ಗುರುಗ್ರಾಮ: ಪಾರ್ಕ್ ನಿರ್ಮಾಣಕ್ಕಾಗಿ ಬಡವರ ಗುಡಿಸಲು ಧ್ವಂಸ
ರಾಷ್ಟ್ರೀಯ

ಗುರುಗ್ರಾಮ: ಪಾರ್ಕ್ ನಿರ್ಮಾಣಕ್ಕಾಗಿ ಬಡವರ ಗುಡಿಸಲು ಧ್ವಂಸ

ಜುಲೈ 21 ನೇ ತಾರೀಖು, ನಗರಪಾಲಿಕೆಯ ಬುಲ್‌ ಡೋಜರ್‌ ಗಳು ಬಂದು 20 ಬಡವರ ಗುಡಿಸಲುಗಳನ್ನೆಲ್ಲ ಧ್ವಂಸ ಮಾಡಿವೆ. ನಂತರ ಜುಲೈ 24 ರಂದು ಬುಲ್‌ ಡೋಜರ್‌ ಗಳು ಸುಮಾರು 500 ಗುಡಿಸಲುಗಳನ್ನು ಧ್ವಂಸ ಮಾಡಿವೆ. ಇದರಿಂದಾಗಿ ಗುಡಿಸಲು ವಾಸಿಗಳಿಗೆ ನೆಲೆ ಇಲ್ಲದಂತಾಗಿದೆ.

ಕೋವರ್ ಕೊಲ್ಲಿ ಇಂದ್ರೇಶ್

ನಮ್ಮನ್ನಾಳಿದ ಎಲ್ಲಾ ಸರ್ಕಾರಗಳೂ ಸಮಾಜದ ಆರ್ಥಿಕವಾಗಿ, ಸಾಮಾಜಿಕವಾಗಿರುವ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಎಲ್ಲ ಸರ್ಕಾರಗಳು ಕೂಡ ಆಗಾಗ ಇಂತಹ ಹೊಸ ಯೋಜನೆಗಳನ್ನು ಘೋಷಿಸುತ್ತವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮಾನತೆ ದೊರೆಯಲಿ ಎಂಬುದೇ ಈ ಕಲ್ಯಾಣ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿರುತ್ತದೆ. ಅಂದರೆ ಸರ್ಕಾರಗಳು ಬಡ ಜನತೆಯ ಹಿತ ಕಾಪಾಡಲೇ ಬೇಕಿದೆ, ಇದು ನಮ್ಮನ್ನಾಳುವವರ ಬಧ್ದತೆ ಅಗಿದೆ.

ಅದರೆ ಇಂತಹ ದೃಷ್ಟಿ ಕೋನಕ್ಕೆ ವ್ಯತಿರಿಕ್ತ ಎಂಬಂತೆ ಹರ್ಯಾಣ ರಾಜ್ಯದ ಗುರುಗ್ರಾಮದಲ್ಲಿ ಶ್ಯಾಮ್‌ ಚಂದ್ರ ಝಾ ಕೊಳೆಗೇರಿಯಲ್ಲಿ ಸಾರ್ವಜನಿಕ ಪಾರ್ಕನ್ನು ನಿರ್ಮಿಸಲು ಸರ್ಕಾರ ಬಡವರ ಗುಡಿಸಲುಗಳನ್ನೇ ಧ್ವಂಸ ಮಾಡಿದೆ. ಇದರಿಂದಾಗಿ ನೂರಾರು ಬಡ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ಗುರುಗ್ರಾಮ ನಗರಪಾಲಿಕೆ ಈ ರೀತಿಯ ಕೃತ್ಯ ಮಾಡಿದ್ದು ಇದರಿಂದಾಗಿ ಗುಡಿಸಲು ವಾಸಿಗಳಿಗೆ ನೆಲೆ ಇಲ್ಲದಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಲ್ಲಿ ಕಳೆದ 40 ವರ್ಷಗಳಿಂದಲೂ ನೆಲೆ ಕಟ್ಟಿಕೊಂಡಿರುವವರು ಎಲ್ಲರೂ ದಿನಗೂಲಿ ನೌಕರರಾಗಿದ್ದಾರೆ. ಇವರೆಲ್ಲಾ ಅಸಂಘಟಿತ ವಲಯದ ಕಾರ್ಮಿಕರಾಗಿರುವುದುರಿಂದ ಇವರ ಗೋಳು ಸರ್ಕಾರದ ಕಿವಿಗೆ ಕೇಳಿಸುತ್ತಿಲ್ಲ. ಜುಲೈ 21 ನೇ ತಾರೀಖು, ನಗರಪಾಲಿಕೆಯ ಬುಲ್‌ ಡೋಜರ್‌ ಗಳು ಬಂದು 20 ಬಡವರ ಗುಡಿಸಲುಗಳನ್ನೆಲ್ಲ ಧ್ವಂಸ ಮಾಡಿವೆ. ನಂತರ ಜುಲೈ 24 ರಂದು ಬುಲ್‌ ಡೋಜರ್‌ ಗಳು ಸುಮಾರು 500 ಗುಡಿಸಲುಗಳನ್ನು ಧ್ವಂಸ ಮಾಡಿವೆ. ಈ ಗುಡಿಸಲುಗಳೆಲ್ಲವನ್ನೂ ಪ್ಲಾಸ್ಟಿಕ್‌ ಶೀಟ್‌ ಗಳಿಂದ ನಿರ್ಮಿಸಲಾಗಿದ್ದು ಒಂದು ಶೀಟ್‌ ಗೆ 500 ರೂಪಾಯಿ ಬೆಲೆ ಇದೆ. ಅದರೆ ಓರ್ವ ಕಾರ್ಮಿಕ ದುಡಿದರೆ ದಿನವೊಂದಕ್ಕೆ ಸಿಗುವ ಕೂಲಿ 250 ರೂಪಾಯಿ ಮಾತ್ರ. ಗುಡಿಸಲು ಕೆಡಹುವ ಕಾರ್ಯಾಚರಣೆಯ ಹಿಂದಿನ ದಿನ ಸಂಜೆಯಷ್ಟೆ ಇಲ್ಲಿಗೆ ಭೇಟಿ ನೀಡಿದ ಅಧಿಕಾರಿಗಳು ನಿಮ್ಮ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಇಲ್ಲಿಂದ ಹೊರಡುವಂತೆ ಹೇಳಿದರು. ಕೂಡಲೇ ನಾವು ಇಲ್ಲಿನ ಕಾರ್ಪೊರೇಟರ್‌ ಅವರ ಬಳಿ ಹೋಗಿ ಗುಡಿಸಲು ಕೆಡವುದನ್ನು ತಡೆಯುವಂತೆ ಕೋರಿದರು. ಆದರೆ ಕಾರ್ಪೊರೇಟರ್‌ ಅವರು ಆಶ್ವಾಸನೆ ನೀಡಿದರೂ ಏನೂ ಮಾಡಲಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಾರೆ. ಕೇವಲ ಒಂದು ದಿನದಲ್ಲಿ ನಿಮ್ಮ ಸಾಮಾನು ಸರಂಜಾಮು ತೆಗೆದುಕೊಂಡು ಹೊರಡಿ ಎಂದರೆ ನಾವು ಹೋಗುವುದಾದರೂ ಎಲ್ಲಿಗೆ ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ.

ಅಧಿಕಾರಿಗಳ ಈ ದೌರ್ಜನ್ಯವನ್ನು ಖಂಡಿಸಿ ನಿವಾಸಿಗಳು ಗುರುಗ್ರಾಮದ ನಗರಪಾಲಿಕೆ ಕಚೇರಿ ಎದುರು ಕಳೆದ ಆಗಸ್ಟ್‌ 21 ರಿಂದ ಧರಣಿ ನಡೆಸುತಿದ್ದಾರೆ. ನಮಗೆ ವಾಸಿಸಲು ಸೂಕ್ತ ಸ್ಥಳ ನೀಡಿ ಎಂಬುದೇ ನಿವಾಸಿಗಳ ಏಕೈಕ ಬೇಡಿಕೆ ಅಗಿದೆ. ಇಲ್ಲಿನ ನಿವಾಸಿ ಕಳೆದ ನಲ್ವತ್ತು ವರ್ಷಗಳಿಂದ ನೆಲೆಸಿರುವ ಸಿಂಗ್‌ ಅವರ ಪ್ರಕಾರ ನಮ್ಮ ಗುಡಿಸಲುಗಳು ಅಕ್ರಮ ಎಂದು ಅದಕ್ಕಾಗಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳುತಿದ್ದಾರೆ. ಆದರೆ ನಮ್ಮ ಇರುವಿಕೆ ಅಕ್ರಮವಲ್ಲ ತಾನೆ? ನಮಗೆ ವಾಸಿಸುವ ಹಕ್ಕನ್ನು ಸರ್ಕಾರ ಒದಗಿಸಿಕೊಡಲಿ ಅದು ಸರ್ಕಾರದ ಕರ್ತವ್ಯ ಎಂದು ಅವರು ಹೇಳುತ್ತಾರೆ. ಕಳೆದ ಆರು ತಿಂಗಳಿನಿಂದಲೂ ಕರೋನಾ ಭೀತಿಯಿಂದಾಗಿ ಇಲ್ಲಿನ ನಿವಾಸಿಗಳಿಗೆ ಕೆಲಸವೂ ಸಿಗುತ್ತಿಲ್ಲ ಗಂಡಸರು ಹೊರಗೆ ಕಾರ್ಖಾನೆಗಳ ಕೆಲಸಕ್ಕೆ ಹೋದರೆ ಹೆಂಗಸರು ಶ್ರೀಮಂತ ಜನರ ಮನೆ ಕೆಲಸಕ್ಕೆ ಹೋಗುತಿದ್ದರು. ಅದರೆ ಕರೋನಾ ಭೀತಿಯಿಂದ ಮನೆಕೆಲಸದವರನ್ನೂ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದಾರೆ ಎಂದು ಸಿಂಗ್‌ ಹೇಳಿದರು. ಇಂತಹ ಪರಿಸ್ಥಿತಿಯಲ್ಲೂ ಗುಡಿಸಲುಗಳನ್ನು ಧ್ವಂಸಗೊಳಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾರೂ ಮನೆಯಿಂದ ಹೊರಗೆ ಬರಬೇಡಿ, ಮನೆಯಲ್ಲೇ ಇರಿ ಎಂದು ಭಾಷಣ ಮಾಡಿದ್ದರು. ಅದರೆ ಮನೆಯೇ ಇಲ್ಲದ ನಾವು ಏನು ಮಾಡಬೇಕು ಎಂದು ನಿವಾಸಿಗಳು ಅಳಲು ತೋಡಿಕೊಂಡರು. ದಿನೇ ದಿನೇ ಹೆಚ್ಚುತ್ತಿರುವ ಕರೋನಾ ಸೋಂಕು ಈ ಬಡ ವರ್ಗದವರಿಗೆ ತಗುಲಿದರೆ ಇಂದು ಚಿಕಿತ್ಸೆ ಪಡೆಯಲೂ ಇವರ ಬಳಿ ನಯಾ ಪೈಸೆಯೂ ಇಲ್ಲ. ಇವರೆಲ್ಲ ಅಂದು ದುಡಿದು ಅಂದೇ ಖರ್ಚು ಮಾಡುವ ವರ್ಗವಾಗಿದೆ. ಇಲ್ಲಿ ಧರಣಿ ನಡೆಸುತ್ತಿರುವ 70 ವರ್ಷದ ರಫೀಕ್‌ ಶೇಕ್‌ ಹೇಳುವ ಪ್ರಕಾರ ಇವರ ಬಳಿ ಮತ ಪಡೆಯಲು ಬರುವ ಯಾವುದೇ ರಾಜಕಾರಣಿಗಳು ಇಂದು ಅವರತ್ತ ತಿರುಗಿಯೂ ನೋಡುತ್ತಿಲ್ಲ, ಏಕೆಂದರೆ ಚುನಾವಣಾ ದಿನಾಂಕ ಇನ್ನೂ ದೂರವಿದೆ. ನಮ್ಮ ರಾಜಕಾರಣಿಗಳು ನಮ್ಮ ಕೈಲಿ ಭಿಕ್ಷಾ ಪಾತ್ರೆ ನೀಡಿದ್ದನ್ನೇ ಮಹತ್ಕಾರ್ಯ ಮಾಡಿದ್ದೇವೆ ಎಂದು ಭಾವಿಸುತಿದ್ದಾರೆ. ಪ್ರಧಾನ ಮಂತ್ರಿಗಳ ಭೇಟಿ ಪಢಾವೋ ಭೇಟಿ ಬಚಾವೋ ಘೋಷಣೆಯ ಪ್ರಕಾರ ನಾವು ಹೆಣ್ಣು ಮಕ್ಕಳನ್ನು ಓದಿಸಲು ಹೇಗೆ ಸಾದ್ಯ? ನಮಗೆ ಮನೆ ಇಲ್ಲದೆ ಇರುವುದಾದರೂ ಎಲ್ಲಿ ಎಂದು ಅವರು ಪ್ರಶ್ನಿಸಿದರು.

ಇಷ್ಟು ದಿನಗಳಿಂದ ಧರಣಿ ನಡೆಯುತಿದ್ದರೂ ಆಳುವ ಪಕ್ಷದ ಅಥವಾ ವಿರೋಧ ಪಕ್ಷದ ಯಾವೊಬ್ಬ ನಾಯಕನೂ ನಮ್ಮನ್ನು ಬಂದು ವಿಚಾರಿಸಿಲ್ಲ. ನಾವು ಬೀದಿಯಲ್ಲಿರುವ ಜಿರಳೆಗಳ ಥರ ಎಂದು ಸಮಾಜ ಭಾವಿಸಿದೆ. ನಮ್ಮ ಜನರಿಗೂ ನಮ್ಮ ಜೀವಕ್ಕೆ ಬೆಲೆ ಕೊಡಬೇಕು ಅನ್ನಿಸುತ್ತಿಲ್ಲ ಅವರಿಗೆ ನಮ್ಮ ಜೀವಕ್ಕಿಂತ ಇಲ್ಲಿ ತಲೆ ಎತ್ತುವ ಸುಂದರ ಪಾರ್ಕ್‌ ನೊಳಗೆ ಓಡಾಡುವ ಅವಕಾಶ ಸಿಗಬೇಕಿದೆ ಎಂದು ಅವರು ಹೇಳಿದರು.

ಇಲ್ಲಿನ ಧರಣಿ ನಿರತ ಕೌಸಲ್ಯ(72) ಎಂಬ ವೃದ್ದೆ ಅಧಿಕಾರಿಗಳ ನಿರ್ದಯ ಕ್ರಮಕ್ಕೆ ಅಕ್ರೋಶ ವ್ಯಕ್ತಪಡಿಸಿದರು. ಆದರೆ ಇಲ್ಲಿ ಯಾವನೇ ಅಧಿಕಾರಿ ಅಥವಾ ಯಾವನೇ ರಾಜಕಾರಣಿ ಕನಿಷ್ಟ ಸೌಜನ್ಯ ತೋರಿ ಇವರ ಅಳಲು ಅಲಿಸುತ್ತಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಇಲ್ಲಿ ಮನೆ ಕಳೆದುಕೊಂಡಿರುವ ಎಲ್ಲರಿಗೂ ವಾಸಿಸಲು ಸೂಕ್ತ ಸ್ಥಳಾವಕಾಶ ಒದಗಿಸುವುದು ಕಷ್ಟವೇನಲ್ಲ ಅದರೆ ಜಡ್ಡುಗಟ್ಟಿರುವ ನಮ್ಮ ವ್ಯವಸ್ಥೆಯಲ್ಲಿ ಇಂತಹ ಮಾನವೀಯತೆ , ಕರುಣೆಯನ್ನು ನಿರೀಕ್ಷಿಸುವುದೂ ಮೂರ್ಖತನ ಅಷ್ಟೇ. ಈ ಕುರಿತು ಪತ್ರಕರ್ತರು ಪ್ರತಿಕ್ರಿಯೆಗಾಗಿ ಗುರುಗ್ರಾಮ ಮುನಿಸಿಪಲ್‌ ಕಾರ್ಪೊರೇಷನ್‌ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.

ಹೌಸಿಂಗ್‌ ಮತ್ತು ಲ್ಯಾಂಡ್‌ ರೈಟ್ಸ್‌ ನೆಟ್‌ ವರ್ಕ್‌ ಎಂಬ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ 25 ರಿಂದ ಜುಲೈ 31 ರ ವರೆಗೆ ದೇಶದಲ್ಲಿ ಒಟ್ಟು 20 ಸಾವಿರ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಅಕ್ಷರಶಃ ಅವರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಸುಮಾರು 45 ಪ್ರಕರಣಗಳಲ್ಲಿ ಗುಡಿಸಲುವಾಸಿಗಳನ್ನು ಬಲ ಪ್ರಯೋಗ ಮಾಡಿ ಒಕ್ಕಲೆಬ್ಬಿಸಲಾಗಿದೆ. ನಮ್ಮನ್ನು ಆಳುತ್ತಿರುವವರಿಗೆ ಬಡವರ್ಗದವರ ಕೂಗು ಕೇಳುತ್ತಿಲ್ಲ. ಏಕೆಂದರೆ ಅದು ಕಿವಿಡು ಸರ್ಕಾರ.

Click here to follow us on Facebook , Twitter, YouTube, Telegram

Pratidhvani
www.pratidhvani.com