ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ: ಸಮರ್ಥನೆಗಿಳಿದ ಕೈ ನಾಯಕರು
ರಾಷ್ಟ್ರೀಯ

ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ: ಸಮರ್ಥನೆಗಿಳಿದ ಕೈ ನಾಯಕರು

ದೇವರಾಜ ಅರಸರು ಇಂದಿರಾ ವಿರುದ್ಧ ಸಿಡಿದು ಹೋಗಿ ರಾಜೀವ್ ವಿರುದ್ಧವೇ ಪಕ್ಷ ಕಟ್ಟಿದ್ದರು. ಆದರೂ ನಾವು ದೇವರಾಜ ಅರಸರ ಆಪ್ತರಾಗಿದ್ದರೂ ಪಕ್ಷ ನಿಷ್ಠೆಯಿಂದ ದೇವರಾಜ ಅರಸರ ವಿರುದ್ಧ ನಿಂತಿದ್ದೆವು. ನಾವು ತೊಂದರೆ ಆದರೂ ಪಕ್ಷವನ್ನ ಬಿಡಲಿಲ್ಲ. ಪಕ್ಷಕ್ಕೆ ನಮ್ಮ ನಿಷ್ಠೆ ಹಾಗೆಯೇ ಇರುತ್ತದೆ. ಸಾಯುವ ತನಕ ನಾನು ಕಾಂಗ್ರೆಸ್ ಕಟ್ಟಾಳೇ ಆಗಿರುತ್ತೇನೆ

ಕೃಷ್ಣಮಣಿ

ಕಾಂಗ್ರೆಸ್ ಖಾಯಂ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಭಿನ್ನಮತ ಉಂಟಾಗಿದೆ. ಹೀಗೆ ಹೇಳುವುದಕ್ಕಿಂತಲೂ ಕಾಂಗ್ರೆಸ್ ಹೈಕಮಾಂಡ್ ಗೆ ಹೀಗೆ ಮಾಡಿ ಎಂದು ಹೇಳುವ ಧೈರ್ಯವನ್ನು ಕಾಂಗ್ರೆಸ್ ನಾಯಕರು ಪ್ರದರ್ಶನ ಮಾಡಿದ್ದಾರೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ 23 ನಾಯಕರೇ ಮಧ್ಯಂತರ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಕೂಡಲೇ ಕಾಯಂ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಆಗ್ರಹ ಮಾಡಿ ಪತ್ರ ಬರೆದಿದ್ದರು. ಈ ವಿಚಾರ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾರೀ ಚರ್ಚೆಯ ವಿಷಯವಾಗಿತ್ತು. ಬಿಸಿಯೇರಿದ ಚರ್ಚೆ ಬಳಿಕ ಅಂತಿಮವಾಗಿ ಕಾಯಂ ಅಧ್ಯಕ್ಷರನ್ನು ಆಯ್ಕೆ ಮಾಡೋಣ ಆದರೆ ಅಲ್ಲೀವರೆಗೂ ಸೋನಿಯ ಗಾಂಧಿ ಅವರೇ ಮಧ್ಯಂತರ ಅಧ್ಯಕ್ಷರಾಗಿ ಇರಲಿ ಎನ್ನುವ ನಿರ್ಧಾರ ಮಾಡಲಾಗಿತ್ತು. ಆದರೆ ಸೋನಿಯ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರು ಪಕ್ಷ ನಿಷ್ಠರು ಎನ್ನುವ ಪಟ್ಟದಿಂದ ಪಕ್ಕಕ್ಕೆ ಸರಿದಿದ್ದಾರೆ. ಇನ್ನೇನಿದ್ದರೂ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗುತ್ತಾರೆಯೇ., ಎನ್ನುವ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಂಗ್ರೆಸ್ ಹೈಕಮಾಂಡ್ ನಾಯಕರು ನಾವೆಲ್ಲಾ ಒಂದೇ ಕುಟುಂಬ ಇದ್ದಂತೆ, ಇಲ್ಲಿ ವ್ಯಕ್ತವಾಗಿರುವುದು ಭಿನ್ನಾಭಿಪ್ರಾಯವಲ್ಲ, ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಆದರೆ ಮುಂದೊಂದು ದಿನ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಆತಂಕ ಪತ್ರ ಬರೆದಿದ್ದ ನಾಯಕರಲ್ಲಿ ಕಾಣಿಸಿಕೊಂಡಿದೆ. ಇದರ ಭಾಗವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕರ್ನಾಟಕದ ನಾಯಕರು, ತಮ್ಮ ಪತ್ರ ಹಾಗೂ ಹೈಕಮಾಂಡ್ ಜೊತೆಗಿನ ಚಕಮಕಿಯ ವಿಚಾರವನ್ನು ನಿವಾರಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಮಾತನಾಡಿ, ಸೋಮವಾರದ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ಕಲ್ಪಿಸಿ, ಸುಧೀರ್ಘ ಚರ್ಚೆ ನಡೆಸಿದ್ದು ನನ್ನ ಅನುಭವದಲ್ಲಿ ಇದೇ ಮೊದಲು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾರೂ ಸಹ ಸೋನಿಯ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸಿಲ್ಲ. ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ಕಪಿಲ್ ಸಿಬಲ್ ಎಲ್ಲರೂ ಪಕ್ಷ ನಿಷ್ಠರು ಹಾಗೂ ಅವರು ಪಕ್ಷ ನಿಷ್ಠೆಯನ್ನು ತೋರಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಅವಕಾಶ ಇರಬೇಕು. ಸೋನಿಯ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನೆ ಮಾಡಿಲ್ಲ. ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ನಮಗೆ ಗೌರವಿದೆ. ಪಕ್ಷದ ನಾಯಕರ ವಿರುದ್ಧ ಯಾರು ಮಾತನಾಡಿಲ್ಲ. ಸೋನಿಯ ಗಾಂಧಿ ಅವರು ಪಕ್ಷದಲ್ಲಿ ತಾಯಿ ಸ್ಥಾನದಲ್ಲಿ ಇದ್ದಾರೆ. ಕಾಂಗ್ರೆಸ್ ನಲ್ಲಿ ಅಧಿಕಾರವಿಲ್ಲದೆ ಹೆಚ್ಚು ಕಾಲ ಅಧ್ಯಕ್ಷರಾಗಿದ್ದವರು ಸೋನಿಯಾ ಗಾಂಧಿ. ಪ್ರಧಾನಿ ಹುದ್ದೆ ಬಿಟ್ಟು ಹತ್ತು ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ದೇಶಕ್ಕೆ ಸೇವೆ ಮಾಡಿದ್ದಾರೆ. ಪಕ್ಷ ಎಂದ ಮೇಲೆ ಭಿನ್ನಾಬಿಪ್ರಾಯಗಳು ಸಹಜ. ಇದನ್ನ ಸರಿಪಡಿಸಿಕೊಂಡು ಹೋಗೋಣ ಎಂದಿದ್ದಾರೆ. ಹಾಗಾಗಿ ಪಕ್ಷದಲ್ಲಿ ಯಾವುದೇ ಭಿನ್ನಮತಗಳಿಲ್ಲ ಎಂದಿದ್ದಾರೆ.

ಕಾರ್ಯಕಾರಿ ಸಮಿತಿಯ 52 ಮಂದಿ ಸದಸ್ಯರು ಸಭೆಯಲ್ಲಿ ಇದ್ದೆವು. ಸೋನಿಯ ಮುಂದುವರಿಕೆ ಬಗ್ಗೆ ಒಪ್ಪಿಗೆ ನೀಡಿದ್ದೇವೆ. ರಾಹುಲ್ ಗಾಂಧಿಯವರನ್ನೂ ಬೆಂಬಲಿಸಿದ್ದೇವೆ. ಸೋನಿಯ ಗಾಂಧಿ ಅವರನ್ನು ಭೇಟಿಯಾಗಲು ಯಾವುದೇ ನಿರ್ಭಂದವಿರಲಿಲ್ಲ. ಪತ್ರ ಬರೆದ 23 ಮಂದಿಗೂ ನಿರ್ಭಂದವಿರಲಿಲ್ಲ. ಯಾವಾಗ ಬೇಕಾದರೂ ಅವರು ಭೇಟಿ ಮಾಡಬಹುದಿತ್ತು. ಆದರೂ ಪತ್ರ ಬರೆದಿದ್ದಕ್ಕೆ ಹಾಗೆ ಹೇಳಿದರು. ಆದರೆ ಬಿಜೆಪಿ ಜೊತೆ ಕೈಜೋಡಿಸಿದ್ದಾರೆಂಬ ಮಾತನ್ನು ರಾಹುಲ್ ಹೇಳಿಲ್ಲ. ನಾನು 7 ಗಂಟೆಯವರೆಗೆ ಸಭೆಯಲ್ಲಿ ಕೂತಿದ್ದೇನೆ. ಸೋನಿಯಾ ಗಾಂಧಿ ಆರೋಗ್ಯ ಸರಿಯಿಲ್ಲ. ಈ ವೇಳೆ ನೀವು ಪತ್ರ ಬರೆದಿದ್ದು ಸರಿಯೇ..? ಎನ್ನುವ ಮಾತನ್ನಷ್ಟೇ ರಾಹುಲ್ ಗಾಂಧಿಯವರು ಕೇಳಿದ್ದು. ಪತ್ರ ಬರೆದವರೂ ಕೂಡ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ಅವರು ಪಕ್ಷ ಸಂಘಟನೆ ಉದ್ದೇಶದಿಂದ ಮಾತ್ರ ಪತ್ರ ಬರೆದಿದ್ದಾರೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎದುರು ನಿಲ್ಲುವ ಶಕ್ತಿ ಇರೋದು ರಾಹುಲ್ ಗಾಂಧಿ ಅವರಿಗೆ ಮಾತ್ರ. ಮೋದಿ ವಿರುದ್ಧ ಫೈಟ್ ಮಾಡೋಕೆ ರಾಹುಲ್ ಸೂಕ್ತ ವ್ಯಕ್ತಿ ಆಗಿದ್ದಾರೆ. ರಾಹುಲ್ ಪ್ರಶ್ನೆಗೆ ಮೋದಿ ಉತ್ತರಿಸೋಕೆ ಆಗುತ್ತಿಲ್ಲ. ರಾಹುಲ್ ಗಾಂಧಿಯವರೇ ಮುಂದೆ ಬರಬೇಕು. ಕೇವಲ ಹಿಂದುತ್ವ ಹಿಂದುತ್ವ ಅಂದರೆ ಹೇಗೆ..? ನಾವೆಲ್ಲರೂ ಹಿಂದೂಗಳೇ ಆಲ್ಲವೇ..? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಜೈನ್, ಸಿಖ್, ಬೌದ್ಧ ಧರ್ಮ ಸೇರಿದಂತೆ ಎಲ್ಲರೂ ದೇಶದಲ್ಲಿ ಬಾಳಬೇಕಲ್ವಾ..? ಸಂವಿಧಾನಕ್ಕೆ ಬಿಜೆಪಿಯವರು ಗೌರವ ಕೊಡಬೇಕು. ಹಾಗೆಯೇ ಎಲ್ಲಾ ಧರ್ಮಗಳಿಗೆ ಬದುಕುವ ಅವಕಾಶ ನೀಡಬೇಕು. ಆಗ ಮಾತ್ರ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕತ್ವ ಬದಲಾವಣೆಗಾಗಿ ಸೋನಿಯ ಗಾಂಧಿ ಅವರಿಗೆ ಪತ್ರ ಬರೆದಿದ್ದವರಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೂಡ ಒಬ್ಬರಾಗಿದ್ದಾರೆ. ಪತ್ರ ಸಮರದ ಬಗ್ಗೆ ವೀರಪ್ಪ ಮೊಯ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ನಡೆದಿದೆ. ಪ್ರಮುಖ ಚರ್ಚೆಗಳು ಆಗಿವೆ. 23 ಜನ ಕಾಂಗ್ರೆಸ್ ಪುನರ್ ಸಂಘಟನೆ ಬಗ್ಗೆ ಪತ್ರ ಬರೆದಿರುವುದರಲ್ಲಿ ನಾನೂ ಕೂಡ ಒಬ್ಬ. ನಾಯಕತ್ವ ಬದಲಾವಣೆ ಬಗ್ಗೆ ಪತ್ರ ಬರೆದಿಲ್ಲ. ಕಾಂಗ್ರೆಸ್ ಈಗ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇದೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದೆ. ನಾವು ನಮ್ಮ ಪತ್ರವನ್ನು ಅಧ್ಯಕ್ಷೆಗೆ ಮಾತ್ರ ಬರೆದಿದ್ದು, ಅದು ಹೇಗೆ ಲೀಕ್ ಆಯ್ತು ಎಂದು ಗೊತ್ತಿಲ್ಲ. ಕಾಂಗ್ರೆಸ್ ಎಲ್ಲಾ ಚಟುವಟಿಕೆಗಳಲ್ಲಿ ನಾವು ಭಾಗಿಯಾದವರು. 23 ನಾಯಕರು ಪತ್ರ ಬರೆದಿದ್ದು ಸದುದ್ದೇಶದಿಂದ ಮಾತ್ರ. ನಾವೆಲ್ಲರು ಒಟ್ಟಾಗಿ ಪತ್ರ ಬರೆದಿದ್ದು, ಪತ್ರದಲ್ಲಿ ನಾನು ಸಹಿಹಾಕಿದ್ದೆ. ಪಕ್ಷ ಸಂಘಟನೆಗಾಗಿ ಎಂದು ನಾವು ತಿಳಿಸಿದ್ದೆವು. ನಾವ್ಯಾರು ಪಕ್ಷದ ವಿರುದ್ಧ ಪತ್ರ ಬರೆದವರಲ್ಲ ಎಂದಿದ್ದಾರೆ.

ಸೋನಿಯಾಗೆ ಬರೆದ ಪತ್ರ ಸೋರಿಕೆ ಆಗಿರುವುದು ಹೇಗೆ..?

ಕಾಂಗ್ರೆಸ್‌ನಲ್ಲಿ ಒಂದು ನಿಯಮವಿತ್ತು. ದೆಹಲಿಯಿಂದ ಲಕೋಟೆ ಬಂದರೆ ಶಾಸಕಾಂಗ ಪಕ್ಷದಲ್ಲಿ ತೆರೆಯಬೇಕು ಎಂದರೆ ಶಾಸಕಾಂಗ ಪಕ್ಷದಲ್ಲೇ ತೆರೆಯಲಾಗುತ್ತಿತ್ತು. ಆದರೆ ಇದೀಗ 23 ಮಂದಿ ಹಿರಿಯ ನಾಯಕರು ಹೈಕಮಾಂಡ್‌ ನಾಯಕಿಗೆ ಬರೆದ ಪತ್ರ ಮಾಧ್ಯಮಗಳಿಗೆ ಸೋರಿಕೆ ಆಗಿರುವುದು ಹೇಗೆ ಎನ್ನುವ ಚಿಂತೆ ಎಲ್ಲರನ್ನು ಕಾಡಲು ಶುರು ಮಾಡಿದೆ. ಯಾಕೆಂದರೆ ಪತ್ರಕ್ಕೆ ಸಹಿ ಹಾಕಿದ 23 ಜನರಲ್ಲಿ ಯಾರೋ ಕೆಲವರು ಮಾಧ್ಯಮಗಳಿಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಅಥವಾ ಸೋನಿಯಾ ಅವರ ಮನೆಗೆ ಪತ್ರ ತಲುಪಿದ ಬಳಿಕ ಯಾರೋ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು, ಇದರ ತನಿಖೆ ಆಗಬೇಕು ನಮ್ಮ ಅಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕು ಎಂದು ವೀರಪ್ಪ ಮೊಯ್ಲಿ ಒತ್ತಾಯ ಮಾಡಿದ್ದಾರೆ.

ನಾವು ಪ್ರಗತಿಪರ ಧೋರಣೆಯಿಂದ ಕಾಂಗ್ರೆಸ್ ಸೇರಿದ್ದು, ಅಧಿಕಾರದ ಆಸೆಯಿಂದ ನಾವು ಕಾಂಗ್ರೆಸ್ ಸೇರಿದವರಲ್ಲ. ನಾವು ಇಂದಿರಾ ಅವರ ಜೊತೆ ಕೆಲಸ ಮಾಡಿದ್ದೇವೆ. ದೇವರಾಜ ಅರಸರು ಇಂದಿರಾ ವಿರುದ್ಧ ಸಿಡಿದು ಹೋಗಿ ರಾಜೀವ್ ವಿರುದ್ಧವೇ ಪಕ್ಷ ಕಟ್ಟಿದ್ದರು. ಆದರೂ ನಾವು ದೇವರಾಜ ಅರಸರ ಆಪ್ತರಾಗಿದ್ದರೂ ಪಕ್ಷ ನಿಷ್ಠೆಯಿಂದ ದೇವರಾಜ ಅರಸರ ವಿರುದ್ಧ ನಿಂತಿದ್ದೆವು. ನಾವು ತೊಂದರೆ ಆದರೂ ಪಕ್ಷವನ್ನ ಬಿಡಲಿಲ್ಲ. ಪಕ್ಷಕ್ಕೆ ನಮ್ಮ ನಿಷ್ಠೆ ಹಾಗೆಯೇ ಇರುತ್ತದೆ. ಸಾಯುವ ತನಕ ನಾನು ಕಾಂಗ್ರೆಸ್ ಕಟ್ಟಾಳೇ ಆಗಿರುತ್ತೇನೆ. ಬಿಜೆಪಿಯತ್ತ ನಾವು ಮುಖ ಮಾಡುವವರಲ್ಲ ಎಂದಿದ್ದಾರೆ.

ನಾನು ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಸ್ಥಾನಮಾನ ಪಡೆದಿದ್ದೇನೆ. ಕನಸಿನಲ್ಲೂ ನಾನು ಮೋದಿಗೆ ಬೆಂಬಲ ಕೊಡುವನಲ್ಲ. ನಾವು ಸೆಕ್ಯೂಲರ್‌ ಆಲೋಚನೆ ಇರುವಂತವನು. ರಾಷ್ಟ್ರದ ಹಿತದೃಷ್ಟಿಯಿಂದ ನಾವು ಪತ್ರ ಬರೆದಿದ್ದು. ತಳಮಟ್ಟ, ಬೂತ್ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಸಂಘಟನೆ ಆಗಬೇಕು. ಇದರ ಬಗ್ಗೆಯೇ ನಾವು ಪತ್ರ ಬರೆದಿದ್ದು. ಸೋನಿಯಾ ಮುಂದುವರಿದಿದ್ದಕ್ಕೆ ಸ್ವಾಗತವಿದೆ. ಪಕ್ಷದ ಘನತೆಯನ್ನ ಎತ್ತಿ ಹಿಡಿಯುವ ಕೆಲಸವನ್ನು ಸೋನಿಯಾ ಮಾಡಿದ್ದಾರೆ. ಪಕ್ಷದ ಮಟ್ಟಿಗೆ ಅವರು ತಾಯಿಯಿದ್ದಂತೆ ಎಂದಿದ್ದಾರೆ ವೀರಪ್ಪ ಮೊಯ್ಲಿ.

ಬಿಜೆಪಿ ಜೊತೆ ಕೈಜೋಡಿಸಿದ್ದಾರೆಂಬ ಮಾತು ಬಂದಿದೆ, ಈ ಮಾತನ್ನ ಕೇಳಿ ನನಗೆ ತುಂಬಾ ನೋವಾಯ್ತು. ಪಕ್ಷಕ್ಕೆ ಹೊಸ ಜೀವ ಕೊಡಬೇಕು ಎಂಬುದಷ್ಟೇ ನಮ್ಮ ನಿಲುವು. ಪತ್ರದಲ್ಲಿ ಇದನ್ನೇ ನಾವು ಹೇಳಿದ್ದು. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿಲ್ಲ. ನಿನ್ನೆ ಸಭೆಯಲ್ಲಿ ಚರ್ಚೆಯಾಗಿದೆ, ಅಲ್ಲಿನ ಚರ್ಚೆಯ ಪ್ರತಿ ವಿಚಾರವೂ ಸೋರಿಕೆಯಾಗಿದೆ. ಈ ರೀತಿ ಸೋರಿಕೆ ಆಗೋದು ಸರಿಯಲ್ಲ. ನಮ್ಮ ಪತ್ರವೂ ಹಾಗೆಯೇ ಸೋರಿಕೆಯಾಗಿದೆ. ಪತ್ರ ಸೋರಿಕೆ ಮಾಡುವ ಅಗತ್ಯವಿರಲಿಲ್ಲ. ಆ ಪತ್ರ ಸೋರಿಕೆ ಆಗಿರುವುದು ಹೇಗೆ..? ಇದು ದೊಡ್ಡ ಪ್ರಮಾದವೇ ಸರಿ ಇದರ ಬಗ್ಗೆ ಅಧ್ಯಕ್ಷರು ವಿಚಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೂ ಅತ್ತ ಕಾರ್ಯಕಾರಿ ಸಮಿತಿಯಲ್ಲಿ ನೀವೇನು ಬಿಜೆಪಿ ಸಪೋರ್ಟ್‌ ಮಾಡುತ್ತಿದ್ದೀರಾ ಎಂದು ರಾಹುಲ್‌ ಪ್ರಶ್ನೆ ಮಾಡಿದ್ದಾರೆ ಎನ್ನುವುದಕ್ಕೆ ಕೆಂಡಾಮಂಡಲರಾಗಿ ಟ್ವೀಟ್‌ ಮಾಡಿ ಡಿಲೀಟ್‌ ಮಾಡಿದ್ದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕಪಿಲ್‌ ಸಿಬಲ್‌ ಮಂಗಳವಾರ ಒಂದು ಟ್ವೀಟ್‌ ಮಾಡಿದ್ದು, ತನ್ನ ಪಕ್ಷ ನಿಷ್ಠೆ ಪ್ರಶ್ನಿಸಿದ್ದಕ್ಕೆ ಕಪಿಲ್ ಸಿಬಲ್ ಅಸಮಾಧಾನ ಹೊರಹಾಕಿದ್ದಾರೆ. ಇಂದು ಮತ್ತೆ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿರುವ ಕಪಿಲ್‌ಸಿಬಲ್‌, 'ನನಗೆ ಪದವಿ ಮುಖ್ಯ ಅಲ್ಲ, ದೇಶ ಮುಖ್ಯ' ಎಂದು ಟಾಂಗ್‌ ಕೊಟ್ಟಿದ್ದಾರೆ.

ಒಂದು ಕಡೆ ತಾವು ಪತ್ರ ಬರೆದಿದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸುವ ಯತ್ನ ನಡೆದಿದೆ. ಇನ್ನೊಂದು ಆಗಿದ್ದು ಆಗಿಬಿಡಲಿ, ಮುಂದಿನ ದಾರಿ ಮುಂದಿನದ್ದು ಎನ್ನುವಂತೆ ಪರೋಕ್ಷ ವಾಗ್ದಾಳಿ ಮುಂದುವರಿದಿದೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿವೆ ಎನ್ನುವುದು ನಿರ್ವಿವಾದ.

Click here to follow us on Facebook , Twitter, YouTube, Telegram

Pratidhvani
www.pratidhvani.com