ಸಂಘಟಿತ ವಲಯದಲ್ಲಿ 18 ದಶಲಕ್ಷ ಉದ್ಯೋಗ ನಷ್ಟ; ಮರೀಚಿಕೆಯಾದ ಆರ್ಥಿಕ ಚೇತರಿಕೆ
ರಾಷ್ಟ್ರೀಯ

ಸಂಘಟಿತ ವಲಯದಲ್ಲಿ 18 ದಶಲಕ್ಷ ಉದ್ಯೋಗ ನಷ್ಟ; ಮರೀಚಿಕೆಯಾದ ಆರ್ಥಿಕ ಚೇತರಿಕೆ

20 ಲಕ್ಷ ಕೋಟಿ ಘೋಷಣೆ ಮಾಡಿದ ನಂತರ, ವಾಸ್ತವವಾಗಿ ಬಿಡುಗಡೆ ಮಾಡಿರುವ ಮೊತ್ತ ಎಷ್ಟು? ಇದರಿಂದ ಎಷ್ಟು ಜನರಿಗೆ ಅನುಕೂಲವಾಗಿದೆ, ಮುಂದಿನ ದಿನಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ, ಎಷ್ಟು ಜನರಿಗೆ ನಗದು ಸೇರುತ್ತದೆ ಎಂಬುದರ ಮಾಹಿತಿ ನೀಡಬೇಕಿದೆ.

ರೇಣುಕಾ ಪ್ರಸಾದ್ ಹಾಡ್ಯ

ಸ್ವಾತಂತ್ರ್ಯೋತ್ಸವದ ದಿನದಂದು ಕೆಂಪುಕೋಟೆಯಲ್ಲಿ ನಿಂತು ಪ್ರಧಾನಿ ನರೇಂದ್ರಮೋದಿ ದೇಶದ ಆರ್ಥಿಕತೆಯ ಬಗ್ಗೆ ಏನೆಲ್ಲ ‘ಕಟ್ಟುಕತೆ’ಗಳನ್ನು ಹೇಳಿರಬಹುದು. ಆದರೆ, ವಾಸ್ತವಿಕ ಸ್ಥಿತಿಯೇ ಬೇರೆ ಇದೆ. ಜುಲೈ ತಿಂಗಳೊಂದರಲ್ಲೇ ಸಂಘಟಿತ ವಲಯದಲ್ಲಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸಂಘಟಿತ ವಲಯ ಎಂದರೆ ನಿಯಮಿತವಾಗಿ ಸಂಬಳ ಪಡೆಯುವಂತಹ ಉದ್ಯೋಗಿಗಳು. ಈ ಉದ್ಯೋಗಗಳು ಪೂರ್ಣಾಕಾಲಿಕವಾಗಿರುತ್ತವೆ. ಹೀಗಾಗಿ ಅಸಂಘಟಿತ ವಲಯದ ಉದ್ಯೋಗ ನಷ್ಟದಿಂದಾಗುವ ಪರಿಣಾಮಕ್ಕಿಂತಲೂ ಸಂಘಟಿತ ವಲಯದಲ್ಲಿನ ಉದ್ಯೋಗನಷ್ಟದಿಂದಾಗುವ ವ್ಯತಿರಿಕ್ತ ಪರಿಣಾಮ ಹೆಚ್ಚು.

ಕರೊನಾ ಸೋಂಕು ದೇಶವ್ಯಾಪಿ ಹರಡುವ ಭೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24 ರಂದು ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಿದ ನಂತರ ದೇಶದಲ್ಲಿ ಸಂಘಟಿತ ವಲಯದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಒಟ್ಟು 18 ದಶ ಲಕ್ಷ. ಅಸಂಘಟಿತ ವಲಯದಲ್ಲಿ ಉದ್ಯೋಗ ಕಳೆದಕೊಂಡವರ ಸಂಖ್ಯೆಯು 10 ಕೋಟಿಗೂ ಹೆಚ್ಚು.

ದೇಶದ ಆರ್ಥಿಕ ವಿದ್ಯಮಾನಗಳ ಮೇಲೆ ನಿತ್ಯವೂ ನಿಗಾ ಇಡುವ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಸಂಘಟಿತ ವಲಯದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 18 ದಶಲಕ್ಷಕ್ಕೆ ಏರಿದೆ. ಈ ಪೈಕಿ ಜುಲೈ ತಿಂಗಳೊಂದರಲ್ಲೇ ಐದು ದಶಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

ಈ ಬೆಳವಣಿಗೆ ಏನನ್ನು ಸೂಚಿಸುತ್ತದೆ ಎಂದರೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ನೀತಿ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್, ಖುದ್ಧು ಕೇಂದ್ರ ವಿತ್ತೀಯ ಸಚಿವಾಲಯವು ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿ ಎಂದು ಹೇಳಿಕೊಂಡರೂ, ವಾಸ್ತವಿಕವಾಗಿ ಆರ್ಥಿಕತೆ ಚೇತರಿಕೆ ತ್ವರಿತಗತಿಯಲ್ಲಾಗಲು ಸಾಧ್ಯವಿಲ್ಲ. ಏಕೆಂದರೆ ಕಳೆದುಹೋಗಿರುವ ಸಂಘಟಿತ ವಲಯದ 18 ದಶಲಕ್ಷ ಉದ್ಯೋಗಗಳು ಮರುಸೃಷ್ಟಿಗೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ.

ಅಸಂಘಟಿತ ವಲಯದಲ್ಲಿನ ಉದ್ಯೋಗಗಳ ಸೃಷ್ಟಿ ತ್ವರಿತವಾಗಿ ಆಗುತ್ತದೆ. ಉದಾಹರಣೆಗೆ ಅರ್ಧಕ್ಕೆ ನಿಂತ ಕಟ್ಟಡ ನಿರ್ಮಾಣ ಪುನಾರಂಭವಾದರೆ, ಆ ಕಟ್ಟಡಕ್ಕೆ ಬೇಕಾದ ಕಾರ್ಮಿಕರ ಉದ್ಯೋಗ ತಕ್ಷಣವೇ ಸೃಷ್ಟಿಯಾಗುತ್ತದೆ. ನಿರ್ಮಾಣ ಮತ್ತು ನಿರ್ಮಾಣಪೂರಕವಾದ ಉದ್ಯೋಗಗಳು ತನ್ನಿಂತಾನೆ ಸೃಷ್ಟಿಯಾಗುತ್ತವೆ. ಆದರೆ, ಈ ಉದ್ಯೋಗವು ದಿನಗೂಲಿ ಲೆಕ್ಕದಲ್ಲಿ ಸೃಷ್ಟಿಯಾಗುವ ಉದ್ಯೋಗವಾಗಿರುತ್ತದೆ. ನಿರ್ಮಾಣ ಕಾರ್ಯಮುಗಿದ ನಂತರ ಆ ಕಾರ್ಮಿಕರ ತಾತ್ಕಾಲಿಕವಾಗಿ ನಿರುದ್ಯೋಗಿಗಳಾಗುತ್ತಾರೆ. ಮತ್ತೊಂದು ಕಟ್ಟಡದಲ್ಲಿ ಉದ್ಯೋಗ ಸಿಗುವವರೆಗೂ ಅವರು ತಾತ್ಕಾಲಿಕ ನಿರುದ್ಯೋಗಿಗಳು. ಆದರೆ, ಈ ತಾತ್ಕಾಲಿಕ ಅವಧಿಯು ಅತ್ಯಲ್ಪವಾಗಿರುತ್ತದೆ.

ಸಂಘಟಿತ ವಲಯದಲ್ಲಿನ ಉದ್ಯೋಗಿಗಳು ನಿಯಮಿತವಾಗಿ ಅಂದರೆ ಮಾಸಿಕ ವೇತನ ಪಡೆಯುತ್ತಾರೆ. ಸೇವಾ ವಲಯ ಅಥವಾ ಉತ್ಪಾದನಾ ವಲಯ ಅಥವಾ ಪೂರಕ ವಲಯಗಳ ಸಂಸ್ಥೆಗಳಲ್ಲಿ ದುಡಿಯುತ್ತಾರೆ. ಈ ಸಂಸ್ಥೆಗಳು ಮುಚ್ಚಿ, ಉದ್ಯೋಗಿಗಳು ಕೆಲಸ ಕಳೆದುಕೊಂಡರೆ, ಅವರ ನಿರುದ್ಯೋಗದ ಅವಧಿಯು ದೀರ್ಘಕಾಲದ್ದಾಗಿರುತ್ತದೆ. ಏಕೆಂದರೆ ಮುಚ್ಚಿದ ಸಂಸ್ಥೆಯನ್ನು ಏಕಾಏಕಿ ತೆರೆಯಲು ಸಾಧ್ಯವಾಗುವುದಿಲ್ಲ. ಬಹುತೇಕ ಉತ್ಪಾದನಾ ಮತ್ತು ಸೇವಾ ವಲಯದ ಸಂಸ್ಥೆಗಳ ಪುನಾರಂಭವು ಆರ್ಥಿಕತೆಯ ಚೇತರಿಕೆಯನ್ನು ಅವಲಂಬಿಸಿರುತ್ತದೆ. ಸಧ್ಯಕ್ಕೆ ಆರ್ಥಿಕತೆ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಇಂತಹ ಸಂಸ್ಥೆಗಳಲ್ಲಿ ದುಡಿಯುತ್ತಿರುವವರು ಪರ್ಯಾಯ ಉದ್ಯೋಗ ಹುಡುಕಿಕೊಳ್ಳುವುದು ಕಷ್ಟವಾಗುತ್ತದೆ. ಮತ್ತೊಂದು ಸಮಸ್ಯೆ ಎಂದರೆ- ಸಂಸ್ಥೆಗಳು ಚಾಲ್ತಿಯಲ್ಲಿದ್ದರೂ, ಬೇಡಿಕೆ ಇಲ್ಲದ ಕಾರಣ ಉತ್ಪಾದನೆ ಕುಂಟಿತಗೊಂಡಿದೆ ಎಂಬ ನೆಪದಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಹೊರ ಹಾಕುತ್ತಿವೆ. ಹೀಗೆ ಉದ್ಯೋಗ ಕಳೆದುಕೊಂಡವರದು ಅತಂತ್ರಸ್ಥಿತಿ. ಏಕೆಂದರೆ ಉದ್ಯೋಗದಿಂದ ತೆಗೆದ ಸಂಸ್ಥೆ ಮರು ಸೇರ್ಪಡೆ ಮಾಡಿಕೊಳ್ಳವುದಿಲ್ಲ, ಹೊಸ ಉದ್ಯೋಗ ಸದ್ಯಕ್ಕೆ ದಕ್ಕುವುದಿಲ್ಲ.

ಸಂಘಟಿತ ವಲಯದಲ್ಲಿನ ಉದ್ಯೋಗ ನಷ್ಟವು ಆರ್ಥಿಕವಾಗಿ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉದಾಹರಣೆಗೆ 60 ಸಾವಿರ ರುಪಾಯಿ ವೇತನ ಪಡೆಯುವ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗ ಕಳೆದುಕೊಳ್ಳುತ್ತಾನೆಂದರೆ ಅದು ಆತನೊಬ್ಬನ ಮೇಲೆ ಪರಿಣಾಮ ಬೀರುವುದಿಲ್ಲ. ಆತ ವಾಸಿಸುವ ಬಾಡಿಗೆ ಮನೆಯ ಮಾಲೀಕನಿಗೂ ನಷ್ಟವಾಗುತ್ತದೆ, ಮನೆಗೆಲಸದವರು, ಲಾಂಡ್ರಿ, ಆತ ಬಳಸುತ್ತಿದ್ದ ದಿನಸಿ ಅಂಗಡಿ, ಆಗಾಗ್ಗೆ ಬಳಸುತ್ತಿದ್ದ ಟ್ಯಾಕ್ಸಿ ಹೀಗೆ ಎಲ್ಲವೂ ಕಡಿತವಾಗುತ್ತದೆ. ಪರೋಕ್ಷವಾಗಿ ಎಲ್ಲರೂ ನಷ್ಟ ಅನುಭವಿಸುತ್ತಾರೆ. ಮನೆಬಾಡಿಗೆಯನ್ನೇ ಜೀವನಕ್ಕಾಗಿ ಅವಲಂಬಿಸಿರುವ ಹಲವು ಕುಟುಂಬಗಳು ಇಂತಹ ವೇಳೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಒಂದೋ ಬಾಡಿಗೆ ಕಡಿತ ಮಾಡಬೇಕು, ಇಲ್ಲವೋ ಮನೆಯನ್ನು ಖಾಲಿ ಬಿಡಬೇಕು. ಇದರ ಅರ್ಥ ಏನೆಂದರೆ ಸಂಘಟಿತ ವಲಯದಲ್ಲಿ ಒಬ್ಬ ಉದ್ಯೋಗಿ ಕೆಲಸ ಕಳೆದುಕೊಂಡರೂ ಅದರ ವ್ಯತಿರಿಕ್ತ ಪರಿಣಾಮ ಸುಮಾರು ಏಳೆಂಟು ಜನರ ಮೇಲಾಗುತ್ತದೆ. 18 ದಶ ಲಕ್ಷ ಸಂಘಟಿತ ವಲಯದ ಉದ್ಯೋಗ ನಷ್ಟವಾಗುತ್ತದೆ ಎಂದರೆ ಅದರಿಂದ ಏನಿಲ್ಲವೆಂದರು 12-15 ಕೋಟಿ ಜನರ ಮೇಲೆ ವ್ಯತಿರಿಕ್ತ ಪರಿಮಾಣ ಬೀರುತ್ತದೆ.

ಆತಂಕದ ಸಂಗತಿ ಎಂದರೆ- ತ್ವರಿತಗತಿಯಲ್ಲಿ ಆರ್ಥಿಕ ಚೇತರಿಕೆ ಆಗುತ್ತದೆ ಎಂಬ ಸರ್ಕಾರದ ಅಧೀನದಲ್ಲಿರುವ ಮುಖ್ಯಸ್ಥರ ಹೇಳಿಕೆಯನ್ನಾಧರಿಸಿ ಸರ್ಕಾರಿ ಪರ ಮಾಧ್ಯಮಗಳು ಪ್ರಚಾರ ಮಾಡುತ್ತಲೇ ಇವೆ. ವಾಸ್ತವಿಕ ಸ್ಥಿತಿ ಬೇರೆಯೇ ಆಗಿದೆ. ವಾಸ್ತವಿಕತೆ ಮುಚ್ಚಿಡುವ ಭರದಲ್ಲಿ ಸರ್ಕಾರವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದನ್ನೇ ಮರೆತು, ಬರೀ ಪ್ರಚಾರದಲ್ಲಿ ತೊಡಗುವುದರಿಂದ ಒಟ್ಟಾರೆ ಆರ್ಥಿಕತೆ ಚೇತರಿಕೆಗೆ ಸುಧೀರ್ಘ ಅವಧಿಯೇ ಬೇಕಾಗುತ್ತದೆ. ಈ ಸುಧೀರ್ಘ ಅವಧಿಯಲ್ಲಿ ಬಡಪಾಯಿ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ.

ಈ ಸಂಕಷ್ಟಗಳು, ಬೆಲೆ ಏರಿಕೆಯ ಮೂಲಕ, ಸಾಲ ಮರುಪಾವತಿ ಮಾಡಲಾಗದ, ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದ ಸ್ಥಿತಿಯ ಮೂಲಕ, ಉದ್ಯೋಗವೂ ಇಲ್ಲದೇ, ಸಾಲವೂ ದೊರೆಯದೇ ಬದುಕು ನಡೆಸುವುದೇ ದುಸ್ತರ ಎನ್ನಿಸುವಷ್ಟರ ಮಟ್ಟಿಗೆ ಎದುರಾಗುತ್ತವೆ. ಈ ಸಂಕಷ್ಟಗಳನ್ನು ಎದುರಿಸಲಾಗದ ಜನರು ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ. ಅದಿರಂದಾಗುವ ದುಷ್ಪರಿಣಾಮಗಳು ಮತ್ತಷ್ಟು ಗಂಭೀರವಾಗಿರುತ್ತವೆ.

ಈಗ ಆಗಬೇಕಾಗಿರುವುದಾದರೂ ಏನು?

ಆರ್ಥಿಕತೆಯು ತ್ವರಿತ ಚೇತರಿಕೆಯಾಗತ್ತದೆ ಎಂಬ ಭ್ರಮೆಯನ್ನು ಜನರಲ್ಲಿ ಮೂಡಿಸುವುದನ್ನು ಮೋದಿ ಸರ್ಕಾರ ಮೊದಲು ನಿಲ್ಲಿಸಬೇಕಿದೆ. ಜನರಿಗೆ ವಾಸ್ತವಿಕ ಸ್ಥಿತಿಯನ್ನು ತಿಳಿಸಿ, ಚೇತರಿಕೆಗೆ ಅನುಷ್ಠಾನ ಸಾಧ್ಯವಾಗುವ ಯೋಜನೆಗಳನ್ನು ಘೋಷಣೆ ಮಾಡಬೇಕಿದೆ. 20 ಲಕ್ಷ ಕೋಟಿ ಘೋಷಣೆ ಮಾಡಿದ ನಂತರ, ವಾಸ್ತವವಾಗಿ ಬಿಡುಗಡೆ ಮಾಡಿರುವ ಮೊತ್ತ ಎಷ್ಟು? ಇದರಿಂದ ಎಷ್ಟು ಜನರಿಗೆ ಅನುಕೂಲವಾಗಿದೆ, ಮುಂದಿನ ದಿನಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ, ಎಷ್ಟು ಜನರಿಗೆ ನಗದು ಸೇರುತ್ತದೆ ಎಂಬುದರ ಮಾಹಿತಿ ನೀಡಬೇಕಿದೆ. ಜನರನ್ನು ಕತ್ತಲೆಯಲ್ಲಿಟ್ಟು ತಾತ್ಕಾಲಿಕವಾಗಿ ವೈಫಲ್ಯಗಳನ್ನು ಮುಚ್ಚಿಡಬಹುದು. ಆದರೆ, ಈ ವೈಫಲ್ಯಗಳು ರೋಗದಂತೆ. ರೋಗ ಉಲ್ಬಣಗೊಂಡಾಗ ತನ್ನಿಂತಾನೆ ಗೊತ್ತಾಗುತ್ತದೆ. ಆದರೆ, ಗೊತ್ತಾಗುವ ಹೊತ್ತಿಗೆ ದೊಡ್ಡ ಅನಾಹುತವೇ ಆಗುತ್ತದೆ.

ಭರವಸೆಗಳ ಕನಸುಗಳನ್ನು ಬಿತ್ತಿ, ಎರಡು ಅವಧಿಗೆ ಮತಗಳ ಸಮೃದ್ಧ ಬೆಳೆ ಪಡೆದ ಪ್ರಧಾನಿ ನರೇಂದ್ರಮೋದಿ, ಇನ್ನಾದರೂ ಕನಸುಗಳನ್ನು ಬಿತ್ತಿವುದನ್ನು ಬಿಟ್ಟು, ವಾಸ್ತವಿಕತೆಯ ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಅರಿಯಬೇಕು. ಅದು ತ್ವರಿತವಾಗಿ, ಆದ್ಯತೆ ಮೇಲೆ ಆಗಬೇಕಾಗಿರುವ ಕೆಲಸ.

Click here to follow us on Facebook , Twitter, YouTube, Telegram

Pratidhvani
www.pratidhvani.com