ಪೆಟ್ರೋಲ್ ದರ ಏರಿಕೆ ಮತ್ತೆ ಆರಂಭ! ಸ್ವಾತಂತ್ರ್ಯೋತ್ಸವಕ್ಕೆ ಪ್ರಧಾನಿ ಮೋದಿ ಕೊಡುಗೆ?!
ರಾಷ್ಟ್ರೀಯ

ಪೆಟ್ರೋಲ್ ದರ ಏರಿಕೆ ಮತ್ತೆ ಆರಂಭ! ಸ್ವಾತಂತ್ರ್ಯೋತ್ಸವಕ್ಕೆ ಪ್ರಧಾನಿ ಮೋದಿ ಕೊಡುಗೆ?!

ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ಆಚರಿಸಿ, ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಬಿಡುಗಡೆ ಸಿಕ್ಕಿದೆ ಎಂದುಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟ ಬಡಪಾಯಿ ಗ್ರಾಹಕರೆ, ಇಲ್ಲಿದೆ ನೋಡಿ ವಾಸ್ತವಿಕ ಸ್ಥಿತಿ!

ರೇಣುಕಾ ಪ್ರಸಾದ್ ಹಾಡ್ಯ

ಪ್ರಧಾನಿ ನರೇಂದ್ರಮೋದಿ ಅತ್ತ ಕೆಂಪುಕೋಟೆ ಮೇಲೆ ನಿಂತು ತೊಂಭತ್ತು ನಿಮಿಷಗಳ ಸುಧೀರ್ಘ ಭಾಷಣ ಮಾಡಿ, ದೇಶದ ಜನರಿಗೆ ಶುಭ ಹಾರೈಸಿ, ದೇಶದ ಪರಿಸ್ಥಿತಿ ಚನ್ನಾಗಿಯೇ ಇದೆ ಭರವಸೆ ನೀಡಿದ ಕೆಲವೇ ಗಂಟೆಗಳಲ್ಲೇ ಪೆಟ್ರೋಲ್ ದರ ಏರಿಕೆ ಆರಂಭವಾಗಿದೆ!

ಹೌದು ಸುಮಾರು ನಲ್ವತ್ತೈದು ದಿನಗಳ ಕಾಲ ಸ್ಥಿರವಾಗಿದ್ದ ಪೆಟ್ರೋಲ್ ದರವು ಆಗಸ್ಟ್ 15 ರಂದು ಮಧ್ಯರಾತ್ರಿ 12 ಗಂಟೆ ನಂತರ ಏರಿಕೆಯಾಗಿದೆ. ಏರಲು ಆರಂಭಿಸಿದೆ. ಅಂದರೆ, ಆಗಸ್ಟ್ 16ರಿಂದ ನಿತ್ಯವೂ ಏರುತ್ತಲೇ ಇದೆ. ಆದರೆ, ಏರಿಕೆ ಪ್ರಮಾಣ ಅತ್ಯಲ್ಪ ಮಟ್ಟದಲ್ಲಿದೆ. ಅದೇ ಸಮಾಧಾನ.

ಈ ಹಿಂದೆ ಜೂನ್ 6ರಿಂದ ಜೂನ್ 30ವರೆಗೆ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ನಿತ್ಯವೂ ಸತತವಾಗಿ ಏರಿಸಲಾಗಿತ್ತು. ಈ ಏರಿಕೆ ಎಷ್ಟಿತ್ತೆಂದರೆ, ಸತತ ಏರಿಕೆ ಮತ್ತು ಗರಿಷ್ಠ ಏರಿಕೆಯಲ್ಲಿ ಹೊಸದೊಂದು ದಾಖಲೆಯಾಗಿತ್ತು. ಜೂನ್ 6 ರಂದು 73.55 ರುಪಾಯಿ ಇದ್ದ ಪೆಟ್ರೋಲ್ ಜೂನ್ 29ರವರೆಗೂ ಸತತವಾಗಿ ಏರಿಕೆಯಾಗಿ 83.04 ರುಪಾಯಿಗೆ ಜಿಗಿದಿತ್ತು. ಅಂದರೆ, ಈ ಅವಧಿಯಲ್ಲಿ 9.49 ರುಪಾಯಿ ಏರಿಕೆಯಾಗಿತ್ತು. ಏರಿಕೆಯ ಪ್ರಮಾಣ ಶೇ.13ರಷ್ಟು!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡಿಸೇಲ್ ದರವು ಜೂನ್ 6 ರಂದು 65.96 ರುಪಾಯಿಗಳಿದ್ದದ್ದು, ಜೂನ್ 29ರವರೆಗೆ 76.58ರುಪಾಯಿಗೆ ಜಿಗಿದಿತ್ತು. ಈ ಅವಧಿಯಲ್ಲಿನ ಏರಿಕೆಯು 10.62 ರುಪಾಯಿಗಳಾಗಿತ್ತು. ಕೇವಲ 24 ದಿನಗಳಲ್ಲಿನ ಏರಿಕೆಯ ಪ್ರಮಾಣವು ಶೇ.16.10ರಷ್ಟಿತ್ತು. ಈ ನಡುವೆ ಪೆಟ್ರೋಲ್ ಡಿಸೇಲ್ ದರ ಏರಿಕೆ ಬಗ್ಗೆ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗಿ, ಪ್ರತಿ ಪಕ್ಷಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಇಷ್ಟಾದರೂ, ಪೆಟ್ರೋಲ್ ದರವು ಸ್ಥಿರವಾಗಿದ್ದರೂ ಜುಲೈ ತಿಂಗಳಲ್ಲಿ ಡಿಸೇಲ್ ದರವು 77.88ಕ್ಕೆ ಏರಿ ಸ್ಥಿರಗೊಂಡಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ಪೆಟ್ರೋಲ್ ಗಿಂತಲೂ ಡಿಸೇಲ್ ದರವೇ ಹೆಚ್ಚು ಏರಿಕೆಯಾಗಿತ್ತು.

ಪ್ರಸ್ತುತ ಆಗಸ್ಟ್ 16ರಿಂದ ಪೆಟ್ರೋಲ್ ದರ ಏರಿಕೆ ಆರಂಭವಾಗಿದೆ. ಡಿಸೇಲ್ ದರ ಸ್ಥಿರವಾಗಿದೆ. ಆದರೆ, ಯಾವಾಗ ಡಿಸೇಲ್ ದರವೂ ಏರಲಾರಂಭಿಸುತ್ತದೆ ಎಂಬುದರ ಗುಟ್ಟನ್ನು ತೈಲ ವಿತರಣೆ ಮಾಡುವ ಕಂಪನಿಗಳು ಬಿಟ್ಟುಕೊಟ್ಟಿಲ್ಲ.

ಪೆಟ್ರೋಲ್ ದರವು ಆಗಸ್ಟ್ 16 ರಂದು 12 ಪೈಸೆ, 17ರಂದು 15 ಪೈಸೆ ಮತ್ತು 18 ರಂದು 14 ಪೈಸೆ ಏರಿಕೆಯಾಗಿದೆ. ಇದು ಆರಂಭ. ದಿನಕ್ಕೆ ಹತ್ತು ಹನ್ನೆರಡು ಪೈಸೆ ಏರಿಕೆ ಮಾಡುವುದರಿಂದ ಗ್ರಾಹಕರ ಗಮನಕ್ಕೆ ಬರುವುದೇ ಇಲ್ಲ. ಆದರೆ, ಇದೇ ನಿತ್ಯವೂ ಹತ್ತು ಪೈಸೆ ಏರಿಕೆಯು ತಿಂಗಳಲ್ಲಿ 3 ರುಪಾಯಿಗಳಷ್ಟಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಆಗಸ್ಟ್ 16ರಿಂದ ಪೆಟ್ರೋಲ್ ದರವು 41 ಪೈಸೆ ಹೆಚ್ಚಳವಾಗಿದೆ. ಇದು ಆರಂಭ ಮಾತ್ರ. ಬರುವ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ.

ವಾಸ್ತವವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ತೀವ್ರವಾಗಿ ಕುಸಿದಾಗಲೂ ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಇಳಿಯಲಿಲ್ಲ. ಥ್ಯಾಂಕ್ಸ್ ಟು ಪ್ರಧಾನಿ ಮೋದಿ! ಮೋದಿ ಸರ್ಕಾರವು ಹೆಚ್ಚುವರಿಯಾಗಿ ರಸ್ತೆ ಅಭಿವೃದ್ಧಿ ಮತ್ತಿತರ ಹೆಸರಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತೆರಿಗೆಗಳನ್ನು ಹೇರಿತು. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಇಳಿಯಲಿಲ್ಲ.

ಲಾಕ್ಡೌನ್ ತೆರವಿನ ಹಂತದಲ್ಲಿ ಅಂದರೆ ಜೂನ್ ತಿಂಗಳ ಆರಂಭದಿಂದ ಸತತವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಏರಿಕೆ ಮಾಡಿತು. ಆಗಲೂ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರವು ಕೆಳಮಟ್ಟದಲ್ಲೇ ಇತ್ತು. ಆದರೆ, ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರವು ಏರುಹಾದಿಯಲ್ಲಿ ಸಾಗಿದೆ. ಆಗಸ್ಟ್ 19 ರಂದು ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್ ಗೆ 45.80 ಡಾಲರ್ ಗಳಲ್ಲಿ, ಡಬ್ಲ್ಯುಟಿಐ ಕ್ರೂಡ್ 42.30 ಡಾಲರ್ ಗಳಲ್ಲಿ ವಾಹಿವಾಟಾಗಿವೆ. ತಾತ್ಕಾಲಿಕ ಏರಿಳಿತವಿದ್ದರೂ ಸುಧೀರ್ಘ ಅವಧಿಯಲ್ಲಿ ಮತ್ತೆ ಕಚ್ಚಾ ತೈಲದರವು ಏರುಹಾದಿಯಲ್ಲಿ ಸಾಗುವ ಸಾಧ್ಯತೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ತಜ್ಞರು ಮುನ್ನಂದಾಜಿಸಿದ್ದಾರೆ.

ಈಗ ನಮ್ಮ ಮುಂದಿರುವ ಪ್ರಶ್ನೆ ಎಂದರೆ- ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಗೆ 10 ಡಾಲರ್ ಗಿಂತಲೂ ಕಡಮೆ ಇದ್ದಾಗಲೂ ಪ್ರತಿ ಲೀಟರ್ ಪೆಟ್ರೋಲ್ ಗೆ 83 ರುಪಾಯಿ, ಪ್ರತಿ ಲೀಟರ್ ಡಿಸೇಲ್ ಗೆ 75 ರುಪಾಯಿ ವಸೂಲಿ ಮಾಡಿದ ನರೇಂದ್ರ ಮೋದಿ ಸರ್ಕಾರವು, ಕಚ್ಚಾ ತೈಲ ಏರುತ್ತಿರುವ ಸಂದರ್ಭದಲ್ಲಿ ಇದೇ ಮಟ್ಟವನ್ನು ಕಾಯ್ದುಕೊಳ್ಳಲಿದೆಯೇ? ಅಥವಾ ಕಚ್ಚಾ ತೈಲದರಕ್ಕೆ ಅನುಗುಣವಾಗಿ ಪೆಟ್ರೋಲ್, ಡಿಸೇಲ್ ದರವನ್ನು ನಿತ್ಯವೂ ಏರಿಸುತ್ತದೆಯೇ?

ಈಗಾಗಲೇ ಪೆಟ್ರೋಲ್ ದರ ಏರಿಕೆ ಮಾಡಲಾರಂಭಿಸಿರುವುದು ಮೋದಿ ಸರ್ಕಾರವು ಮತ್ತೆ ದರ ಏರಿಕೆ ಮಾಡುವುದರ ಮನ್ಸೂಚನೆ ಆಗಿದೆ. ಪ್ರಸ್ತುತ ಕಚ್ಚಾ ತೈಲ 42- 45 ಡಾಲರ್ ಆಜುಬಾಜಿನಲ್ಲಿದ್ದು, ಬರುವ ತಿಂಗಳುಗಳಲ್ಲಿ 55-60 ಡಾಲರ್ ಆಜುಬಾಜಿಗೆ ಏರುವ ನಿರೀಕ್ಷೆ ಇದೆ. ಅಂತಹ ಸಂದರ್ಭದಲ್ಲಿ ಗ್ರಾಹಕರು ಮತ್ತಷ್ಟು ಬೆಲೆ ತೆರಬೇಕಾಗುತ್ತದಾ? ಅಥವಾ ಇಡೀ ದೇಶವೇ ಕೊರೊನಾ ಸೋಂಕಿನ ಸಂಕಷ್ಟದಲ್ಲಿದ್ದಾಗ ಏಕಾಏಕಿ ಏರಿಸಿದ ತೆರಿಗೆಯನ್ನು ಮೋದಿ ಸರ್ಕಾರ ತಗ್ಗಿಸುತ್ತದಾ?

ಕಳೆದ ಆರು ವರ್ಷಗಳಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸುಮಾರು 18 ಬಾರಿ ತೆರಿಗೆ ಹೇರಿದೆ. ಎರಡು ಬಾರಿ ಮಾತ್ರ ತೆರಿಗೆ ಕಡಿತ ಮಾಡಿದೆ. ಆ ಲೆಕ್ಕದಲ್ಲಿ ನೋಡಿದರೆ, ಮೋದಿ ಸರ್ಕಾರ ಹೇರಿರುವ ತೆರಿಗೆ ಕಡಿತ ಮಾಡುವ ಸಾಧ್ಯತೆ ಕಡಮೆಯೇ! ಅಂದರೆ, ಗ್ರಾಹಕರು ಮತ್ತಷ್ಟು ಹೊರೆ ಹೊರಲು ಸಿದ್ಧರಾಗಬೇಕು!

Click here to follow us on Facebook , Twitter, YouTube, Telegram

Pratidhvani
www.pratidhvani.com