ಲೋಕಸಭಾ ಚುನಾವಣೆಗೆ ಮುನ್ನ ಮತಯಂತ್ರ ತಪಾಸಣೆಯಲ್ಲೇ ಗಂಭೀರ ದೋಷ!
ರಾಷ್ಟ್ರೀಯ

ಲೋಕಸಭಾ ಚುನಾವಣೆಗೆ ಮುನ್ನ ಮತಯಂತ್ರ ತಪಾಸಣೆಯಲ್ಲೇ ಗಂಭೀರ ದೋಷ!

ಹಂಗಾಮಿ ನೌಕರರ ಮೂಲಕ ಸೂಕ್ಷ್ಮ ಮಾಹಿತಿಗಳು ದೇಶದ ಚುನಾವಣೆಯನ್ನು ತಮ್ಮ ಮೂಗಿನ ನೇರಕ್ಕೆ ತಿರುಚಲು ಹವಣಿಸುತ್ತಿರುವವರ ಕೈಸೇರಿದರೆ ಭವಿಷ್ಯದ ಚುನಾವಣೆಗಳ ಮೇಲೆ ಜನ ನಂಬಿಕೆ ಇಡುವುದು ಹೇಗೆ? ಎಂಬ ಗಂಭೀರ ಪ್ರಶ್ನೆಗಳಿವೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ)ಗಳ ಪ್ರವೇಶದೊಂದಿಗೇ ಆರಂಭವಾದ ಅವುಗಳ ಸಾಚಾತನದ ಮತ್ತು ನಿರ್ವಹಣೆಯಲ್ಲಿನ ಪಾರದರ್ಶಕತೆಯ ಕುರಿತ ವಿವಾದ ದಶಕಗಳ ಬಳಿಕವೂ ಮುಂದುವರಿದಿದೆ. ಚುನಾವಣಾ ಆಯೋಗದ ಭರವಸೆ ಮತ್ತು ದೇಶದ ಸರ್ವೋಚ್ಛ ನ್ಯಾಯಾಲಯದ ಕಣ್ಗಾವಲಿನ ಹೊರತಾಗಿಯೂ ಇವಿಎಂಗಳ ಮೇಲೆ ಭಾರತೀಯ ಮತದಾರನ ವಿಶ್ವಾಸ ಖಚಿತಪಡಿಸುವಲ್ಲಿ ವ್ಯವಸ್ಥೆ ಪದೇಪದೆ ವಿಫಲವಾಗುತ್ತಲೇ ಇದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಶಂಕೆ ಮತ್ತು ಅನುಮಾನಗಳ ರಾಷ್ಟ್ರೀಯ ಪರಂಪರೆಯ ಸಾಲಿಗೆ ಇದೀಗ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಕಳೆದ ಲೋಕಸಭಾ ಚುನಾವಣೆ ಪೂರ್ವತಯಾರಿಯ ವೇಳೆ ಇದೇ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ನಿರ್ವಹಣೆ ಮತ್ತು ತಪಾಸಣೆ ನಡೆಸಿದ್ದ ಎಂಜಿನಿಯರುಗಳು, ಸಂಬಂಧಿತ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಇಸಿಐಎಲ್) ಈ ಮೊದಲು ಹೇಳಿದಂತೆ ಆ ಸಂಸ್ಥೆಯ ಖಾಯಂ ಉದ್ಯೋಗಿಗಳಲ್ಲ; ಬದಲಾಗಿ ಅವರೆಲ್ಲಾ ಗುತ್ತಿಗೆ ನೌಕರರು ಮತ್ತು ಇದೀಗ ಅವರ ಗುತ್ತಿಗೆ ಅವಧಿಯನ್ನು ಮುಕ್ತಾಯಗೊಳಿಸಲಾಗಿದೆ ಎಂಬ ಸಂಗತಿ ಬಯಲಾಗಿದೆ. ಜೊತೆಗೆ ಹಾಗೆ ಗುತ್ತಿಗೆ ಮೇಲೆ ಕೆಲಸ ಮಾಡಿದ ಎಂಜಿನಿಯರುಗಳು, ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಇವಿಎಂ-ವಿವಿಪ್ಯಾಟ್ ತಪಾಸಣೆಯನ್ನು ಸರಿಯಾಗಿ ಮಾಡಿರಲಿಲ್ಲ. ನಿಯಮಾನುಸಾರ ತಪಾಸಣೆ ಮಾಡದೆ, ಕಾಟಾಚಾರಕ್ಕೆ ತಪಾಸಣೆ ನಡೆಸಲಾಗಿತ್ತು ಎಂಬ ಸಂಗತಿಯನ್ನು ಕೂಡ ಬಹಿರಂಗಪಡಿಸಿದ್ದಾರೆ.

ಗೌಪ್ಯತೆ ಮತ್ತು ನಿಷ್ಪಕ್ಷಪಾತ ಚುನಾವಣಾ ಪ್ರಕ್ರಿಯೆ ಹಿನ್ನೆಲೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ನಿರ್ವಹಣೆ ಮತ್ತು ತಪಾಸಣೆಯನ್ನು ನುರಿತ ಖಾಯಂ ಸಿಬ್ಬಂದಿಯ ಮೂಲಕವೇ ನಡೆಸಲಾಗುತ್ತಿದೆ. ಯಂತ್ರಗಳ ತಾಂತ್ರಿಕ ಮಾಹಿತಿ ಮತ್ತು ಕಾರ್ಯವಿಧಾನದ ರಹಸ್ಯದ ಕುರಿತು ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಹಸ್ಯ ಕಾಪಾಡಲಾಗುತ್ತಿದೆ ಎಂದು ಈ ಹಿಂದೆ ಹಲವು ಬಾರಿ ಇವಿಎಂ ಯಂತ್ರಗಳ ಹ್ಯಾಕಿಂಗ್ ಮತ್ತಿತರ ವಿಶ್ವಾಸಾರ್ಹತೆ ಕುರಿತ ಪ್ರಕರಣಗಳ ಸಂದರ್ಭದಲ್ಲಿ ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು. ಸ್ವತಃ ಸುಪ್ರೀಂಕೋರ್ಟಿನ ಮುಂದೆಯೂ ಇದೇ ಸ್ಪಷ್ಟನೆ ನೀಡುವ ಮೂಲಕ, ಇವಿಎಂ ಯಂತ್ರಗಳ ವಿಶ್ವಾಸಾರ್ಹತೆ ಕುರಿತ ಅನುಮಾನ- ಶಂಕೆಗಳನ್ನು ಆಯೋಗ ಸಾರಾಸಗಟಾಗಿ ತಳ್ಳಿ ಹಾಕಿತ್ತು. ಅಷ್ಟೇ ಅಲ್ಲದೆ, ಆಧಾರರಹಿತವಾಗಿ ಇವಿಎಂ-ವಿವಿಪ್ಯಾಟ್ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಆಯೋಗ ಎಚ್ಚರಿಕೆಯನ್ನೂ ನೀಡಿತ್ತು.

ಆದರೆ, ಇದೀಗ ಇವಿಎಂ-ವಿವಿಪ್ಯಾಟ್ ಯಂತ್ರ ಸರಬರಾಜುದಾರ ಸಂಸ್ಥೆಗಳ ಪೈಕಿ ಒಂದಾದ, ಇಸಿಐಎಲ್ ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಪೂರ್ವತಯಾರಿ ಕಾರ್ಯಕ್ಕೆ ತನ್ನ ಖಾಯಂ ಸಿಬ್ಬಂದಿಯನ್ನು ಬಳಸಿಲ್ಲ. ಬದಲಾಗಿ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ ಹಂಗಾಮಿ ಸಿಬ್ಬಂದಿಯನ್ನು ಬಳಸಿದೆ. ಜೊತೆಗೆ, ಆ ಸಿಬ್ಬಂದಿ ಕೂಡ ಯಂತ್ರಗಳ ತಪಾಸಣೆ ವೇಳೆ ನಿಯಮಾನುಸಾರ ತಪಾಸಣೆ ಕಾರ್ಯ ನಡೆಸದೆ ನಿರ್ಲಕ್ಷ್ಯ ಮತ್ತು ಉದಾಸೀನದಿಂದ ಕಾಟಾಚಾರದ ಕೆಲಸ ಮಾಡಿದ್ದಾರೆ ಎಂಬುದನ್ನು ಸ್ವತಃ ಆ ಕಾರ್ಯಕ್ಕೆ ನೇಮಕಗೊಂಡಿದ್ದ ಎಂಜಿನಿಯರುಗಳು ಬಹಿರಂಗಪಡಿಸಿದ್ದಾರೆ.

“ನಮ್ಮನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದ ಟಿಅಂಡ್ಎಂ ಸಂಸ್ಥೆ, ನಮಗೆ ಡಿಪ್ಲೊಮೋ ಅರ್ಹತೆಯ ಎಂಜಿನಿಯರುಗಳಿಂದ ಕನಿಷ್ಟ ಮಟ್ಟದ ತರಬೇತಿ ನೀಡಿತು. ಇವಿಎಂ-ವಿವಿಪ್ಯಾಟ್ ಯಂತ್ರಗಳ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಲಾಗಿತ್ತು. ಕಂಟ್ರೋಲ್ ಯೂನಿಟ್(ಸಿಯು) ನಲ್ಲಿ ಸಮಯ ನಿಗದಿ ಮಾಡುವುದು, ಇವಿಎಂ- ವಿವಿಪ್ಯಾಟ್ ರಿಪೇರಿ ಕುರಿತು ಮಾಹಿತಿ ನೀಡಿದ್ದರು. ಆದರೆ, ತರಬೇತಿ ಅವಧಿಯಲ್ಲಿ ಅವರು ನಮಗೆ ಯಂತ್ರಗಳ ತಪಾಸಣೆ ಮತ್ತು ದುರಸ್ತಿ ಬಗ್ಗೆ ಹೇಳಿದ್ದಕ್ಕಿಂತ ನಾವು ಇಸಿಐಎಲ್ ಖಾಯಂ ನೌಕರರು ಎಂದು ಹೇಗೆ ಬಿಂಬಿಸಿಕೊಳ್ಳಬೇಕು ಎಂದು ಹೇಳಿದ್ದೇ ಹೆಚ್ಚು. ಚುನಾವಣಾಧಿಕಾರಿಗಳಾಗಿ ಕೆಲಸ ಮಾಡುವ ಜಿಲ್ಲಾಧಿಕಾರಿಗಳನ್ನು ಕೇಳಿನೋಡಿ, ಅವರಾರಿಗೂ ನಾವು ಹಂಗಾಮಿ ನೌಕರರು ಎಂಬ ಯಾವ ಮಾಹಿತಿಯೂ ಇಲ್ಲ. ಅವರು ನಮ್ಮನ್ನು ಆಯೋಗದ ಖಾಯಂ ಎಂಜಿನಿಯರುಗಳೆಂದೇ ನಂಬಿದ್ದಾರೆ” ಎಂದು ಕಳೆದ ಚುನಾವಣೆಗೆ ಮುನ್ನ ಇವಿಎಂ-ವಿವಿಪ್ಯಾಟ್ ತಪಾಸಣೆ ಕೆಲಸ ಮಾಡಿದ್ದ ಮಾಜಿ ಇಸಿಐಎಲ್ ಎಂಜಿನಿಯರ್ ಸುರೇಶ್(ಹೆಸರು ಬದಲಿಸಲಾಗಿದೆ) ಎಂಬುವರು ಹೇಳಿದ್ದಾರೆ ಎಂದು ‘ದ ಕ್ವಿಂಟ್’ ವರದಿ ಹೇಳಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಬಹುತೇಕ ಎಲ್ಲಾ ಕೆಲಸಗಳನ್ನೂ ನಿರ್ವಹಿಸಿದ್ದು ಗುತ್ತಿಗೆ ನೌಕರರೇ. ಆದರೆ, ಇಂತಹ ರಹಸ್ಯ ಕೆಲಸವನ್ನು ನಮ್ಮಂಥ ಹಂಗಾಮಿ ನೌಕರರು ಮಾಡುತ್ತಿದ್ದಾರೆ ಎಂಬುದು ಗೊತ್ತಾದರೆ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಹಿಂಜರಿಯಬಹುದು ಎಂಬ ಹಿನ್ನೆಲೆಯಲ್ಲಿ ಆಯೋಗ ಮತ್ತು ಇಸಿಐಎಲ್ ನಮ್ಮನ್ನು ಖಾಯಂ ನೌಕರರು ಎಂದೇ ಹೇಳುತ್ತಿತ್ತು. ಹಾಗಾಗಿಯೇ ಅವರು ನಮಗೆ ಪದೇಪದೆ ಖಾಯಂ ನೌಕರರು ಎಂದೇ ಹೇಳಿಕೊಳ್ಳಿ ಎಂಬುದನ್ನು ಒತ್ತಿ ಹೇಳುತ್ತಿದ್ದರು ಎಂದು ಸುರೇಶ್ ಜೊತೆಯಲ್ಲಿ ಕೆಲಸ ಮಾಡಿದ, ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಹಂಗಾಮಿ ನೌಕರನೂ ಹೇಳಿದ್ದಾಗಿ ವರದಿ ಹೇಳಿದೆ.

ಒಂದು ಕಡೆ ಹಂಗಾಮಿ ನೌಕರರನ್ನು ಖಾಯಂ ನೌಕರರು ಎಂದು ಬಿಂಬಿಸಿ ಅವರಿಂದ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕವಾದ ಮತಯಂತ್ರ ತಪಾಸಣೆ ಮತ್ತು ನಿರ್ವಹಣೆ ಕೆಲಸ ಮಾಡಿಸಲಾಗಿದ್ದರೆ, ಮತ್ತೊಂದು ಕಡೆ ಅಂತಹ ನೌಕರರು ಮಾಡಿದ ತಪಾಸಣೆ ಮತ್ತು ನಿರ್ವಹಣೆ ಕೂಡ ಆಯೋಗದ ಮಾನದಂಡಗಳ ರೀತಿಯಲ್ಲಿರಲಿಲ್ಲ ಎಂಬ ಸಂಗತಿಯನ್ನು ಕೂಡ ಅದೇ ನೌಕರರು ಬಹಿರಂಗಪಡಿಸಿದ್ದಾರೆ.

“ಇವಿಎಂ ತಪಾಸಣೆ ವೇಳೆ, ಅದು ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಅಥವಾ ದೋಷವಿದೆಯೇ ಎಂಬುದನ್ನು ಕಂಡುಕೊಳ್ಳಲು ಪ್ರತಿ ಯಂತ್ರದಲ್ಲೂ 96 ಪ್ರಾಯೋಗಿಕ ಮತಗಳ ಚಲಾವಣೆ ಮಾಡಿ ಅದರ ಫಲಿತಾಂಶವನ್ನು ತಾಳೆ ನೋಡುವುದು ಆಯೋಗದ ನಿಯಮಾನುಸಾರ ಕಡ್ಡಾಯ. ಆದರೆ, ಆ ಕಾರ್ಯಕ್ಕೆ ನಿಯೋಜಿತರಾದ ಹಂಗಾಮಿ ಎಂಜಿನಿಯರುಗಳು ಬಹಳಷ್ಟು ಬಾರಿ ಕೇವಲ 75 ಪ್ರಾಯೋಗಿಕ ಮತ ಚಲಾವಣೆ ಮಾಡಿ ಯಂತ್ರ ದೋಷರಹಿತ ಎಂದು ಷರಾ ಬರೆದಿದ್ದರು. ಜೊತೆಗೆ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳಲ್ಲಿನ ಇತರ ದೋಷಗಳು, ತಾಂತ್ರಿಕ ತೊಂದರೆಗಳನ್ನು ಕೂಡ ಅವರು ಗಮನಿಸುವತ್ತ ಗಮನ ಕೊಡಲೇ ಇಲ್ಲ” ಎಂದೂ ಅವರು ಹೇಳಿದ್ದಾರೆ. ಆ ಇಬ್ಬರೂ ಎಂಜಿನಿಯರುಗಳು ಕಳೆದ ಲೋಕಸಭಾ ಚುನಾವಣೆ, ದೆಹಲಿ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪೂರ್ವತಯಾರಿಯಲ್ಲಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ.

ಹೀಗೆ ನಿಯಮಾನುಸಾರ 96 ಪ್ರಾಯೊಗಿಕ ಮತ ಚಲಾವಣೆ ಮೂಲಕ ತಪಾಸಣೆ ನಡೆಸದ ಇವಿಎಂ-ವಿವಿಪ್ಯಾಟ್ ಯಂತ್ರಗಳು ಚುನಾವಣೆಯಲ್ಲಿ ಬಳಕೆಯಾಗಿದ್ದರಿಂದ ಬಹುತೇಕ ಕಡೆ ದೊಡ್ಡ ಮಟ್ಟದ ಚುನಾವಣಾ ಪ್ರಕ್ರಿಯೆಯಲ್ಲೇ ದೋಷ ತಲೆದೋರಿದೆ. ಫಲಿತಾಂಶಗಳ ಮೇಲೆ ಅದು ದೊಡ್ಡ ಮಟ್ಟದ ಪರಿಣಾಮ ಬೀರಿರುವ ಸಾಧ್ಯತೆ ಇದ್ದೇ ಇದೆ. ಹಾಗಾಗಿ ಒಂದು ಕಡೆ ಚುನಾವಣಾ ಪ್ರಕ್ರಿಯೆ ಗೌಪ್ಯತೆ ಕಾಯ್ದುಕೊಳ್ಳುವ ವಿಷಯದಲ್ಲಿ ರಾಜಿಮಾಡಿಕೊಂಡು ಖಾಯಂ ನೌಕರರ ಬದಲು ಹಂಗಾಮಿ ನೌಕರರನ್ನು ತಪಾಸಣಾ ಕಾರ್ಯಕ್ಕೆ ಬಳಸಿದ ಆಯೋಗ, ಮತ್ತೊಂದು ಕಡೆ ದೋಷಪೂರಿತ ಯಂತ್ರಗಳನ್ನು ಬಳಸಿ ಫಲಿತಾಂಶ ಕೂಡ ವ್ಯತ್ಯಯವಾಗಲು ಕಾರಣವಾಗಿರಬಹುದು. ಹಾಗಾಗಿ ಒಟ್ಟಾರೆ, 2019ರ ಲೋಕಸಭಾ ಚುನಾವಣೆ ಎಷ್ಟರ ಮಟ್ಟಿಗೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದಿದೆ ಎಂಬುದರ ಬಗ್ಗೆಯೇ ಈಗ ಅನುಮಾನಗಳು ಇನ್ನಷ್ಟು ಸ್ಪಷ್ಟವಾಗುತ್ತಿವೆ ಎಂದೂ ಹೇಳಲಾಗಿದೆ.

ಈ ನಡುವೆ, 2018ರ ನವೆಂಬರಿನಲ್ಲಿ ಈ 187 ಮಂದಿ ಎಂಜಿನಿಯರುಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದ ಇಸಿಐಎಲ್, ನವೆಂಬರ್ 2019ರಲ್ಲಿ ಅವರ ಒಂದು ವರ್ಷದ ಗುತ್ತಿಗೆ ಮುಗಿದ ಬಳಿಕ ಮತ್ತೆ ಗುತ್ತಿಗೆ ಅವಧಿ ವಿಸ್ತರಿಸಿತ್ತು. ಆದರೆ, ಇದೀಗ ಕಳೆದ ಮೇನಲ್ಲಿ ಲಾಕ್ ಡೌನ್ ನಡುವೇ ಏಕಾಏಕಿ ಆ ಎಲ್ಲಾ ಎಂಜಿನಿಯರುಗಳನ್ನು ಕೆಲಸದಿಂದ ತೆಗೆದುಹಾಕಿದೆ ಮತ್ತು ಅದಾಗಿ ಒಂದೇ ವಾರದಲ್ಲಿ ಮತ್ತೆ ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ಎಂಜಿನಿಯರುಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ!

ಇಸಿಐಎಲ್ ನ ಈ ನಡೆ ಸಹಜವಾಗೇ ಗುತ್ತಿಗೆ ಎಂಜಿನಿಯರುಗಳ ಆಕ್ರೋಶಕ್ಕೆ ಕಾರಣವಾಗಿದ್ದು, ತೀರಾ ಅನನುಭವಿಗಳಾದ, ಯಾವುದೇ ತಾಂತ್ರಿಕ ಹಿನ್ನೆಲೆಯಾಗಲಿ, ಅನುಭವವಾಗಲೀ ಇಲ್ಲದವರನ್ನು ನೇಮಕ ಮಾಡಿಕೊಂಡು, ನಾಮಕಾವಸ್ಥೆಯ ತಪಾಸಣೆ, ಪರಿಶೀಲನೆ ನಡೆಸಿ ಮತ್ತೆ ಮತ ಯಂತ್ರಗಳನ್ನು ಚುನಾವಣೆಗೆ ಸಜ್ಜುಮಾಡಿದ್ದೇವೆ ಎಂಬುವುದು ಇಸಿಐಎಲ್ ವರಸೆ. ಈಗಲೂ ಆ ಕಾರಣಕ್ಕಾಗಿಯೇ ಅನುಭವಿಗಳಾದ ತಮ್ಮನ್ನು ದಿಢೀರನೇ ಕೆಲಸದಿಂದ ತೆಗೆದು ಹೊಸಬರ ನೇಮಕಕ್ಕೆ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಿಬ್ಬಂದಿಯ ಸಮಸ್ಯೆ ಒಂದು ಕಡೆ. ಆದರೆ, ನಿಜವಾಗಿಯೂ ಆತಂಕ ಹುಟ್ಟಿಸುವ ಸಂಗತಿ ದೇಶದ ಭದ್ರತೆಯ ಪ್ರಶ್ನೆಯನ್ನು ಒಳಗೊಂಡಿರುವ ಚುನಾವಣಾ ಪ್ರಕ್ರಿಯೆಯಂತಹ ಸೂಕ್ಷ್ಮ ಮತ್ತು ದೂರಗಾಮಿ ಪರಿಣಾಮದ ವಿಷಯದಲ್ಲಿ ಚುನಾವಣಾ ಆಯೋಗ ಯಾಕೆ ಇಷ್ಟು ನಿರ್ಲಕ್ಷ್ಯ ವಹಿಸುತ್ತಿದೆ? ಇವಿಎಂ- ವಿವಿಪ್ಯಾಟ್ ವಿಷಯದಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗುವುದು ಮತ್ತು ವದಂತಿ ಹರಡುವುದು ದೇಶದ ಭದ್ರತೆಗೆ ಧಕ್ಕೆ ತರುವಂತಹ ಅಪರಾಧ ಎಂದಿದ್ದ ಆಯೋಗ, ಆ ಯಂತ್ರಗಳ ತಾಂತ್ರಿಕ ಮಾಹಿತಿ, ಕಾರ್ಯವಿಧಾನದ ಕುರಿತ ಸೂಕ್ಷ್ಮ ಮಾಹಿತಿಗಳು ಸುಲಭವಾಗಿ ಬಿಕರಿಯಾಗುವ ಅಥವಾ ಪಟ್ಟಭದ್ರರ ಕೈಸೇರುವಂತಹ ತೀರಾ ಉದಾಸೀನದ ವರ್ತನೆ ಸರಿಯೇ? ಖಾಯಂ ಸಿಬ್ಬಂದಿಗಳ ಮೂಲಕ ಅತ್ಯಂತ ರಹಸ್ಯವಾಗಿ ಗೌಪ್ಯತೆ ಕಾಯ್ದುಕೊಂಡು ಮಾಡಬೇಕಾದ ಕಾರ್ಯವನ್ನು ಹಂಗಾಮಿ, ಗುತ್ತಿಗೆ ನೌಕರರ ಮೂಲಕ ಮಾಡಿ, ಆರೇ ತಿಂಗಳಲ್ಲಿ ಅವರನ್ನು ಹೊರಗಟ್ಟಿದರೆ ಅದರ ಪರಿಣಾಮಗಳೇನಾಗಬಹುದು? ಆ ಹಂಗಾಮಿ ನೌಕರರ ಮೂಲಕ ಸೂಕ್ಷ್ಮ ಮಾಹಿತಿಗಳು ದೇಶದ ಚುನಾವಣೆಯನ್ನು ತಮ್ಮ ಮೂಗಿನ ನೇರಕ್ಕೆ ತಿರುಚಲು ಹವಣಿಸುತ್ತಿರುವವರ ಕೈಸೇರಿದರೆ ಭವಿಷ್ಯದ ಚುನಾವಣೆಗಳ ಮೇಲೆ ಜನ ನಂಬಿಕೆ ಇಡುವುದು ಹೇಗೆ? ಎಂಬ ಗಂಭೀರ ಪ್ರಶ್ನೆಗಳಿವೆ.

ಅಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ 2014 ಮತ್ತು 2019ರ ಲೋಕಸಭಾ ಚುನಾವಣಾ ಫಲಿತಾಂಶದ ವಿಷಯದಲ್ಲಿ ದೇಶದ ರಾಜಕೀಯ ವಲಯದಲ್ಲಿ ಮಾತ್ರವಲ್ಲ; ಜನಸಾಮಾನ್ಯರ ನಡುವೆ ಕೂಡ ಸಾಕಷ್ಟು ಅನುಮಾನಗಳ ಎದ್ದಿದ್ದವು. ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂಗಳು ಇರುವವರೆಗೆ ದೇಶದ ಆಡಳಿತ ಚುಕ್ಕಾಣಿ ಬಿಜೆಪಿ ಪಕ್ಷದ ಕೈತಪ್ಪದು ಎಂಬ ಮಾತು ಲೋಕಾರೂಢಿಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಕೆಲವೊಮ್ಮೆ ಅಂತಹ ಮಾತುಗಳು ತೀರಾ ಅತಿರಂಜಿತ, ಅಥವಾ ಕಪೋಲಕಲ್ಪಿತ ಎನಿಸಿದರೂ, ಪ್ರತಿ ಬಾರಿ ಇವಿಎಂ ಯಂತ್ರ ಮತ್ತು ಚುನಾವಣಾ ಪ್ರಕ್ರಿಯೆ ಕುರಿತ ಇಂತಹ ವಾಸ್ತವಾಂಶಗಳು ಹೊರಬಿದ್ದಾಗಲೂ ಆ ಮಾತುಗಳು ಮತ್ತೆ ಮತ್ತೆ ಚರ್ಚೆಯ ಮುನ್ನೆಲೆಗೆ ಬರುತ್ತವೆ ಎಂಬುದನ್ನು ತಳ್ಳಿಹಾಕಲಾಗದು.

ಆದರೆ, ‘ದ ಕ್ವಿಂಟ್’, ಇಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ; ಹಂಗಾಮಿ ನೌಕರರನ್ನು ಇವಿಎಂ-ವಿವಿಪ್ಯಾಟ್ ತಪಾಸಣೆ ಮತ್ತು ನಿರ್ವಹಣೆಗೆ ಬಳಸಿಕೊಂಡ ಬಗ್ಗೆ ಪ್ರಶ್ನಿಸಿದಾಗ, ಚುನಾವಣಾ ಆಯೋಗ, “ಇವಿಎಂ-ವಿವಿಪ್ಯಾಟ್ ತಪಾಸಣೆ ಮತ್ತು ನಿರ್ವಹಣೆ ಸಿಬ್ಬಂದಿಯ ನೇಮಕ ಸಂಪೂರ್ಣವಾಗಿ ಇಸಿಐಎಲ್ ವಿವೇಚನೆಗೆ ಬಿಟ್ಟ ಸಂಗತಿ. ಅದರಲ್ಲಿ ನಮ್ಮ ಪಾತ್ರವಿಲ್ಲ” ಎಂದು ಪ್ರತಿಕ್ರಿಯಿಸಿದೆ. ಆದರೆ, ಈ ಹಿಂದೆ ಇದೇ ಆಯೋಗ, ಸುಪ್ರೀಂಕೋರ್ಟಿಗೆ ನೀಡಿದ ಮಾಹಿತಿಯಲ್ಲಿ ಇವಿಎಂ-ವಿವಿಪ್ಯಾಟ್ ಯಂತ್ರಗಳ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯನ್ನು ಸಮರ್ಥಿಸಿಕೊಳ್ಳುತ್ತಾ, “ಅಧಿಕೃತವಾಗಿ ನೇಮಕವಾದ ಎಂಜಿನಿಯರುಗಳನ್ನೇ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದನ್ನು ಯಾರೂ ಮರೆತಿಲ್ಲ!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರವನ್ನು ನಿರ್ಧರಿಸುವುದು ಮತ್ತು ಆ ಮೂಲಕ ಮುಂದಿನ ಐದು ವರ್ಷಗಳ ಅವಧಿಗೆ ದೇಶದ ಅಭಿವೃದ್ಧಿ, ಜನ ಕಲ್ಯಾಣ ಕಾರ್ಯಕ್ರಮ ಸೇರಿದಂತೆ ದೇಶದ ಪ್ರಗತಿಯ ಗತಿಯನ್ನು ನಿರ್ಧರಿಸುವುದು, ನೀತಿ-ನಿರ್ಧಾರಗಳ ಒಲವು-ನಿಲುವು ನಿರ್ಧರಿಸುವುದು ಚುನಾವಣೆಯೇ. ಆದರೆ, ಅಂತಹ ಚುನಾವಣಾ ಪ್ರಕ್ರಿಯೆಯಲ್ಲಿಯೇ ಸಾಲು ಸಾಲು ಲೋಪಗಳು, ದೋಷಗಳು, ಅವಿಶ್ವಾಸದ ನಡೆಗಳು ತುಂಬಿದ್ದರೆ ಮತ್ತು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣಾ ಪ್ರಕ್ರಿಯೆ ಖಾತರಿಪಡಿಸಬೇಕಾದ ವ್ಯವಸ್ಥೆಯೇ ನ್ಯಾಯಾಂಗದ ಕಟಕಟೆಯಲ್ಲಿ ಒಂದು ಹೇಳುವುದು, ವಾಸ್ತವವಾಗಿ ತದ್ವಿರುದ್ಧವಾದ ನಡೆ ಅನುಸರಿಸುವುದನ್ನು ಮಾಡಿದರೆ, ಚುನಾವಣೆ ಮತ್ತು ಅದರ ಫಲಿತಾಂಶಗಳ ವಿಶ್ವಾಸಾರ್ಹತೆ ಎಲ್ಲಿಗೆ ತಲುಪಬಹುದು?

Click here to follow us on Facebook , Twitter, YouTube, Telegram

Pratidhvani
www.pratidhvani.com