ಅತಿ ಶೀಘ್ರದಲ್ಲೇ ಏರಲಿದೆ ಮೊಬೈಲ್ ಕಾಲ್ ಮತ್ತು ಡೇಟಾ ದರ
ರಾಷ್ಟ್ರೀಯ

ಅತಿ ಶೀಘ್ರದಲ್ಲೇ ಏರಲಿದೆ ಮೊಬೈಲ್ ಕಾಲ್ ಮತ್ತು ಡೇಟಾ ದರ

ಶೀಘ್ರದಲ್ಲೇ ಮೊಬೈಲ್ ಕಾಲ್ ಮತ್ತು ಡೇಟಾ ದರ ಏರಿಕೆ ಆಗಲಿದೆ. 2019 ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಮೊಬೈಲ್ ಕಂಪನಿಗಳು ಸರಾಸರಿ ಶೇ.40ರಷ್ಟು ಕಾಲ್ ಮತ್ತು ಡೇಟಾ ದರ ಏರಿಕೆ ಮಾಡಿದ್ದವು. ಈಗ ಮತ್ತೆ ದರ ಏರಿಕೆ ಮಾಡಲಿವೆ.

ರೇಣುಕಾ ಪ್ರಸಾದ್ ಹಾಡ್ಯ

ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೇಲ್ ದರವನ್ನು ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಮಾಡಿದೆ. ಸತತ ದರ ಏರಿಕೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗ ಮೊಬೈಲ್ ಕಾಲ್ ಮತ್ತು ಡೇಟಾ ದರ ಏರಿಕೆಯ ಸರದಿ.

ಹೌದು. ಶೀಘ್ರದಲ್ಲೇ ಮೊಬೈಲ್ ಕಾಲ್ ಮತ್ತು ಡೇಟಾ ದರ ಏರಿಕೆ ಆಗಲಿದೆ. 2019 ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಮೊಬೈಲ್ ಕಂಪನಿಗಳು ಸರಾಸರಿ ಶೇ.40ರಷ್ಟು ಕಾಲ್ ಮತ್ತು ಡೇಟಾ ದರ ಏರಿಕೆ ಮಾಡಿದ್ದವು. ಈಗ ಮತ್ತೆ ದರ ಏರಿಕೆ ಮಾಡಲಿವೆ.

ದರ ಏರಿಕೆ ಯಾವಾಗ ಆಗಲಿದೆ? ಅತೀಶೀರ್ಘದಲ್ಲೇ ಆಗಲಿದೆ. ಆದರೆ, ಏರಿಕೆಯ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದರೆ, ದರ ಏರಿಕೆ ಆಗುವುದಂತೂ ಖಚಿತವಾಗಿದೆ. ದರ ಏರಿಕೆಗೆ ದಿನಾಂಕ ಏಕೆ ನಿಗದಿಯಾಗಿಲ್ಲ ಎಂದರೆ- ಮೊಬೈಲ್ ಕಂಪನಿಗಳು ಮತ್ತು ಕೇಂದ್ರಸರ್ಕಾರದ ನಡುವೆ ಇರುವ ಎಜಿಆರ್ (ಆವರೆಜ್ ಗ್ರಾಸ್ ರೆವಿನ್ಯೂ – ಸರಾಸರಿ ಒಟ್ಟು ಆದಾಯ) ಕುರಿತಾದ ವ್ಯಾಜ್ಯವು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಸದ್ಯಕ್ಕೆ ವಿಚಾರಣೆಯು ನಿರ್ಣಾಯಕ ಹಂತ ಮುಟ್ಟಿದೆ. ಸುಪ್ರೀಂ ಕೋರ್ಟ್ ತೀರ್ಪುಘೋಷಣೆ ಆದ ಕೂಡಲೇ ಮೊಬೈಲ್ ಕಂಪನಿಗಳು ಉದ್ದೇಶಿತ ದರ ಏರಿಕೆಯನ್ನು ಜಾರಿಗೆ ತರಲಿವೆ.

ವಿಶ್ವದಲ್ಲೇ ಅತಿ ಕಡಮೆ ಬೆಲೆಯಲ್ಲಿ ಮೊಬೈಲ್ ಮತ್ತು ಡೇಟಾ ಸೇವೆಯನ್ನು ಒದಗಿಸುತ್ತಿರುವ ದೇಶ ನಮ್ಮದು ಎಂದು ಮೋದಿ ಸರ್ಕಾರ ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದೆ. ಈ ತ್ವರಿತ ದರ ಇಳಿಕೆಯ ಹಿಂದೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್9(BSNL) ಮತ್ತು ಎಂಟಿಎನ್ಎಲ್(MTNL) ಕಂಪನಿಗಳನ್ನು ಶಾಶ್ವತವಾಗಿ ಮುಗಿಸಿ, ಪ್ರಧಾನಿ ಮೋದಿ ಆಪ್ತ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋಗೆ ಅನುಕೂಲ ಮಾಡಿಕೊಡುವ ತಂತ್ರಗಾರಿಕೆ ಇರುವುದು ಇಡೀ ದೇಶದ ಜನತೆಗೆ ಗೊತ್ತಿದೆ.

ಜಿಯೋಗೆ ಅನುಕೂಲ ಮಾಡಿಕೊಡುವ ಮೋದಿ ಸರ್ಕಾರದ ಈ ತಂತ್ರಗಾರಿಯ ಫಲವಾಗಿ ಒಂದು ಕಡೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ಎಂಟಿಎನ್ಎಲ್ ನಷ್ಟಕ್ಕೀಡಾಗಿ ಮುಳುಗುವತ್ತ ಸಾಗಿದ್ದರೆ, ಅತ್ತ ಖಾಸಗಿ ವಲಯದ ಬೃಹತ್ ಕಂಪನಿ ಐಡಿಯಾ-ವೊಡಾಫೋನ್ ಕೂಡಾ ಮುಚ್ಚುವ ಹಂತಕ್ಕೆ ತಲುಪಿದೆ.

ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳೆಲ್ಲವೂ ತಾವು ಒದಗಿಸುವ ಎಲ್ಲಾ ಸೇವೆಗಳಿಂದ ಬರುವ ಆದಾಯದ ಮೇಲೆ ತೆರಿಗೆ ಪಾವತಿಸಬೇಕು ಎಂಬುದು ಕೇಂದ್ರ ಸರ್ಕಾರದ ತಗಾದೆಯಾಗಿದೆ. ಹೀಗಾಗಿ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳೆಲ್ಲವೂ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ ಸರಾಸರಿ ಒಟ್ಟು ಆದಾಯದ ಲೆಕ್ಕದಲ್ಲಿ 1.20 ಲಕ್ಷ ಕೋಟಿ ರುಪಾಯಿ ತೆರಿಗೆ ಬಾಕಿ ಪಾವತಿಸಬೇಕಿದೆ. ಈಗಾಗಲೇ ಕಂಪನಿಗಳು ತಲಾ ಸುಮಾರು ಒಂದು ಲಕ್ಷ ಕೋಟಿ ರುಪಾಯಿಗಳಷ್ಟು ಸಾಲದ ಹೊರೆಯಿಂದ ಬಳಲುತ್ತಿವೆ. ಈ ನಡುವೆ, ಸುಪ್ರೀಂ ಕೋರ್ಟ್ ಸರ್ಕಾರದ ಪರವಾಗಿ ಮಧ್ಯಂತರ ತೀರ್ಪು ನೀಡಿದ್ದು, ತೆರಿಗೆ ಪಾವತಿಸುವಂತೆ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಕಂಪನಿಗಳು ಭಾಗಷಃ ಬಾಕಿ ತೆರಿಗೆ ಪಾವತಿಸುತ್ತಿವೆ. ಎಜಿಆರ್ ಬಾಕಿ ಮತ್ತು ಸ್ಪೆಕ್ಟ್ರಂ ಬಾಕಿಯನ್ನು ಕಂತುಗಳ ರೂಪದಲ್ಲಿ ಪಾವತಿಸುತ್ತಿರುವ ಕಂಪನಿಗಳು ಅಂತಿಮ ತೀರ್ಪಿಗಾಗಿ ಕಾಯುತ್ತಿವೆ.

ಇದುವರೆಗೆ ಭಾರತಿ ಏರ್ಟೆಲ್ 18,000 ಕೋಟಿ, ವೊಡಾಫೋನ್ ಐಡಿಯಾ 3,500 ಕೋಟಿ, ಟಾಟಾ ಟೆಲಿಸರ್ವೀಸಸ್ 4,197 ಕೋಟಿ ಹಾಗೂ ರಿಲಯನ್ಸ್ ಜಿಯೋ 195 ಕೋಟಿ ರುಪಾಯಿಗಳನ್ನು ಪಾವತಿಸಿವೆ. ಎಜಿಆರ್ ತಗಾದೆಯನ್ನು ಮೋದಿ ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದರ ಹಿಂದೆ ಮುಖೇಶ್ ಅಂಬಾನಿಗೆ ಅನುಕೂಲ ಮಾಡಿಕೊಡುವ ಇರಾದೆ ಇದೆ. ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಏರ್ಟೆಲ್, ಐಡಿಯಾ ಮತ್ತು ಟಾಟಾ ಟೆಲಿಸರ್ವೀಸಸ್ ದೊಡ್ಡ ಪ್ರಮಾಣದಲ್ಲಿ ಹಿಂಬಾಕಿ ಪಾವತಿಸಬೇಕಾಗುತ್ತದೆ. ರಿಲಯನ್ಸ್ ಜಿಯೋ ಕಾರ್ಯಾರಂಭ ಮಾಡಿರುವುದೇ ಮೂರು ವರ್ಷಗಳ ಹಿಂದಿನಿಂದ ಆದ್ದರಿಂದ ಅದು ಪಾವತಿಸಬೇಕಿರುವ ತೆರಿಗೆ ಪ್ರಮಾಣ ತೀರಾ ಅತ್ಯಲ್ಪ ಇದೆ. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪರವಾಗಿ ತೀರ್ಪು ನೀಡಿದರೆ, ವಾಸ್ತವವಾಗಿ ಅದರ ಲಾಭ ಮುಖೇಶ್ ಅಂಬಾನಿಗೇ ಆಗಲಿದೆ.

ಇದಿಷ್ಟು ಎಜಿಆರ್(AGR) ಹಿನ್ನೆಲೆ. ಈಗ ಎಜಿಆರ್ ತಗಾದೆ ಕುರಿತ ನಿರ್ಣಾಯಕ ವಿಚಾರಣೆ ಆಗಸ್ಟ್ 17ರಂದು ನಡೆಯಲಿದ್ದು, ನಂತರ ತೀರ್ಪು ಹೊರಬರಲಿದೆ. ತೀರ್ಪು ಹೊರಬಂದ ನಂತರ ಮೊಬೈಲ್ ಕಂಪನಿಗಳು ದರ ಏರಿಕೆ ಮಾಡಲಿವೆ. ಎಜಿಆರ್ ರೂಪದಲ್ಲಿ ಸುಮಾರು 50,000 ಕೋಟಿ ರುಪಾಯಿ ಪಾವತಿಸಬೇಕಿರುವ ಐಡಿಯಾ ವೊಡಾಫೋನ್ ‘ಈಗಿರುವ ಕಾಲ್ ಮತ್ತು ಡೇಟಾ ದರದಲ್ಲಿ ಸೇವೆ ಒದಗಿಸಿದರೆ ಕಂಪನಿ ನಡೆಸುವುದಕ್ಕಿಂತ ಮುಚ್ಚುವುದೇ ಲೇಸು’ ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿ, ಬಾಕಿ ಪಾವತಿಗೆ ಸುಧೀರ್ಘ ಅವಧಿ ನೀಡುವಂತೆ ಮನವಿ ಮಾಡಿದೆ.

ಈ ನಡುವೆ, ಡೇಟಾ ದರವನ್ನು ಏಳೆಂಟು ಪಟ್ಟು ಹೆಚ್ಚಿಸಬೇಕು ಮತ್ತು ಪ್ರತಿ ಜಿಬಿ ಡೇಟಾ ದರವನ್ನು ಕನಿಷ್ಠ 35 ರುಪಾಯಿ ಎಂದು ನಿಗದಿ ಮಾಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಆದರೆ, ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಪ್ರಸ್ತುತ ಸರಾಸರಿ ಒಂದು ಜಿಬಿ ಡೇಟಾ ದರವು ಐದು ರುಪಾಯಿಗಳಷ್ಟಿದೆ. ಐಡಿಯಾ ಕಂಪನಿಯು ಈ ದರವನ್ನು ಕನಿಷ್ಠ 35 ರುಪಾಯಿಗೆ ನಿಗದಿ ಮಾಡಲು ಕೋರಿದೆ. ಅಂದರೆ, ಸರ್ಕಾರವು, ಟ್ರಾಯ್ ಮೂಲಕ ಕನಿಷ್ಠ ದರ ನಿಗದಿ ಮಾಡಿದರೆ, ಪ್ರತಿಸ್ಪರ್ಧಿ ಕಂಪನಿಗಳು ಅದಕ್ಕಿಂತ ಕಡಮೆ ದರ ನಿಗದಿ ಮಾಡಲು ಸಾಧ್ಯವಾಗುವುದಿಲ್ಲ.

ಸದ್ಯಕ್ಕೆ ಡೇಟಾ ದರ ಏಳೆಂಟು ಪಟ್ಟು ಹೆಚ್ಚಳವಾಗುವ ಸಾಧ್ಯತೆ ಕಡಮೆ. ಆದರೆ, ಈಗ ಇರುವ ವಿವಿಧ ಪ್ಲಾನ್ ಗಳ ದರವು ಕನಿಷ್ಠ ಶೇ.10 ರಿಂದ ಶೇ.20ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಮೊಬೈಲ್ ಕಂಪನಿಗಳು ಕಾಲ್, ಡೇಟಾಗೆ ಪ್ರತ್ಯೇಕ ಪ್ಲಾನ್ ಗಳನ್ನು ಹೊಂದಿವೆ. ಡೇಟಾ ಬಳಸುವವರಿಗೆ ಉಚಿತ ಕರೆ ಸೌಲಭ್ಯವನ್ನೂ ನೀಡುತ್ತಿವೆ. ಬಹುತೇಕ ಎಲ್ಲಾ ಬಳಕೆದಾರರು ಒಂದಿಲ್ಲೊಂದು ಪ್ಲಾನ್ ವ್ಯಾಪ್ತಿಯಲ್ಲೇ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ ಪ್ರತ್ಯೇಕವಾಗಿ ಪ್ರತಿ ಕಾಲ್ ಮತ್ತು ಪ್ರತಿ ಜಿಬಿ ಡೇಟಾದ ದರ ಏರಿಕೆ ಮಾಡುವ ಬದಲಿಗೆ ಒಟ್ಟಾರೆ ಎಲ್ಲಾ ಪ್ಲಾನ್ ಗಳ ದರವನ್ನು ಶೇ.10ರಿಂದ 20ರಷ್ಟು ಏರಿಕೆ ಮಾಡಬಹುದು.

ಈ ಏರಿಕೆಯು ಶೇ.10-20ರಷ್ಟಕ್ಕೆ ಮಾತ್ರ ಸೀಮಿತವಾಗಲಿದೆಯೇ? ಖಂಡಿತಾ ಇಲ್ಲ. ಬರುವ ದಿನಗಳಲ್ಲಿ ದರ ಏರಿಕೆ ಪ್ರಮಾಣವು ತ್ವರಿತಗತಿಯಲ್ಲಾಗಲಿದೆ. ಈಗ ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ಎಂಟಿಎನ್ಎಲ್ ಹೊರತು ಪಡಿಸಿದರೆ, ಸ್ಪರ್ಧೆಯಲ್ಲಿರುವುದು ಮೂರೇ ಕಂಪನಿಗಳು. ಏರ್ಟೆಲ್, ಐಡಿಯಾ ವೋಡಾಫೋನ್ ಮತ್ತು ಜಿಯೋ. ಪ್ರಧಾನಿ ಮೋದಿ ಆಪ್ತ ಮುಖೇಶ್ ಅಂಬಾನಿ ಒಡೆತನದ ಜಿಯೋ ಈಗಾಗಲೇ ನಂಬರ್ ವನ್ ಪಟ್ಟಕ್ಕೇರಿದೆ. ಆ ಪಟ್ಟದಲ್ಲಿದ್ದ ಐಡಿಯಾ ವೋಡಾಫೋನ್ ಮೂರನೇ ಸ್ಥಾನಕ್ಕಿಳಿದಿದೆ. ಕೆಲಕಾಲ ನಂಬರ್ ವನ್ ಪಟ್ಟದಲ್ಲಿದ್ದ ಏರ್ಟೆಲ್ ಈಗ ಎರಡನೇ ಸ್ಥಾನದಲ್ಲಿದೆ. ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ನಂಬರ್ ವನ್ ಆಧಿಪತ್ಯವನ್ನು ನಿರ್ಣಾಯಕವಾಗಿ ಸ್ಥಾಪಿಸಿದ ನಂತರ ಮುಂದೆ ದರ ಇಳಿಕೆಯ ಸಮರವು ದರ ಏರಿಕೆಯ ಸಮರವಾಗಿ ಪರವರ್ತನೆ ಆಗಲಿದೆ.

ಗ್ರಾಹಕರೇ, ಪೆಟ್ರೋಲ್ ಮತ್ತು ಡಿಸೇಲ್ ಮಾತ್ರವೇ ದುಬಾರಿ ಎಂದು ಕೊಳ್ಳಬೇಡಿ, ಬರುವ ದಿನಗಳಲ್ಲಿ ಮೊಬೈಲ್ ಕಾಲ್ ಮತ್ತು ಡೇಟಾ ದರವೂ ದುಬಾರಿಯಾಗಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com