ಸ್ವಾತಂತ್ರ್ಯೋತ್ಸವದ ನಂತರ ಪ್ರಧಾನಿ ಮೋದಿ ಪೆಟ್ರೋಲ್ ರೇಟ್ ಎಷ್ಟು ಏರಿಸಿದ್ದಾರೆ?
ರಾಷ್ಟ್ರೀಯ

ಸ್ವಾತಂತ್ರ್ಯೋತ್ಸವದ ನಂತರ ಪ್ರಧಾನಿ ಮೋದಿ ಪೆಟ್ರೋಲ್ ರೇಟ್ ಎಷ್ಟು ಏರಿಸಿದ್ದಾರೆ?

ಮೋದಿ ಸರ್ಕಾರದ ಇದುವರೆಗಿನ ದರ ಏರಿಕೆಯ ದಾಖಲೆಯನ್ನು ಗಮನಿಸಿದರೆ, 2021ರಲ್ಲಿ ಪೆಟ್ರೋಲ್ ದರವು ಮೂರಂಕಿ ಮುಟ್ಟಿದರೆ ಅಂದರೆ ಶತಕ ಬಾರಿಸಿದರೆ ಅಚ್ಚರಿಯಿಲ್ಲ. ಈಗಾಗಲೇ ಹೆಚ್ಚುಕಮ್ಮಿ 85 ರುಪಾಯಿ ನೀಡುತ್ತಿರುವ ಭಾರತದ “ಸಶಕ್ತ ಗ್ರಾಹಕ”ರಿಗೆ ಇನ್ನು 15 ರುಪಾಯಿ ಹೆಚ್ಚಿಗೆ ಕೊಡಲು ಕಷ್ಟವೇ?

ರೇಣುಕಾ ಪ್ರಸಾದ್ ಹಾಡ್ಯ

ದೇಶದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಿದ್ದಾರೆ. ಅವರು ಮಾರ್ಮಿಕವಾಗಿ ಈ ಮಾತನ್ನು ಹೇಳುತ್ತಿದ್ದಾರೋ? ಅಥವಾ ಸುಳ್ಳು ಹೇಳಿ ಜನರನ್ನು ನಂಬಿಸುತ್ತಿದ್ದಾರೋ? ಎಂಬುದು ಚರ್ಚಾರ್ಹ ವಿಷಯ. ಮುಖ್ಯ ಪ್ರಶ್ನೆ ಏನೆಂದರೆ- ‘ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ’ ಎಂದು ಪ್ರಧಾನಿ ಮೋದಿ ಏಕೆ ಪದೇ ಪದೇ ಹೇಳುತ್ತಿದ್ದಾರೆ ಎಂಬುದು.

ನಮ್ಮ ಗ್ರಾಹಕರ “ಖರೀದಿ ಶಕ್ತಿ”ಯನ್ನು ಆಧರಿಸಿ ಪ್ರಧಾನಿ ಮೋದಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ಹೇಳುತ್ತಿರಬಹುದೇ? ಏಕೆಂದರೆ ನಮ್ಮ ಗ್ರಾಹಕರ “ಖರೀದಿ ಶಕ್ತಿ” ಪ್ರಬಲವಾಗಿದೆ ಎಂಬುದನ್ನು ಮೋದಿ ಅವರು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಜನರ ಖರೀದಿ ಶಕ್ತಿ ಪ್ರಬಲವಾಯಿತೆಂದರೆ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದೇ ತಾನೆ ಅರ್ಥ!?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜುಲೈ ತಿಂಗಳಲ್ಲಿ ಚಿಲ್ಲರೆ ದರ ಹಣದುಬ್ಬರವು ಶೇ.6.99ಕ್ಕೆ ಜಿಗಿದಿದೆ. ಅಂದರೆ, ಗ್ರಾಹಕರು ನೇರವಾಗಿ ಖರೀದಿಸುವ ಸರಕು, ಸೇವೆಗಳ ದರಗಳು ತೀವ್ರವಾಗಿ ಏರಿಕೆಯಾಗಿವೆ. ಈ ದರ ಏರಿಕೆಯ ನಡುವೆಯೂ ಜನರು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ ಎಂದರೆ ಜನರು ಸಂತೃಪ್ತವಾಗಿಯೇ ಇದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವಿಸಿರಲೂ ಬಹುದು.

ಅದೇ ಖುಷಿಯಲ್ಲಿ ಪ್ರಧಾನಿ ಮೋದಿ ಸರ್ಕಾರ ಮಾಡಿದ್ದೇನು ಗೊತ್ತೇ? ಸುಮಾರು 15 ದಿನಗಳ ಕಾಲ ಸ್ಥಿರವಾಗಿದ್ದ ಪೆಟ್ರೋಲ್ ದರವನ್ನು ಏರಿಕೆ ಆಗಸ್ಟ್ 15ರ ಮಧ್ಯರಾತ್ರಿಯಿಂದ ಮತ್ತೆ ಏರಿಕೆ ಮಾಡಲು ಆರಂಭಿಸಿದ್ದು. ಮೋದಿ ಸರ್ಕಾರವು ಪೆಟ್ರೋಲ್ ದರ ಏರಿಕೆ ಮಾಡಲು ವಿವಿಧ ತೆರಿಗೆಗಳನ್ನು ಹೇರುತ್ತಿರುವುದರ ಬಗ್ಗೆ ಆಗಾಗ್ಗೆ ಬೆಳಕು ಚೆಲ್ಲುತ್ತಿರುವ “ಪ್ರತಿಧ್ವನಿ” ಸ್ವಾತಂತ್ರ್ಯೋತ್ಸವದ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ದರ ಏರಿಕೆ ಮಾಡಿದ್ದನ್ನೂ ವರದಿ ಮಾಡಿತ್ತು.

ಮೋದಿ ಸರ್ಕಾರ ಪೆಟ್ರೋಲ್ ದರ ಏರಿಕೆ ಆರಂಭಿಸಿ ಈಗ ಹತ್ತು ದಿನಗಳು ಕಳೆದಿವೆ. ಈ ಹತ್ತು ದಿನಗಳಲ್ಲಿ ಪೆಟ್ರೋಲ್ ದರವನ್ನು ನಿತ್ಯವೂ 10 ರಿಂದ 20 ಪೈಸೆ ಆಜುಬಾಜಿನಲ್ಲಿ ಸತತವಾಗಿ ಏರಿಸಲಾಗಿದೆ. ಈ ರೀತಿ ಏರಿಸುವ ಹಂತದಲ್ಲಿ ಮೋದಿ ಸರ್ಕಾರವು ದಾಖಲೆಯೊಂದನ್ನು ಮಾಡಿದೆ. ಅದೆಂದರೆ ದೇಶದ ಜನರು ಈಗ ಪೆಟ್ರೋಲ್ ಗೆ ಪಾವತಿಸುತ್ತಿರುವ ದರವು ಸರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಅಂದರೆ, ಮೋದಿ ಸರ್ಕಾರವೇ ಈ ಹಿಂದೆ 2018 ಸೆಪ್ಟೆಂಬರ್ ತಿಂಗಳಲ್ಲಿ ಪೆಟ್ರೋಲ್ ದರವನ್ನು 83.84 ರುಪಾಯಿಗಳಿಗೆ (ಬೆಂಗಳೂರಿನ ದರ) ಏರಿಸಿದ್ದು ಸರ್ವಕಾಲಿಕ ಗರಿಷ್ಠ ದರವಾಗಿತ್ತು. ಈಗ ಸ್ವಾತಂತ್ರ್ಯೋತ್ಸವದ ನಂತರದಲ್ಲಿ ಸತತವಾಗಿ ಪೆಟ್ರೋಲ್ ದರ ಏರಿಸಿರುವ ಮೋದಿ ಸರ್ಕಾರವು ಹಿಂದಿನ ಸರ್ವಕಾಲಿಕ ಗರಿಷ್ಠ ದರದ ದಾಖಲೆಯನ್ನು ಮುರಿದಿದೆ. ಪ್ರಸ್ತುತ ಬೆಂಗಳೂರಿನಲ್ಲಿ (ಆಗಸ್ಟ್ 25 ರಂದು) ಪ್ರತಿ ಲೀಟರ್ ಪೆಟ್ರೋಲ್ ದರವು 84.39 ರುಪಾಯಿಗೆ ಜಿಗಿದಿದೆ. ಇದು ಮತ್ತೊಂದು ಸರ್ವಕಾಲಿಕ ಗರಿಷ್ಠ ದರವೆಂಬ ದಾಖಲೆಯಾಗಿದೆ.

ಅಷ್ಟಕ್ಕೂ ಈ ದಾಖಲೆ ಸ್ಥಿರವಾಗಿರುತ್ತದಾ? ಖಂಡಿತವಾಗಿಯೂ ಇಲ್ಲಾ. ದಾಖಲೆ ಮಾಡುವುದರಲ್ಲಿ ಪ್ರಧಾನಿ ಮೋದಿ ಸರ್ಕಾರವು ಸದಾ ಮುಂದು. ಈ ದಾಖಲೆಯನ್ನು ಮೋದಿ ಸರ್ಕಾರವೇ ಮುರಿಯಲಿದೆ. ಏಕೆಂದರೆ ಆಗಸ್ಟ್ 25ರಂದು ದಾಖಲಾಗಿರುವ 84.39 ರುಪಾಯಿ ಸರ್ವಕಾಲಿಕ ಗರಿಷ್ಠ ದರವೇ ಸ್ಥಿರವಾಗುವುದಿಲ್ಲ. ಅಥವಾ ಆಗಸ್ಟ್ 26ರಿಂದ ಪೆಟ್ರೋಲ್ ದರವನ್ನು ಮೋದಿ ಸರ್ಕಾರ ಇಳಿಸುವ ಸಾಧ್ಯತೆಯೂ ಇಲ್ಲ ಹೀಗಾಗಿ ಮೋದಿ ಸರ್ಕಾರವು ಪೆಟ್ರೋಲ್ ದರ ಏರಿಕೆಯಲ್ಲಿ ಮತ್ತೆ ಮತ್ತೆ ಹೊಸ ಹೊಸ ಸರ್ವಕಾಲಿಕ ದಾಖಲೆಯನ್ನು ಮಾಡುತ್ತಲೇ ಇರುತ್ತದೆ. ಭಾರತದ “ಸಶಕ್ತ ಗ್ರಾಹಕರು” ಈ ದಾಖಲೆಯನ್ನು ಸಂಭ್ರಮಿಸಬೇಕಷ್ಟೇ!

ಸ್ವಾತಂತ್ರ್ಯೋತ್ಸವದ ನಂತರದ ಹತ್ತು ದಿನಗಳಲ್ಲಿ ಪೆಟ್ರೋಲ್ ದರ ಏರಿದ್ದೆಷ್ಟು ಎಂಬುದರ ಅಂಕಿ ಅಂಶಗಳನ್ನು ಗಮನಿಸಿ. ಆಗಸ್ಟ್ 15ರಂದು ಪೆಟ್ರೋಲ್ ದರವು 83.11 ರುಪಾಯಿ ಇತ್ತು. ಆಗಸ್ಟ್ 15ರವರೆಗೂ ಇದೇ ದರವನ್ನು ಕಾಯ್ದುಕೊಳ್ಳಲಾಗಿತ್ತು. ಆಗಸ್ಟ್ 15ರಂದು ಪ್ರಧಾನಿ ನರೇಂದ್ರಮೋದಿ ಕೆಂಪುಕೋಟೆಯಲ್ಲಿ ನಿಂತು ದೇಶವನ್ನುದ್ದೇಶಿಸಿ ಮಾತನಾಡಿ, ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದರು. ಅಂದು ರಾತ್ರಿಯಿಂದಲೇ ಪೆಟ್ರೋಲ್ ದರ ಏರಿಕೆ ಆರಂಭವಾಯಿತು. ಈ ಹತ್ತು ದಿನಗಳ ಅವಧಿಯಲ್ಲಿ 10 ಪೈಸೆಯಿಂದ 20 ಪೈಸೆಯವರೆಗೆ ನಿತ್ಯವೂ ಏರಿಕೆ ಮಾಡಲಾಗಿದೆ. ಈ ಹತ್ತುದಿನಗಳ ಒಟ್ಟು ಏರಿಕೆಯು 1.28 ರುಪಾಯಿಗಳು. ಸರಾಸರಿ 13 ಪೈಸೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಏರಿಕೆಯ ಪ್ರಮಾಣವು ಶೇ.1.50 ರಷ್ಟಾಗಿದೆ.

ಮೋದಿ ಸರ್ಕಾರ ಇದೇ ವೇಗದಲ್ಲಿ ದರ ಏರಿಸಿಕೊಂಡು ಬಂದರೆ ಇನ್ನು ಐದು ದಿನಗಳಲ್ಲಿ ಅಂದರೆ ಆಗಸ್ಟ್ ತಿಂಗಳು ಮುಗಿಯುವುದರೊಳಗೆ ಪೆಟ್ರೋಲ್ ದರವು 85 ರುಪಾಯಿ ದಾಟುತ್ತದೆ. ಜುಲೈ- ಆಗಸ್ಟ್ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬಹುತೇಕ ಸ್ಥಿರವಾಗಿ ವಹಿವಾಟಾಗಿದೆ. ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್ ಗೆ 42-46 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿದ್ದರೆ, ಡಬ್ಲ್ಯೂಟಐ ಕ್ರೂಡ್ 40-44 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿದೆ. ಆದರೆ, ಬರುವ ದಿನಗಳಲ್ಲಿ ಕಚ್ಚಾ ತೈಲ ದರ ಏರುವ ನಿರೀಕ್ಷೆ ಇದೆ. ಬ್ರೆಂಟ್ ಕ್ರೂಡ್ 55-60 ಡಾಲರ್ ಮತ್ತು ಡಬ್ಲ್ಯೂಟಿಐ ಕ್ರೂಡ್ 50-55 ಡಾಲರ್ ಗೆ ಏರಬಹುದು. ವರ್ಷಾಂತ್ಯಕ್ಕೆ 70 ಡಾಲರ್ ಗಡಿ ದಾಟಲೂ ಬಹುದೆಂಬ ಮುನ್ನಂದಾಜು ಇದೆ.

ಈಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಸರಾಸರಿ ಹತ್ತುವರ್ಷಗಳ ಲೆಕ್ಕದಲ್ಲಿ ಕನಿಷ್ಠಮಟ್ಟದಲ್ಲಿ ವಹಿವಾಟಾಗುತ್ತಿರುವಾಗಲೇ ಮೋದಿ ಸರ್ಕಾರವು ಪೆಟ್ರೋಲ್ ದರವನ್ನು ಸರ್ವಾಕಾಲಿಕ ಗರಿಷ್ಠ ದರದಲ್ಲಿ ಮಾರಾಟ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಕಚ್ಚಾ ತೈಲ ದರ ತ್ವರಿತವಾಗಿ ಏರಿಕೆಯಾದರೆ ಪೆಟ್ರೋಲ್ ದರ ಯಾವ ಮಟ್ಟದಲ್ಲಿ ಏರಬಹುದು?

ಮೋದಿ ಸರ್ಕಾರದ ಇದುವರೆಗಿನ ದರ ಏರಿಕೆಯ ದಾಖಲೆಯನ್ನು ಗಮನಿಸಿದರೆ, 2021ರಲ್ಲಿ ಪೆಟ್ರೋಲ್ ದರವು ಮೂರಂಕಿ ಮುಟ್ಟಿದರೆ ಅಂದರೆ ಶತಕ ಬಾರಿಸಿದರೆ ಅಚ್ಚರಿಯಿಲ್ಲ. ಈಗಾಗಲೇ ಹೆಚ್ಚುಕಮ್ಮಿ 85 ರುಪಾಯಿ ನೀಡುತ್ತಿರುವ ಭಾರತದ “ಸಶಕ್ತ ಗ್ರಾಹಕ”ರಿಗೆ ಇನ್ನು 15 ರುಪಾಯಿ ಹೆಚ್ಚಿಗೆ ಕೊಡಲು ಕಷ್ಟವೇ?

ಅಂದ ಹಾಗೆ ಈ ಅವಧಿಯಲ್ಲಿ ಡಿಸೇಲ್ ದರ ಏರಿಕೆಯಾಗಿಲ್ಲ. ಸ್ವಾತಂತ್ರ್ಯೋತ್ಸವದ ದಿನದಂದು ಇದ್ದಷ್ಟೇ ಇದೆ. ಡಿಸೇಲ್ ಗ್ರಾಹಕರ ಮೇಲೆ ಮೋದಿ ಸರ್ಕಾರ ಕರುಣೆ ತೋರಿದೆಯೇ? ಖಂಡಿತಾ ಇಲ್ಲಾ. ಈ ಮೊದಲೇ ಡಿಸೇಲ್ ದರವನ್ನು ಗರಿಷ್ಠ ಮಟ್ಟಕ್ಕೆ ಏರಿಸಲಾಗಿದೆ. ಅದು ಈಗಾಗಲೇ ಸರ್ವಕಾಲಿಕ ಗರಿಷ್ಠ ಮಟ್ಟದಲ್ಲೇ ಇದೆ. ಈ ಹಿಂದಿನ ಗರಿಷ್ಠ ಮಟ್ಟವು 76.16 ರುಪಾಯಿಗಳಾಗಿತ್ತು. ಆದರೆ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಪೆಟ್ರೋಲ್ ದರ ಸ್ಥಿರವಾಗಿದ್ದಾಗಲೂ ಡಿಸೇಲ್ ದರ ಏರಿಕೆಯಾಗಿದ್ದು 77.88 ರುಪಾಯಿಗೆ ಜಿಗಿದು ಸ್ಥಿರವಾಗಿದೆ. ಅಂದರೆ, ಡಿಸೇಲ್ ದರ ಕೂಡಾ ಸರ್ವಕಾಲಿಕ ಗರಿಷ್ಠ ಮಟ್ಟದಲ್ಲೇ ಮಾರಾಟವಾಗುತ್ತಿದೆ.

ಇದೆಲ್ಲಾ ಓದಿದ ನಂತರ “ವಾಹ್ಹ್ ಮೋದಿಜಿ ವಾಹ್ಹ್” ಎಂಬ ಮಾತು ನಿಮಗರಿವಿಲ್ಲದಂತೆ ನಿಮ್ಮ ಬಾಯಿಂದ ಹೊರಹೊಮ್ಮಿದರೆ ಅದಕ್ಕೆ ನಾವು ಜವಾಬ್ದಾರರಲ್ಲಾ!!

Click here to follow us on Facebook , Twitter, YouTube, Telegram

Pratidhvani
www.pratidhvani.com