ಪ್ರಶಾಂತ್ ಭೂಷಣ್ ಗೆ ಆತ್ಮಾವಲೋಕನ ಮಾಡಿಕೊಂಡು ಬನ್ನಿ ಎಂದ ಸುಪ್ರೀಂಕೋರ್ಟ್
ರಾಷ್ಟ್ರೀಯ

ಪ್ರಶಾಂತ್ ಭೂಷಣ್ ಗೆ ಆತ್ಮಾವಲೋಕನ ಮಾಡಿಕೊಂಡು ಬನ್ನಿ ಎಂದ ಸುಪ್ರೀಂಕೋರ್ಟ್

“ಖಂಡಿತಾ ಆ ಬಗ್ಗೆ ಯೋಚಿಸುವೆ. ಆದರೆ, ಎರಡು ದಿನಗಳ ಬಳಿಕವೂ ನನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎನಿಸದು. ಹಾಗಾಗಿ, ನನಗೆ ನ್ಯಾಯಪೀಠದ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ. ನಾನು ನನ್ನ ವಕೀಲರೊಂದಿಗೆ ಮಾತನಾಡಿ ಮುಂದಿನ ನಿರ್ಧಾರ ತಿಳಿಸುವೆ” ಪ್ರಶಾಂತ್ ಭೂಷಣ್ ಎಂದರು.

ಪ್ರತಿಧ್ವನಿ ವರದಿ

ತೀವ್ರ ಕುತೂಹಲ ಕೆರಳಿಸಿದ್ದ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಶಿಕ್ಷೆ ನಿಗದಿಗೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್ ಗುರುವಾರ ಭೂಷಣ್ ಅವರಿಗೆ ತಮ್ಮ ಹೇಳಿಕೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡಿದೆ.

ಕಲಾಪ ಆರಂಭವಾಗುತ್ತಿದ್ದಂತೆ ಪ್ರಶಾಂತ್ ಭೂಷಣ್ ಅವರು, ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ನಿರ್ಧರಿಸಲು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಆ ಕೋರಿಕೆಯನ್ನು ತಿರಸ್ಕರಿಸಿತ್ತು.

ಆ ನಡುವೆ, ತಮ್ಮ ಆ ಮನವಿಯ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆಯನ್ನು ಮುಂದೂಡುವಂತೆ ಪೀಠದ ಮುಂದೆ ಅಹವಾಲು ಸಲ್ಲಿಸಿದ್ದ ಪ್ರಶಾಂತ್ ಭೂಷಣ್ ಅವರು, ನ್ಯಾಯಾಂಗ ನಿಂದನೆಗೆ ತುತ್ತಾಗಿರುವ ತಮ್ಮ ಎರಡು ಟ್ವೀಟ್ ಗಳನ್ನು ಪ್ರಸ್ತಾಪಿಸಿ, ತಮ್ಮನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂಬ ತೀರ್ಮಾನವನ್ನು ಕೇಳಿ ನೊಂದುಕೊಂಡಿರುವೆ. ಶಿಕ್ಷೆಯ ಕಾರಣಕ್ಕೆ ನನಗೆ ನೋವಾಗಿಲ್ಲ. ಬದಲಾಗಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದಕ್ಕೆ ನೊಂದುಕೊಂಡಿರುವೆ. ಯಾವುದೇ ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳ ರಕ್ಷಣೆಗೆ ಬಹಿರಂಗ ಟೀಕೆ, ವಿಮರ್ಶೆಗಳು ಅಗತ್ಯ ಎಂದುಕೊಂಡಿರುವೆ. ನನ್ನ ಹೇಳಿಕೆಗಳನ್ನು ಈ ಹಿನ್ನೆಲೆಯಲ್ಲಿ ನ್ಯಾಯಾಂಗದ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು ನೀಡಿದವು ಎಂಬುದನ್ನು ಗ್ರಹಿಸಬೇಕಿತ್ತು. ನನ್ನ ಹೊಣೆಗಾರಿಕೆಯ ಭಾಗವಾಗಿ ಆ ಟ್ವೀಟ್ ಮಾಡಿದ್ದೇನೆ. ಹಾಗಾಗಿ ಆ ಹೇಳಿಕೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹಾಗೆ ಮಾಡಿದ್ದಲ್ಲಿ ನನ್ನ ಕರ್ತವ್ಯಕ್ಕೆ ಚ್ಯುತಿ ತಂದಂತೆಯೇ ಸರಿ. ಆದ್ದರಿಂದ ಕ್ಷಮೆ ಯಾಚಿಸುವುದಿಲ್ಲ. ನ್ಯಾಯಾಲಯ ನೀಡುವ ಯಾವುದೇ ಶಿಕ್ಷೆಗೆ ನಾನು ಖುಷಿಯಿಂದಲೇ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ” ಎಂದು ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠದ ಮುಖ್ಯಸ್ಥರಾದ ನ್ಯಾ. ಅರುಣ್ ಮಿಶ್ರಾ, “ಎಲ್ಲದಕ್ಕೂ ಒಂದು ಲಕ್ಷ್ಮಣ ರೇಖೆ ಎಂಬುದಿದೆ. ಆ ಮಿತಿಯನ್ನು ಮೀರುವುದು ಏಕೆ? ವಾಕ್ ಸ್ವಾತಂತ್ರ್ಯ ಎಂಬುದು ಸ್ವೇಚ್ಛೆಯಾಗಬಾರದು. ನನಗಾಗಲೀ, ಮಾಧ್ಯಮಗಳಿಗಾಗಲಿ ಎಲ್ಲರಿಗೂ ಈ ಮಾತು ಅನ್ವಯಿಸುತ್ತದೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂಬುದನ್ನು ನೆನಪಿಸಲು ಬಯಸುತ್ತೇವೆ. ಹಾಗಾಗಿ ನಿಮ್ಮ ಹೇಳಿಕೆಯನ್ನು ಪುನರ್ ಪರಿಶೀಲಿಸಲು ಪೀಠ, ನಿಮಗೆ ಎರಡು ದಿನಗಳ ಕಾಲಾವಕಾಶ ನೀಡಲಿದೆ” ಎಂದು ಹೇಳಿದರು.

ಆದರೆ, ಪ್ರಶಾಂತ್ ಭೂಷಣ್ ಅವರು, “ಖಂಡಿತಾ ಆ ಬಗ್ಗೆ ಯೋಚಿಸುವೆ. ಆದರೆ, ಎರಡು ದಿನಗಳ ಬಳಿಕವೂ ನನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎನಿಸದು. ಹಾಗಾಗಿ, ನನಗೆ ನ್ಯಾಯಪೀಠದ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ. ನಾನು ನನ್ನ ವಕೀಲರೊಂದಿಗೆ ಮಾತನಾಡಿ ಮುಂದಿನ ನಿರ್ಧಾರ ತಿಳಿಸುವೆ” ಎಂದರು.

ಆಗ, ನ್ಯಾ. ಅರುಣ್ ಮಿಶ್ರಾ ಅವರು, “ಯಾವುದೇ ತಪ್ಪು ಮಾಡದ ಯಾವುದೇ ವ್ಯಕ್ತಿ ಭೂಮಿ ಮೇಲಿರಲು ಸಾಧ್ಯವಿಲ್ಲ. ನೀವು ನೂರು ಒಳ್ಳೆಯ ಕೆಲಸ ಮಾಡಿದ ಮಾತ್ರಕ್ಕೆ ಅದು ನಿಮ್ಮ 10 ಅಪರಾಧಗಳಿಗೆ ರಹದಾರಿಯಾಗಲಾರದು. ಆದದ್ದು ಆಯಿತು. ಆದರೆ, ಸಂಬಂಧಪಟ್ಟವರು ಕನಿಷ್ಟ ಆದ ತಪ್ಪಿಗೆ ಪಶ್ಚಾತ್ತಾಪವನ್ನಾದರೂ ವ್ಯಕ್ತಪಡಿಸಬೇಕು ಎಂಬುದು ನಮ್ಮ ನಿರೀಕ್ಷೆ. ನೀವು ನಿಮ್ಮ ಕಾನೂನು ಪ್ರಜ್ಞೆಯನ್ನು ಅನ್ವಯಿಸದೆ, ನಮ್ಮ ಸಲಹೆಯನ್ನು ಒಪ್ಪಿಕೊಳ್ಳಿ” ಎಂದು ತಾಕೀತು ಮಾಡಿದರು.

ಪ್ರಕರಣದ ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಇತ್ಯರ್ಥಕ್ಕೆ ಮುನ್ನ ಶಿಕ್ಷೆಯ ವಿಷಯದಲ್ಲಿ ಪೀಠ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇವೆ ಎಂದ ಪೀಠ, ಎರಡು ದಿನಗಳ ಕಾಲಾವಕಾಶದಲ್ಲಿ ನಿಮ್ಮ ಹೇಳಿಕೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿತು.

ಈ ನಡುವೆ, ವಿಚಾರಣೆಯ ವೇಳೆ ಸರ್ಕಾರದ ಪರ ಮನವಿ ಸಲ್ಲಿಸಿದ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು, ಹಿರಿಯ ವಕೀಲರಿಗೆ ಶಿಕ್ಷೆ ವಿಧಿಸಬಾರದು ಎಂದು ಪೀಠದ ಮುಂದೆ ಕೋರಿದರು. ಆದರೆ, ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮಿಶ್ರಾ, ಅವರು(ಪ್ರಶಾಂತ್ ಭೂಷಣ್) ತಮ್ಮ ಹೇಳಿಕೆಯನ್ನು ಕುರಿತು ಪುನರ್ ಪರಿಶೀಲನೆ ನಡೆಸದೇ ನಾವು ನಿಮ್ಮ ಅಹವಾಲನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Click here to follow us on Facebook , Twitter, YouTube, Telegram

Pratidhvani
www.pratidhvani.com