ಜನರ ಸಾವಿರಾರು ಕೋಟಿ ತೆರಿಗೆ ಹಣ ಪಡೆದೂ ತಿರುಪತಿ ಹುಂಡಿಯಾಯ್ತೆ ಪಿಎಂ ಕೇರ್ಸ್?
ರಾಷ್ಟ್ರೀಯ

ಜನರ ಸಾವಿರಾರು ಕೋಟಿ ತೆರಿಗೆ ಹಣ ಪಡೆದೂ ತಿರುಪತಿ ಹುಂಡಿಯಾಯ್ತೆ ಪಿಎಂ ಕೇರ್ಸ್?

ಸಾರ್ವಜನಿಕ ಉದ್ದಿಮೆಗಳಲ್ಲಿರುವ ಹಣ ಸರ್ಕಾರದ ಹಣವೇ ಎಂದಾದರೆ; ಜನರ ತೆರಿಗೆ ಹಣವೇ ಎಂದಾದರೆ; ಆ ಹಣದ ಪಾಲನ್ನು ದೇಣಿಗೆಯಾಗಿ ಪಡೆದ ಸಂಸ್ಥೆ/ ಟ್ರಸ್ಟ್ ನ ಹಣಕಾಸು ವ್ಯವಹಾರಗಳು ಪಾರದರ್ಶಕವಾಗಿರಬೇಕಲ್ಲವೆ? ಅಂತಹ ಸಂಸ್ಥೆ/ ಟ್ರಸ್ಟ್ ಗಳ ದೇಣಿಗೆ ಸಂಗ್ರಹ, ಆ ದೇಣಿಗೆ ಸದ್ಬಳಕೆಯ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕಲ್ಲವೆ?

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಪಿಎಂ ಕೇರ್ಸ್ ನಿಧಿಯು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗಿಂತ ಸಂಪೂರ್ಣ ಭಿನ್ನವಾಗಿದ್ದು, ಪಿಎಂ ಕೇರ್ಸ್ (PM-CARES) ಸಂಗ್ರಹಿಸಿರುವ ಸೇವಾ ಟ್ರಸ್ಟಗಳ ದೇಣಿಗೆಯ ಹಣವನ್ನು ವಿಪತ್ತು ಪರಿಹಾರ ನಿಧಿಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಕೋವಿಡ್-19ರ ನಿರ್ವಹಣೆಯ ಉದ್ದೇಶದಿಂದ ಪ್ರಧಾನಮಂತ್ರಿಗಳ ಹೆಸರಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸ್ಥಾಪಿಸಿರುವ ಈ ನಿಧಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಈ ನಿಧಿಯ ಕುರಿತ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲಾಗದು ಮತ್ತು ಅದರ ಲೆಕ್ಕಪತ್ರ ಪರಿಶೀಲನೆ ಕೂಡ ಸಿಎಜಿ ವ್ಯಾಪ್ತಿಗೆ ಬರುವುದಿಲ್ಲ.ಆ ನಿಧಿಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ? ಅದನ್ನು ಹೇಗೆ ಬಳಸಲಾಗಿದೆ? ಯಾರು ಮತ್ತು ಎಷ್ಟು ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂಬಂತಹ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಅದು ಸಂಪೂರ್ಣ ಪ್ರತ್ಯೇಕ ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕರಾಗಿಯೂ, ಹಣಕಾಸು ಸಚಿವೆ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಟ್ರಸ್ಟಿಗಳಾಗಿಯೂ ಇರುತ್ತಾರೆ. ಸಂಪೂರ್ಣವಾಗಿ ಸ್ವಯಂಪ್ರೇರಿತ ದೇಣಿಗೆಯನ್ನು ಮಾತ್ರ ಸಂಗ್ರಹಿಸುವುದರಿಂದ ಆ ಹಣವನ್ನು ರಾಜ್ಯಗಳ ವಿಪತ್ತು ಪರಿಹಾರ ನಿಧಿಯೂ ಸೇರಿದಂತೆ ಯಾವುದೇ ಸರ್ಕಾರಿ ನಿಧಿಗಳಿಗೆ ವರ್ಗಾಯಿಸುವುದಿಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಕೋರ್ಟ್ ಪುರಸ್ಕರಿಸಿದೆ.

ಆ ಮೂಲಕ ಪಿಎಂ ಕೇರ್ಸ್ ನಿಧಿ ಸಾರ್ವಜನಿಕರ ದೇಣಿಗೆಯಾಗಿದ್ದರೂ ಅದನ್ನು ಸರ್ಕಾರಿ ಲೆಕ್ಕಪತ್ರ ಪರಿಶೀಲನೆಗೆ ಒಳಪಡಿಸುವುದಿಲ್ಲ ಮತ್ತು ಸರ್ಕಾರಿ ವಿಪತ್ತು ಪರಿಹಾರ ನಿಧಿಗೆ ಹಸ್ತಾಂತರಿಸುವುದಿಲ್ಲ. ಜೊತೆಗೆ ನಿಧಿಯ ಕುರಿತ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವುದಿಲ್ಲ ಎಂಬುದು ಸರಿಯಲ್ಲ. ಇದು ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆ ಮತ್ತು ಪಾರದರ್ಶಕತೆಗೆ ವಿರುದ್ಧವಾದುದು ಎಂಬ ಸೆಂಟರ್ ಫಾರ್ ಪಬ್ಲಿಕ್ ಲಿಟಿಗೇಷನ್ ಎಂಬ ಅರ್ಜಿದಾರ ಸ್ವಯಂಸೇವಾ ಸಂಸ್ಥೆಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ನ್ಯಾಯಾಲಯದ ಆದೇಶ ಪಿಎಂ ಕೇರ್ಸ್ ವಿಷಯದಲ್ಲಿ ಸರ್ಕಾರವನ್ನು ಕಟಕಟೆಗೆ ನಿಲ್ಲಿಸಿದ್ದ ಪ್ರತಿಪಕ್ಷಗಳಿಗೂ ಹಿನ್ನಡೆ ತಂದಿದೆ.

ಅದೇ ಹೊತ್ತಿಗೆ, ನ್ಯಾಯಾಲಯ ತನ್ನ ಆದೇಶದಲ್ಲಿ ಪಿಎಂ ಕೇರ್ಸ್ ಒಂದು ಸಾರ್ವಜನಿಕ ಸೇವಾ ಟ್ರಸ್ಟ್ ಆಗಿ ನೋಂದಣಿಯಾಗಿದ್ದು, ಆ ನಿಧಿಗೆ ಯಾವುದೇ ಸರ್ಕಾರಿ ಬಜೆಟ್ ಅನುದಾನ ನೀಡಲಾಗಿಲ್ಲ ಮತ್ತು ಯಾವುದೇ ರೀತಿಯಲ್ಲೂ ಸರ್ಕಾರದ ಹಣವನ್ನು ಆ ನಿಧಿಗೆ ವರ್ಗಾಯಿಸಿಲ್ಲ ಎಂದೂ ಹೇಳಿತ್ತು. ಆ ಹಿನ್ನಲೆಯಲ್ಲಿ ಅದರ ನಿಧಿ ಸಂಗ್ರಹ ಮತ್ತು ಬಳಕೆಯ ವಿವರಗಳನ್ನು ಬಹಿರಂಗಪಡಿಸಬೇಕಾದ ಬದ್ಧತೆ ಇಲ್ಲ ಮತ್ತು ಸರ್ಕಾರ ಯಾಕೆ ಆ ನಿಧಿಯನ್ನು ಸ್ಥಾಪಿಸಿದೆ ಎಂದು ಕೇಳುವ ಹಕ್ಕು ಕೂಡ ಅರ್ಜಿದಾರರಿಗೆ ಇಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಆದರೆ, ಪಿಎಂ ಕೇರ್ಸ್ ನಿಧಿಗೆ ನೇರವಾಗಿ ಸರ್ಕಾರ ಅನುದಾನ ನೀಡಿಲ್ಲವಾದರೂ, ಅಥವಾ ಸರ್ಕಾರದ ಹಣವನ್ನು ನೇರವಾಗಿ ವರ್ಗಾವಣೆ ಮಾಡಿಲ್ಲವಾದರೂ, ಹಿಂಬಾಗಿಲಿನ ಮೂಲಕ ಪಿಎಂ ಕೇರ್ಸ್ ಸರ್ಕಾರದ ಹಣವನ್ನು ಪಡೆದಿದೆ ಎಂಬುದನ್ನು ‘ದ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆ ಬಯಲುಮಾಡಿದೆ.

ಪತ್ರಿಕೆ ಮಾಹಿತಿ ಹಕ್ಕು ಅರ್ಜಿಯಡಿ ದೇಶದ 38 ಸರ್ಕಾರಿ ಸ್ವಾಮ್ಯದ (ಸಾರ್ವಜನಿಕ ವಲಯದ) ಉದ್ದಿಮೆಗಳಿಂದ ಅಧಿಕೃತವಾಗಿ ಪಡೆದಿರುವ ಮಾಹಿತಿಯಂತೆ ಈ ಸಂಸ್ಥೆಗಳು ಬರೋಬ್ಬರಿ 2,105 ಕೋಟಿ ರೂ.,ಗಳಷ್ಟು ಬೃಹತ್ ಮೊತ್ತವನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿವೆ! ಈ 38 ಕಂಪನಿಗಳಲ್ಲಿ ದೇಶದ ಜನರ ತೆರಿಗೆ ಹಣದಲ್ಲಿ ಕಟ್ಟಿದ ಪ್ರಮುಖ ಉದ್ದಿಮೆಗಳಾದ ಒಎನ್ ಜಿಸಿ, ಎನ್ ಟಿಪಿಸಿ, ಇಂಡಿಯನ್ ಆಯಿಲ್, ಪವರ್ ಗ್ರಿಡ್, ಎನ್ ಎಂಡಿಸಿ, ಕೋಲ್ ಇಂಡಿಯಾ, ಬಿಪಿಸಿಎಲ್, ಎಚ್ ಪಿಸಿಎಲ್ ಸೇರಿದಂತೆ ದೇಶದ ಮಹಾರತ್ನ ಕಂಪನಿಗಳಿಂದ ಹಿಡಿದು ನವರತ್ನ ಕಂಪನಿಗಳವರೆಗೆ ಎಲ್ಲವೂ ಸೇರಿವೆ.

ಸರ್ಕಾರವೇ ಆರಂಭದಲ್ಲಿ ಹೇಳಿದಂತೆ ಪಿಎಂ ಕೇರ್ಸ್ ಆರಂಭವಾಗಿ ಕೇವಲ ಐದೇ ದಿನದಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿತ್ತು. ಆದರೆ, ಮಾರ್ಚ್ 31ರ ಹೊತ್ತಿಗೆ ಸಂಗ್ರಹವಾಗಿದೆ ಎಂದು ಸರ್ಕಾರ ಹೇಳಿದ ಈ ಮಾಹಿತಿಯ ಬಳಿಕ, ಪಿಎಂ ಕೇರ್ಸ್ ನಿಧಿಯಲ್ಲಿ ಎಷ್ಟು ದೇಣಿಗೆ ಸಂಗ್ರಹವಾಗಿದೆ? ಅದನ್ನು ಹೇಗೆ ಬಳಸಲಾಗಿದೆ? ಮತ್ತು ಯಾವೆಲ್ಲಾ ಮೂಲಗಳಿಂದ ನಿಧಿ ಸಂಗ್ರಹಿಸಲಾಗಿದೆ ಎಂಬುದೂ ಸೇರಿದಂತೆ ಯಾವುದೇ ಮಾಹಿತಿಯನ್ನು ನೀಡಲು ಪ್ರಧಾನಮಂತ್ರಿಗಳ ಕಾರ್ಯಾಲಯ ಮತ್ತು ಬಿಜೆಪಿ ಸರ್ಕಾರ ನಿರಾಕರಿಸುತ್ತಲೇ ಬಂದಿದೆ. ಇಂಡಿಯನ್ ಎಕ್ಸ್ ಪ್ರೆಸ್ ಕೂಡ ಆ ವಿವರ ಕೋರಿ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯನ್ನು ಪಿಎಂಒ ತಿರಸ್ಕರಿಸಿತ್ತು. ಆ ಬಳಿಕ ದೇಶದ 38 ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಪ್ರತ್ಯೇಕವಾಗಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಅಧಿಕೃತ ಮಾಹಿತಿ ಪಡೆದ ಬಳಿಕ, ಈ ಸರ್ಕಾರ ಮುಚ್ಚಿಟ್ಟಿದ್ದ ಸತ್ಯಾಂಶ ಹೊರಬಿದ್ದಿದೆ.

ಕಳೆದ ಐದು ತಿಂಗಳಲ್ಲಿ ಈವರೆಗೆ 38 ಸಾರ್ವಜನಿಕ ಉದ್ದಿಮೆಗಳು ತಮ್ಮ ಸಿಎಸ್ ಆರ್ ನಿಧಿಯಿಂದ ಪಿಎಂ ಕೇರ್ಸ್ ನಿಧಿಗೆ ನೀಡಿರುವ ದೇಣಿಗೆಯ ಒಟ್ಟು ಮೊತ್ತ 2,105.38 ಕೋಟಿ ರೂಗಳು ಎಂದು ಪತ್ರಿಕೆ ಸಂಪೂರ್ಣ ವಿವರ ಸಹಿತ ವರದಿ ಮಾಡಿದೆ.

ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿರುವ ಸರ್ಕಾರಿ ಉದ್ದಿಮೆಗಳ ಪೈಕಿ ಅತಿ ಹೆಚ್ಚು ಮೊತ್ತವನ್ನು ದೇಣಿಗೆ ನೀಡಿರುವ ಒಎನ್ ಜಿಸಿ ಬರೋಬ್ಬರಿ 300 ಕೋಟಿ ರೂ. ದಾನ ಮಾಡಿದೆ. ಎರಡನೇ ಸ್ಥಾನದಲ್ಲಿರುವ ಎನ್ ಟಿಪಿಸಿ 250 ಕೋಟಿ ದೇಣಿಗೆ ನೀಡಿದ್ದರೆ, ಇಂಡಿಯನ್ ಆಯಿಲ್ ಸಂಸ್ಥೆ 225 ಕೋಟಿ ರೂ. ನೀಡಿದೆ. ಹಾಗೆಯೇ ಪವರ್ ಫೈನಾನ್ಸ್ ಕಾರ್ಪೊರೇಷನ್ ಮತ್ತು ಪವರ್ ಗ್ರಿಡ್ ಸಂಸ್ಥೆಗಳು ತಲಾ 200 ಕೋಟಿ ನೀಡಿವೆ. ಎನ್ ಎಂಡಿಸಿ 155 ಕೋಟಿ ರೂ., ಆರ್ ಇಸಿ 150 ಕೋಟಿ, ಬಿಪಿಸಿಎಲ್ 120 ಕೋಟಿ, ಎಚ್ ಪಿಸಿಎಲ್ 120 ಕೋಟಿ, ಕೋಲ್ ಇಂಡಿಯಾ 100 ಕೋಟಿ, ಹುಡ್ಕೊ ಮತ್ತು ಗೇಲ್ ತಲಾ 50 ಕೋಟಿ, ಆಯಿಲ್ ಇಂಡಿಯಾ 38 ಕೋಟಿ, ಎನ್ ಎಲ್ ಸಿ ಮತ್ತು ಎಚ್ ಎಎಲ್ ತಲಾ 20 ಕೋಟಿ(ರಾಫೇಲ್ ವಿವಾದದ ಹೊತ್ತಲ್ಲಿ ಇದೇ ಕೇಂದ್ರ ಸರ್ಕಾರ ಎಚ್ ಎಎಲ್ ಅಸಮರ್ಥ ಕಂಪನಿ ಎಂದಿದ್ದನ್ನು ನೆನಪಿಸಿಕೊಳ್ಳಿ), ಎಎಐ(ಏರ್ ಪೋರ್ಟ್ ಅಥಾರಿಟಿ) 15 ಕೋಟಿ ರೂ., ಕಾಟನ್ ಕಾರ್ಪೊರೇಷನ್ 10.1 ಕೋಟಿ, ಐಆರ್ ಸಿಟಿಸಿ(ಭಾರತೀಯ ರೈಲ್ವೆ) ಮತ್ತು ಬಿಇಎಲ್ ತಲಾ 10 ಕೋಟಿ ರೂ. ನೀಡಿವೆ. ಇನ್ನುಳಿದ ಸಂಸ್ಥೆಗಳು ಹತ್ತು ಕೋಟಿಗಿಂತ ಕಡಿಮೆ ಮೊತ್ತದ ದೇಣಿಗೆ ನೀಡಿವೆ.

ಬಹುತೇಕ ಈ ಕಂಪನಿಗಳೆಲ್ಲವೂ 2019-20 ಮತ್ತು 2020-21ನೇ ಸಾಲಿನ ಅವುಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ ಆರ್ ನಿಧಿ)ಯಿಂದಲೇ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿವೆ ಎಂಬುದು ಗಮನಾರ್ಹ. ಜೊತೆಗೆ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ; ಒಎನ್ ಜಿಸಿ ಸೇರಿದಂತೆ ಹೀಗೆ ಕೋಟಿ ಕೋಟಿ ದೇಣಿಗೆ ನೀಡಿರುವ ಬಹುತೇಕ ಸಾರ್ವಜನಿಕ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಇದೇ ಮೋದಿಯವರ ಸರ್ಕಾರವೇ ಹೇಳುತ್ತಾ ಬಂದಿದೆ ಮತ್ತು ಅವುಗಳ ಖಾಸಗೀಕರಣಕ್ಕೆ ಇನಿಲ್ಲದ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಸಿಎಸ್ ಆರ್ ನಿಧಿಗೆ ಆದಾಯ ತೆರಿಗೆ ವಿನಾಯ್ತಿ ಇದೆ ಮತ್ತು ಅದು ಸರ್ಕಾರಿ ಲೆಕ್ಕಪತ್ರ ಮೇಲ್ವಿಚಾರಣಾ ಪ್ರಾಧಿಕಾರವಾದ ಸಿಎಜಿ ವ್ಯಾಪ್ತಿಗೆ ಒಳಪಡುತ್ತದೆ ಎಂದಾದರೆ, ಆ ನಿಧಿಯನ್ನು ದೇಣಿಗೆ ಪಡೆದ ಸಂಸ್ಥೆ ಅಥವಾ ಟ್ರಸ್ಟ್ ಕೂಡ ಸಾರ್ವಜನಿಕ ಲೆಕ್ಕಪತ್ರ ಪರಿಶೀಲನೆಗೆ ಒಳಪಡಬೇಕಾದುದು ನ್ಯಾಯವಲ್ಲವೆ? ಜೊತೆಗೆ ಈ ಸಾರ್ವಜನಿಕ ಉದ್ದಿಮೆಗಳಲ್ಲಿರುವ ಹಣ ಸರ್ಕಾರದ ಹಣವೇ ಎಂದಾದರೆ; ಜನರ ತೆರಿಗೆ ಹಣವೇ ಎಂದಾದರೆ; ಆ ಹಣದ ಪಾಲನ್ನು ದೇಣಿಗೆಯಾಗಿ ಪಡೆದ ಸಂಸ್ಥೆ/ ಟ್ರಸ್ಟ್ ನ ಹಣಕಾಸು ವ್ಯವಹಾರಗಳು ಪಾರದರ್ಶಕವಾಗಿರಬೇಕಲ್ಲವೆ? ಅಂತಹ ಸಂಸ್ಥೆ/ ಟ್ರಸ್ಟ್ ಗಳ ದೇಣಿಗೆ ಸಂಗ್ರಹ, ಆ ದೇಣಿಗೆ ಸದ್ಬಳಕೆಯ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಬೇಕಲ್ಲವೆ? ಎಂಬ ಪ್ರಶ್ನೆಗಳು ಈಗ ಎದ್ದಿವೆ.

ಆದರೆ, ಪಿಎಂ ಕೇರ್ಸ್ ಗೆ ಯಾವುದೇ ಸರ್ಕಾರಿ ಅನುದಾನ ನೀಡಲಾಗಿಲ್ಲ ಮತ್ತು ಸರ್ಕಾರದ ಹಣವನ್ನು ಕೂಡ ಬಳಸಲಾಗಿಲ್ಲ. ಹಾಗಾಗಿ ಅದು ಸಾರ್ವಜನಿಕರಿಗೆ ಉತ್ತರದಾಯಿಯಾಗಿರಬೇಕಿಲ್ಲ. ಸಾರ್ವಜನಿಕರಿಗೆ ಅದರ ವಹಿವಾಟಿನ ಕುರಿತ ಮಾಹಿತಿ ಪಡೆಯುವ ಹಕ್ಕು ಕೂಡ ಇಲ್ಲ ಎಂದು ಶರಾ ಬರೆಯಲಾಗಿದೆ. ಸ್ವತಃ ಪ್ರಧಾನಿಯೇ ಮಾಲೀಕರಾಗಿರುವ ಟ್ರಸ್ಟಿನ ವ್ಯವಹಾರಗಳನ್ನು ಜಾಣ ಕಾನೂನು ಬಳಸಿ ರಕ್ಷಿಸಬಹುದು. ಆದರೆ, ಜನರ ತೆರಿಗೆ ಹಣದಲ್ಲಿ ಕಟ್ಟಿ ಬೆಳೆಸಿದ ಸಂಸ್ಥೆಗಳ ಲಾಭದ ಒಂದಂಶವಾದ ಸಿಎಸ್ ಆರ್ ನಿಧಿಯ ದೇಣಿಗೆ ಪಡೆದು ಕಣ್ಣು ಮುಚ್ಚಿ ಕೂರುವ ನೈತಿಕ ದಿವಾಳಿತನವನ್ನು ಮುಚ್ಚಿಡಬಹುದೆ? ದೇಶದ ಜನಸಾಮಾನ್ಯರ ಅಂತಃಸಾಕ್ಷಿಗೆ ನ್ಯಾಯಾಲಯದ ಆಜ್ಞೆಗಳ ಪರದೆ ಎಳೆಯಬಹುದೆ?

Click here to follow us on Facebook , Twitter, YouTube, Telegram

Pratidhvani
www.pratidhvani.com