ಸಮಸ್ಯೆ ಬಗೆಹರಿಸುವ ಬದಲು ಸೃಷ್ಟಿಸಿದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ
ರಾಷ್ಟ್ರೀಯ

ಸಮಸ್ಯೆ ಬಗೆಹರಿಸುವ ಬದಲು ಸೃಷ್ಟಿಸಿದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

'ರಾಹುಲ್ ಗಾಂಧಿ ಅವರು ತಮ್ಮ ಸಲಹೆಗಳನ್ನು ಪರಿಗಣಿಸುತ್ತಿಲ್ಲ' ಎಂದು ಹಿರಿಯರು ಸೆಟೆದುಕೊಂಡಿದ್ದಾರೆ. 'ಹಿರಿಯರಿಂದಾಗಿ ಪಕ್ಷಕ್ಕೆ ಇಂಥ ಹೀನಾಯ ಸ್ಥಿತಿ ಬಂತು' ಎಂಬುದು ರಾಹುಲ್ ಗಾಂಧಿ ಬಣದ ವಾದವಾಗಿದೆ.

ಯದುನಂದನ

ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧ್ಯಕ್ಷ ಸ್ಥಾನದ ಆಯ್ಕೆ ಎಂಬುದು ಹಲವು ಸಮಸ್ಯೆಗಳ ಸಂಕೀರ್ಣವಾಗಿ ಪರಿಣಮಿಸಿದೆ. ಅವರ ಪಕ್ಷದಲ್ಲಿ ಎಲ್ಲರೂ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅಧ್ಯಕ್ಷರಾಗಲಿ ಎನ್ನುತ್ತಾರೆ. ಆದರೆ ಸೋನಿಯಾ ಗಾಂಧಿ ಅವರಾಗಲಿ ಅಥವಾ ರಾಹುಲ್ ಗಾಂಧಿ ಅವರಾಗಲಿ ಸುತಾರಾಂ ಒಪ್ಪುತ್ತಿಲ್ಲ. ಜನರಲ್ಲಿ ಗಾಂಧಿ-ನೆಹರು ಕುಟುಂಬಕ್ಕೆ ಹೊರತಾದ ವ್ಯಕ್ತಿ ಅಧ್ಯಕ್ಷರಾಗಲಿ ಎಂಬ ಅಭಿಪ್ರಾಯವಿದೆ. ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಸಿದ್ದರಿಲ್ಲ. ಇದರೊಂದಿಗೆ ಹಿರಿಯರು-ಕಿರಿಯರು, ಸೋನಿಯಾ ಗಾಂಧಿ ಅವರ ಬಣ, ರಾಹುಲ್ ಗಾಂಧಿ ಬ್ರಿಗೇಡ್ ಎಂಬ ಭಿನ್ನಾಭಿಪ್ರಾಯವಿದೆ. 'ರಾಹುಲ್ ಗಾಂಧಿ ಅವರು ತಮ್ಮ ಸಲಹೆಗಳನ್ನು ಪರಿಗಣಿಸುತ್ತಿಲ್ಲ' ಎಂದು ಹಿರಿಯರು ಸೆಟೆದುಕೊಂಡಿದ್ದಾರೆ. 'ಹಿರಿಯರಿಂದಾಗಿ ಪಕ್ಷಕ್ಕೆ ಇಂಥ ಹೀನಾಯ ಸ್ಥಿತಿ ಬಂತು' ಎಂಬುದು ರಾಹುಲ್ ಗಾಂಧಿ ಬಣದ ವಾದವಾಗಿದೆ. ಇನ್ನೊಂದೆಡೆ ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ರಾಜ್ಯಗಳಲ್ಲಿ ಅಧಿಕಾರ ಮರಿಚಿಕೆ ಆಗುತ್ತಿದೆ. ಇದ್ದ ಅಧಿಕಾರವನ್ನು ಕೈಚೆಲ್ಲಲಾಗುತ್ತಿದೆ. ಹೀಗೆ ಸಾಲು ಸಾಲು ಸಮಸ್ಯೆಗಳು...

ಸಮಸ್ಯೆ ಬಗೆಹರಿಸಬೇಕಾದವರೆ ಸಮಸ್ಯೆ ಸೃಷ್ಟಿಸಿದರೆ...

ಕಾಂಗ್ರೆಸ್ ಪಕ್ಷದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೋ ಅಥವಾ ಹೊಸ ಸಮಸ್ಯೆ ಹುಟ್ಟುಹಾಕುವುದಕ್ಕಾಗಿಯೋ ಎಂಬ ಅನುಮಾನ ಸೃಷ್ಟಿಸಿವೆ. ರಾಜಕೀಯ ಪಕ್ಷದಲ್ಲಿ ಸಮಸ್ಯೆ ಸೃಷ್ಟಿಯಾಗುವುದು, ಭಿನ್ನಮತ ಭುಗಿಲೇಳುವುದು, ವಿವಾದ ಹುಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ಅದನ್ನು ಪರಿಹರಿಸಲೆಂದೇ ಹಿರಿಯರು ಇರುತ್ತಾರೆ. ಸಭೆ, ಕಾರ್ಯಕಾರಣಿಗಳು ನಡೆಯುತ್ತವೆ. ಆದರೆ ಈಗ ಸಮಸ್ಯೆ ಬಗೆಹರಿಸಬೇಕಾದ ಹಿರಿಯರೇ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸಲೆಂದು ನಡೆಸಲಾದ ಕಾರ್ಯಕಾರಿಣಿಯೇ ಹೊಸ ಸಮಸ್ಯೆಗಳಿಗೆ ಕಾವು ಕೊಟ್ಟಿದೆ.

ಉದಾಹರಣೆಗೆ ಗುಲಾಂ ನಭಿ ಆಜಾದ್. ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿ, ಹಲವು ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ಗುಲಾಂ ನಭಿ ಆಜಾದ್ ಅವರ ಅನುಭವ ಅಪಾರ. ಅವರನ್ನು ಕಾಂಗ್ರೆಸ್ 'ಟ್ರಬಲ್ ಶೂಟರ್' ಎಂದು ಪರಿಗಣಿಸಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಗಲು ಫಲಿತಾಂಶ ಬರುತ್ತಿದ್ದಂತೆ ದಿಢೀರನೆ ದೆಹಲಿಯಿಂದ ಬೆಂಗಳೂರಿಗೆ ಕಳುಹಿಸಿದ್ದು ಇದೇ ಗುಲಾಂ ನಬಿ ಆಜಾದ್ ಅವರನ್ನು. ಆದರೆ ಈಗ ಇದೇ ಗುಲಾಂ ನಬಿ ಆಜಾದ್ ಅವರಿಂದ ಸಮಸ್ಯೆ ಆರಂಭವಾಗಿದೆ.

ಗುಲಾಂ ನಬಿ ಆಜಾದ್ ಅವರು ಸೋನಿಯಾ ಗಾಂಧಿ ಅವರಿಗೆ 23 ಜನ ಹಿರಿಯ ನಾಯಕರ ಸಹಿಯನ್ನೊಳಗೊಂಡ ಪತ್ರ ಬರೆದಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ, ಪಕ್ಷದ ವ್ಯವಸ್ಥೆಯಲ್ಲಿ ಪತ್ರ ಬರೆಯುವುದು ಕೂಡ ಸಹಜವಾದ ಪ್ರಕ್ರಿಯೆಗಳೇ. ಆದರೆ ಅವರು 'ಅಕಾಲದಲ್ಲಿ' ಪತ್ರ ಬರೆದು ಮತ್ತು ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ ಸಮಸ್ಯೆ ಸೃಷ್ಟಿಸಿದ್ದಾರೆ. ಇದೇ ಕಾರಣಕ್ಕೆ ಇದೇ ಮೊದಲ ಬಾರಿಗೆ ಗುಲಾಂ ನಭಿ ಆಜಾದ್ ಅವರ ಪಕ್ಷನಿಷ್ಟೆ ಬಗ್ಗೆ ಚರ್ಚೆ ಆಗುತ್ತಿದೆ. ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಹಿರಿಯ ನಾಯಕರಾದ ಎ.ಕೆ. ಅಂಟನಿ, ರಾಹುಲ್ ಗಾಂಧಿ ಮತ್ತಿತರರು ಗುಲಾಂ ನಬಿ ಆಜಾದ್ ಕಡೆಗೆ ಬೊಟ್ಟು ಮಾಡಿದ್ದಾರೆ.

ಇದರ ಬದಲಿಗೆ ಗುಲಾಂ ನಬಿ ಆಜಾದ್ ಖುದ್ದಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಸಭೆ ಕರೆಯಬೇಕಾದ ಅನಿವಾರ್ಯತೆಯ ಬಗ್ಗೆ, ಅಧ್ಯಕ್ಷಗಾದಿಯನ್ನು ಬದಲಾವಣೆ ಮಾಡಲೇಬೇಕಾದ ಅಗತ್ಯತೆ ಬಗ್ಗೆ, ಪಕ್ಷವನ್ನು ಸಕ್ರೀಯಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಬಹುದಿತ್ತು. ಆಜಾದ್ ಹಾಗೇಕೆ ಮಾಡಲಿಲ್ಲ ಎಂದರೆ, ತಾನೊಬ್ಬನೆ ಹೋಗಿ ಮಾತನಾಡಿ, ಇದನ್ನು ಸೋನಿಯಾ ಗಾಂಧಿ ಅವರು ತನ್ನೊಬ್ಬನದೇ ಅಭಿಪ್ರಾಯ ಎಂದು ತಿಳಿದುಕೊಂಡು, ಮುಂದೆ ತನ್ನನ್ನು ಕಡೆಗಣಿಸಿಬಿಟ್ಟರೆ ಎಂಬ ಭಯ. ಇದು ಟಿಪಿಕಲ್ ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಅದಕ್ಕಾಗಿಯೇ 23 ಜನರನ್ನು ಹೊಣೆಗಾರರನ್ನಾಗಿ ಮಾಡುವ 'ಪತ್ರ ಮಾರ್ಗ' ಹುಡುಕಿಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಮಸ್ಯೆಗಳಿಗೆ ಕಾವುಕೊಟ್ಟ ಕಾರ್ಯಕಾರಿಣಿ

ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕಾರಿಣಿ ಇದ್ದ ಸಮಸ್ಯೆಯನ್ನು ಬಗೆಹರಿಸುವ ಬದಲಿಗೆ ಹೊಸ ಸಮಸ್ಯೆಯನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ನಿರ್ಣಯಿಸಲು ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಅಧ್ಯಕ್ಷ ಸ್ಥಾನ ನೀಡುವ ವಿಚಾರಕ್ಕಿಂದ ಪತ್ರದ ವಿಷಯವೇ ಹೆಚ್ಚು ಚರ್ಚೆಯಾಯಿತು. ಗುಲಾಂ ನಬಿ ಆಜಾದ್ ಪತ್ರವನ್ನು ಸೋರಿಕೆ ಮಾಡಿದಂತೆ ಕಾಂಗ್ರೆಸ್ ಇಡೀ ಸಭೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಸೋರಿಕೆ ಮಾಡಿತು. ಮಾಹಿತಿ ಸೋರಿಕೆ ಆಗದಿದ್ದರೆ CWC ಸದಸ್ಯರಲ್ಲದ ಕಪಿಲ್ ಸಿಬಲ್ ಹೊರಗಡೆ ಕುಳಿತು ಅರ್ಧಂಬರ್ಧ ಸತ್ಯ ತಿಳಿಯುತ್ತಿದ್ದಂತೆ ಕಿಡಿಕಾರಿ ಟ್ವೀಟ್ ಮಾಡುತ್ತಿರಲಿಲ್ಲ. ಮಾಧ್ಯಮಗಳಿಗೆ CWC ಸಭೆ ಆಹಾರವಾಗುತ್ತಿರಲಿಲ್ಲ.

ಹೋಗಲಿ, ಪತ್ರದ ಬಳಿಕವಾದರೂ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು? ಏಕೆ ನೀಡಬೇಕು ಎಂಬ ಬಗ್ಗೆ ಚರ್ಚೆಯಾಯಿತಾ? ಅದೂ ಇಲ್ಲ. ಮತ್ತೆ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮುಂದಿನ ಎಐಸಿಸಿ ಅಧಿವೇಶನ ನಡೆಯುವವರೆಗೆ ಅವರೇ ಮುಂದುವರೆಯಲಿ ಎಂದು ನಿರ್ಧರಿಸಲಾಯಿತು. ಅದೆಲ್ಲಾ ಸರಿ, 2019ರ ಆಗಸ್ಟ್‌ನಲ್ಲೂ ಇದೇ ರೀತಿ ತಾನೇ ಆಗಿತ್ತು. 'ಮುಂದಿನ ಎಐಸಿಸಿ ಅಧಿವೇಶನ ಕರೆದು ನೂತನ ಅಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳುವವರೆಗೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ' ಎಂದು. ಜಗತ್ತು ಬಹಳ ವೇಗವಾಗಿ ಓಡುತ್ತಿರುವ ಸಂದರ್ಭದಲ್ಲಿ, ಎದುರಾಳಿ ಪಕ್ಷವಾದ ಬಿಜೆಪಿ ತನ್ನ ಸಂಘಟನೆಗೆ ಭಾರೀ ಒತ್ತು ನೀಡುತ್ತಿರುವ ಸಮಯದಲ್ಲಿ ಹೀಗೆ ಯಾವೊಂದು ಪ್ರಮುಖ ನಿರ್ಧಾರವನ್ನೂ ಕೈಗೊಳ್ಳದೆ ನೆಪ ಮಾತ್ರಕ್ಕೆ ಕಾರ್ಯಕಾರಣಿ ಸಭೆ ನಡೆಸುವುದರಿಂದ ಕಾಂಗ್ರೆಸ್ ನಾಯಕರು ಪಕ್ಷ ಕಟ್ಟಲು ಸಾಧ್ಯವೇ? ಜೊತೆಗೆ ಸೋಲುಗಳಿಂದ ಪಾಠ ಕಲಿತಿಲ್ಲ. ಮೊನ್ನೆ ನಡೆದ ಕಾರ್ಯಕಾರಣಿ ಸಭೆ ಹೊಸ ಉದಾಹರಣೆ ಅಷ್ಟೇ.

Click here to follow us on Facebook , Twitter, YouTube, Telegram

Pratidhvani
www.pratidhvani.com