ದಂಡನಾಯಕನೇ ಇಲ್ಲದೆ ಯುದ್ಧ ಗೆಲ್ಲುಲಾಗದು ಎಂಬ ಸತ್ಯ ಮರೆತ ಕಾಂಗ್ರೆಸ್
ರಾಷ್ಟ್ರೀಯ

ದಂಡನಾಯಕನೇ ಇಲ್ಲದೆ ಯುದ್ಧ ಗೆಲ್ಲುಲಾಗದು ಎಂಬ ಸತ್ಯ ಮರೆತ ಕಾಂಗ್ರೆಸ್

ಕಾಂಗ್ರೆಸ್ ಪಾಲಿಗೆ ಚುನಾವಣಾ ಸೋಲು, ಪಕ್ಷದ ಸರ್ಕಾರಗಳ ಪತನದಂತಹ ಸಂಗತಿಗಳಿಗಿಂತ, ಸ್ವತಃ ಪಕ್ಷವನ್ನು ಮುನ್ನಡೆಸುವುದಕ್ಕೆ ಸಂಬಂಧಿಸಿದ ಬಿಕ್ಕಟ್ಟೇ ದೊಡ್ಡ ಸವಾಲು. ಕಾಂಗ್ರೆಸ್ ಈ ಸವಾಲನ್ನು ದಿಟ್ಟತನದಿಂದ ಎದುರಿಸುವುದು ಸಾಧ್ಯವಾದರೆ, ರಾಜಕೀಯವಾಗಿ ಅರ್ಧ ಯುದ್ಧ ಗೆದ್ದಂತೆ. ಆದರೆ, ಅಂತಹ ಯುದ್ಧ ಗೆಲ್ಲಲು ಬೇಕಾದ ದಂಡನಾಯಕ ಯಾರು ಎಂಬುದನ್ನು ನಿರ್ಧರಿಸುವುದು ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬುದನ್ನು ಸೋಮವಾರದ ಕಾರ್ಯಕಾರಿಣಿ ಹೇಳಿದೆ

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕಳೆದ ವಾರಾಂತ್ಯದ ಹೊತ್ತಿಗೆ ಆರಂಭವಾಗಿದ್ದ ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟು, ಸೋಮವಾರ ಸಂಜೆಯ ಹೊತ್ತಿಗೆ ಒಂದು ತಾರ್ಕಿಕ ಅಂತ್ಯ ಕಂಡಿದೆ.

ಪಕ್ಷದ ರಾಷ್ಟ್ರಿಯ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹಂತದಲ್ಲಿ ಪಕ್ಷದ ಆಯಕಟ್ಟಿನ ಸ್ಥಾನಗಳಿಗೆ ಹಂಗಾಮಿ ಹೊಣೆಗಾರಿಕೆ ಬದಲಿಗೆ, ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಬೇಕು ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕು ಎಂದು ಪಕ್ಷದ 23 ಮಂದಿ ಹಿರಿಯ ನಾಯಕರು ಬರೆದ ಪಕ್ಷ ಮಾಧ್ಯಮಗಳ ಮೂಲಕ ಸೋರಿಕೆಯಾಗುತ್ತಲೇ ಪಕ್ಷದ ಆಂತರಿಕ ಬಿಕ್ಕಟ್ಟು ಜಗಜ್ಜಾಹೀರಾಗಿತ್ತು. ಬಣ ರಾಜಕಾರಣದ ಸಂಘರ್ಷ ಪಕ್ಷದಲ್ಲಿ ಸ್ಫೋಟಕ ಹಂತ ತಲುಪಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಆದರೆ, ಸೋಮವಾರ ಆ ಪತ್ರದ ಹಿನ್ನೆಲೆಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಎಐಸಿಸಿ ಅಧಿವೇಶನ ನಡೆಯುವವರೆಗೆ ಹಾಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಮುಂದುವರಿಯುವುದು ಮತ್ತು ಆ ಅಧಿವೇಶನದ ವೇಳೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಎಂದು ತೀರ್ಮಾನಿಸಲಾಗಿದೆ. ಜೊತೆಗೆ ಪಕ್ಷದ ಆಂತರಿಕ ವಿದ್ಯಮಾನಗಳನ್ನು ಪತ್ರದ ಮೂಲಕ ಬಹಿರಂಗಪಡಿಸುವ ಮೂಲಕ ಪ್ರತಿಪಕ್ಷಗಳಿಗೆ ರಾಜಕೀಯ ಟೀಕೆಗೆ ಅವಕಾಶ ನೀಡಿದ ಹಿರಿಯ ನಾಯಕರ ವರ್ತನೆಯ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಟೀಕೆ ಕೇಳಿಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೇಶದ ಪುರಾತನ ಪಕ್ಷದ ಈ ಸಂಘರ್ಷ, ಮುಜುಗರದ ಬೆಳವಣಿಗೆಯನ್ನು ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸತೊಡಗಿದ್ದಾರೆ. ಪಕ್ಷದ ಚುಕ್ಕಾಣಿಗಾಗಿ ಪಕ್ಷದ ಹಳೇ ಹುಲಿಗಳು ಮತ್ತು ಮರಿ ಹುಲಿಗಳ ನಡುವಿನ ಪೈಪೋಟಿ ಎಂದು ಕೆಲವರು, ಇದು ಗಾಂಧಿ ಕುಟುಂಬ ಮತ್ತು ಗಾಂಧಿ ಕುಟುಂಬೇತರ ಪ್ರಮುಖರ ನಡುವಿನ ಪಕ್ಷದ ಭವಿಷ್ಯ ಕಟ್ಟುವ ನಿಟ್ಟಿನ ಭಿನ್ನಮತ ಎಂದು ಮತ್ತೆ ಕೆಲವರು ವಾದಿಸುತ್ತಿದ್ದಾರೆ.

ಇನ್ನೂ ಕೆಲವರು; ಇದು ಸ್ವತಃ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವಿನ ನಡುಮನೆಯ ರಾಜಕೀಯ ಸಂಘರ್ಷ. ಸೋನಿಯಾ ಅವರಿಗೆ, ಪಕ್ಷದ ಅಧಿಕಾರವನ್ನು ತಮ್ಮ ಕುಟುಂಬದ ಹೊರತಾಗಿ ಉಳಿದವರಿಗೆ ವಹಿಸಲು ಇಷ್ಟವಿಲ್ಲ; ಪಕ್ಷದ ಅಧಿಕಾರ ದಂಡವನ್ನು ಕುಟುಂಬದ ಕೈಯಲ್ಲೇ ಇಟ್ಟುಕೊಂಡು, ಹಿರಿಯ ಮತ್ತು ಯುವ ನಾಯಕರ ಸಮೀಕರಣದ ಮೂಲಕ ಪಕ್ಷ ಮುನ್ನಡೆಸುವ ಮೂಲಕ ಅಂತಿಮವಾಗಿ ಗಾಂಧಿ ಕುಟುಂಬದ ಹಿಡಿತವನ್ನು ಕಾಯ್ದುಕೊಳ್ಳುವುದು ಸೋನಿಯಾ ಯೋಜನೆ. ಆದರೆ, ರಾಹುಲ್ ಗಾಂಧಿ ಈ ಯೋಜನೆಗೆ ತಯಾರಾಗಿಲ್ಲ. ಬದಲಾಗಿ ಪಕ್ಷದಲ್ಲಿ ಸಂಪೂರ್ಣ ಯುವ ನಾಯಕರಿಗೆ ಅವಕಾಶ ನೀಡಿ, ಗಾಂಧಿ ಕುಟುಂಬೇತರ ದಕ್ಷ ನಾಯಕರಿಗೆ ಅಧಿಕಾರ ದಂಡ ಕೊಟ್ಟು, ಕನಿಷ್ಟ ಸದ್ಯದ ಮಟ್ಟಿಗಾದರೂ ತಾವು ತೆರೆಮರೆಯ ಸೂತ್ರಧಾರರಾಗಿ ಪಕ್ಷ ನಡೆಸುವ ಯೋಜನೆ ರಾಹುಲ್ ಗಾಂಧಿಯದ್ದು. ಈ ವಿಷಯದಲ್ಲಿ ತಾಯಿ- ಮಗನ ನಡುವೆ ಸಹಮತ ಏರ್ಪಡೆ ಇರುವುದೇ ಪಕ್ಷದ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಒಂದೂವರೆ ವರ್ಷದ ಬಳಿಕವೂ ಅನಿಶ್ಚಿತತೆ ಮುಂದುವರಿಯಲು ಕಾರಣ ಎನ್ನಲಾಗುತ್ತಿದೆ.

ಈ ನಡುವೆ, ಪಕ್ಷದ ಹಳೇ ತಲೆಗಳು ಮತ್ತು ಹೊಸ ತಲೆಗಳ ನಾಯಕರಿಬ್ಬರ ವಲಯದಲ್ಲಿಯೂ ಪಕ್ಷದ ನಿಂತ ನೀರಿನ ಸ್ಥಿತಿಯ ಬಗ್ಗೆ ಆತಂಕವಿದೆ. ಪಕ್ಷ ಬದಲಾವಣೆಗೆ, ಹೊಸ ಸವಾಲುಗಳಿಗೆ ಮುಖಾಮುಖಿಯಾಗುತ್ತಿಲ್ಲ. ಆಂತರಿಕ ಬಿಕ್ಕಟ್ಟುಗಳು ಬಗ್ಗೆ, ಭಿನ್ನಾಭಿಪ್ರಾಯಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಅವುಗಳನ್ನು ಆರಂಭದಲ್ಲೇ ಗುರುತಿಸಿ ನಿಭಾಯಿಸುವ ಕಾರ್ಯ ಆಗುತ್ತಿಲ್ಲ. ಉನ್ನತ ನಾಯಕತ್ವದ ಇಂತಹ ಉದಾಸೀನ ಧೋರಣೆಯ ಕಾರಣಕ್ಕಾಗಿಯೇ ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಇರುವ ಸರ್ಕಾರಗಳನ್ನು ಕಳೆದುಕೊಳ್ಳಲಾಯಿತು. ಗೋವಾ, ಮಣಿಪುರದಲ್ಲಿ ಅಧಿಕಾರ ಹಿಡಿಯುವ ಅವಕಾಶವನ್ನೇ ಕೈಚೆಲ್ಲಲಾಯಿತು. ಪಕ್ಷಕ್ಕೆ ಸ್ಪಷ್ಟ ಕಾರ್ಯತಂತ್ರ ಮತ್ತು ಚುರುಕು ಕಾರ್ಯಪಡೆಯನ್ನು ರೂಪಿಸುವಲ್ಲಿಹೈಕಮಾಂಡ್ ವಿಫಲವಾಗಿದೆ. ಹೈಕಮಾಂಡ್ ಮಟ್ಟದಲ್ಲೇ ಅಧಿಕಾರ ದಂಡ ಹಿಡಿಯುವ ಬಗ್ಗೆಯೇ ಸ್ವತಃ ಅನ್ಯಮನಸ್ಕತೆ, ಹಿಂಜರಿಕೆ, ಗೊಂದಲಗಳಿರುವಾಗ, ಬಿಜೆಪಿಯಂತಹ ಅತ್ಯಂತ ಪ್ರಬಲ ಮತ್ತು ದಾಷ್ಟ್ರ್ಯದ ಆಡಳಿತ ಪಕ್ಷದ ಎದುರು ಪ್ರತಿಪಕ್ಷವಾಗಿ ಎದ್ದುನಿಲ್ಲುವುದು ಅನುಮಾನಾಸ್ಪದ ಎಂಬ ಆತಂಕ ಪಕ್ಷದ ಎಲ್ಲಾ ವಲಯದಲ್ಲೂ ಸಾಮಾನ್ಯವಾಗಿದೆ. ಆ ಆತಂಕದ ಹಿನ್ನೆಲೆಯಲ್ಲಿಯೇ ಪತ್ರದ ಪರಿಣಾಮಗಳ ಅರಿವಿದ್ದೂ 23 ಮಂದಿ ಹಿರಿಯ ನಾಯಕರು ಪತ್ರಬರೆದಿದ್ದರು ಮತ್ತು ಅದಕ್ಕೆ ಸುಮಾರು 300ಕ್ಕೂ ಹೆಚ್ಚು ವಿವಿಧ ಹಂತದ ನಾಯಕರು ಬೆಂಬಲ ಸೂಚಿಸಿದ್ದರು.

ಆದರೆ, ಪಕ್ಷದ ರಾಷ್ಟ್ರೀಯ ನಾಯಕತ್ವ ಮತ್ತು ವಿವಿಧ ಹಂತದ ನಾಯಕತ್ವಗಳ ವಿಷಯದಲ್ಲಿ ಸ್ಪಷ್ಟತೆ ಮತ್ತು ಕಾರ್ಯಕಾರಿಣಿ ಪುನರ್ ರಚನೆ ಮೂಲಕ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಬಲಪಡಿಸುವ, ಮತ್ತು ಅದೇ ಹೊತ್ತಿಗೆ ಪಕ್ಷದ ಪುನರುಜ್ಜೀವನದ ಉದ್ದೇಶಕ್ಕೆ ನಡೆಸಿದ ‘ಪತ್ರ ಚಳವಳಿ’ ಇದೀಗ ಮಾಧ್ಯಮಗಳ ವೈಭವೀಕರಣ ಮತ್ತು ರಾಜಕೀಯ ಪ್ರತಿಸ್ಪರ್ಧಿಗಳ ಕಟು ಟೀಕೆ ಮತ್ತು ವ್ಯಂಗ್ಯದ ಮೂಲಕ ಪಕ್ಷವನ್ನು ಇನ್ನಷ್ಟು ದುರ್ಬಲಗೊಳಿಸಿದೆ. ಒಂದು ವೇಳೆ, ಕಾರ್ಯಕಾರಿಣಿ ಸಭೆಯಲ್ಲಿ ಪತ್ರದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ, ಆತಂಕಕ್ಕೆ ಮನ್ನಣೆ ದೊರೆತಿದ್ದರೆ, ಅಥವಾ ಕನಿಷ್ಟ ಆ ನಾಯಕರು ವ್ಯಕ್ತಪಡಿಸಿದ ಆತಂಕ ನೈಜ ಕಾಳಜಿಯಿಂದ ಕೂಡಿದ್ದು ಎಂಬುದನ್ನಾದರೂ ಒಪ್ಪಿಕೊಂಡಿದ್ದರೆ ಆಗ ಬಹುಶಃ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ.

ಆದರೆ, ಬಹುತೇಕ ಇಂದಿರಾ ಗಾಂಧಿ ಕಾಲದಿಂದಲೇ ಕಾಂಗ್ರೆಸ್ ನಾಯಕರನ್ನು ಸುತ್ತುವರಿದಿರುವ ಒಂದು ಪ್ರಭಾ ವಲಯ, ಅಷ್ಟು ಸುಲಭವಾಗಿ ವಾಸ್ತವಾಂಶಗಳು ತಮ್ಮ ನಾಯಕರ ಅರಿವಿಗೆ ಬರಲು ಬಿಡಲಾರದು. ಹೈಕಮಾಂಡಿನ ಕಣ್ಣುಗಳಿಗೆ ಕಣ್ಣುಪಟ್ಟಿ ಕಟ್ಟಿ ತಮ್ಮ ಮೂಗಿನ ನೇರಕ್ಕೆ ನಡೆಸುವ ಕಲೆ ಕರಗತ ಮಾಡಿಕೊಂಡಿರುವ ಆ ಪ್ರಭಾ ವಲಯದ ಘಟಾಘಟಿಗಳು, ಇಂದಿರಾ ಗಾಂಧಿ ನಂತರ ರಾಜೀವ್ ಸುತ್ತುವರಿಯಿತು. ಆದರೆ, ರಾಜೀವ್ ಕೆಲ ದಿನಗಳಲ್ಲೇ ತಮ್ಮದೇ ಆದ ವಲಯ ಕಟ್ಟಿಕೊಂಡು, ಇಂದಿರಾ ಅವರ ಆಪ್ತ ವಲಯದಿಂದ ಅಂತರ ಕಾಯ್ದುಕೊಂಡಿದ್ದರು. ಬಳಿಕ ರಾಜೀವ್ ನಂತರ, ಸೋನಿಯಾ ಮತ್ತು ನರಸಿಂಹ ರಾವ್, ಸೀತಾರಾಂ ಕೇಸರಿ ಅವರ ಅವಧಿಯಲ್ಲಿ ಮತ್ತೆ ಹಳೆಯ ಪಡೆ ಕಾಂಗ್ರೆಸ್ ಹೈಕಮಾಂಡಿನ ಪರಿಧಿಯೊಳಗೆ ಪ್ರವೇಶ ಪಡೆಯಿತು.

ವಿಶೇಷವಾಗಿ 1998ರಲ್ಲಿ ಸೋನಿಯಾ ಅವರು ಅಧ್ಯಕ್ಷೆಯಾಗಿ ಅಧಿಕೃತವಾಗಿ ಹೊಣೆ ವಹಿಸಿಕೊಂಡ ಬಳಿಕ ಅಂತಹದ್ದೊಂದು ಪ್ರಭಾ ವಲಯ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯಿತು. ಪಕ್ಷದ ರಾಜ್ಯಮಟ್ಟದ ನಾಯಕರು ಮತ್ತು ಹೈಕಮಾಂಡ್ ನಡುವೆ ಈ ವಲಯವೇ ಮಾಧ್ಯಮವಾಗಿ ಕಾರ್ಯನಿರ್ವಹಿಸತೊಡಗಿತು. ರಾಜ್ಯ ಕಾಂಗ್ರೆಸ್ ಮತ್ತು ದೆಹಲಿ ನಡುವಿನ ಈ ಮಾಧ್ಯಮವೇ ಕ್ರಮೇಣ ಪಕ್ಷವನ್ನು ತಳಮಟ್ಟದ ವಾಸ್ತವಾಂಶಗಳಿಂದ ದೂರ ಮಾಡಿತು ಮತ್ತು ಪರಿಣಾಮವಾಗಿ ಪಂಚಾಯ್ತಿ ಮಟ್ಟದಿಂದ ದಿಲ್ಲಿಯವರೆಗೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ನಡುವೆ ದೊಡ್ಡ ಕಂದಕ ಸೃಷ್ಟಿಗೂ ಈ ಪ್ರಭಾ ವಲಯದ ವರಸೆಗಳು ಪರೋಕ್ಷವಾಗಿ ದೊಡ್ಡ ಕೊಡುಗೆ ನೀಡಿದವು ಎಂಬುದು ಈಗ ಇತಿಹಾಸ.

ಆದರೆ, ಒಂದೂವರೆ ವರ್ಷ ಕಳೆದರೂ ಪಕ್ಷದ ಚುಕ್ಕಾಣಿ ಹಿಡಿಯಲು ಒಂದು ದಿಟ್ಟ ಆಯ್ಕೆಯನ್ನು ಮಾಡಲಾಗದ ದುರ್ಬಲ ಸ್ಥಿತಿಗೆ ಪಕ್ಷದ ಕಾರ್ಯಕಾರಿಣಿ ತಲುಪಿದೆ ಮತ್ತು ಹೈಕಮಾಂಡ್ ಕೂಡ ತೀರಾ ದುರ್ಬಲ ಸ್ಥಿತಿಯಲ್ಲಿ ದಿಕ್ಕು ತೋಚದಂತಾಗಿದೆ ಎಂದರೆ; ಅದಕ್ಕೂ ದೆಹಲಿಯ 10, ಜನಪಥ್ನ ಭದ್ರಕೋಟೆಯಂತೆ ಇರುವ ಈ ಪ್ರಭಾ ವಲಯವೇ ಕಾರಣ ಎಂಬುದು ಸ್ವತಃ ಕಾಂಗ್ರೆಸ್ಸಿನ ಪಡಸಾಲೆಯಲ್ಲೂ ಕೇಳುವ ಮಾತು. ಹಾಗಾಗಿಯೇ ಪಕ್ಷದಲ್ಲಿ ಬೆರಳೆಣಿಕೆ ಮಂದಿಯನ್ನು ಹೊರತುಪಡಿಸಿದರೆ, ಪಕ್ಷವನ್ನು ಮುನ್ನಡೆಸುವ ಪ್ರಭಾವಿ ನಾಯಕರು ಯುವ ತಲೆಮಾರಿನಲ್ಲೇ ಕಾಣಿಸದೇ ಇರುವುದು ಮತ್ತು ಹಾಗೆ ಇರುವ ಒಂದಿಬ್ಬರನ್ನೂ ಹಣಿಯುವ ಯತ್ನ ಹಿರಿಯ ತಲೆಗಳಿಂದ ನಡೆಯುತ್ತಿರುವುದು.

ಇನ್ನು ಗಾಂಧಿ ಕುಟುಂಬದಲ್ಲೇ ಅಧಿಕಾರ ಹಿಡಿದಿಟ್ಟುಕೊಳ್ಳುವ ತಂತ್ರಕ್ಕೆ ಸೈ ಎಂದರೂ ಆ ವಿಷಯದಲ್ಲಿ ಪಕ್ಷದ ಇತರ ನಾಯಕರ ಬೆಂಬಲವಿರಲಿ, ಸ್ವತಃ ಗಾಂಧಿ ಕುಟುಂಬದಲ್ಲಿಯೇ ಹೊಣೆಗಾರಿಕೆ ಹೊರಬೇಕಾದವರೇ ಹೊರಲು ಸಿದ್ಧರಿಲ್ಲ! ಸೋನಿಯಾ ಅವರಿಗೆ ಪಕ್ಷ ಕುಟುಂಬದ ಕೈತಪ್ಪಿದರೆ, ಅದು ಉಳಿಯುವ ಬಗ್ಗೆಯೇ ಅನುಮಾನವಿದ್ದಂತಿದೆ. ಅಂದರೆ, ಅವರಿಗೆ ತಮ್ಮ ಕುಟುಂಬದ ಹೊರತು, ಪಕ್ಷವನ್ನು ಬದ್ಧತೆ ಮತ್ತು ದಿಟ್ಟತನದಿಂದ ಮುನ್ನಡೆಸುವ ಮತ್ತೊಬ್ಬ ನಾಯಕ ಪಕ್ಷದಲ್ಲಿ ಕಾಣಿಸುತ್ತಿಲ್ಲ. ಇದು ನಿಜಕ್ಕೂ ಒಂದು ರಾಷ್ಟ್ರೀಯ ಪಕ್ಷಕ್ಕೆ ತೀರಾ ಹೀನಾಯ ಸಂಗತಿ. ಪಕ್ಷವನ್ನು ಸಂಕಷ್ಟದ ಹೊತ್ತಲ್ಲಿ ಮುನ್ನಡೆಸುವ ನಾಯಕರನ್ನು ತಯಾರು ಮಾಡುವಲ್ಲಿ ಕಳೆದ ಮೂರು ದಶಕಗಳಲ್ಲಿ ಸೋನಿಯಾ ನೇತೃತ್ವದ ಪಕ್ಷ ಎಷ್ಟು ಹೀನಾಯವಾಗಿ ಸೋತಿದೆ ಎಂಬುದಕ್ಕೆ ಇದು ನಿದರ್ಶನ.

ಅದೇ ಹೊತ್ತಿಗೆ, ರಾಹುಲ್ ಗಾಂಧಿ ಕೂಡ ಪಕ್ಷದ ಹೊಣೆಗಾರಿಕೆಯ ವಿಷಯದಲ್ಲಿ ದಶಕಗಳ ರಾಜಕೀಯ ಅನುಭವದ ಹೊರತಾಗಿಯೂ ಒಂದು ಸ್ಪಷ್ಟತೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವರಿಗೆ ಸೋಲಿನ ಹೊತ್ತಿನಲ್ಲಿ, ಹತಾಶೆಯ ಹೊತ್ತಿನಲ್ಲಿ ಪಕ್ಷಕ್ಕೆ ಹೆಗಲು ಕೊಟ್ಟು ರಾಜಕೀಯ ವಿರೋಧಿಗಳ ಆಕ್ರಮಣ, ದಾಳಿಗಳ ವಿರುದ್ಧ ಎದೆಸೆಟೆಸಿ ನಿಲ್ಲುವ ಛಾತಿಯೂ ಇಲ್ಲ; ತಮ್ಮ ನಂಬಿಕೆಯ ಮತ್ತೊಬ್ಬರಿಗೆ ಪಕ್ಷದ ಹೊಣೆಗಾರಿಕೆ ವಹಿಸಿ ಪಕ್ಷಕ್ಕಾಗಿ ದುಡಿಯುವ ಸ್ವತಂತ್ರವೂ ಇಲ್ಲ.

ಹಾಗಾಗಿ, ಕಾಂಗ್ರೆಸ್ ಪಾಲಿಗೆ ಚುನಾವಣಾ ಸೋಲು, ಪಕ್ಷದ ಸರ್ಕಾರಗಳ ಪತನದಂತಹ ರಾಜಕೀಯ ಸಂಗತಿಗಳಿಗಿಂತ, ಸ್ವತಃ ಪಕ್ಷವನ್ನು ಮುನ್ನಡೆಸುವುದಕ್ಕೆ ಸಂಬಂಧಿಸಿದ ಈ ಆಂತರಿಕ ಬಿಕ್ಕಟ್ಟೇ ದೊಡ್ಡ ಸವಾಲು. ಕಾಂಗ್ರೆಸ್ ಈ ಸವಾಲನ್ನು ದಿಟ್ಟತನದಿಂದ, ಮೈಚಳಿ ಬಿಟ್ಟು ಎದುರಿಸುವುದು ಸಾಧ್ಯವಾದರೆ, ರಾಜಕೀಯವಾಗಿ ಅದು ಅರ್ಧ ಯುದ್ಧ ಗೆದ್ದಂತೆ. ಆದರೆ, ಅಂತಹ ಯುದ್ಧ ಗೆಲ್ಲಲು ಬೇಕಾದ ದಂಡನಾಯಕ ಯಾರು ಎಂಬುದನ್ನು ನಿರ್ಧಿಸುವುದು ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬುದನ್ನು ಸೋಮವಾರದ ಕಾರ್ಯಕಾರಿಣಿ ಹೇಳಿದೆ. ಸದ್ಯಕ್ಕೆ ಪ್ರತಿಪಕ್ಷ ತನ್ನದೇ ಆಂತರಿಕ ಬಿಕ್ಕಟ್ಟಿನಿಂದ ಪಾರಾಗಲಾರದು ಮತ್ತು ಪರಿಣಾಮವಾಗಿ ಆಡಳಿತ ಪಕ್ಷದ ಪ್ರಶ್ನಾತೀತ ಸರ್ವಾಧಿಕಾರಿ ನಡೆಗಳಿಗೆ ಸಣ್ಣ ಪ್ರತಿರೋಧ ಕೂಡ ನಿರೀಕ್ಷಿಸಲಾಗದು. ಒಟ್ಟಾರೆ, ಈ ದುರವಸ್ಥೆಗಾಗಿ ದೇಶದ ಜನಸಾಮಾನ್ಯರು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ತೆರಬೇಕಾದ ಬೆಲೆ ದೊಡ್ಡದು!

Click here to follow us on Facebook , Twitter, YouTube, Telegram

Pratidhvani
www.pratidhvani.com