ಕರುನಾಡು ಆದ್ಯತೆ ನೀಡಬೇಕಿರುವುದು ಛತ್ರಪತಿ ಶಿವಾಜಿಗೋ ಅಥವಾ ಸಂಗೊಳ್ಳಿ ರಾಯಣ್ಣನಿಗೋ?
ರಾಷ್ಟ್ರೀಯ

ಕರುನಾಡು ಆದ್ಯತೆ ನೀಡಬೇಕಿರುವುದು ಛತ್ರಪತಿ ಶಿವಾಜಿಗೋ ಅಥವಾ ಸಂಗೊಳ್ಳಿ ರಾಯಣ್ಣನಿಗೋ?

ಕರ್ನಾಟಕದಲ್ಲಿ ಆದ್ಯತೆ ನೀಡಬೇಕಾಗಿರುವುದು ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಗೋ..? ಮಹಾರಾಷ್ಟ್ರದ ರಾಜ ಮರಾಠಿಗರ ಮೆಚ್ಚುಗೆಯ ಶಿವಾಜಿ ಮಹಾರಾಜ್ ಅವರಿಗೋ..? ಎಂದು ತೀರ್ಮಾನ ಮಾಡುವ ಕಾಲ ಮತ್ತೆ ಬಂದಿದೆ.

ಕೃಷ್ಣಮಣಿ

ಕರ್ನಾಟಕದಲ್ಲಿ ಆದ್ಯತೆ ನೀಡಬೇಕಾಗಿರುವುದು ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಗೋ..? ಮಹಾರಾಷ್ಟ್ರದಲ್ಲಿ ರಾಜನಾಗಿ ಮರಾಠಿಗರ ಮೆಚ್ಚಿನ ಶಿವಾಜಿ ಮಹಾರಾಜ್ ಅವರಿಗೋ..? ಎಂದು ತೀರ್ಮಾನ ಮಾಡುವ ಕಾಲ ಮತ್ತೆ ಬಂದಿದೆ. ಎರಡೂ ರಾಜ್ಯಗಳ ನಡುವೆ ಭಾತೃತ್ವ ಇರಬೇಕು ಎನ್ನುವುದು ಸರಿಯಷ್ಟೆ. ಆದರೆ ಕರ್ನಾಟಕ ಗಡಿಯೊಳಗೆ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಕಾಶ ಕೊಟ್ಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಕಾಶ ಕೊಡದೆ ಇರೋದು ನ್ಯಾಯವೇ..? ಈ ಪ್ರಶ್ನೆಯನ್ನೇ ಹಿಡಿದು ರಣಧೀರ ಪಡೆ ನೇತೃತ್ವದಲ್ಲಿ ಬೆಳಗಾವಿಯಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿವೆ.

ಬೆಳಗಾವಿಯ ಪೀರನವಾಡಿ ವೃತ್ತದಲ್ಲೇ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಪಟ್ಟು ಹಿಡಿದು ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಸುವರ್ಣ ಸೌಧದಿಂದ ಪೀರನವಾಡಿ ತನಕ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರತಿಭಟನಾಕಾರರನ್ನು ಬಿ.ಎಸ್‌ ಯಡಿಯೂರಪ್ಪ ಸರ್ಕಾರ ಮಾರ್ಗದಲ್ಲೇ ತಡೆದಿದೆ. ಪೊಲೀಸರ ಬ್ಯಾರಿಕೇಡ್‌ ತಳ್ಳಿಕೊಂಡು ಮುನ್ನುಗಲು ಯತ್ನಿಸಿದಾಗ, ಬೆಳಗಾವಿ ಡಿಸಿ ಎಂ ಜಿ ಹಿರೇಮಠ ಸೇರಿದಂತೆ ಜಿಲ್ಲಾಡಳಿತರ ಬಹುತೇಕ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಸ್ಥಳಕ್ಕೆ ಬರಬೇಕು ಎಂದು ಆಗ್ರಹ ಮಾಡಿ ಪ್ರತಿಭಟನೆ ಕುಳಿತಿದ್ದರು. ಬಳಿಕ ಮನವೊಲಿಕೆ ಪ್ರಯತ್ನ ಮಾಡಲಾಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬುಧವಾರವೇ ಸಿಎಂ ಭೇಟಿ ಮಾಡಿದ್ದ ಶ್ರೀಗಳು..!

ಗುರುವಾರ ಬೆಳಗ್ಗೆ ಪ್ರತಿಭಟನೆಯ ಕಾವು ಹೆಚ್ಚಲಿದೆ ಎನ್ನುವುದನ್ನು ಅರಿತಿದ್ದ ಕಾಗಿನೆಲೆ ಶ್ರೀಗಳು ಬುಧವಾರ ಸಂಜೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಈ ಮೊದಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದ ಜಾಗದಲ್ಲೇ ಪ್ರತಿಮೆ ಮರುಸ್ಥಾಪನೆ ಮಾಡುವಂತೆ ಆಗ್ರಹ ಮಾಡಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯ ಪೀರನವಾಡಿಯಲ್ಲೇ ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ಸಮ್ಮತಿ ಸೂಚಿಸಿದ್ದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಸಿದ್ಧವಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮರುಸ್ಥಾಪನೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಹೇಳಿದ್ದರು. ಆ ಬಳಿಕ ರಾಯಣ್ಣ ಪ್ರತಿಮೆ ಮರುಸ್ಥಾಪನೆಗೆ ಸಿಎಂ ಯಡಿಯೂರಪ್ಪ ಸಮ್ಮತಿ ಸೂಚಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಸ್ವಾಮೀಜಿ ಮನವಿ ಮಾಡಿದ್ದರು.

ಪೀರನವಾಡಿ ಜಂಕ್ಷನ್‌ಗೆ ಇಷ್ಟೊಂದು ಮಹತ್ವ ಯಾಕೆ..?

ಬೆಳಗಾವಿ ಮತ್ತು ಖಾನಾಪುರ ರಸ್ತೆಯ ಪೀರನವಾಡಿ ಜಂಕ್ಷನ್ ಗೆ ಸಂಗೊಳ್ಳಿ ರಾಯಣ್ಣ ಹೆಸರಿಡಲು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳ ಕಾಲ ಈ ಬೇಡಿಕೆ ಈಡೇರದೆ ಉಳಿದಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಈ ಸರ್ಕಲ್ ನಲ್ಲಿ ಈಗಾಗಲೇ ಶಿವಾಜಿ ಪ್ರತಿಮೆ ಇದೆ. ಜೊತೆಗೆ ಹೆದ್ದಾರಿ ಆಗಿರುವ ಕಾರಣ ಈಗಿರುವ ಶಿವಾಜಿ ಪ್ರತಿಮೆ ಜೊತೆ ರಾಯಣ್ಣ ಪ್ರತಿಮೆ ನಿರ್ಮಾಣ ಆದರೆ ಸಂಚಾರಕ್ಕೆ ಸಮಸ್ಯೆ ಆಗುವ ಜೊತೆಗೆ ಭವಿಷ್ಯದಲ್ಲಿ ಗಲಾಟೆ ಆಗುವ ಸಂಭವ ಇದೆ ಎನ್ನಲಾಗಿದೆ. ಹಾಗಾಗಿ ರಸ್ತೆ ನಡುವೆ ಪ್ರತಿಮೆ ನಿರ್ಮಾಣದ ಪಟ್ಟು ಬಿಟ್ಟು, ರಸ್ತೆ ಪಕ್ಕದಲ್ಲಿ ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಆದರೆ ರಾಯಣ್ಣನ ಜನ್ಮದಿನವಾದ ಆಗಸ್ಟ್ ‌15 ರಂದು ಬೆಳಗಾವಿಯಿಂದ ಹುಟ್ಟೂರಾದ ನಂದಘಡಕ್ಕೆ ಪಾದಯಾತ್ರೆ ತೆರಳುತ್ತಾರೆ. ಆ ಹಾದಿಯಲ್ಲಿ ಪೀರನವಾಡಿ ಜಂಕ್ಷನ್‌ನಲ್ಲಿ ಬಾವುಟ ಹಾರಿಸಿ ಹೋಗಬೇಕು ಎನ್ನುವುದು ಇವರ ಉದ್ದೇಶವಾಗಿದೆ.

ಪ್ರತಿಮೆ ಸ್ಥಾಪನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೆಂಬಲಿಸಿದ್ದು, ಸಂಗೊಳ್ಳಿ ರಾಯಣ್ಣ ಈ ರಾಷ್ಟ್ರದ ಆಸ್ತಿ. ರಾಷ್ಟ್ರದ ಹೆಮ್ಮೆಯ ಸುಪುತ್ರ, ಅವರಿಗೆ ಸೂಕ್ತ ಗೌರವ ಸಿಗಬೇಕು ಎಂದಿದ್ದಾರೆ. ಆದರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ, ಸರ್ವ ಪಕ್ಷದವರೊಡನೆ ಕುಳಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವ ವಿಚಾರ ಇದು. ಸ್ಥಳೀಯ ನಾಯಕರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ವಿಶ್ವನಾಥ, ಮಾಜಿ ಸಚಿವ ಹೆಚ್‌.ಎಂ ರೇವಣ್ಣ ಹಾಗೂ ಸತೀಶ್ ಜಾರಕಿಹೋಳಿ ಅವರ ಜೊತೆ ಮಾತನಾಡಿಕೊಂಡು ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲರ ಅಭಿಪ್ರಾಯ ಪಡೆದು ಒಳ್ಳೆಯ ನಿರ್ಣಯ ಮಾಡುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನ ಪ್ರಕಾರ ಕಾನೂನಿನ ಚೌಕಟ್ಟಿನಲ್ಲಿ ಅಂತಿಮ ನಿರ್ಧಾರ ಎಂದಿದ್ದರು. ಈಶ್ವರಪ್ಪ, ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಜೊತೆಗೆ ಮಾತನಾಡಿ ನಿರ್ಧಾರ ಮಾಡುತ್ತೇವೆ ಎಂದಿರುವುದು ಕನ್ನಡ ಸಂಘಟನೆಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವು ವಿಚಾರದಲ್ಲಿ ಈಶ್ವರಪ್ಪ ಹಸ್ತಕ್ಷೇಪಕ್ಕೆ ಬೆಳಗಾವಿ ಕನ್ನಡಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಮತ್ತು ಜಿಲ್ಲಾಡಳಿತ ಒಡೆದು ಆಳುವ ನೀತಿಗೆ ಕೈ ಹಾಕಿದೆ. ಸಂಗೊಳ್ಳಿ ರಾಯಣ್ಣನ್ನು ಒಂದು ಜಾತಿಗೆ ಸೀಮಿತ ಮಾಡಲು ಸರ್ಕಾರ ಹೊರಟಿದೆ. ರಾಯಣ್ಣನ್ನ ಜಾತಿಗೆ ಮಾತ್ರ ಸೀಮಿತಗೊಳಿಸಿ ಒಂದೇ ಜಾತಿಯ ಮುಖಂಡರನ್ನ ಮಾತ್ರ ಕರೆಸಿ ಮಾತನಾಡುತ್ತಿದೆ. ಪೂರಕ ನಿರ್ಣಯ ತೆಗೆದುಕೊಳ್ತೇವೆ ಎನ್ನುತ್ತಿದೆ. ಈಶ್ವರಪ್ಪ ಬರಲಿ ಸಿದ್ದರಾಮಯ್ಯ ಬರಲಿ ಎಂದೂ ಹೇಳುತ್ತಿದೆ. ಇದು ಈಶ್ವರಪ್ಪ ಹಾಗೂ ಸಿದ್ದರಾಮಯ್ಯನವರ ಸಮಸ್ಯೆ ಅಲ್ಲಾ. ಜಂಕ್ಷನ್‌ ನಲ್ಲಿ ಪ್ರತಿಮೆ ಬೇಡ ಅನ್ನೊದನ್ನು ಹೇಳಬೇಡಿ ಎಂದು ಆಗ್ರಹ ಮಾಡಿದ್ದಾರೆ

ಈಗಾಗಲೇ ಇರುವ ಮೂರ್ತಿಗಳನ್ನ ಪಕ್ಕಕ್ಕೆ ಸರಿಸಿ ಖಾಸಗಿಯವರಿಗೆ ಸರ್ಕಲ್‌ ಮಾಡಲು ಅನುಮತಿ ಕೊಡುತ್ತೀರಿ, ಖಾಸಗಿಯವರಿಗೆ ಅನುಮತಿ ಕೊಡಲು ನಿಮಗೆ ಸುಪ್ರೀಮ್ ಕೋರ್ಟ್ ನಿದರ್ಶನ ಅಡ್ಡಿಯಾಗಲ್ಲ. ಆದರೆ ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಲು ಮಾತ್ರ ನಿಮಗೆ ಸುಪ್ರೀಂ ಕೋರ್ಟ್ ನಿರ್ದೇಶನ ಅನ್ವಯವಾಗುತ್ತಾ ಎಂದು ಟೀಕಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಮಾತಿಗೆ ಬೆಳಗಾವಿ ಕನ್ನಡಪರ ಸಂಘಟನೆಗಳಿಂದ ಆಕ್ರೋಶ ಹೊರಹಾಕಿವೆ.

ಇತ್ತ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರುವ ಮೇಲು ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡಲಾಗಿದೆ. ಸಿಎಂ ಯಡಿಯೂರಪ್ಪ ಮೇಲ್ಸೇತುವೆ ನಾಮಕರಣ ಮಾಡಿದ್ದಾರೆ. ಉದ್ಘಾಟನೆಗೂ ಮುನ್ನ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ವೇಳೆ ಡಿಸಿಎಂ ಅಶ್ವತ್ಥ ನಾರಾಯಣ, ಸಚಿವ ಭೈರತಿ ಬಸವರಾಜ್, ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್, ಮೇಯರ್ ಗೌತಮ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಗಾಂಧಿನಗರ ಕ್ಷೇತ್ರದಲ್ಲಿ ಸಂಗೊಳ್ಳಿ ರಾಯಣ್ಣ ಸ್ಮರಣೆ ಮಾಡುವ ಸ್ಮಾರಕಗಳು ಬಂದಿರುವುದು ಸಂತಸದ ವಿಚಾರ. ಬೆಳಗಾವಿ ಬಿಟ್ಟರೆ ಗಾಂಧಿನಗರ ಕ್ಷೇತ್ರದಲ್ಲಿ ಅತೀ ಹೆಚ್ಚು ಸ್ಮಾರಕಗಳು ಇವೆ ಎಂದಿದ್ದಾರೆ. ಸಿಎಂ ಯಡಿಯೂರಪ್ಪ ಮಾತನಾಡಿ ರಾಯಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿದೆ. ಮೇಲು ಸೇತುವೆಗೆ ರಾಯಣ್ಣ ಹೆಸರು ನಾಮಕರಣ ಮಾಡಿದ್ದೇವೆ. ರಾಯಣ್ಣ, ಬ್ರಿಟಿಷರ ವಿರುದ್ದ ಹೋರಾಡಿದ ಕನ್ನಡ ಕಲಿ. ಇಂತಹ ಮಹಾನ್ ವ್ಯಕ್ತಿಯ ಹೆಸರು ಮೇಲು ಸೇತುವೆಗೆ ಇಡಲಾಗಿದೆ ಎಂದಿದ್ದಾರೆ. ಮೇಲುಸೇತುವೆಗೆ ಒಂದು ವರ್ಷದ ಹಿಂದೆಯೇ ಇಟ್ಟಿರುವ ಹೆಸರು ಇಂದು ಅಧಿಕೃತವಾಗಿ ಉದ್ಘಾಟನೆ ಆಗಿದೆ ಎಂದಿದ್ದಾರೆ.

ಒಂದಂತೂ ಸತ್ಯ. ದೇಶದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಮೆಗಾಗಿಯೇ ದೊಡ್ಡ ದೊಡ್ಡ ಹೋರಾಟಗಾರರ ಪ್ರತಿಮೆ ಅನಾವರಣ ಮಾಡುವುದೇ ರಾಜಕೀಯ ಉದ್ದೇಶಕ್ಕಾಗಿ. ಪ್ರತಿಮೆಯಿಂದ ಯಾರಿಗೂ ಮೂರು ಕಾಸಿನ ಲಾಭವೂ ಇರುವುದಿಲ್ಲ. ಹಾಗಂದ ಮಾತ್ರಕ್ಕೆ ಕರ್ನಾಟಕದ ಗಡಿಯೊಳಗೆ ಬೇರೊಂದು ರಾಜ್ಯದ ರಾಜನ ಮೂರ್ತಿ ಪ್ರತಿಸ್ಠಾಪಿಸುವುದು ಅಷ್ಟೇ ಕೆಡುಕು. ನಮ್ಮ ರಾಜ್ಯದ ವೀರ ಕನ್ನಡಿಗ ಕೆಚ್ಚೆದೆಯ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅವಕಾಶ ಕೊಡದೆ ಇರುವುದು ದುರಾದೃಷ್ಟವೇ ಸರಿ.

Click here to follow us on Facebook , Twitter, YouTube, Telegram

Pratidhvani
www.pratidhvani.com