ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿಗೆ ಸೇರ್ಪಡೆ
ರಾಷ್ಟ್ರೀಯ

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿಗೆ ಸೇರ್ಪಡೆ

ಅಣ್ಣಾಮಲೈ ಬಿಜೆಪಿ ಸೇರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಸಿಬಿಸಿ ಚರ್ಚೆ ನಡೆಯುತ್ತಿದ್ದು, ಬಿಜೆಪಿಯ ನಾಯಕರು ಅಣ್ಣಾಮಲೈ ಅವರಿಗೆ ಸ್ವಾಗತ ಕೋರಿದ್ದಾರೆ.

ಪ್ರತಿಧ್ವನಿ ವರದಿ

ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ದಕ್ಷ ಅಧಿಕಾರಿ, ʼಸಿಂಗಂʼ ಎಂದೇ ಪ್ರಖ್ಯಾತರಾಗಿದ್ದ ಕುಪ್ಪುಸ್ವಾಮಿ ಅಣ್ಣಾಮಲೈ ಅವರು, ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೆ ಬಿಜೆಪಿ ಸೇರಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಾಗಿ ಹೇಳಿಕೆ ನೀಡಿರುವ ಅಣ್ಣಾಮಲೈ, “ನಾನು ʼನೈಸರ್ಗಿಕʼವಾಗಿ ಬಿಜೆಪಿಯೊಂದಿಗೆ ಬೆರೆಯುತ್ತೇನೆ. ಬಿಜೆಪಿಯ ವಿಶಾಲವಾದ ದೂರದೃಷ್ಟಿತ್ವ ನನ್ನ ಆಲೋಚನೆಗಳೊಂದಿಗೆ ಬೆಸೆದಿವೆ. ಪಕ್ಷದೊಂದಿಗೆ ಬೆರೆತು ಬಿಜೆಪಿಯನ್ನು ತಮಿಳುನಾಡಿನಲ್ಲಿ ಇನ್ನಷ್ಟು ಬೆಳೆಸುವ ಅವಕಾಶ ನನಗೆ ಒದಗಿ ಬಂದಿದೆ,” ಎಂದು ಹೇಳಿದ್ದಾರೆ.

“ತಮಿಳುನಾಡುನಲ್ಲಿರುವ ದ್ರಾವಿಡ ರಾಜಕೀಯ ಪಕ್ಷಗಳು, ಆಯಾ ಪಕ್ಷಗಳ ನಿಜವಾದ ಸಿದ್ದಾಂತಗಳನ್ನು ಮರೆತಿವೆ. ಅಣ್ಣಾದೊರೈ, ಪೆರಿಯಾರ್‌ ಮತ್ತು ಎಂಜಿಆರ್‌ ಅವರ ಸಿದ್ದಾಂತಗಳು ಈಗಿನ ರಾಝಕೀಯ ನಾಯಕರ ಸಿದ್ದಾಂತಗಳಿಗಿಂತ ಭಿನ್ನವಾಗಿದ್ದವು,” ಎಂದು ಎಂಜಿಆರ್‌ ನಂತರದ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ರಾಜಕೀಯ ನಾಯಕರ ಮೇಲೆ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ತಮಿಳುನಾಡಿನ ಚೆನ್ನೈ ಮತ್ತು ಕೊಯಂಬತ್ತೂರು ಪ್ರದೇಶಗಳಲ್ಲಿ ಬಿಜೆಪಿ ಬಲಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆಂದು ಹೇಳಲಾಗಿದೆ.

ಅಣ್ಣಾಮಲೈ ಬಿಜೆಪಿ ಸೇರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಸಿಬಿಸಿ ಚರ್ಚೆ ನಡೆಯುತ್ತಿದ್ದು, ಬಿಜೆಪಿಯ ನಾಯಕರು ಅಣ್ಣಾಮಲೈ ಅವರಿಗೆ ಸ್ವಾಗತ ಕೋರಿದ್ದಾರೆ. ತಮಿಳು ಗುಣಲಕ್ಷಣ ಹೊಂದಿರುವ ಹಿಂದುತ್ವವೇ? ಎಂಬ ಪ್ರಶ್ನೆಯನ್ನೂ ಕೆಲವರು ಮಾಡಿದ್ದಾರೆ.

ಇನ್ನು ಕೆಲವರು, ಅಣ್ಣಾಮಲೈ ರಾಜಕೀಯಕ್ಕೆ ಸೇರದೇ ಪೊಲೀಸ್‌ ಇಲಾಖೆಯಿಂದಲೇ ಜನಸೇವೆ ಮಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರುವುದರಿಂದ ಇನ್ನು ಮುಂದೆ ಸುಳ್ಳು ಹೇಳುವುದನ್ನು ಕಲಿಯಬೇಕಿದೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com