ರಾಹುಲ್ ಗಾಂಧಿ vs ರವಿಶಂಕರ್ ಪ್ರಸಾದ್ ವಾಕ್ಸಮರಕ್ಕೆ ಕಾರಣವಾದ ಫೇಸ್ಬುಕ್
ರಾಷ್ಟ್ರೀಯ

ರಾಹುಲ್ ಗಾಂಧಿ vs ರವಿಶಂಕರ್ ಪ್ರಸಾದ್ ವಾಕ್ಸಮರಕ್ಕೆ ಕಾರಣವಾದ ಫೇಸ್ಬುಕ್

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದು, ಸೋತು ಸುಣ್ಣವಾಗಿರುವ ರಾಹುಲ್ ಗಾಂಧಿ ಭಾರತೀಯ ಜನತಾ ಪಾರ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂರಿದ್ದಾರೆ. ತನ್ನದೇ ಪಕ್ಷದ ಜನರ ಮೇಲೆ ಪ್ರಭಾವ ಬೀರಲು ಸಾಧ್ಯವಾಗದೆ ಸೋತಿರುವ ವ್ಯಕ್ತಿಯೊಬ್ಬರು, ಇಡೀ ಜಗತ್ತನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂದು ಹೇಳುತ್ತಿದ್ದಾರೆ.

ಕೃಷ್ಣಮಣಿ

ಡಾ. ಮನಮೋಹನ ಸಿಂಗ್ ನೇತೃತ್ವದ ಯುಪಿಎ ಅವಧಿಯ ಕೊನೇ ಹಂತದಲ್ಲಿ ಫೇಸ್‌ಬುಕ್‌ ಹಾಗೂ ವಾಟ್ಸ್ಆ್ಯಪ್ ಬಳಕೆದಾರರು ಭಾರತದಲ್ಲಿ ಜನ್ಮ ತಳೆದ ಕಾಲಘಟ್ಟ. 2014ರಲ್ಲಿ ನರೇಂದ್ರ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಆದ ಬಳಿಕ ಫೇಸ್‌ಬುಕ್‌ ಹಾಗೂ ವಾಟ್ಸ್ಆ್ಯಪ್ ಲ್ಲಿ ನರೇಂದ್ರ ಮೋದಿ ಬಗ್ಗೆ ನೂರಾರು ಸಂದೇಶಗಳು ಜನರನ್ನು ತಲುಪಲು ಶುರುವಾದವು. ಫೇಸ್‌ಬುಕ್‌, ವಾಟ್ಸ್ಆ್ಯಪ್ನಲ್ಲೂ ಅಬ್ಬರದ ಪ್ರಚಾರ ನಡೆದಿತ್ತು. ನರೇಂದ್ರ ಮೋದಿ ಅಬ್ಬರದ ಮಾತು ಹಾಗೂ ಫೇಸ್‌ಬುಕ್‌ ವಾಟ್ಸ್ ಆ್ಯಪ್ ಕ್ಯಾಂಪೇನ್ ಕೂಡ ಮೋದಿ ಗೆಲುವಿನಲ್ಲಿ ಪಾತ್ರ ಹೊಂದಿದೆ ಎಂದರೆ ಸುಳ್ಳಲ್ಲ. ಆದರೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳೂ ಕೂಡ ಇದೇ ರೀತಿ ಪ್ರಚಾರ ಮಾಡಬಹುದಲ್ಲವೇ ಎಂದು ಪ್ರಶ್ನೆ ಮಾಡಬಹುದು. ನಿಜ, ಆದರೆ ಫೇಸ್‌ಬುಕ್‌, ವಾಟ್ಸ್ ಆ್ಯಪ್ ಇದಕ್ಕೆ ಒಪ್ಪುವುದಿಲ್ಲ ಎನ್ನಲಾಗ್ತಿದೆ.

ತಳಮಟ್ಟದ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿರುವ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್‌ ಹಾಗೂ ವಾಟ್ಸ್ ಆ್ಯಪ್. ಇದೀಗ ಈ ಎರಡೂ ಸಾಮಾಜಿಕ ಜಾಲತಾಣಗಳು ಆಡಳಿತ ರೂಢ ಬಿಜೆಪಿ ಹಾಗೂ ಬಿಜೆಪಿ ಮಾತೃಸಂಸ್ಥೆ ಆರ್‌ಎಸ್ಎಸ್ ಹಿಡಿತದಲ್ಲಿದೆ ಎನ್ನುವ ಗಂಭೀರ ಆರೋಪ ಎದುರಾಗಿದೆ. ಭಾರತದಲ್ಲಿ ಫೇಸ್ಬುಕ್ ಕಣ್ಣು ಕುರುಡಾಗಿದ್ದು, ಬಿಜೆಪಿ ಮತ್ತು ಅದರ ಬೆಂಬಲಿಗರ ಪೋಸ್ಟ್ಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿರುವ ಹಿನ್ನೆಲೆಯಲ್ಲಿ ಗಲಭೆಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ. ವಾಲ್ಸ್ಟ್ರೀಟ್ ಜರ್ನಲ್ ವರದಿ ಉಲ್ಲೇಖಿಸಿ ಈ ಆರೋಪ ಮಾಡಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್ಎಸ್ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ ಮೇಲೆ ಹಿಡಿತ ಹೊಂದಿದ್ದು, ಅವರು ನಕಲಿ ಅಥವಾ ದ್ವೇಷದ ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದು, ಇದು ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತಿವೆ. ಆದರೆ ಅಂತಿಮವಾಗಿ ಅಮೆರಿಕ ಮಾಧ್ಯಮಗಳು ಫೇಸ್ಬುಕ್ ಸತ್ಯವನ್ನು ಬಹಿರಂಗ ಮಾಡಿವೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಆರೋಪವನ್ನು ಕಾಂಗ್ರೆಸ್ ಸಂಸದ ಶಶಿತರೂರ್ ಹಾಗೂ ಮನೀಷ್ ತಿವಾರಿ ಬೆಂಬಲಿಸಿದ್ದಾರೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದು, ಸೋತು ಸುಣ್ಣವಾಗಿರುವ ರಾಹುಲ್ ಗಾಂಧಿ ಭಾರತೀಯ ಜನತಾ ಪಾರ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂರಿದ್ದಾರೆ. ತನ್ನದೇ ಪಕ್ಷದ ಜನರ ಮೇಲೆ ಪ್ರಭಾವ ಬೀರಲು ಸಾಧ್ಯವಾಗದೆ ಸೋತಿರುವ ವ್ಯಕ್ತಿಯೊಬ್ಬರು, ಇಡೀ ಜಗತ್ತನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎಂದು ಹೇಳಿದ್ದಾರೆ. ಚುನಾವಣೆಗೂ ಮುಂಚಿತವಾಗಿ ಡಾಟಾ ಸಂಗ್ರಹ ಮಾಡಲು ಕೇಂಬ್ರಿಡ್ಜ್ ಅನಾಲಿಟಿಕಲ್ ಮತ್ತು ಫೇಸ್ಬುಕ್ ಈಗ ನಮ್ಮನ್ನೇ ಪ್ರಶ್ನೆ ಮಾಡುವ ಮೂಲಕ ಕೆಣಕುವ ಪ್ರಯತ್ನ ಮಾಡುತ್ತಿದ್ದೀರಾ..? ಎಂದು ಟೀಕಿಸಿದ್ದಾರೆ. ಇನ್ನೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ರವಿಶಂಕರ್ ಪ್ರಸಾದ್, ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಹಿತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಚೆನ್ನಾಗಿದೆ. ಗಾಂಧಿ ಕುಟುಂಬ ಇಷ್ಟು ದಿನಗಳ ಕಾಲ ಪ್ರಬಾವ ಬೀರುತ್ತಿತ್ತು. ಆದರೆ ಇದೀಗ ಅದು ಸಾಧ್ಯವಾಗದಿರುವುದಕ್ಕೆ ನೋವಾಗುತ್ತಿದೆ ಎಂದು ಕುಟುಕಿದ್ದಾರೆ.

ನಮಗೆ ರಾಜಕೀಯ ಪಕ್ಷಗಳ ಜೊತೆ ಲಿಂಕ್‌ ಇಲ್ಲ..!

ಕಾಂಗ್ರೆಸ್‌, ಬಿಜೆಪಿ ಆರೋಪ ತಾರಕಕ್ಕೇರುತ್ತಿದ್ದ ಹಾಗೆ ಫೇಸ್‌ಬುಕ್‌ ಪ್ರತಿಕ್ರಿಯೆ ಕೊಟ್ಟಿದೆ. ಅದರಲ್ಲೂ ಬಿಜೆಪಿ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್‌ ಮಾಡಿದ್ದ ಆರೋಪವನ್ನು ಅಲ್ಲಗಳೆದಿದೆ. ಫೇಸ್‌ಬುಕ್‌ ಸಂಸ್ಥೆ ಮಾಧ್ಯಮ ವಕ್ತಾರರು ಈ ಬಗ್ಗೆ ವಿವರಣೆ ಕೊಟ್ಟಿದ್ದು, ನಾವು ಯಾವುದೇ ಕಾರಣಕ್ಕೂ ದ್ವೇಷದ ಹೇಳಿಕೆಗಳನ್ನು ಉತ್ತೇಜನ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷಗಳನ್ನು ಲೆಕ್ಕಿಸದೆ ಜಾಗತಿಕವಾಗಿ ಫೇಸ್‌ಬುಕ್‌ ತನ್ನದೇ ನೀತಿಗಳನ್ನೇ ಜಾರಿಗೊಳಿಸುತ್ತದೆ. ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ದ್ವೇಷದ ಹೇಳಿಕೆಗಳನ್ನು ನಾವು ಪ್ರಚಾರ ಮಾಡುವುದಿಲ್ಲ ಎಂದಿದೆ. ಅಮೆರಿಕದ ಸುದ್ದಿಸಂಸ್ಥೆ ಕೊಟ್ಟಿರುವ ವರದಿ ಸತ್ಯಕ್ಕೆ ದೂರವಾದದ್ದು ಎಂದಿದೆ.

ಫೇಸ್‌ಬುಕ್‌ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳನ್ನು ದೂರವಿಟ್ಟು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದೆ ಎನ್ನುವ ಆರೋಪದಲ್ಲಿ ಸಂಪೂರ್ಣ ಸುಳ್ಳಲ್ಲ ಎನಿಸುತ್ತದೆ. ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಪ್ರಜಾಪ್ರಭುತ್ವ ಇರುವ ರಾಷ್ಟ್ರಗಳಲ್ಲಿ ಮಾಧ್ಯಮಗಳು ಆಡಳಿತ ಪಕ್ಷದ ವಿರೋಧಿಯಾಗಿ ಕೆಲಸ ಮಾಡಬೇಕು. ಸರಿಯಾಗಿದ್ದರೆ ಸರಿ ಎಂದು ತಪ್ಪಿದ್ದರೆ ತಪ್ಪೆಂದು ಚಾಟಿ ಬೀಸಿದಾಗ ಮಾತ್ರ ಸಮಾಜ ಉತ್ತಮ ಮಾರ್ಗದಲ್ಲಿ ಸಾಗುವುದಕ್ಕೆ ಸಾಧ್ಯ ಎನ್ನುವ ಮಾತಿದೆ. ಆದರೆ ಇಂದು ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಕಣ್‌ ಬಿಟ್ಟರೂ ಸುದ್ದಿ, ಆಕಳಿಸಿದ್ರೂ ಸುದ್ದಿ ಎನ್ನುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ, ಅವರ ಆಡಳಿತದ ವಿರುದ್ಧ ದನಿ ಎತ್ತಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇತ್ತೀಚೆಗಷ್ಟೇ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು, ಯಾವ ಯಾವ ಚರ್ಚೆಗಳಾದವು ಎಂದು ತಿಳಿಯುವುದು ಹೇಗೆ? ಆದರೆ ಒಂದು ವೇಳೆ ಕಾಂಗ್ರೆಸ್‌ ಆರೋಪ ಸತ್ಯವೇ ಆಗಿದ್ದರೆ, ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಮಾಡಿರುವುದು ಮಹಾಮೋಸ.

Click here to follow us on Facebook , Twitter, YouTube, Telegram

Pratidhvani
www.pratidhvani.com