ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಚರ್ಚೆ
ರಾಷ್ಟ್ರೀಯ

ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಚರ್ಚೆ

ರಾಹುಲ್ ಗಾಂಧಿ ಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಮಾತು ಕೇಳಿಬರುತ್ತಿದೆ. ಆದರೆ ಸ್ವತಃ ರಾಹುಲ್ ಗಾಂಧಿ ಉತ್ಸಾಹ ತೋರದೇ ಇರುವುದು ಮತ್ತು ಈ ಬಾರಿ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಯೋಚಿಸುತ್ತಿರುವುದು ಬೇರೊಂದು ರೀತಿಯ ಬೆಳವಣಿಗೆಗೆ ಮುನ್ನುಡಿ ಬರೆಯಬಹುದು

ಯದುನಂದನ

ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬೇಕೆಂಬ‌ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡಬಹುದೆಂಬ ಮಾತುಗಳೂ ಕೇಳಿಬರುತ್ತಿವೆ. ಎಐಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆಯಂತೂ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು 'ಆದಷ್ಟು ಬೇಗ ಆಗಲಿ' ಎಂದು ಕಾದು ಕುಳಿತಿದ್ದಾರೆ. ಆದರೀಗ 'ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡುವ ವಿಷಯ' ಸಂಚಲನ ಮೂಡಿಸಿದೆ.

ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕು ಎಂಬುದು ರಾಹುಲ್ ಗಾಂಧಿ ಅವರ ಯೋಚನೆ. ಇದನ್ನು ಬಹಿರಂಗವಾಗಿ ಹೇಳಿರುವವರು ಪ್ರಿಯಾಂಕಾ ಗಾಂಧಿ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲಿ ಇಂಥ ಆಲೋಚನೆ ಮತ್ತು ಮಾತು ಕೇಳಿಬಂದಿರುವುದರಿಂದ ಸಹಜವಾಗಿಯೇ 'ಈ ಬಾರಿ ಈ‌ ಪ್ರಯೋಗ' ಆಗಲೂಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ 22 ವರ್ಷಗಳ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ‌ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಅಲಂಕರಿಸುವವರೇ ಎಂಬ ಕುತೂಹಲ ರಾಜಕಾರಣದಲ್ಲಿ ಆಸಕ್ತಿ ಇರುವ ಇತರರಲ್ಲೂ ಕಂಡುಬರುತ್ತಿದೆ.

ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ 1991ರಿಂದ 1996ರವರೆಗೆ ಎಐಸಿಸಿ ಅಧ್ಯಕ್ಷರಾಗಿದ್ದರು. ಆಮೇಲೆ ಸೀತಾರಾಂ ಕೇಸರಿ 1996ರಿಂದ 1998ರವರೆಗೆ ಮಾತ್ರ ಅಧ್ಯಕ್ಷರಾಗಿದ್ದರು. ಸೀತಾರಾಂ ಕೇಸರಿ ವಿರುದ್ಧ ವ್ಯಾಪಕ ಅಸಮಾಧಾನ ಕಂಡುಬಂದಿತ್ತು. ಆಗ ಪತಿ ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡು ರಾಜಕಾರಣದ ಸಹವಾಸವೇ ಬೇಡ ಎಂದು ದೂರ ಇದ್ದ ಸೋನಿಯಾ ಗಾಂಧಿ ಅವರನ್ನು ಕೆಲ ಕಾಂಗ್ರೆಸ್ ನಾಯಕರು ಕಾಡಿ ಬೇಡಿ ಕರೆತಂದು ಅಧ್ಯಕ್ಷರನ್ನಾಗಿ ಮಾಡಿದ್ದರು. 19ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ ಸೋನಿಯಾ ಗಾಂಧಿ ಅವರು, ಯುಪಿಎ ಮೈತ್ರಿ ಕೂಟ ಮಾಡಿಕೊಂಡು ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತಂದರು. ಬಳಿಕ 2017ರಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾದರಾದರೂ 2019ರ‌ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಸೋಲಿನ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದರು. ರಾಜೀನಾಮೆ ಹಿಂಪಡೆಯುವಂತೆ ಎಷ್ಟೇ ಒತ್ತಡ ಹಾಕಿದರೂ ಅವರು ಅಧ್ಯಕ್ಷರಾಗಿ ಮುಂದುವರೆಯಲಿಲ್ಲ.

ಈಗ ಮತ್ತೆ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ರಾಹುಲ್ ಗಾಂಧಿ ಅವರನ್ನು ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ‌. ಆದರೆ ರಾಹುಲ್ ಗಾಂಧಿ ಅವರು ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ. ಈಗಾಗಲೇ ನಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ನನಗೆ 'ಈ ಬಾರಿ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರು ಎಐಸಿಸಿ ಅಧ್ಯಕ್ಷರಾಗಲಿ. ಪಕ್ಷ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ನಾವು ಬೆಂಬಲಿಸೋಣ' ಎಂಬುದಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

'ನೆಕ್ಸ್ಟ್ ಜನರೇಷನ್ ಲೀಡರ್ಸ್ ಆಫ್ ಇಂಡಿಯಾ' ಪುಸ್ತಕಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿ ಅವರ ಜೊತೆ ನಡೆದ ಚರ್ಚೆಯ ಭಾಗವೊಂದನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರು ಅಧ್ಯಕ್ಷರಾದರೆ ಅವರ ಕೈ ಕೆಳಗೆ ಕೆಲಸ ಮಾಡಲು ಸಿದ್ದ ಎಂಬುದಾಗಿಯೂ ಕೂಡ ಹೇಳಿದ್ದಾರೆ. ಸ್ವತಃ ಪ್ರಿಯಾಂಕಾ ಗಾಂಧಿ ಅವರ ಬಾಯಿಂದ ಈ ಮಾತು ಬಂದಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಉಂಟಾಗಿದೆ. ಇದರ ಪರಿಣಾಮವಾಗಿ 'ಈ ಪ್ರಯೋಗದ' ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈಗಾಗಲೇ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗೆಹ್ಲೋಟ್ ಮತ್ತಿತರ ಹೆಸರುಗಳು ಚಾಲ್ತಿಗೆ ಬಂದಿವೆ.

ಇದೆಲ್ಲದಕ್ಕೂ ಮೀರಿ ಈಗಾಗಲೇ ಸೋನಿಯಾ ಗಾಂಧಿ ಅವರು ಎಐಸಿಸಿಯ ಹಂಗಾಮಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದಾರೆ. ಮೊದಲ 19 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಸೇರಿದಂತೆ ನಾನಾ ರೀತಿಯ ಯಶಸ್ಸು ಸಾಧಿಸಿದ್ದರು. ಆದರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಚುನಾವಣೆ ಗೆಲ್ಲುವುದಿರಲಿ ಪಕ್ಷದಲ್ಲಿ ಇರುವ ನಾಯಕರನ್ನೇ ಉಳಿಸಿಕೊಳ್ಳುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಇರುವ ಸರ್ಕಾರಗಳನ್ನು ಉಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಲ,‌ ಪರಿಸ್ಥಿತಿ ಎಂಬುದರ ಜೊತೆಜೊತೆಗೆ ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಆದುದರಿಂದ ಆದಷ್ಟು ಬೇಗ ಸೋನಿಯಾ ಗಾಂಧಿ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು. ರಾಹುಲ್ ಗಾಂಧಿ ಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಮಾತು ಕೇಳಿಬರುತ್ತಿದೆ. ಆದರೆ ಸ್ವತಃ ರಾಹುಲ್ ಗಾಂಧಿ ಉತ್ಸಾಹ ತೋರದೇ ಇರುವುದು ಮತ್ತು ಈ ಬಾರಿ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಯೋಚಿಸುತ್ತಿರುವುದು ಬೇರೊಂದು ರೀತಿಯ ಬೆಳವಣಿಗೆಗೆ ಮುನ್ನುಡಿ ಬರೆಯಬಹುದು. ಏನೇ ಆಗುವುದಿದ್ದರೂ ಅದೂ 2021ಕ್ಕೆ ಎಂದು ಹೇಳಲಾಗುತ್ತಿದೆ, ಕಾದು ನೋಡಬೇಕು.

Click here to follow us on Facebook , Twitter, YouTube, Telegram

Pratidhvani
www.pratidhvani.com