್ಪು ಸುಲ್ತಾನ್‌ ಓರ್ವ ಮಹಾನ್‌ ರಾಜ, ಸೇನಾನಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಹಿಂದೂ ಮುಸಲ್ಮಾನರನ್ನು ಈ ಮೂಲಕ ಪ್ರತ್ಯೇಕಿಸಿ ಮತಬ್ಯಾಂಕ್‌ ಗಟ್ಟಿ ಮಾಡಿಕೊಳ್ಳಬೇಕು ಎನ್ನುವುದು ಬಿಜೆಪಿ ನಾಯಕರ ಅಜೆಂಡಾ ಅದೇ ಕಾರಣಕ್ಕೆ ಟಿಪ್ಪುವನ್ನು ಟೀಕಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಈಗ ಹೇಳುವ ಕ್ಯಾಷ್‌ಲೆಸ್‌ ವ್ಯವಹಾರವನ್ನು ಟಿಪ್ಪು ಸುಲ್ತಾನ್‌ ಮೂರ್ನಾಲ್ಕು ಶತಮಾನಗಳ ಹಿಂದೆಯೇ ಮಾಡಿದ್ದ ಎನ್ನುವ ವಿಚಾರ ಈಗಿನವರಿಗೆ ಹೇಗೆ ತಿಳಿಯಬೇಕಿದೆ. ಮಸಾಲ ಪದಾರ್ಥಗಳನ್ನು ಮೈಸೂರು ರಾಜ್ಯದಿಂದ ಫ್ರೆಂಚ್‌ಗೆ ಕಳುಹಿಸಿ ಅಲ್ಲಿಂದ ಮದ್ದು ಗುಂಡುಗಳು, ಹೊಸ ಹೊಸ ತಂತ್ರಜ್ಞಾನಗಳನ್ನು ಮೈಸೂರಿಗೆ ತರುತ್ತಿದ್ದ. ಅದಕ್ಕಾಗಿ ಮೈಸೂರಿನ ರಾಯಭಾರಿಯನ್ನು ಫ್ರೆಂಚ್‌ನಲ್ಲಿ ಇರಿಸಿದ್ದ ಎನ್ನುವುದು ಜನರಿಗೆ ಅರ್ಥವಾಗಬೇಕಿದೆ.

ಸದ್ಯಕ್ಕೆ ಬಿಜೆಪಿಯಿಂದ ಪರಿಷತ್‌ ಸ್ಥಾನಕ್ಕೆ ನಾಮ ನಿರ್ದೇಶನ ಆಗಿರುವ ಹೆಚ್‌. ವಿಶ್ವನಾಥ್‌, ಟಿಪ್ಪು ಬಗ್ಗೆ ಗುಣಗಾನ ಮಾಡಿರುವುದು ಟಿಪ್ಪು ವಿವಾದಕ್ಕೆ ಮತ್ತೆ ವೇದಿಕೆ ನಿರ್ಮಾಣ ಮಾಡಿಕೊಟ್ಟಿದೆ. ಟಿಪ್ಪು ಈ ಮಣ್ಣಿನ ಮಗ, ಮೈಸೂರು ಹುಲಿ ಎಂದೆಲ್ಲಾ ಹೇಳಿದ್ದಾರೆ. ಟಿಪ್ಪು ಬಗ್ಗೆ ಈ ರೀತಿ ಹೇಳಿಕೆ ಕೊಟ್ಟಿದ್ದರಿಂದ ಕಣ್ಣು ಕೆಂಪಗೆ ಮಾಡಿಕೊಂಡಿರುವ ಬಿಜೆಪಿ ನಾಯಕರು, ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ನಿಲುವು ಬೇರೆ ಇದೆ. ವಿಶ್ವನಾಥ್‌ ಅವರು ಇತ್ತೀಚಿಗೆ ಪಕ್ಷ ಸೇರ್ಪಡೆಯಾಗಿದ್ದು ಅವರಿಗೆ ಪಕ್ಷದ ಬಗ್ಗೆ ಅಷ್ಟೊಂದು ಅರಿವಿಲ್ಲ ಎಂದೆಲ್ಲಾ ಮಾತನಾಡುತ್ತಿದ್ದಾರೆ.

ಕಾಂಗ್ರೆಸ್‌ ನಾಯಕರು ವಿಶ್ವನಾಥ್‌ ಸತ್ಯವನ್ನೇ ಹೇಳಿದ್ದಾರೆ. ಬಿಜೆಪಿಯಿಂದ ಪರಿಷತ್‌ಗೆ ನಾಮ ನಿರ್ದೇಶನ ಆಗಿದ್ದರೂ ಧೈರ್ಯದಿಂದ ಹೇಳಿದ್ದಾರೆ ಎಂದು ಅಭಿನಂದನೆ ತಿಳಿಸುತ್ತಿದ್ದಾರೆ. ಆದರೆ 1750ರಲ್ಲಿ ಹುಟ್ಟಿದ ಟಿಪ್ಪು 1799ರ ನಾಲ್ಕನೇ ಆಂಗ್ಲೋ ಯುದ್ಧದಲ್ಲಿ ಸಾವನ್ನಪ್ಪುವ ತನಕ ಜೀವವನ್ನು ಮೈಸೂರು ರಾಜ್ಯಕ್ಕೋಸ್ಕರ ಮೀಸಲಿಟ್ಟಿದ್ದ. ಆತ ಮುಸಲ್ಮಾನ ಎಂದು ನೋಡುವುದಕ್ಕಿಂತಲೂ ಭಾರತದಲ್ಲೇ ಬ್ರಿಟೀಷರನ್ನು ಭಾರತ ದೇಶದಿಂದಲೇ ಓಡಿಸಬೇಕು ಎಂದುಕೊಂಡ ಮೊದಲ ರಾಜ. ಮರಾಠಿಗರು, ಮೀರ್‌ಸಾದಿಕ್‌ ಹಾಗೂ ದಿವಾನ್‌ ಪೂರ್ಣಯ್ಯರ ದ್ರೋಹದಿಂದ ಬ್ರಿಟೀಷರ ವಿರುದ್ಧ ಸೋಲಬೇಕಾಯ್ತು. ಬ್ರಿಟೀಷರ ವಿರುದ್ಧದ ಯುದ್ಧದಲ್ಲೇ ಟಿಪ್ಪು ಸುಲ್ತಾನ್‌ ರಾಕೆಟ್‌ ಹಾರಿಸಿದ್ದನು ಎಂದರೆ ಅರ್ಥ ಮಾಡಿಕೊಳ್ಳಬೇಕು ಟಿಪ್ಪು ಸುಲ್ತಾನ್‌ ಮೈಸೂರು ರಾಜ್ಯವನ್ನು ಯಾವ ಮಟ್ಟಕ್ಕೆ ಬೆಳೆಸಿದ್ದನು ಎಂದು.

ರಾಜಕಾರಣಿಗಳು ಟಿಪ್ಪು ಬಗ್ಗೆ ಏನನ್ನಾದರೂ ಹೇಳಲಿ, ಟಿಪ್ಪು ಓರ್ವ ಜಾತ್ಯಾತಿತ ರಾಜ. ಇಲ್ಲದಿದ್ದರೆ ಶ್ರೀರಂಗಪಟ್ಟಣ, ಮೇಲಕೋಟೆ ಸೇರಿದಂತೆ ಸಮೃದ್ಧವಾಗಿರುವ ಧಾರ್ಮಿಕ ಕೇಂದ್ರಗಳು ಇಂದಿಗೆ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. ರಾಜಕಾರಣದಲ್ಲಿ ಮತಗಳಿಸುವ ರಾಜಕೀಯ ನಾಯಕರ ತೆವಲಿಗೆ ಟಿಪ್ಪು ಹೇಡಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಆತನ ಪರಾಕ್ರಮ ಮತ್ತು ಸಾಧನೆಗಳನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅಷ್ಟಕ್ಕೂ ಇತಿಹಾಸವನ್ನು ರಾಜಕೀಯ ಲಾಭಕ್ಕಾಗಿ ತಿರುಚುವುದು ನಿರಂತವಾಗಿ ನಡೆಯುತ್ತಲೇ ಬಂದಿರುವಂತಹ ಕೆಲಸ. ಮತದಾರರು ಎಚ್ಚೆತ್ತುಕೊಳ್ಳದ ಹೊರತು, ತಿರುಚಿದ ಇತಿಹಾಸವೇ ಮುಂದೆ ಅಸಲೀ ಇತಿಹಾಸವೆಂದು ದಾಖಲಾಗುವ ಅಪಾಯವಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com