ಉ.ಪ್ರ ಪತ್ರಕರ್ತನ ಕೊಲೆ; ಪತ್ರಿಕಾ ಸ್ವಾತಂತ್ರ್ಯದ ಧಕ್ಕೆಗೆ ಮತ್ತೊಂದು ಉದಾಹರಣೆಯೇ?
ರಾಷ್ಟ್ರೀಯ

ಉ.ಪ್ರ ಪತ್ರಕರ್ತನ ಕೊಲೆ; ಪತ್ರಿಕಾ ಸ್ವಾತಂತ್ರ್ಯದ ಧಕ್ಕೆಗೆ ಮತ್ತೊಂದು ಉದಾಹರಣೆಯೇ?

ವಿಕ್ರಮ್‌ ಜೋಷಿ ಎಂಬ ಪತ್ರಕರ್ತನನ್ನು ಆತನ ಎರಡು ಹೆಣ್ಣುಮಕ್ಕಳ ಸಮ್ಮುಖದಲ್ಲೇ ಕೊಲೆ ಮಾಡಲಾಗಿತ್ತು. ತನ್ನಿಬ್ಬರು ಹೆಣ್ಣುಮಕ್ಕಳನ್ನು ತನ್ನ ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಬಂದ ದುಷ್ಕರ್ಮಿಗಳ ತಂಡ ವಿಕ್ರಮ್‌ ಜೋಷಿ ಅವರನ್ನು ಹತ್ಯೆಗೈದಿತ್ತು.

ಶಿವಕುಮಾರ್‌ ಎ

ಅಪರಾಧ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ದುಷ್ಕೃತ್ಯ ವರದಿಯಾಗಿದೆ. ಮೂವರು ದುಷ್ಕರ್ಮಿಗಳ ತಂಡ ಸೋಮವಾರ ರಾತ್ರಿ ಪತ್ರಕರ್ತನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದೆ. ಕೊಲೆಯಾದ ಪತ್ರಕರ್ತನನ್ನು ರತನ್‌ ಸಿಂಗ್‌ ಎಂದು ಗುರುತಿಸಲಾಗಿದೆ.

42‌ ವರ್ಷದ ರತನ್‌ ಸಿಂಗ್‌ ಖಾಸಗಿ ನ್ಯೂಸ್ ಚಾನೆಲ್‌ ಒಂದರಲ್ಲಿ ಸ್ಥಳೀಯ ಪತ್ರಕರ್ತರಾಗಿ ದುಡಿಯುತ್ತಿದ್ದರು. ಸೋಮವಾರ ರಾತ್ರಿ 9 ರ ವೇಳೆಗೆ ಮನೆಗೆ ಮರಳುತ್ತಿದ್ದ ರತನ್‌ ಸಿಂಗ್‌ ರನ್ನು ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ. ದುಷ್ಕರ್ಮಿಗಳ ಕೈಯಿಂದ ತಪ್ಪಿಸಲು ರತನ್‌ ಪ್ರಯತ್ನಿಸಿದರೂ, ನಿವಾಸದ ಸಮೀಪ ದುಷ್ಕರ್ಮಿಗಳು ರತನ್‌ರನ್ನು ಅಡ್ಡಗಟ್ಟಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪೊಲೀಸರು ಪತ್ರಕರ್ತನ ಕೊಲೆಯನ್ನು ಆಸ್ತಿ ವಿವಾದದ ಧ್ವೇಷವೆಂದು ಬಿಂಬಿಸಿ, ಪ್ರಕರಣದ ಗಂಭೀರತೆಯನ್ನು ತಳ್ಳಿ ಹಾಕುತ್ತಿದ್ದಾರೆಂದು ರತನ್‌ರ ಕುಟುಂಬ ಆರೋಪಿಸಿದೆ. ನಮಗೆ ಯಾವುದೇ ಆಸ್ತಿ ವಿವಾದವಿಲ್ಲ. ಪ್ರಕರಣಕ್ಕೆ ಬೇರೆಯೇ ಆಯಾಮ ನೀಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ರತನ್‌ ಅವರ ತಂದೆ ಬಿನೋದ್‌ ಸಿಂಗ್‌ ಹೇಳಿದ್ದಾರೆ.

ಅದಕ್ಕೂ ಮೊದಲು, ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೊಂದು ಆಸ್ತಿವಿವಾದದ ಹಿನ್ನಲೆಯಲ್ಲಿ ನಡೆದ ಕೊಲೆ ಎಂದು ಹೇಳಿದ್ದರು. ಅದರ ಹೊರತಾಗಿ, ರತನ್‌ ಪತ್ರಕರ್ತನಾಗಿರುವುದಕ್ಕೂ, ಕೊಲೆಯಾಗುವುದಕ್ಕೂ ಯಾವ ಸಂಬಂಧ ಇಲ್ಲವೆಂದು ಅಝಮ್‌ಘರ್‌ ಪೊಲೀಸ್‌ ಡಿಐಜಿ ಸುಭಾಷ್‌ ಡುಭೆ ಹೇಳಿದ್ದರು.

ಆದರೆ ಅದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮೃತ ಪತ್ರಕರ್ತನ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದಾರೆ. ಆಸ್ತಿ ವಿವಾದಕ್ಕೆ ಕೊಲೆಯಾದವರಿಗೆ ಸರ್ಕಾರ ಪರಿಹಾರ ಧನ ಯಾಕೆ ನೀಡುತ್ತದೆ, ಸರ್ಕಾರದ ಮಾನ ರಕ್ಷಿಸಲು ಪೊಲೀಸರು ಆಸ್ತಿ ವಿವಾದದ ಕತೆ ಹೆಣೆಯುತ್ತಿದ್ದಾರೆಯೇ ಎಂಬ ಪ್ರಶ್ನೆಗಳೂ ಉದ್ಭವವಾಗಿದೆ.

ರತನ್‌ ಸಿಂಗ್‌ ಹಾಗೂ ಅವರ ತಂದೆ ಬಿನೋದ್‌ ಸಿಂಗ್‌
ರತನ್‌ ಸಿಂಗ್‌ ಹಾಗೂ ಅವರ ತಂದೆ ಬಿನೋದ್‌ ಸಿಂಗ್‌

ಯಾಕೆಂದರೆ, ಉತ್ತರ ಪ್ರದೇಶದ ಘಾಝಿಯಾಬಾದ್‌ನಲ್ಲಿ ಕಳೆದ ತಿಂಗಳಷ್ಟೇ ವಿಕ್ರಮ್‌ ಜೋಷಿ ಎಂಬ ಪತ್ರಕರ್ತನನ್ನು ಆತನ ಎರಡು ಹೆಣ್ಣುಮಕ್ಕಳ ಸಮ್ಮುಖದಲ್ಲೇ ಕೊಲೆ ಮಾಡಲಾಗಿತ್ತು. ತನ್ನಿಬ್ಬರು ಹೆಣ್ಣುಮಕ್ಕಳನ್ನು ತನ್ನ ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಬಂದ ದುಷ್ಕರ್ಮಿಗಳ ತಂಡ ವಿಕ್ರಮ್‌ ಜೋಷಿ ಅವರನ್ನು ಹತ್ಯೆಗೈದಿತ್ತು.

ವಿಕ್ರಮ್‌ ಜೋಷಿ
ವಿಕ್ರಮ್‌ ಜೋಷಿಘಾಝಿಯಾಬಾದ್‌ನಲ್ಲಿ ಕೊಲೆಯಾದ ಪತ್ರಕರ್ತ

ಒಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಅಪರಾಧ ಪ್ರಮಾಣಗಳ ಸಂಖ್ಯೆ ಏರುತ್ತಲೇ ಇದೆ. ದಲಿತರ, ಮಹಿಳೆಯರ ಮೇಲೆ ಹಲ್ಲೆ ದೌರ್ಜನ್ಯಗಳು ನಿತ್ಯ ಸಂಗತಿಯಾಗಿಬಿಟ್ಟ ಉತ್ತರಪ್ರದೇಶದಲ್ಲಿ ಇದೀಗ ಪತ್ರಕರ್ತರೂ ಭಯಬೀತಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಆದರೆ ದೇಶದಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಗಂಭೀರ ಸುದ್ದಿಯಾಗುತ್ತಿಲ್ಲ. ಕಳೆದ ಎರಡು ವಾರಗಳ ಹಿಂದೆ ದೆಹಲಿಯಲ್ಲಿ ವರದಿ ಮಾಡಲು ಹೋಗಿದ್ದ ವರದಿಗಾರರ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಮಹಿಳಾ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ್ತು. 2013-14 ರ ಬಳಿಕ ಅಭಿವ್ಯಕ್ತಿ ಸ್ವಾತಂತ್ರಕ್ಕೆ, ಪತ್ರಿಕಾ ಸ್ವಾತಂತ್ರ ಭಾರತದಲ್ಲಿ ಶಿಥಿಲಗೊಳ್ಳುತ್ತಿದೆ. ನಿರ್ಭೀತವಾಗಿ ಮಾತನಾಡುವ, ಪ್ರಶ್ನಿಸುವವರು ಭಾರತದಲ್ಲಿ ಹಲ್ಲೆ, ದೌರ್ಜನ್ಯ ಹೆಚ್ಚಾಗುತ್ತಿದೆ. ಆಳುವ ವರ್ಗವನ್ನು ಪ್ರಶ್ನಿಸಲು ಹಿಂಜರಿಯುವ ಪತ್ರಕರ್ತರಿಂದಾಗಿ ಪ್ರಾಮಾಣಿಕ ಪತ್ರಕರ್ತರು ಬದುಕುವುದು ದುಸ್ತರವಾಗಿ ಬಿಟ್ಟಿದೆ ಎನ್ನುವಂತಹ ಚರ್ಚೆಗಳು ನಡೆಯುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com