ಸುದರ್ಶನ್‌ ಟಿವಿ ʼUPSC ಜಿಹಾದ್ʼ ಕಾರ್ಯಕ್ರಮ: ಐಪಿಎಸ್‌ ಅಸೋಷಿಯೇಷನ್ ಖಂಡನೆ
ರಾಷ್ಟ್ರೀಯ

ಸುದರ್ಶನ್‌ ಟಿವಿ ʼUPSC ಜಿಹಾದ್ʼ ಕಾರ್ಯಕ್ರಮ: ಐಪಿಎಸ್‌ ಅಸೋಷಿಯೇಷನ್ ಖಂಡನೆ

ಯುಪಿಎಸ್‌ಸಿ ಅಭ್ಯರ್ಥಿಗಳ ಧರ್ಮವನ್ನು ಕೇಂದ್ರೀಕರಿಸಿ ಸುದರ್ಶನ್‌ ಟಿವಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಇಂತಹ ಕೋಮು ಪ್ರಚೋದಿತ ಮತ್ತು ಬೇಜವಾಬ್ದಾರಿಯುತ ಪತ್ರಿಕೋದ್ಯಮವನ್ನು ನಾವು ಖಂಡಿಸುತ್ತೇವೆ ಎಂದ ಐಪಿಎಸ್‌ ಅಸೋಷಿಯೇಶನ್

ಪ್ರತಿಧ್ವನಿ ವರದಿ

ಕೇಂದ್ರ ಲೋಕಸೇವಾ ಆಯೋಗದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಯಾವ ರೀತಿ ಹೆಚ್ಚಾಗಿ ಸೇರುತ್ತಿರುವುದು ಕೂಡಾ ಜಿಹಾದ್‌ನ ಭಾಗವೆಂದು ತೋರಿಸುವ ʼಸುದರ್ಶನ್‌ ಟಿವಿʼ ಎಂಬ ಚಾನೆಲ್‌ನ ಕಾರ್ಯಕ್ರಮವೊಂದರ ಟ್ರೈಲರ್‌ ಈಗ ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ. ಟ್ವಿಟರ್‌ನಲ್ಲಿ ಒಂದೂವರೆ ಮಿಲಿಯನ್‌ ಜನರು ಈ ಟ್ರೈಲರ್‌ ಅನ್ನು ವೀಕ್ಷಿಸಿದ್ದಾರೆ. ಆದರೆ, ಐಪಿಎಸ್‌ ಅಸೋಸಿಯೇಷನ್‌ ಸುದರ್ಶನ್‌ ಟಿವಿಯ ಈ ನಡೆಯನ್ನು ತೀವ್ರವಾಗಿ ಖಂಡಿಸಿದೆ.

ಐಪಿಎಸ್‌ ಅಸೋಸಿಯೇಷನ್‌ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಕುರಿತಾಗಿ ಬರೆಯಲಾಗಿದ್ದು, ಯುಪಿಎಸ್‌ಸಿ ಅಭ್ಯರ್ಥಿಗಳ ಧರ್ಮವನ್ನು ಕೇಂದ್ರೀಕರಿಸಿ ಸುದರ್ಶನ್‌ ಟಿವಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಇಂತಹ ಕೋಮು ಪ್ರಚೋದಿತ ಮತ್ತು ಬೇಜವಾಬ್ದಾರಿಯುತ ಪತ್ರಿಕೋದ್ಯಮವನ್ನು ನಾವು ಖಂಡಿಸುತ್ತೇವೆ, ಎಂದು ಹೇಳಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂಡಿಯನ್‌ ಪೊಲೀಸ್‌ ಫೌಂಡೇಶನ್‌ ಎಂಬ ಟ್ವಿಟರ್‌ ಖಾತೆಯು, ಇದೊಂದು ಅಪಾಯಕಾರಿ ಧರ್ಮಾಂಧತೆ. ಇದನ್ನು ರೀಟ್ವೀಟ್‌ ಮಾಡಲು ಕೂಡಾ ನಾವು ಬಯಸುವುದಿಲ್ಲ ಏಕೆಂದರೆ, ಇದೊಂದು ಶುದ್ದ ವಿಷವಿದ್ದಂತೆ. ಈ ಕುರಿತಾಗಿ NBSA ಮತ್ತು ಉತ್ತರ ಪ್ರದೇಶದ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂಬ ನಂಬಿಕೆಯಿದೆ, ಎಂದು ಹೇಳಿದೆ.

ಏನಿದೆ ಸುದರ್ಶನ್‌ ಟಿವಿಯ ಟ್ರೈಲರ್‌ನಲ್ಲಿ?

ನೋಯ್ಡಾ ಮೂಲದ ಸುದರ್ಶನ್‌ ಟಿವಿಯ ಮುಖ್ಯಸ್ಥರಾದ ಸುರೇಶ್‌ ಚವ್ಹಾಂಕೆ ಅತ್ಯಂತ ನಾಟಕೀಯ ರೀತಿಯಲ್ಲಿ, ಯುಪಿಎಸ್‌ಸಿಯಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಧರ್ಮದ ಅಭ್ಯರ್ಥಿಗಳ ಸಂಖ್ಯೆಯ ಹಿಂದಿನ ರಹಸ್ಯವನ್ನು ನಾವು ಬಿಚ್ಚಿಡುತ್ತೇವೆ, ಎಂದು ಹೇಳುತ್ತಾರೆ.

ಅತ್ಯಂತ ಕೋಮು ಪ್ರಚೋದನಾಕಾರಿ ರೀತಿಯಲ್ಲಿ ನಿರೂಪಣೆ ಇರುವಂತಹ ಈ ಟ್ರೈಲರ್‌ ಅನ್ನು ನೋಡಿದ ನಂತರ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಈಗ ಅಧಿಕಾರಿಗಳಾಗಿ ಇರುವಂತಹ ಸಾಕಷ್ಟು ಜನರು, ಈ ಕಾರ್ಯಕ್ರಮದ ವಿರುದ್ದ ಕಿಡಿಕಾರಿದ್ದಾರೆ.

ಈ ಕಾರ್ಯಕ್ರಮದ ವಿರುದ್ದ ತೆಹ್ಸೀನ್‌ ಪೂನಾವಲ್ಲಾ ಎಂಬುವವರು ನ್ಯೂಸ್‌ ಬ್ರಾಡ್‌ಕಾಸ್ಟಿಂಗ್‌ ಅಸೋಸಿಯೇಷನ್‌ಗೆ ದೂರು ನೀಡಿದ್ದು, ಈ ದೂರಿನ ಹಿಂದೆ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್‌ ಅವರ ಕೈವಾಡವಿದೆ ಎಂದು ಸುರೇಶ್‌ ಚವ್ಹಾಂಕೆ ಬರೆದುಕೊಂಡಿದ್ದಾರೆ.

ಸರಳವಾಗಿ ಹೇಳಬೇಕಾದರೆ, ಯುಪಿಎಸ್‌ಸಿ ಪರೀಕ್ಷೆ ಭಾರತದಲ್ಲಿ ನಡೆಯುವಂತಹ ಅತ್ಯಂತ ಕ್ಲಿಷ್ಟಕರ ಪರೀಕ್ಷೆಗಳಲ್ಲಿ ಒಂದು. ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹಾಗೂ ಐಆರ್‌ಎಸ್‌ ಅಧಿಕಾರಿಗಳನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯ ಪೂರ್ವಭಾವಿ ಪರೀಕ್ಷೆಯಿಂದ ಹಿಡಿದು, ಅಂತಿಮ ಸಂದರ್ಶನದ ವರಗೆ ಎಲ್ಲಾ ಹಂತಗಳಲ್ಲಿ ತೇರ್ಗಡೆ ಹೊಂದಲು ಸಾಕಷ್ಟು ಪರಿಶ್ರಮದ ಅಗತ್ಯವಿದೆ. ವಯಸ್ಸಿನ ಆಧಾರದ ಮೇಲೆ, ಶೈಕ್ಷಣಿಕ ಅರ್ಹತೆಯ ಮೇಲೆ ಮತ್ತು ಅಭ್ಯರ್ಥಿಗಳ ಬುದ್ದಿಮತ್ತೆಯ ಮೇಲೆ ಆಧಾರಿತವಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಇಂತಹ ಒಂದು ಪರೀಕ್ಷಾ ವ್ಯವಸ್ಥೆಯ ಕುರಿತು ನಕಾರಾತ್ಮಕವಾಗಿ ಬೊಟ್ಟು ಮಾಡಿ ತೋರಿಸುವಂತಹ ಕಾರ್ಯಕ್ರಮ ಈಗ ಭಾರತದಾದ್ಯಂತ ವಿವಾದದ ಕೇಂದ್ರ ಬಿಂದುವಾಗಿದೆ.

ಐಪಿಎಸ್‌ ಅಸೋಸಿಯೇಷನ್‌ನ ಟೀಕೆಗಳಿಗೆ ಉತ್ತರ ನೀಡಿರುವ ಸುರೇಶ್‌ ಚವ್ಹಾಂಕೆ, ನಾವು ಈಗಿರುವ ಐಎಎಸ್‌/ಐಪಿಎಸ್‌ ಅಧಿಕಾರಿಗಳ ಕುರಿತು ಮಾತನಾಡುತ್ತಿಲ್ಲ. ಯುಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯ ಮತ್ತು ಅಧಿಕಾರಿಗಳನ್ನು ನಿಯುಕ್ತಿಗಳಿಸುವ ಪ್ರಕ್ರಿಯೆಯ ಕುರಿತು ಮಾತನಾಡುತ್ತಿದ್ದೇವೆ. ಇಷ್ಟಾದರೂ, ನಿಮಗೆ ಏನಾದರೂ ಹೇಳಲು ಇಚ್ಚೆಯಿದ್ದರೆ, ನಿಮಗೆ ನಮ್ಮ ಕಾರ್ಯಕ್ರಮಕ್ಕೆ ಸ್ವಾಗತ ಮಾಡುತ್ತೇವೆ, ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿ ಪ್ರಸಾರ ಮಾಡಿ ಹೆಸರು ಕೆಡಿಸಿಕೊಂಡಿದ್ದ ಸುದರ್ಶನ್‌ ಟಿವಿ:

ಈ ಹಿಂದೆ ದೆಹಲಿ ಗಲಭೆಯ ಸಂದರ್ಭದಲ್ಲಿ, ಆಮ್‌ ಆದ್ಮಿ ಪಕ್ಷದ ಕೌನ್ಸಿಲರ್‌ ತಾಹಿರ್‌ ಹುಸೈನ್‌ ಕುರಿತಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ ಸುದರ್ಶನ ಟಿವಿ ತನ್ನಘನತೆಯನ್ನು ಕಳೆದುಕೊಂಡಿತ್ತು. ತಾಹಿರ್‌ ಮನೆಯಲ್ಲಿ ಮಹಿಳೆಯೊಬ್ಬಳ ಕೊಲೆಯಾಗಿದ್ದು, ಆ ಮಹಿಳೆಯನ್ನು ಸುಟ್ಟು ಮನೆಯ ಪಕ್ಕದ ನಾಲೆಯಲ್ಲಿ ಬಿಸಾಡಲಾಗಿತ್ತು ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು.

ಇಂಟೆಲಿಜೆನ್ಸ್‌ ಬ್ಯೂರೋ ಅಧಿಕಾರಿಯ ಕೊಲೆಯ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯೊಬ್ಬರು ಈ ಕುರಿತಾಗಿ ಪ್ರತಿಕ್ರಿಯಿಸಿ, ಅಂತಹ ಯಾವುದೇ ಮಹಿಳೆಯ ಹೆಣ ನಮಗೆ ನಾಲೆಯಲ್ಲಿ ದೊರೆತಿಲ್ಲ, ಎಂಬುದನ್ನು ಸ್ಪಷ್ಟಪಡಿಸಿದ್ದರು.

ಒಟ್ಟಿನಲ್ಲಿ, ಪೂರ್ವಾಗ್ರಹ ಪೀಡಿತ ಮನೋಸ್ಥಿತಿಯಿಂದ ಕೂಡಿದಂತಹ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲು ಹೊರಟಿರುವಂತಹ ಸುದರ್ಶನ್‌ ಟಿವಿ, ತನ್ನ ಧೋರಣೆಯ ಕುರಿತಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com