ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ
ರಾಷ್ಟ್ರೀಯ

ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ

ಕಾಂಗ್ರೆಸ್‌ನಲ್ಲಿ ಕೇವಲ ಗಾಂಧಿ ಪರಿವಾರಕ್ಕಷ್ಟೇ ಅಧಿಕಾರ ಸೀಮಿತ ಎಂದು ಪ್ರತೀ ಬಾರಿಯೂ ಟೀಕೆ ಮಾಡುತ್ತಿದ್ದ ಬಿಜೆಪಿಗೆ ತಕ್ಕ ಉತ್ತರವನ್ನು ನೀಡುವ ಅವಕಾಶ ಕಾಂಗ್ರೆಸ್‌ ಪಕ್ಷಕ್ಕಿತ್ತು. ಆದರೆ, ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳಿಂದ ಆ ಅವಕಾಶವನ್ನು ಮತ್ತೆ ಕಾಂಗ್ರೆಸ್‌ ಪಕ್ಷ ಕೈಚೆಲ್ಲಿದೆ.

ಲಾಯ್ಡ್‌ ಡಾಯಸ್

ಸತತ ಏಳು ಗಂಟೆಗಳ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯ ನಂತರವೂ, ಕಾಂಗ್ರೆಸ್‌ ನಾಯಕರು ಗಾಂಧಿ ಕುಟುಂಬವನ್ನು ಹೊರತುಪಡಿಸಿ ಇತರ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡುವಲ್ಲಿ ವಿಫಲರಾಗಿದ್ದಾರೆ. ಭಾರತೀಯ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರೇ ಮುಂದುವರೆಯಲಿದ್ದಾರೆ. ಮುಂದಿನ ಆರು ತಿಂಗಳ ಒಳಗಾಗಿ ಪೂರ್ಣಾವಧಿ ಅಧ್ಯಕ್ಷರ ನೇಮಕ ಮಾಡುವ ತೀರ್ಮಾನವನ್ನು ಇಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಕಾಂಗ್ರೆಸ್‌ ನಾಯಕರ ಪತ್ರದ ಕುರಿತಾಗಿ ಸಭೆಯ ಕೊನೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, “ನನ್ನ ಪಕ್ಷದ ಯಾವುದೇ ನಾಯಕರ ಕುರಿತಾಗಿ ನನಗೆ ತಪ್ಪಾದ ಭಾವನೆಗಳಿಲ್ಲ. ಇತ್ತೀಚಿನ ಬೆಳವಣಿಗೆಗಳು ನನಗೆ ನೋವುಂಟು ಮಾಡಿದ್ದರು, ಅವರೆಲ್ಲ ನನ್ನ ಸಹೋದ್ಯೋಗಿಗಳು. ಆದದ್ದು ಆಯಿತು, ಇನ್ನು ಮುಂದೆ ಒಗ್ಗಟ್ಟಿನಿಂದ ಕೆಲಸ ಮಾಡೋಣ,” ಎಂದು ಹೇಳಿದ್ದಾರೆ.

ಕಾರ್ಯಕಾರಿಣಿ ಸಭೆಗೆ ಒಂದು ದಿನದ ಹಿಂದೆ, ನೂರಕ್ಕೂ ಹೆಚ್ಚು ಕಾಂಗ್ರೆಸ್‌ನ ಹಿರಿಯ ನಾಯಕರ ಸಹಿ ಹೊಂದಿದ್ದ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸಿಕೊಡಲಾಗಿತ್ತು. ಆ ಪತ್ರದಲ್ಲಿ ಕಾಂಗ್ರೆಸ್‌ಗೆ ಪೂರ್ಣಾವಧಿಯ, ಸಂಘಟಿತ ನಾಯಕತ್ವ ಗುಣ ಹೊಂದಿರುವಂತಹ ಮತ್ತು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಂತಹ ಅಧ್ಯಕ್ಷರ ಅಗತ್ಯತೆ ಪಕ್ಷಕ್ಕಿದೆ ಎಂದು ಹೇಳಿದ್ದರು.

ಟೀಕೆಗಳಿಗೆ ಉತ್ತರ ನೀಡುವ ಅವಕಾಶ ಕಳೆದುಕೊಂಡಿತೇ ಕಾಂಗ್ರೆಸ್‌?

ಕಾಂಗ್ರೆಸ್‌ನಲ್ಲಿ ಕೇವಲ ಗಾಂಧಿ ಪರಿವಾರಕ್ಕಷ್ಟೇ ಅಧಿಕಾರ ಸೀಮಿತ ಎಂದು ಪ್ರತೀ ಬಾರಿಯೂ ಟೀಕೆ ಮಾಡುತ್ತಿದ್ದ ಬಿಜೆಪಿಗೆ ತಕ್ಕ ಉತ್ತರವನ್ನು ನೀಡುವ ಅವಕಾಶ ಕಾಂಗ್ರೆಸ್‌ ಪಕ್ಷಕ್ಕಿತ್ತು. ಆದರೆ, ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳಿಂದ ಆ ಅವಕಾಶವನ್ನು ಮತ್ತೆ ಕಾಂಗ್ರೆಸ್‌ ಪಕ್ಷ ಕೈಚೆಲ್ಲಿದೆ. ಇದರೊಂದಿಗೆ ಮತ್ತೆ ಬಿಜೆಪಿಯ ಟೀಕೆಗಳಿಗೆ ಆಹಾರವಾಗುವ ಸಂದರ್ಭವನ್ನು ತಾನೇ ಸೃಷ್ಟಿಸಿಕೊಂಡಿದೆ.

ರಾಜಕೀಯದಲ್ಲಿ Nepotism ಅನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸುತ್ತಿರುವ ಪಕ್ಷವೆಂದರೆ ಅದು ಕಾಂಗ್ರೆಸ್‌ ಎಂದು ಪ್ರತೀ ಬಾರಿಯೂ ಬಿಜೆಪಿ ಟೀಕೆ ಮಾಡುತ್ತಲೇ ಇತ್ತು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ, ಆ ಅಪವಾದವನ್ನು ಕಳಚುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಿತ್ತು. ಈಗ ಸಂಪೂರ್ಣವಾಗಿ ಬಿಜೆಪಯ ಟೀಕೆಗಳನ್ನು ಮೆಟ್ಟಿ ನಿಲ್ಲುವ ಸಂದರ್ಭ ಒದಗಿ ಬಂದಿತ್ತಾದರೂ ಅದನ್ನು ಉಪಯೋಗಿಸಿಕೊಳ್ಳದೇ, ಕೇವಲ ತನ್ನ ಆಂತರಿಕ ರಾಜಕೀಯದ ಒಳಸುಳಿಗೆ ಈ ಬಾರಿಯ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಸಾಕ್ಷಿಯಾಗಿ ನಿಂತಿದೆ.

ಒಂದು ವೇಳೆ ಗಾಂಧಿ ಕುಟುಂಬದ ಹೊರತಾಗಿ ಬೇರೊಬ್ಬರು ಅಧ್ಯಕ್ಷರಾಗುತ್ತಿದ್ದರೂ, ಅವರು ಗಾಂಧಿ ಕುಟುಂಬದ ಮಾತುಗಳನ್ನು ಮೀರುವಂತಹ ಕೆಲಸ ಮಾಡುವ ಸಂಭವಗಳು ಇಲ್ಲವೆನ್ನಬಹುದು. ಏಕೆಂದರೆ, ಕಾಂಗ್ರೆಸ್‌ನ ಎಂತಹ ಘಟಾನುಘಟಿ ನಾಯಕರಿದ್ದರೂ, ಗಾಂಧಿ ಕುಟುಂಬಕ್ಕೆ ಈ ಹಿಂದಿನಿಂದಲೂ ತಲೆ ಬಾಗುತ್ತಲೇ ಬಂದಿದ್ದಾರೆ. ಹಾಗಾಗಿ, ಗಾಂಧಿ ಕುಟುಂಬದವರನ್ನು ಹೊರತು ಪಡಿಸಿ ಇನ್ನೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದರೂ ಯಾವುದೇ ತೊಂದರೆ ಇರುತ್ತಿರಲಿಲ್ಲ. ಮೇಲಾಗಿ ಎಲ್ಲಾ ಟೀಕೆಗಳಿಗೆ ಒಂದೇ ಬಾರಿ ಉತ್ತರ ಕೊಡುವ ಅವಕಾಶವಿತ್ತು.

Click here to follow us on Facebook , Twitter, YouTube, Telegram

Pratidhvani
www.pratidhvani.com