ಡಿಜಿಟಲ್ ಹೆಲ್ತ್ ಮಿಷನ್ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಮುಂದಾದ ಮೋದಿ ಸರ್ಕಾರ
ರಾಷ್ಟ್ರೀಯ

ಡಿಜಿಟಲ್ ಹೆಲ್ತ್ ಮಿಷನ್ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಮುಂದಾದ ಮೋದಿ ಸರ್ಕಾರ

ಪ್ರತಿ ಬಾರಿಯೂ ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯುವಾಗ, ಪ್ರತಿ ಬಾರಿ ಒಬ್ಬ ವ್ಯಕ್ತಿಯು ರೋಗನಿರ್ಣಯ ಪರೀಕ್ಷೆಗೆ ಒಳಗಾದಾಗ ಮತ್ತು ಚಿಕಿತ್ಸೆ ಪಡೆದಾಗ ಆರೋಗ್ಯ ಡೇಟಾವನ್ನು ತಯಾರಿಸಲಾಗುತ್ತದೆ. ಈ ಅಂಕಿ ಅಂಶಗಳ ವಿವರಗಳನ್ನು ಯಾರಿಗಾದರೂ ಶೇರ್‌ ಮಾಡುವುದು ಮತ್ತು ನೋಡಲು ಅವಕಾಶ ಕೊಡುವುದು ವ್ಯಕ್ತಿಯ ಕೈಲಿರುತ್ತದೆ

ಕೋವರ್ ಕೊಲ್ಲಿ ಇಂದ್ರೇಶ್

ದೇಶದ 74 ನೇ ಸ್ವಾತಂತ್ರ್ಯೋತ್ಸವ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇನ್ನೊಂದು ಹೊಸ ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದೇ ದೇಶವನ್ನು ಕಾಡುತ್ತಿರುವ ಕರೋನಾ ವೈರಸ್‌ ಸೋಂಕು ನಿವಾರಕ ಲಸಿಕೆಯ ಬಿಡುಗಡೆಯನ್ನು ಘೋಷಿಸಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಂಡಿದ್ದು ಸುಳ್ಳೇನಲ್ಲ. ಆದರೆ ಆತುರಾತುರವಾಗಿ ಲಸಿಕೆ ಬಿಡುಗಡೆ ಮಾಡಿದರೆ ಅಥವಾ ದಿನಾಂಕ ಘೋಷಿಸಿದರೆ ಅದರಿಂದ ಮುಂದೆ ಮುಜುಗರ ಎದುರಿಸಬೇಕಾದೀತು ಎಂಬ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ಎಚ್ಚರಿಕೆಯಿಂದ ಇದನ್ನು ಕೈಬಿಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ವೇಳೆ ಕ್ಲಿನಿಕಲ್‌ ಟ್ರಯಲ್‌ ಗೂ ಮೊದಲು ಬಿಡುಗಡೆ ದಿನಾಂಕ ನಿಗದಿಪಡಿಸಿದರೆ ಬಿಡುಗಡೆ ಮಾಡಲಾಗದಿದ್ದರೆ ಅಥವಾ ಸೋಮಕು ನಿವಾರಣೆಯಲ್ಲಿ ನೂತನ ಔಷಧ ಗುಣಕಾರಿ ಆಗದಿದ್ದರೆ ಅಥವಾ ಅಡ್ಡ ಪರಿಣಾಮ ಕಾಣಿಸಿಕೊಂಡರೆ ಇದರಿಂದ ಸರ್ಕಾರ ಮತ್ತಷ್ಟು ಜನರ ಅಪ ನಂಬಿಕೆಗೆ ಕಾರಣವಾಗಬೇಕಾದೀತು ಎಂಬ ಕಾರಣಕ್ಕಾಗಿ ಲಸಿಕೆ ವಿಚಾರವನ್ನು ಕೈಬಿಡಲಾಗಿದೆ. ಅಲ್ಲದೆ ವಿಶ್ವ ಅರೋಗ್ಯ ಸಂಸ್ಥೆಯೂ ಕೂಡ ಈ ವರ್ಷದ ಅಂತ್ಯದೊಳಗಾಗಿ ಲಸಿಕೆ ಬಿಡುಗಡೆ ಆಗುವ ಕುರಿತೂ ಅನುಮಾನ ವ್ಯಕ್ತಪಡಿಸಿತ್ತು. ಇದರ ಬದಲಿಗೆ ಕೇಂದ್ರ ಸರ್ಕಾರ ಇದೀಗ ಡಿಜಿಟಲ್‌ ಹೆಲ್ತ್‌ ಮಿಷನ್‌ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಮುಂದಾಗಿದೆ. ಮೋದಿ ಅವರ ಸರ್ಕಾರ ಈಗಾಗಲೇ ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಿದೆ.

ಈ ಡಿಜಿಟಲ್‌ ಹೆಲ್ತ್‌ ಮಿಷನ್‌ ಯೋಜನೆಯೇನೋ ನಿಜಕ್ಕೂ ಉತ್ತಮವಾಗಿದೆ. ಆದರೆ ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಯಶ ಸಾಧಿಸಬೇಕು. ಹೆಸರೇ ಹೇಳುವಂತೆ ಈ ಡಿಜಿಟಲ್‌ ಹೆಲ್ತ್‌ ಯೋಜನೆಯನ್ವಯ ದೇಶದ ಅರ್ಹ ಫಲಾನುಭವಿಗಳಿಗೆ ಹೆಲ್ತ್‌ ಕಾರ್ಡ್‌ ನೀಡಲಾಗುತ್ತದೆ. ಈ ಹೆಲ್ತ್‌ ಕಾರ್ಡ್‌ ಮೂಲಕ ದೇಶದ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಅಷ್ಟೇ ಅಲ್ಲ ಈ ಕಾರ್ಡ್‌ ಮೂಲಕ ವೆಬ್‌ ಸೈಟ್‌ ಅಥವಾ ಆಪ್‌ ನ್ನು ಮೊಬೈಲ್‌ ಗೆ ಅಳವಡಿಸಿಕೊಂಡರೆ ಈ ಹಿಂದಿನಿಂದಲೂ ನೀಡಲಾಗಿರುವ ಚಿಕಿತ್ಸೆಯ ಸಂಪುರ್ಣ ವಿವರ ಅದರಲ್ಲಿ ದಾಖಲಾಗಿರುತ್ತದೆ. ಫಲಾನುಭವಿಯು ಹೆಲ್ತ್‌ ಕಾರ್ಡ್‌ ನಂಬರ್‌ ಹೇಳಿದರೂ ಅವರ ಸಂಪೂರ್ಣ ಆರೋಗ್ಯ ವಿವರ ವೆಬ್‌ ನಲ್ಲಿರುತ್ತದೆ. ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಗಾಗಿ ಆಡಳಿತ ಪ್ರಾಧಿಕಾರವಾಗಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ನೇತೃತ್ವದಲ್ಲಿ, 144 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (ಎನ್‌ಡಿಎಚ್‌ಎಂ) ಗೆ ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳಾದ ಆಯುಷ್ಮಾನ್ ಭಾರತ್ ಮತ್ತು ಕ್ಷಯರೋಗ ನಿವಾರಣಾ ಕಾರ್ಯಕ್ರಮಗಳನ್ನು ಸಂಯೋಜಿಸಿ ಮತ್ತು ಫಲಾನುಭವಿಗಳಿಗೆ ಆರೋಗ್ಯ ಐಡಿಗಳನ್ನು ಕಾರ್ಡ್‌ ಗಳನ್ನು ನೀಡಲಾಗುವುದೆಂದು ಹೇಳಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆರೋಗ್ಯ ಕಾರ್ಡ್‌ ಕಡ್ಡಾಯವಲ್ಲದಿದ್ದರೂ, ಹುಟ್ಟಿನಿಂದಲೇ ಒಬ್ಬ ವ್ಯಕ್ತಿಯು ಎಲ್ಲಾ ಆರೋಗ್ಯ ದಾಖಲೆಗಳಿಗೆ ಆನ್‌ಲೈನ್ ಸುಲಭ ಮಾರ್ಗವಾಗಿರುವುದರಿಂದ ಈ ವೈಶಿಷ್ಟ್ಯವು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತದೆ ಎಂದು ಸರ್ಕಾರ ನಿರೀಕ್ಷಿಸಿದೆ. ಐಡಿ ಯನ್ನು ಆಧಾರ್‌ಗೆ ಲಿಂಕ್ ಮಾಡುವ ಆಯ್ಕೆ ಇರುತ್ತದೆ ಆದರೆ ವ್ಯಕ್ತಿಯು ಯಾವುದೇ ಸರ್ಕಾರಿ ಸಬ್ಸಿಡಿ ಯೋಜನೆಯನ್ನು ಪಡೆಯಲು ಬಯಸದಿದ್ದರೆ ಅದು ಕಡ್ಡಾಯವಾಗುವುದಿಲ್ಲ.ಅದರ ಕಾರ್ಯತಂತ್ರದ ದಾಖಲೆಯ ಪ್ರಕಾರ, ಎನ್‌ಡಿಎಚ್‌ಎಂ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಮರ್ಥ, ಅಂತರ್ಗತ, ಕೈಗೆಟುಕುವ, ಸಮಯೋಚಿತ ಮತ್ತು ಸುರಕ್ಷಿತ ರೀತಿಯಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ರಚಿಸಲು, ಇದು ವ್ಯಾಪಕ ಶ್ರೇಣಿಯ ಡೇಟಾ, ಮಾಹಿತಿ ಮತ್ತು ಮೂಲಸೌಕರ್ಯ ಸೇವೆಗಳು, ಮುಕ್ತ, ಪರಸ್ಪರ ಕಾರ್ಯಸಾಧ್ಯವಾದ, ಮಾನದಂಡ- ಆಧಾರಿತ ಡಿಜಿಟಲ್ ವ್ಯವಸ್ಥೆಗಳನ್ನು ಸರಿಯಾಗಿ ನಿಯಂತ್ರಿಸುವುದು ಮತ್ತು ಆರೋಗ್ಯ ಸಂಬಂಧಿತ ವೈಯಕ್ತಿಕ ಮಾಹಿತಿಯ ಸುರಕ್ಷತೆ, ಮತ್ತು ಗೌಪ್ಯತೆಯನ್ನು ರಕ್ಷಿಸುತ್ತದೆ ಎನ್ನಲಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ, ಮಿಷನ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಲಕ್ಷದ್ವೀಪ, ಲಡಾಖ್ ಮತ್ತು ಪುದುಚೇರಿಯಲ್ಲಿ ಜಾರಿಗೆ ಬರಲಿದೆ. ಮೂರನೇ ಹಂತದಲ್ಲಿ ದೇಶಾದ್ಯಂತ ಜಾರಿಗೊಳ್ಳಲಿದೆ.

ಸೈದ್ಧಾಂತಿಕವಾಗಿ, ಪ್ರತಿ ಬಾರಿಯೂ ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯುವಾಗ, ಪ್ರತಿ ಬಾರಿ ಒಬ್ಬ ವ್ಯಕ್ತಿಯು ರೋಗನಿರ್ಣಯ ಪರೀಕ್ಷೆಗೆ ಒಳಗಾದಾಗ ಮತ್ತು ಚಿಕಿತ್ಸೆ ಪಡೆದಾಗ ಆರೋಗ್ಯ ಡೇಟಾವನ್ನು ತಯಾರಿಸಲಾಗುತ್ತದೆ. ಈ ಅಂಕಿ ಅಂಶಗಳ ವಿವರಗಳನ್ನು ಯಾರಿಗಾದರೂ ಶೇರ್‌ ಮಾಡುವುದು ಮತ್ತು ನೋಡಲು ಅವಕಾಶ ಕೊಡುವುದು ವ್ಯಕ್ತಿಯ ಕೈಲಿರುತ್ತದೆ. ರೋಗಿ ಬಯಸಿದರೆ ಮಾತ್ರ ಆಸ್ಪತ್ರೆಯವರು ದಾಖಲಾತಿಯನ್ನು ನೋಡಬಹುದಾಗಿದೆ. "ಎನ್ಡಿಹೆಚ್ಎಂ ಫೆಡರೇಟೆಡ್ ಹೆಲ್ತ್ ರೆಕಾರ್ಡ್ಸ್ ಎಕ್ಸ್ಚೇಂಜ್ ಸಿಸ್ಟಮ್ ಅನ್ನು ಜಾರಿಗೆ ತರುತ್ತದೆ, ಇದು ರೋಗಿಗಳ ಡೇಟಾವನ್ನು ಆರೈಕೆಯ ಹಂತದಲ್ಲಿ ಅಥವಾ ಅದನ್ನು ರಚಿಸಿದ ಸ್ಥಳಕ್ಕೆ ಹತ್ತಿರವಿರುವ ಸ್ಥಳದಲ್ಲಿ ಇಡಲು ಅನುವು ಮಾಡಿಕೊಡುತ್ತದೆ. ಎನ್ಡಿಹೆಚ್ಎಂ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸೂಕ್ತವಾದ ಡಿಜಿಟಲ್ ಒಪ್ಪಿಗೆ ಚೌಕಟ್ಟನ್ನು ನಿರ್ವಹಣೆಗೆ ಅಳವಡಿಸಲಾಗುವುದು ಎನ್ನಲಾಗಿದೆ. ಡಿಜಿಟಲ್‌ ಆರೋಗ್ಯ ಡೇಟಾವನ್ನು ಮೂರು ವಿಭಿನ್ನ ಪದರಗಳಾಗಿ ವರ್ಗೀಕರಿಸಲಾಗುತ್ತದೆ.

ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ಸ್ (ಇಎಂಆರ್)- ಇದು ರೋಗಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಬೆಂಬಲಿಸಲು ಆಸ್ಪತ್ರೆ ಅಥವಾ ಚಿಕಿತ್ಸಾಲಯದೊಳಗೆ ಬಳಸಲಾಗುವ ವ್ಯವಸ್ಥೆಗಳನ್ನು ಸೂಚಿಸುತ್ತದೆ ಮತ್ತು ಮಾನದಂಡಗಳನ್ನು ಬೆಂಬಲಿಸಲು ಮತ್ತು ರೋಗಿಗಳ ಡೇಟಾಗೆ ಪ್ರವೇಶವನ್ನು ಒದಗಿಸಲು ಈ ವ್ಯವಸ್ಥೆಗಳನ್ನು ನವೀಕರಿಸಬೇಕೆಂದು ಎನ್‌ಡಿಹೆಚ್‌ಎಂ ಹೇಳಿದೆ. ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ಸ್ (ಇಹೆಚ್ಆರ್) - ಇಎಚ್‌ಆರ್‌ಗಳು ಅನೇಕ ವೈದ್ಯರು ಮತ್ತು ಪೂರೈಕೆದಾರರಲ್ಲಿ ರೋಗಿಯ ದಾಖಲೆಗಳನ್ನು ಒಳಗೊಂಡಿರುತ್ತವೆ ಮತ್ತು ರೋಗಿಗಳಿಗೆ ಉತ್ತಮ ಆರೈಕೆಯನ್ನು ಒದಗಿಸಲು ಆರೋಗ್ಯ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ವೈಯಕ್ತಿಕ ಆರೋಗ್ಯ ದಾಖಲೆಗಳು (ಪಿಎಚ್‌ಆರ್) - ಪಿಎಚ್‌ಆರ್‌ಗಳು ರೋಗಿಗಳಿಗೆ ತಮ್ಮದೇ ಆದ ದಾಖಲೆ ತೆರೆದು ನೋಡಲು ಮತ್ತು ದಾಖಲೆಗಳ ನಕಲನ್ನು ಪಡೆಯಲು ಅನುವು ಮಾಡಿಕೊಡುತ್ತದೆ, ಅದು ಅವರ ಆರೈಕೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ವ್ಯಕ್ತಿ ಕೇಂದ್ರೀಕೃತವಾಗಿರುತ್ತದೆ. ಆದರೆ ಆರೋಗ್ಯ ಐಡಿ ಯನ್ನು ರಚಿಸದೆ ಡಿಜಿಟಲ್ ಆರೋಗ್ಯ ದಾಖಲೆಗಳಿಗೆ ಪ್ರವೇಶವನ್ನು ಹೊಂದಲು ಸಾಧ್ಯವಾಗುವುದಿಲ್ಲ.

ಇದರ ಅನುಷ್ಠಾನಕ್ಕಾಗಿ ಆರೋಗ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಅಧಿಕಾರ ಸಮಿತಿಯನ್ನು ರಚಿಸಲಾಗುವುದು, ಅದು ಅಗತ್ಯ ನೀತಿ-ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ, ವಿವಿಧ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಲು ಮಿಷನ್‌ಗೆ ಸಹಾಯ ಮಾಡುತ್ತದೆ ಸಮಿತಿಯ ಸದಸ್ಯರಲ್ಲಿ ನೀತಿ ಆಯೋಗದ ಸಿಇಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆಯುಷ್, ಎನ್‌ ಹೆಚ್‌ಎಂ ಮತ್ತು ಎನ್‌ಎಚ್‌ಎ ಸಿಇಒ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದ ಮುಖ್ಯಸ್ಥರೂ ಇದ್ದಾರೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರೆ ದೇಶದ ಬಿಪಿಎಲ್‌ ಕುಟುಂಬಗಳಿಗೆ ಮುಖ್ಯವಾಗಿ ವಲಸೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com