ಕಾವೇರಿ ಕಾಲಿಂಗ್ ಯೋಜನೆಗೂ ಸರ್ಕಾರಕ್ಕೂ ಸಂಬಂಧವಿಲ್ಲ; ಹೈಕೋರ್ಟಿಗೆ ರಾಜ್ಯ ಮಾಹಿತಿ
ರಾಷ್ಟ್ರೀಯ

ಕಾವೇರಿ ಕಾಲಿಂಗ್ ಯೋಜನೆಗೂ ಸರ್ಕಾರಕ್ಕೂ ಸಂಬಂಧವಿಲ್ಲ; ಹೈಕೋರ್ಟಿಗೆ ರಾಜ್ಯ ಮಾಹಿತಿ

ಕಾವೇರಿ ಕಾಲಿಂಗ್ ಯೋಜನೆಗಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸದಂತೆ ಪ್ರತಿಷ್ಠಾನಕ್ಕೆ ನಿರ್ದೇಶನ ಕೋರಿ ವಕೀಲ ಎ ವಿ ಅಮರನಾಥನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಸಂದರ್ಭದಲ್ಲಿ ಈ ಅಫಿಡವಿಟ್ ಸಲ್ಲಿಸಲಾಗಿದೆ

ಕೋವರ್ ಕೊಲ್ಲಿ ಇಂದ್ರೇಶ್

ಕರ್ನಾಟಕ ಹಾಗೂ ತಮಿಳುನಾಡಿನ ಲಕ್ಷಾಂತರ ಜನರ ಜೀವನಾಡಿಯಾಗಿರುವುದು ಕಾವೇರಿ ನದಿ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಬಂಗಾಳ ಕೊಲ್ಲಿ ಸಮುದ್ರ ಸೇರುವ ಈ ನದಿಯ ಉದ್ದ 805 ಕಿಲೋಮೀಟರ್‌ ಆಗಿದ್ದು, ಲಕ್ಷಾಂತರ ಎಕರೆ ಭೂಮಿಯು ಹಸಿರಾಗಿರುವುದೂ ಇದೇ ಕಾವೇರಿಯಿಂದಾಗಿ. ಆದರೆ ವರ್ಷಗಳು ಉರುಳಿದಂತೆ ಕಾವೇರಿ ನದಿಯನ್ನೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡ ಹಿನ್ನೆಲೆಯಲ್ಲಿ ಇಂದು ಕಾವೇರಿ ನದಿಯ ನೀರು ಕೊಡಗಿನಲ್ಲೇ ಕುಡಿಯಲು ಯೋಗ್ಯವಾಗಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತೀ 6 ತಿಂಗಳಿಗೊಮ್ಮೆ ನಡೆಸುವ ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ಸಾಬೀತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಷ್ಟೇ ಅಲ್ಲ ಇಂದು ನದಿಯು ಹರಿಯುವ ದಿಕ್ಕೇ ಬದಲಾಗಿದ್ದು ಹೂಳು ತುಂಬಿಕೊಂಡಿದೆ. ಇದ್ದರೂ ಇದರಿಂದಾಗಿ ಹೆಚ್ಚು ತೊಂದರೆ ಆಗಿರುವುದು ಕೊಡಗಿನ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕುಶಾಲನಗರ ಪಟ್ಟಣಕ್ಕೆ. ಇಲ್ಲಿ ಕಳೆದ ಮೂರು ವರ್ಷಗಳಿಂದಲೂ ನದಿ ಸಮೀಪದ ಬಡಾವಣೆಗಳಲ್ಲಿ ಪ್ರವಾಹ ಉಂಟಾಗಿ ಮನೆಗಳು ನೀರಿನಲ್ಲಿ ಮುಳುಗುತ್ತಿವೆ. ಅಷೇ ಅಲ್ಲ ನದಿಯ ಬದಿಯಿಂದ 50 ಮೀಟರ್‌ ವರೆಗೆ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡಬಾರದೆಂದು ಕಾನೂನೇ ಇದ್ದರೂ ಬಹುತೇಕ 800 ಕಿಲೋ ಮೀಟರ್‌ ಉದ್ದಕ್ಕೂ ನದಿಯ ಅಕ್ಕ ಪಕ್ಕದಲ್ಲಿ ಕಟ್ಟಡಗಳು ನಿರ್ಮಾಣಗೊಂಡಿವೆ.

ಇನ್ನು ಒಂದು ಕಾಲದಲ್ಲಿ ದಟ್ಟ ಕಾಡನ್ನೇ ಸೃಷ್ಟಿಸಿದ್ದ ನದಿ ಪಕ್ಕದ ಮರಗಳು ಕಟ್ಟಡ ನಿರ್ಮಾಣದಿಂದ ಸಂಪೂರ್ಣ ನಾಶವಾಗಿವೆ. ದಶಕಗಳ ಹಿಂದೆ ಪೂಂಪುಹಾರ್‌ ತನಕ ವರ್ಷವಿಡೀ ಹರಿಯುತಿದ್ದ ಕಾವೇರಿ ನದಿಯ ನೀರು ಇಂದು ಪೂಂಪುಹಾರ್‌ ತಲುಪುತ್ತಿಲ್ಲ. ಅರಣ್ಯ ನಾಶದಿಂದಾಗಿ ನದಿಯಲ್ಲಿ ನೀರಿನ ಇಳುವರಿ ಕಡಿಮೆ ಆಗಿರುವುದೇ ಇದಕ್ಕೆ ಕಾರಣವಾಗಿದೆ.

ಕೊಯಮತ್ತೂರು ಮೂಲದ ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev)‌ ಅವರ ನೇತೃತ್ವದ ಎನ್‌ಜಿಓ ಇಶಾ ಫೌಂಡೇಷನ್‌ ಕಾವೇರಿ ನದಿಯ ರಕ್ಷಣೆಗೆ ಯೋಜನೆಯೊಂದನ್ನು ಹಾಕಿಕೊಂಡಿದ್ದು ಕಳೆದ ವರ್ಷದಿಂದಲೂ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಈ ಯೋಜನೆಯನ್ನು ಕಾವೇರಿ ಕಾಲಿಂಗ್‌(Cauvery Calling) ಎಂದು ಕರೆಯಲಾಗುತಿದ್ದು ಪ್ರಾರಂಭದಲ್ಲೇ ಈ ಯೋಜನೆಯ ಬಗ್ಗೆ ಅಪಸ್ವರಗಳು ಎದ್ದು ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ. ಇಶಾ ಫೌಂಡೇಷನ್‌ ಯೋಜನೆಯ ಪ್ರಕಾರ ಕಾವೇರಿ ನದಿ ಅಕ್ಕ ಪಕ್ಕದ 100 ಮೀಟರ್‌ ವ್ಯಾಪ್ತಿಯಲ್ಲಿ 800 ಕಿಲೋಮೀಟರ್‌ ಗಳ ಉದ್ದಕ್ಕೂ ಅರಣ್ಯ ಬೆಳೆಸುವುದು, ಆ ಮೂಲಕ ನದಿಯ ಸಂರಕ್ಷಣೆ ಮತ್ತು ಭೂ ಸವಕಳಿ ತಡೆಯುವುದು ನದಿಯು ಒತ್ತುವರಿ ಆಗದಂತೆ ನೋಡಿಕೊಳ್ಳುವುದು, ನದಿಯಲ್ಲಿ ನೀರಿನ ಹರಿವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇಶಾ ಫೌಂಡೇಷನ್(Isha Foundation)‌ ಪ್ರಕಾರ ಕಳೆದ 70 ವರ್ಷಗಳಲ್ಲಿ ಕಾವೇರಿ ನದಿಯ ಶೇಕಡಾ 40 ರಷ್ಟು ನಾಶವಾಗಿದ್ದು ಶೇಕಡಾ 87 ರಷ್ಟು ನದಿ ಕಣಿವೆಯ ಮರಗಿಡಗಳೂ ನಾಶವಾಗಿವೆ. ಬೇಸಿಗೆಯಲ್ಲಿ ನದಿಯ ನೀರು ಸಮುದ್ರಕ್ಕೆ ತಲುಪುತ್ತಲೇ ಇಲ್ಲ ಮತ್ತು ಶೇಕಡಾ 70 ರಷ್ಟು ಭೂ ಸವಕಳಿಯೂ ಆಗಿದೆ. 2019 ರಲ್ಲಿ ತಮಿಳುನಾಡಿನ 17 ಜಿಲ್ಲೆಗಳು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಕರ್ನಾಟಕದ ಪರಿಸ್ಥಿತಿಯೂ ಇದೇ ರೀತಿ ಇದೆ. ಕಾವೇರಿ ಕಣಿವೆಯಲ್ಲಿ ಕಳೆದ 15 ವರ್ಷಗಳಲ್ಲಿ 47 ಸಾವಿರ ರೈತರ ಆತ್ಮಹತ್ಯೆ ಗಳು ನಡೆದಿವೆ. ಶೇಕಡಾ 90 ರಷ್ಟು ರೈತರು ಈಗಲೂ ಸಾಲದಿಂದ ಮುಕ್ತರಾಗಿಲ್ಲ ಎಂದು ಇಷಾ ಫೌಂಡೇಷನ್‌ ಹೇಳಿಕೊಂಡಿದೆ. ಇದಕ್ಕಾಗಿಯೇ ನದಿಯ ಅಕ್ಕ ಪಕ್ಕದಲ್ಲಿ ಒಟ್ಟು 242 ಕೋಟಿ ಗಿಡಗಳನ್ನು ಸಾರ್ವಜನಿಕರ ಸಹಯೋಗದೊಂದಿಗೆ ನೆಡುವ ಕಾರ್ಯಕ್ಕೆ ಮುಂದಾಗಿದೆ. ಇದರಿಂದಾಗಿ ನದಿಯಲ್ಲಿ ನೀರಿನ ಹರಿವು ಶೇಕಡಾ 40 ರಷ್ಟು ಏರಿಕೆ ಆಗಲಿದೆ ಎಂದು ಫೌಂಡೇಷನ್‌ ಹೇಳಿದೆ.

ಇಶಾ ಫೌಂಡೇಷನ್‌ ನ ಈ ಯೋಜನೆ ನಿಜಕ್ಕೂ ಒಂದು ಉತ್ತಮ ಯೋಜನೆಯೇ ಆಗಿದೆ. ಆದರೆ ಈ ಯೋಜನೆಗೆ ಅಪಸ್ವರ ಯಾಕೆ ಎದ್ದಿದೆ ಎಂದರೆ ಇಷಾ ಫೌಂಡೇಷನ್‌ ಈ ಯೋಜನೆಗೆ ತನ್ನ ಹಣ ಅಥವಾ ವಿದೇಶೀ ಎನ್‌ಜಿಓಗಳಿಂದ ಫಂಡ್‌ ಪಡೆದು ವೆಚ್ಚ ಮಾಡುತ್ತಿಲ್ಲ ಬದಲಿಗೆ ಪ್ರತೀ ಗಿಡ ನೆಡಲು ಸಾರ್ವಜನಿಕರಿಂದಲೇ ಪ್ರತೀ ಗಿಡಕ್ಕೆ ತಲಾ 42 ರೂಪಾಯಿಗಳಂತೆ ಸಂಗ್ರಹಿಸುತ್ತಿದೆ. ಅಂದರೆ 242 ಕೋಟಿ ಗಿಡ ನೆಡಲು ಇಷಾ ಫೌಂಡೇಷನ್‌ ಸಾರ್ವಜನಿಕರಿಂದ ಒಟ್ಟು 10,142 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದೆ.

ಆದರೆ ಈ ಯೋಜನೆಯ ವಿರೋಧಿಗಳು ಇದೊಂದು ದೊಡ್ಡ ಹಗರಣ ಎಂದು ಬಣ್ಣಿಸುತಿದ್ದಾರೆ. ಅಷ್ಟೆ ಅಲ್ಲ ಈ ಕುರಿತು ಯೋಜನೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯ ಹೈ ಕೋರ್ಟಿನಲ್ಲೂ ರಿಟ್‌ ಅರ್ಜಿಯನ್ನೂ ಸಲ್ಲಿಸಿದ್ದು ಅದು ಈಗ ವಿಚಾರಣೆಯ ಹಂತದಲ್ಲಿದೆ. ಮೊನ್ನೆ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರವು ಅಡ್ವೋಕೇಟ್‌ ಜನರಲ್‌ ಮೂಲಕ ನೀಡಿರುವ ಉತ್ತರದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಪ್ರಸ್ತಾಪಿಸಿರುವ 'ಕಾವೇರಿ ಕಾಲಿಂಗ್' ಯೋಜನೆ ರಾಜ್ಯ ಸರ್ಕಾರದ ಯೋಜನೆಯಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಆಕ್ಷೇಪಣೆಗಳ ಪೂರಕ ಹೇಳಿಕೆಯಲ್ಲಿ, ಪ್ರತಿವಾದಿ 2 (ಇಶಾ ಫೌಂಡೇಶನ್) ನ ಜವಾಬ್ದಾರಿಯು ರಾಜ್ಯ ಸರ್ಕಾರದ ಜಾರಿಗೆ ತಂದಿರುವ ಕೃಷಿ ಮತ್ತು ಅರಣ್ಯ ಪ್ರೋತ್ಸಾಹ ಯೋಜನೆ ಯ ಅಡಿಯಲ್ಲಿ ರೈತರನ್ನು ಸಜ್ಜುಗೊಳಿಸಲು/ಪ್ರೇರೇಪಿಸಲು ಮತ್ತು ದಾಖಲಿಸಲು ಮಾತ್ರ ಸೀಮಿತವಾಗಿದೆ ಮತ್ತು ಅದನ್ನು ಮೀರಿಲ್ಲ ಎಂದು ಹೇಳಿದೆ.

ನ್ಯಾಯಾಲಯದ ಮುಂದೆ ಸಲ್ಲಿಸಿದ ಆಕ್ಷೇಪಣೆಗಳ ಹೇಳಿಕೆಯಲ್ಲಿ ರಾಜ್ಯವು ಎರಡನೇ ಪ್ರತಿವಾದಿಯ ಯೋಜನೆಗೆ ಪ್ರಾಯೋಜಕತ್ವ ಅಥವಾ ಹಣಕಾಸು ಒದಗಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, 'ಕಾವೇರಿ ಕಾಲಿಂಗ್' ನ ಎರಡನೇ ಪ್ರತಿವಾದಿಯ ಯೋಜನೆಯನ್ನು ರಾಜ್ಯ ಸರ್ಕಾರವು ಅಂಗೀಕರಿಸಿದೆ ಎಂದು ಮತ್ತೊಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಅಸಂಗತತೆಯನ್ನು ವಿವರಿಸಲು ನ್ಯಾಯಾಲಯ ರಾಜ್ಯವನ್ನು ಕೇಳಿದೆ.

ಪೂರಕ ಹೇಳಿಕೆಯಲ್ಲಿ 2019 ರ ಆಗಸ್ಟ್ ತಿಂಗಳಲ್ಲಿ ಇಶಾ ಫೌಂಡೇಶನ್ ಕರಡು ವಿವರವಾದ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನು ಸರ್ಕಾರ ಮತ್ತು ಅದರ ಅಧಿಕಾರಿಗಳು ಚರ್ಚಿಸಿದ್ದಾರೆ. ಚರ್ಚೆಯ ಸಮಯದಲ್ಲಿ, ಅರಣ್ಯ ಇಲಾಖೆಯು 2011 ರಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತಂದಿದೆ ಎಂದೂ ಕೋರ್ಟಿಗೆ ತಿಳಿಸಲಾಗಿದೆ. ಇಶಾ ಫೌಂಡೇಶನ್ ಸಲ್ಲಿಸಿದ ಕರಡು ವಿವರವಾದ ಯೋಜನಾ ವರದಿಯನ್ನು ವಿವರವಾದ ಚರ್ಚೆ ಮತ್ತು ಪರಿಗಣಿಸಿದ ನಂತರ ಮತ್ತು ಯೋಜನೆಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯು ಎರಡು ಕೋಟಿ ಹೆಚ್ಚುವರಿ ಸಸಿಗಳನ್ನು ಸಂಗ್ರಹಿಸಿ ಅಸ್ತಿತ್ವದಲ್ಲಿರುವ ಯೋಜನೆಯಡಿ ವಿತರಿಸಲು ನಿರ್ಧರಿಸಲಾಯಿತು. ಇಶಾ ಫೌಂಡೇಶನ್ ರೈತರನ್ನು ಪ್ರೇರೇಪಿಸಲು ಮತ್ತು ರಾಜ್ಯ ಸರ್ಕಾರದ ಅಸ್ತಿತ್ವದಲ್ಲಿರುವ ಯೋಜನೆಯಡಿ ಅವರನ್ನು ಸೇರಿಸಲು ಅವಕಾಶ ನೀಡಲಾಯಿತು ಎಂದೂ ತಿಳಿಸಿದೆ.

ಇದಲ್ಲದೆ, ಹೆಚ್ಚುವರಿ ಸಸಿಗಳನ್ನು ಬೆಳೆಸಲು ಮತ್ತು ಇಶಾ ಪ್ರತಿಷ್ಠಾನದಿಂದ ಪ್ರೇರೇಪಿಸಲ್ಪಟ್ಟ ರೈತರಿಗೆ ಲಭ್ಯವಾಗುವಂತೆ, ಅರಣ್ಯ ಇಲಾಖೆಯು 2019 ರ ಸೆಪ್ಟೆಂಬರ್ 12 ರಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು, ಇದನ್ನು ಸರ್ಕಾರ ಅಂಗೀಕರಿಸಿತು. ಇಶಾ ಫೌಂಡೇಶನ್‌ನ ಕರಡು ವಿವರವಾದ ಯೋಜನಾ ವರದಿಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಈ ಮೊದಲು ಸಲ್ಲಿಸಿದ ಆಕ್ಷೇಪಣೆಯ ಹೇಳಿಕೆಯಲ್ಲಿ ಇಶಾ ಫೌಂಡೇಶನ್ ನ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ ಎಂದು ಹೇಳಿಕೆಯು ಅರಣ್ಯ ಇಲಾಖೆಯ ಪ್ರಸ್ತಾಪವನ್ನು ಉಲ್ಲೇಖಿಸುತ್ತದೆ ಎಂದು ಇದು ಸ್ಪಷ್ಟಪಡಿಸುತ್ತದೆ.

ಕಾವೇರಿ ಕಾಲಿಂಗ್ ಯೋಜನೆಗಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸದಂತೆ ಪ್ರತಿಷ್ಠಾನಕ್ಕೆ ನಿರ್ದೇಶನ ಕೋರಿ ವಕೀಲ ಎ ವಿ ಅಮರನಾಥನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಸಂದರ್ಭದಲ್ಲಿ ಈ ಅಫಿಡವಿಟ್ ಸಲ್ಲಿಸಲಾಗಿದೆ. ರಿಟ್‌ ಅರ್ಜಿಯ ಪ್ರಕಾರ, ಫೌಂಡೇಶನ್ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಿಂದ ತಿರುವರೂರಿನವರೆಗೆ 639 ಕಿಲೋಮೀಟರ್ ವ್ಯಾಪ್ತಿಯ ಕಾವೇರಿ ನದಿ ತೀರದಲ್ಲಿ 242 ಕೋಟಿ ಮರದ ಸಸಿಗಳನ್ನು ನೆಡಲು ಯೋಜಿಸಿದೆ. ಫೌಂಡೇಷನ್‌ ಇದಕ್ಕಾಗಿ . ಸಾರ್ವಜನಿಕರಿಂದ ಪ್ರತೀ ಗಿಡ ನಡಲು ತಲಾ 42 ರೂ. ಅಂದರೆ ಇದು ಒಟ್ಟು 10,142 ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿದೆ, ಇದು ಅರ್ಜಿದಾರರ ಪ್ರಕಾರ ದೊಡ್ಡ ಹಗರಣವಾಗಿದೆ. ಕಳೆದ ಜನವರಿ 7 ರಂದು ನ್ಯಾಯಾಲಯವು ಇಶಾ ಫೌಂಡೇಶನ್‌ಗೆ 'ಕಾವೇರಿ ಕಾಲಿಂಗ್ ಯೋಜನೆಗಾಗಿ ಸಂಗ್ರಹಿಸಿದ ಮೊತ್ತವನ್ನು ಬಹಿರಂಗಪಡಿಸುವಂತೆ ಹೇಳಿತ್ತು. ಆಗ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು ನೀವು ಆಧ್ಯಾತ್ಮಿಕ ಸಂಘಟನೆಯಾಗಿರುವ ಕಾರಣ ನೀವು ಕಾನೂನಿಗೆ ಹೊರತಾಗಿಲ್ಲ ಎಂಬ ಅಭಿಪ್ರಾಯಕ್ಕೆ ಒಳಗಾಗಬೇಡಿ ಎಂದು ಹೇಳಿತ್ತು. ಅರ್ಜಿಯ ವಿಚಾರಣೆಯನ್ನು ಮುಂದಿನ ಆಗಸ್ಟ್ 25 ಕ್ಕೆ ಮುಂದೂಡಲಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com