ಗುಡ್ಡದಲ್ಲೇ ಗುಡಿಸಲು ಕಟ್ಟಿ ಆನ್‌ಲೈನ್ ತರಗತಿಗೆ ಹಾಜರಾಗುವ ವಿದ್ಯಾರ್ಥಿನಿ
ರಾಷ್ಟ್ರೀಯ

ಗುಡ್ಡದಲ್ಲೇ ಗುಡಿಸಲು ಕಟ್ಟಿ ಆನ್‌ಲೈನ್ ತರಗತಿಗೆ ಹಾಜರಾಗುವ ವಿದ್ಯಾರ್ಥಿನಿ

ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲಿನ ಒಂದು ಜಾಗದಲ್ಲಿ ಆಕೆ ತಕ್ಕಮಟ್ಟಿಗೆ ವೇಗ ಇರುವ ಇಂಟರ್ನೆಟ್ ಲಭ್ಯವಾಗುತ್ತಿರುವುದು ಕಂಡುಕೊಂಡಿದ್ದಾಳೆ. ಹಾಗೂ ಅಲ್ಲಿಯೇ ದಿನನಿತ್ಯ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ನಿರ್ಧರಿಸಿದ್ದಾಳೆ.

ಫೈಝ್

ಫೈಝ್

ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಶಿಕ್ಷಣದ ಬಗ್ಗೆ ಉತ್ಸಾಹ ಹೇಗಿರಬೇಕು ಎಂಬುದಕ್ಕೆ ತಕ್ಕ ಉದಾಹರಣೆಯಂತಿದ್ದಾಳೆ. ತನ್ನ ಗುರಿಯನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಹಾದಿಯಲ್ಲಿ ರಾಜಿಯಾಗಲು ಒಪ್ಪದ ವಿದ್ಯಾರ್ಥಿನಿ, ತನ್ನ ಹಳ್ಳಿಯಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದಿದ್ದ ಕಾರಣ ತನ್ನ ಅಧ್ಯಯನವನ್ನು ಮುಂದುವರೆಸಲು ನಿರ್ಜನ ಬೆಟ್ಟದ ಮೇಲಿನ ಗುಡಿಸಲಿನಲ್ಲಿ ಪಾಠ ಅಭ್ಯಸಿಸುವ ತನ್ನ ಧೃಢ ನಿಶ್ಚಯದಿಂದ ಎಲ್ಲರ ಗಮನ ಸೆಳೆದಿದ್ದಾಳೆ.

ಬೆಟ್ಟದ ಮೇಲೆ ಗುಡಿಸಲು ನಿರ್ಮಿಸಿ ಕಲಿಯುವ ಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಹುಡುಗಿ ಸ್ವಪ್ನಾಲಿ ಸುತಾರ್. 3 ನೇ ವರ್ಷದ ಪಶು ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಸ್ವಪ್ನಾಲಿ, ಲಾಕ್‌ಡೌನ್‌ ವೇಳೆ ತನ್ನ ಗ್ರಾಮಕ್ಕೆ ಮರಳಿದ್ದಾಳೆ. ಮಹಾರಾಷ್ಟ್ರ ಕಂಕವಳಿ ತಾಲೂಕಿನಲ್ಲಿರುವ ಡೆಸ್ಟರ್ ಈಕೆಯ ಗ್ರಾಮ. ಈಕೆಯದ್ದು ಇಂಟರ್‌ನೆಟ್‌ ಸೌಲಭ್ಯವೇ ಇಲ್ಲದಂತಹ ಒಂದು ಕುಗ್ರಾಮ. ಸ್ಮಾರ್ಟ್ ಫೋನ್ ಹೊಂದುವುದೇ ತ್ರಾಸವೆನಿಸುವಂತಹ ಹಳ್ಳಿಯಲ್ಲಿ ಇಂಟರ್ನೆಟ್ ತಾನೇ ಹೇಗೆ ಇರುತ್ತದೆ.

ಲಾಕ್‌ಡೌನ್‌ ಹಿನ್ನಲೆಯಲ್ಲಿ ಪ್ರಾರಂಭವಾದ ಆನ್‌ಲೈನ್ (Online) ತರಗತಿಗಳಿಗೆ ಹಾಜರಾಗಲು ಅಗತ್ಯ ಬೇಕಾದ ಫೋನ್‌ ಆಗಲಿ, ಇಂಟರ್‌ನೆಟ್‌ ಆಗಲಿ ಇಲ್ಲದ ಸ್ವಪ್ನಾಲಿಗೆ ಪಶು ವೈದ್ಯೆಯಾಗಬೇಕೆಂಬ ಕನಸು ಅಗಾಧವಾಗಿತ್ತು. ಆಕೆಯ ಅದೇ ಕನಸಿನ ಗೀಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲೆಂದು ತನ್ನ ಸಹೋದರ‌ ಕೊಡಿಸಿದ ಪೋನ್ ಹಿಡಿದುಕೊಂಡು ಇಂಟರ್ನೆಟ್‌ಗಾಗಿ ಗುಡ್ಡಗಾಡಿನಲ್ಲಿ ಅಲೆದಾಡುವಂತೆ ಪ್ರೇರೇಪಿಸಿದೆ.

ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲಿನ ಒಂದು ಜಾಗದಲ್ಲಿ ಆಕೆ ತಕ್ಕಮಟ್ಟಿಗೆ ವೇಗ ಇರುವ ಇಂಟರ್ನೆಟ್ ಲಭ್ಯವಾಗುತ್ತಿರುವುದು ಕಂಡುಕೊಂಡಿದ್ದಾಳೆ. ಹಾಗೂ ಅಲ್ಲಿಯೇ ದಿನನಿತ್ಯ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ನಿರ್ಧರಿಸಿದ್ದಾಳೆ. ವೈದ್ಯೆಯಾಗಬೇಕೆಂಬ ಅದಮ್ಯ ಕನಸು ಕಾಣುತ್ತಿರುವ ಸ್ವಪ್ನಾಲಿ ಸುತಾರ್, ನೆಟ್‌ವರ್ಕ್ ಸಮಸ್ಯೆಯ ನಡುವೆಯೂ ಆನ್‌ಲೈನ್ ಶಿಕ್ಷಣ ಪಡೆಯಲು ಹುಡುಕಿಕೊಂಡ ತನ್ನದೇ ಆದ ದಾರಿ ಇದು.

ಕಂಕಾವಲಿಯ ಆಕೆಯ ಸ್ವಗ್ರಾಮದಲ್ಲಿ ಇಂಟರ್ನೆಟ್ ಕೊರತೆಯಿಂದಾಗಿ ಕಾಲೇಜಿನ ಆನ್‌ಲೈನ್ ಉಪನ್ಯಾಸಗಳು ತಪ್ಪುತ್ತಿದ್ದವು. ಹಾಗಾಗಿ ಸ್ವಪ್ನಾಲಿ ಹಳ್ಳಿಯ ಬೆಟ್ಟದ ಮೇಲೆ ಹೋಗಿ ಅಧ್ಯಯನ ಮಾಡಲು ಪ್ರಾರಂಭಿಸಿದ್ದಳು. ಬೇಸಿಗೆಕಾಲದಲ್ಲಿ ಮರದ ನೆರಳನ್ನು ಆಶ್ರಯಿಸಿದ್ದವಳಿಗೆ, ಮಾನ್ಸೂನ್‌ ಆರಂಭಗೊಳ್ಳುತ್ತಿದ್ದಂತೆ ಸಮಸ್ಯೆಗಳೂ ಹುಟ್ಟಿಗೊಂಡವು. ಚಿಗುರು ಕನಸನ್ನು ಬೆಂಬತ್ತುವ ಸ್ವಪ್ನಾಲಿ ಗೆ ವಸಂತಕಾಲ ಸವಾಲಿನಂತೆ ಎದುರಾಗಿತ್ತು.

ಬಿಡದೆ ಸುರಿಯುತ್ತಿರುವ ಜಿಟಿ-ಜಿಟಿ ಮಳೆ, ಆಕೆಗೆ ಬೆಟ್ಟದ ಮೇಲೆ ಯಾವುದೇ ಸೂರಿಲ್ಲದೆ ಪಾಠ ಕಲಿಯಲು ಅನುವು ಮಾಡಿಕೊಟ್ಟಿರಲಿಲ್ಲ. ಆಕೆಯೇ ಹೇಳುವ ಪ್ರಕಾರ ಆರಂಭಿಕ 15- 20 ದಿನಗಳ ಕಾಲ ಮಳೆಯಲ್ಲಿ ಬೆಟ್ಟದ ಮೇಲೆ ಛತ್ರಿ ಹಿಡಿದೇ ಆನ್‌ಲೈನ್‌ ತರಗತಿಗೆ ಹಾಜರಾಗಿದ್ದಳು. ಬಳಿಕ ಆಕೆಯ ಉತ್ಸಾಹ ಹಾಗೂ ಅವಿರತ ಶ್ರಮವನ್ನು ಅರ್ಥ ಮಾಡಿಕೊಂಡ ಆಕೆಯ ಕುಟುಂಬ ಇವಳ ಬೆನ್ನಿಗೆ ನಿಂತಿದೆ. ಅವಳ ಅಣ್ಣಂದಿರು ಇಂಟರ್‌ನೆಟ್‌ ಲಭ್ಯವಿರುವ ದುರ್ಗಮ ಬೆಟ್ಟದಲ್ಲಿ ಆಕೆಯ ಕಲಿಕೆಗಾಗಿಯೇ ಒಂದು ಗುಡಿಸಲು ಕಟ್ಟಿದ್ದಾರೆ. ಇಲ್ಲಿಯೇ ಆಕೆ ತನ್ನ ಆನ್‌ಲೈನ್‌ ತರಗತಿಗಳಿಗೆ ಹಾಜರಾಗುತ್ತಿದ್ದಾಳೆ. ಹಾಗು, ಇದೇ ಆಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುವಂತೆ ಮಾಡಿದೆ.

ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಆಕೆ ಇಲ್ಲಿಯೇ ತನ್ನ ಸಮಯ ವಿನಿಯೋಗಿಸುತ್ತಾಳೆ. ಅಂದಂದಿನ ತರಗತಿ ಮುಗಿಸಿ ಐದು ಗಂಟೆಗೆ ಮನೆಗೆ ಹಿಂದಿರುಗುತ್ತಾಳೆ. ಆನ್‌ಲೈನ್‌ ತರಗತಿಗಳು ಪ್ರಾರಂಭವಾದ ಬಳಿಕ ಇದುವೇ ಸ್ವಪ್ನಾಲಿಯ ದಿನಚರಿ. ದ್ವಿತೀಯ ಪಿಯುಸಿಯಲ್ಲಿ 98% ಅಂಕದೊಂದಿಗೆ ಉತ್ತೀರ್ಣಳಾಗಿರುವ ಸ್ವಪ್ನಾಲಿ ಕಲಿಕೆಯ ಮೇಲಿರುವ ತನ್ನ ಆಸಕ್ತಿ ಹಾಗೂ ಪರಿಶ್ರಮದಿಂದ ಗಮನ ಸೆಳೆದಿದ್ದಾಳೆ.

ಪತ್ರಕರ್ತರೊಂದಿಗೆ ಸ್ವಪ್ನಾಲಿ ಸುತಾರ್
ಪತ್ರಕರ್ತರೊಂದಿಗೆ ಸ್ವಪ್ನಾಲಿ ಸುತಾರ್

Click here to follow us on Facebook , Twitter, YouTube, Telegram

Pratidhvani
www.pratidhvani.com