ಅದಾನಿಗೆ ಏರ್‌ಪೋರ್ಟ್ ಗುತ್ತಿಗೆ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
ರಾಷ್ಟ್ರೀಯ

ಅದಾನಿಗೆ ಏರ್‌ಪೋರ್ಟ್ ಗುತ್ತಿಗೆ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ರಾಜ್ಯದ ವಿರೋಧವನ್ನು ನಿರ್ಲಕ್ಷಿಸಿ ಖಾಸಗಿ ಘಟಕಕ್ಕೆ ವಿಮಾನ ನಿಲ್ದಾಣವನ್ನು ಹಸ್ತಾಂತರಿಸಲಾಗಿದೆ. ಕೇಂದ್ರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇರಳ ವಿಧಾನಸಭೆಯು ಸರ್ವಾನುಮತದಿಂದ ಒತ್ತಾಯಿಸುತ್ತದೆ

ಪ್ರತಿಧ್ವನಿ ವರದಿ

ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ಕೇರಳ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.

ಅದಾನಿ ಗ್ರೂಪ್‌ಗೆ ವಿಮಾನ ನಿಲ್ದಾಣ ಗುತ್ತಿಗೆ ನೀಡುವುದರ ವಿರುದ್ಧ ಕೇರಳ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸುತ್ತಾ ಕೇಂದ್ರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವು ಬಹುಮತದ ಪಾಲನ್ನು ಹೊಂದಿರುವ ವಿಶೇಷ ಉದ್ದೇಶದ ವಾಹನವಾಗಿ ನಡೆಸಲು ಅವಕಾಶ ನೀಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಗ್ರಹಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಕಳೆದ ಎರಡು ವರ್ಷಗಳಿಂದ ರಾಜ್ಯವು ಈ ಕ್ರಮವನ್ನು ವಿರೋಧಿಸುತ್ತಿದೆ. ತಾನು ಪ್ರಧಾನಿ ನರೇಂದ್ರ ಮೋದಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ರಾಜ್ಯದ ವಿರೋಧವನ್ನು ನಿರ್ಲಕ್ಷಿಸಿ ಖಾಸಗಿ ಘಟಕಕ್ಕೆ ವಿಮಾನ ನಿಲ್ದಾಣವನ್ನು ಹಸ್ತಾಂತರಿಸಲಾಗಿದೆ. ಕೇಂದ್ರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇರಳ ವಿಧಾನಸಭೆಯು ಸರ್ವಾನುಮತದಿಂದ ಒತ್ತಾಯಿಸುತ್ತದೆ, ”ಎಂದು ವಿಜಯನ್‌ ಹೇಳಿದ್ದಾರೆ.

ಕಳೆದ ವಾರ ಈ ತೀರ್ಪನ್ನು ತಡೆಹಿಡಿಯಲು ಹೈಕೋರ್ಟ್‌ ಮೊರೆ ಹೋದ ಕೇರಳ ಸರ್ಕಾರ, ಈ ನಿರ್ಧಾರವನ್ನು ವಿರೋಧಿಸಲು ಸರ್ವಪಕ್ಷ ಸಭೆಯನ್ನು ಕರೆದಿತ್ತು. ಆದರೆ‌, ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತ್ರ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ, ಖಾಸಗಿ ಕಂಪೆನಿಗಳಿಗೆ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿ ಕೊಡುವುದರಿಂದ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಹೇಳಿದ್ದರು.

ವಿಧಾನ ಸಭೆಯಲ್ಲಿ ನಿರ್ಣಯವನ್ನು ಬೆಂಬಲಿಸಿರುವ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ, ಅದೇ ವೇಳೆ ಆಡಳಿತ ಪಕ್ಷವನನ್ನೂ ಟೀಕಿಸಿದ್ದಾರೆ. ಹರಾಜು ಪ್ರಕ್ರಿಯೆಯ ವೇಳೆ ಅದಾನಿ ಗ್ರೂಪಿನ ಅಂಗ ಸಂಸ್ಥೆಯನ್ನೇ ಕಾನೂನು ಸಲಹಾ ಏಜನ್ಸಿಯಾಗಿ ನೇಮಿಸಲಾಗಿದ್ದು, ಇದೊಂದು ಷಡ್ಯಂತ್ರ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, ರಾಜ್ಯ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್, ಕಾನೂನು ಏಜೆನ್ಸಿಯ ಹಿನ್ನೆಲೆ ಬಗ್ಗೆ ಸರ್ಕಾರಕ್ಕೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ..

"ಸರ್ಕಾರವು ಈ ಗಂಭೀರ ಲೋಪವನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ವಿಮಾನ ನಿಲ್ದಾಣದಲ್ಲಿ ಅದಾನಿ ಸಮೂಹದ ಸ್ವಾಧೀನವನ್ನು ವಿರೋಧಿಸಿರುವ ಸರ್ಕಾರ, ಅದೇ ಅದಾನಿ ಗ್ರೂಪಿನ ಅಂಗ ಸಂಸ್ಥೆಯನ್ನು ಕಾನೂನು ಸಲಹಾ ಮಂಡಳಿಯಾಗಿ ನಿಯೋಜಿಸಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವುದನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದೆ ಹಾಗೂ ಅನೇಕ ಕಾನೂನು ಹೋರಾಟಗಳನ್ನು ನಡೆಸಿದೆ ಆದರೆ ನ್ಯಾಯಾಲಯವು ಇದರಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ, ಇದು ನೀತಿ ನಿರ್ಧಾರದ ಭಾಗವಾಗಿದೆ ಹಾಗಾಗಿ ತಾನು ಹಸ್ತಕ್ಷೇಪ ಮಾಡುವುದಿಲ್ಲವೆಂದೂ ಹೇಳಿದೆ.

2019 ರ ಫೆಬ್ರವರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (KSIDC) ವಿಮಾನ ನಿಲ್ದಾಣಕ್ಕಾಗಿ ಮುಕ್ತ ಹರಾಜಿನಲ್ಲಿ ಭಾಗವಹಿಸಿತ್ತು ಆದರೆ ಅದಾನಿ ಎಂಟರ್‌ಪ್ರೈಸಸ್ ಅತ್ಯಧಿಕ ಮೊತ್ತವನ್ನು ಉಲ್ಲೇಖಿಸಿ ಅದನ್ನು ಗೆದ್ದುಕೊಂಡಿತ್ತು. ಹರಾಜಿನಲ್ಲಿ ಕಳೆದುಕೊಂಡ ನಂತರ ಈ ಕ್ರಮವನ್ನು ವಿರೋಧಿಸುವುದು ಸರಿಯಲ್ಲ ಎಂದು ರಾಜ್ಯದ ಕ್ರಮವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com