ಅಣ್ಣಾಮಲೈ ಬಿಜೆಪಿಗೆ: ದ್ರಾವಿಡ ಆಂದೋಲನದ ಮಣ್ಣಿನಲ್ಲಿ ಕಮಲ ಅರಳುವುದೇ?
234 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಕನಿಷ್ಟ 25 ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ಭಾನುವಾರ ತಮಿಳುನಾಡು ಬಿಜೆಪಿ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದು, ಈಗಿನಿಂದಲೇ ಕಠಿಣ ಪರ ...

ಕರ್ನಾಟಕದಲ್ಲಿ ಐಎಎಸ್ ಅಧಿಕಾರಿ ಆಗಿದ್ದ ಅಣ್ಣಾಮಲೈ, ರಾಜೀನಾಮೆ ನೀಡುವ ಉದ್ದೇಶ ಇಂದು ಬಹಿರಂಗ ಆಗಿದೆ. ಇದಕ್ಕೂ ಮೊದಲು ರಾಜಕೀಯ ಸೇರುವ ಇಚ್ಛೆ ಇದೆ ಎಂದಿದ್ದ ಅಣ್ಣಾಮಲೈ ಯಾವುದೇ ನಿರ್ದಿಷ್ಟ ಪಕ್ಷ ಸೇರುವ ಬಗ್ಗೆ ಮಾತನಾಡಿರಲಿಲ್ಲ. ಆದರೆ ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆ ಆಗಿದ್ದಾರೆ. ಬಿಜೆಪಿ ಹಿರಿಯ ನಾಯಕ ಮುರಳೀಧರನ್ ಸಮ್ಮುಖದಲ್ಲಿ ಕಮಲ ಬಾವುಟ ಹಿಡಿದು ರಾಜಕೀಯಕ್ಕೆ ಧುಮುಕಿದ್ದಾರೆ. ಖಡಕ್ ಐಪಿಎಸ್ ಅಧಿಕಾರಿ ಹಾಗೂ ಜನಪರ, ಜನಸ್ನೇಹಿ ಅಧಿಕಾರಿ ಎನ್ನುವ ಹೆಗ್ಗಳಿಕೆಯ ಆಧಾರದಲ್ಲೇ ರಾಜಕಾರಣದತ್ತ ಮುಖ ಮಾಡಿರುವ ಅಣ್ಣಾಮಲೈ ತಮಿಳುನಾಡಿನ ಜನ ಉಘೇ ಎನ್ನುತ್ತಾರೆಯೇ ಎಂಬ ಕುತೂಹಲ ಮೂಡಿಸಿದೆ.

ತಮಿಳುನಾಡಿನ ಕರೂರು ಮೂಲದ ಅಣ್ಣಾಮಲೈ, IIM ನಲ್ಲಿ ಎಂಬಿಎ ಮಾಡಿರುವ ಅಣ್ಣಾಮಲೈ 2011 ರ ಬ್ಯಾಚ್ ನಲ್ಲಿ ಕರ್ನಾಟಕ ಕೇಡಾರ್ ನಲ್ಲಿ ಪೊಲೀಸ್ ಅಧಿಕಾರಿ ಆಗಿ ಆಯ್ಕೆಯಾಗಿದ್ದರು. ಕಾರ್ಕಳದ ಎಎಸ್ಪಿ, ಚಿಕ್ಕಮಗಳೂರು, ಉಡುಪಿ ಎಸ್ ಪಿ ಆಗಿ ಕರ್ತವ್ಯ ನಿರ್ವಹಣೆ ಮಾಡಿದ ಅಣ್ಣಾಮಲೈ, ಬೆಂಗಳೂರಿನ ಡಿಸಿಪಿ ಆಗಿಯೂ ಕರ್ತವ್ಯ ನಿರ್ವಹಣೆ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು. 2019 ರ ತನಕ ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ಜನಮಾನಸದಲ್ಲಿ ಉತ್ತಮ ಅಧಿಕಾರಿ ಎನಿಸಿಕೊಂಡಿದ್ದ ಅಣ್ಣಾಮಲೈ, ಇದೀಗ ತಮಿಳುನಾಡಿನ ರಾಜಕೀಯಕ್ಕೆ ಎಂಟ್ರಿ ಆಗಿದ್ದಾರೆ. 2021ಕ್ಕೆ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಹುಟ್ಟೂರಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಅಣ್ಣಾಮಲೈ ಪ್ರಯತ್ನ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ಜೊತೆ ರಾಜಕೀಯ ಮಾಡುವ ಬದಲು ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರೆ, ಅಣ್ಣಾಮಲೈ ರಾಜಕೀಯ ಜೀವನ ಉತ್ತುಂಗಕ್ಕೆ ಏರಲು ಸಹಕಾರಿ ಆಗುತ್ತಿತ್ತು. ಆದರೆ ಅಣ್ಣಾಮಲೈ ಕಮಲಕ್ಕೆ ಯಾವುದೇ ಬೆಂಬಲ ಇಲ್ಲದೆ ಇರುವ ತಮಿಳುನಾಡಿನಲ್ಲಿ ಪಕ್ಷವನ್ನು ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ತಮಿಳುನಾಡಿನ ಬಿಜೆಪಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ತಮಿಳುನಾಡಿನಲ್ಲಿ ಇಲ್ಲೀವರೆಗೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿರುವ ಕಮಲ ಪಕ್ಷಕ್ಕೆ ಅಣ್ಣಾಮಲೈ ಯಾವ ರೀತಿ ಸಹಾಯ ಮಾಡಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

ಕಮಲ ಅರಳಿಸುತ್ತಾರಾ ಅಣ್ಣಾಮಲೈ..?

234 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಕನಿಷ್ಟ 25 ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ಭಾನುವಾರ ತಮಿಳುನಾಡು ಬಿಜೆಪಿ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದು, ಈಗಿನಿಂದಲೇ ಕಠಿಣ ಪರಿಶ್ರಮ ಹಾಕುವಂತೆ ಸೂಚನೆ ಕೊಡಲಾಗಿದೆ. ಜೊತೆಗೆ ಯಾವ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗುತ್ತಾರೋ ಆ ಜಿಲ್ಲೆಗೆ ಇನ್ನೋವಾ ಕಾರ್ ಕೊಡುಗೆಯಾಗಿ ನೀಡಲಾಗುವುದು ಎನ್ನುವ ಆಮೀಷ ಒಡ್ಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಅಣ್ಣಾಮಲೈ ಕರ್ನಾಟಕದಲ್ಲಿ ಗಳಿಸಿರುವ ಪ್ರಚಾರ ತಮಿಳುನಾಡಿನಲ್ಲಿ ಗೆಲುವು ತಂದು ಕೊಡುತ್ತಾ ಎನ್ನುವ ಪ್ರಶ್ನೆಯನ್ನು ಮೂಡಿಸಿದೆ.

ಸ್ವಾತಂತ್ರ್ಯ ಭಾರತದಲ್ಲಿ ರಾಜಕೀಯ ಎಂದರೆ ಕಾಂಗ್ರೆಸ್ ಎನ್ನುವ ಕಾಲವೊಂದಿತ್ತು. ಅದೇ ರೀತಿಯಲ್ಲಿ ತಮಿಳುನಾಡಿನಲ್ಲೂ ಮೊದಲ 20 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿದಿತ್ತು. ಇಡೀ ದೇಶದಲ್ಲಿ ಕಾಂಗ್ರೆಸ್ ಅಬ್ಬರ ಇದ್ದಾಗಲೂ, ಇಂದಿರಾ ಗಾಂಧಿ ಆಡಳಿತಕ್ಕೆ ದೇಶದ ಕೋಟ್ಯಂತರ ಜನರು ಉಘೇ ಎನ್ನುವ ಕಾಲದಲ್ಲೇ ತಮಿಳುನಾಡಿನಲ್ಲಿ ರಾಜಕೀಯ ಧೃವೀಕರಣಗೊಂಡಿತ್ತು. ತಮಿಳುನಾಡಿನ ಜನರು ದ್ರಾವಿಡಿಯನ್ ಪಕ್ಷಗಳಿಗೆ ಮಣೆ ಹಾಕಿದರು. ಅಣ್ಣಾ ಡಿಎಂಕೆ ಹಾಗೂ ಡಿಎಂಕೆ ಪಕ್ಷಗಳಿಗೆ ಜನರು ಅಧಿಕಾರ ಕೊಡುತ್ತಾ ಸಾಗಿದರು. ಕೇವಲ ಎರಡೇ ಪಕ್ಷಗಳಿಗೆ ಮಣೆ ಹಾಕಿದ ತಮಿಳರು, ಒಮ್ಮೆ ಡಿಎಂಕೆ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಮತ್ತೊಮ್ಮೆ ಎಐಡಿಎಂಕೆ ಅಧಿಕಾರ ಕೊಡುವುದನ್ನು ಯಥಾವತ್ತಾಗಿ ಮಾಡುತ್ತಾ ಬಂದಿದ್ದಾರೆ..

ತಮಿಳುನಾಡು ಜನರು ಎಷ್ಟೊಂದು ಭಾಷಾ ಪ್ರೇಮಿಗಳು ಹಾಗೂ ಭಾಷಾ ಅಸ್ಮಿತೆಯನ್ನು ಪ್ರಬಲವಾಗಿ ಪ್ರತಿಪಾದಿಸಿಕೊಂಡು ಬಂದವರು. ಅದೇ ಕಾರಣಕ್ಕೆ ಸ್ಥಳೀಯ ಪಕ್ಷಗಳಿಗೆ ಮಾನ್ಯತೆ ಕೊಟ್ಟು, ನಮ್ಮವರಿಗೇ ಅಧಿಕಾರ ಕೊಡಬೇಕು ಎನ್ನುವ ಕಾರಣಕ್ಕೆ ತಮಿಳುನಾಡಿನಲ್ಲಿ ಸ್ಥಳೀಯ ಪಕ್ಷಗಳಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಸ್ಥಳೀಯ ಪಕ್ಷಕ್ಕೆ ಮನ್ನಣೆ ಕೊಟ್ಟಿವೆ.

ಅಣ್ಣಾ ಮಲೈ ಪಕ್ಷ ಸೇರ್ಪಡೆ ಕಾರ್ಯಕ್ರಮ ದೆಹಲಿಯಲ್ಲಿ‌ ನಡೆದರೂ ರಾಷ್ಟ್ರೀಯ ಬಿಜೆಪಿ ಪ್ರಮುಖ ನಾಯಕರು ಭಾಗಿಯಾಗಿರಲಿಲ್ಲ. ಕೇವಲ ತಮಿಳುನಾಡು ಬಿಜೆಪಿ‌ ನಾಯಕರಷ್ಟೇ ಭಾಗಿಯಾಗಿದ್ದರು. ಬಳಿಕ ಜೆಪಿ ನಡ್ಡಾ ಅವರನ್ನು ಅಣ್ಣಾಮಲೈ ಅವರ ನಿವಾಸದಲ್ಲೇ ಭೇಟಿ ಮಾಡಿ, ಮತ್ತೊಮ್ಮೆ ಬಿಜೆಪಿ ಶಾಲು ಹೊದಿಸಿಕೊಂಡರು. ಹಿಂದಿ ಹೇರಿಕೆ ಬಗ್ಗೆ ತಮಿಳುನಾಡಿನಲ್ಲಿ ಬಿಜೆಪಿ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ, ಹಾಗಾಗಿ ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅಣ್ಣಾಮಲೈ, ತಮಿಳಿನಲ್ಲಿ ಮಾತನಾಡುವ ಮೂಲಕ ತಮಿಳಿಗರ ಮನಸೆಳೆಯುವ ಕೆಲಸ ಮಾಡಿದ್ದಾರೆ. ಆದರೆ ದ್ರಾವಿಡಿಯನ್‌ ಆಂದೋಲನದ ತಮಿಳುನಾಡಿನ ಮಣ್ಣಿನಲ್ಲಿ ಅಣ್ಣಾಮಲೈ ಕಮಲ ಅರಳಿಸುವುದು ಅಷ್ಟು ಸುಲಭವಿಲ್ಲ. ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಸಿಂಗಂಗೆ ತಮಿಳರು ಮಣೆ ಹಾಕುತ್ತಾರೆಯೇ ಕಾದು ನೋಡಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com