ರೈಲ್ವೇ ಖಾಸಗೀಕರಣ; ಪ್ರಯಾಣ ದರ ನಿಗದಿ ಅಧಿಕಾರವೂ ಖಾಸಗಿಯವರಿಗೆ
ರಾಷ್ಟ್ರೀಯ

ರೈಲ್ವೇ ಖಾಸಗೀಕರಣ; ಪ್ರಯಾಣ ದರ ನಿಗದಿ ಅಧಿಕಾರವೂ ಖಾಸಗಿಯವರಿಗೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಅನೇಕ ಉದ್ದಿಮೆಗಳ ಖಾಸಗೀಕರಣಕ್ಕೆ ಮುಂದಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅದರಲ್ಲಿಯೂ ದೇಶದಲ್ಲಿ ಅತ್ಯಂತ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿರುವ ಸರ್ಕಾರೀ ಸಂಸ್ಥೆ ರೈಲ್ವೇಯನ್ನೂ ಖಾಸಗೀಕರಣ ಮಾಡುತ್ತಿರುವುದನ್ನು ಜನರು ಆತಂಕದಿಂದಲೇ ನೋಡುತಿದ್ದಾರೆ.

ಕೋವರ್ ಕೊಲ್ಲಿ ಇಂದ್ರೇಶ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ಕಾರೀ ಸ್ವಾಮ್ಯದ ಅನೇಕ ಉದ್ದಿಮೆಗಳ ಖಾಸಗೀಕರಣಕ್ಕೆ ಮುಂದಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅದರಲ್ಲಿಯೂ ದೇಶದಲ್ಲಿ ಅತ್ಯಂತ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿರುವ ಸರ್ಕಾರೀ ಸಂಸ್ಥೆ ರೈಲ್ವೇಯನ್ನೂ ಖಾಸಗೀಕರಣ ಮಾಡುತ್ತಿರುವುದನ್ನು ಜನರು ಆತಂಕದಿಂದಲೇ ನೋಡುತಿದ್ದಾರೆ. ಏಕೆಂದರೆ ಇಂದು ದೇಶದಲ್ಲಿ ಸರ್ಕಾರದ ಉದ್ದಿಮೆಗಳು ಒದಗಿಸುತ್ತಿರುವ ಸೇವೆಗಳು ಗುಣಮಟ್ಟದಲ್ಲಿ ಖಾಸಗಿಗಿಂತ ಕಡಿಮೆ ಆಗಿದ್ದರೂ ಬಡ ಮತ್ತು ಮದ್ಯಮ ವರ್ಗದ ಜನತೆಯ ಕಿಸೆಗೆ ಹೆಚ್ಚು ಅನುಕೂಲಕರವಾಗಿದೆ. ಇದೀಗ ರೈಲ್ವೇಯ ಸುಮಾರು 109 ಮಾರ್ಗಗಳಲ್ಲಿ 151 ರೈಲುಗಳನ್ನು ಖಾಸಗಿ ಕಂಪೆನಿಗಳು ಓಡಿಸಲು ಅನುವು ಮಾಡಿಕೊಡಲಾಗುತ್ತಿದೆ. ಈ ಖಾಸಗೀಕರಣಕ್ಕೆ ಕೇಂದ್ರದ ಎನ್‌ಡಿಏ ಸರ್ಕಾರ ನೀಡಿರುವ ಕಾರಣ ಏನೆಂದರೆ ರೈಲ್ವೇ ಕ್ಷೇತ್ರದಲ್ಲಿ 2030 ರ ವರೆಗೆ 50 ಲಕ್ಷ ಕೋಟಿ ರೂಪಾಯಿಗಳ ಅವಶ್ಯಕತೆ ಇದ್ದು ಸರ್ಕಾರ ಇಷ್ಟು ಮೊತ್ತವನ್ನು ಹೂಡಿಕೆ ಮಾಡಲು ಸಾದ್ಯವಾಗುತ್ತಿಲ್ಲ ಹಾಗಾಗಿ ಖಾಸಗೀಕರಣ ಮಾಡಲಾಗುತ್ತಿದೆ ಎಂಬುದು. ಈ ಖಾಸಗೀಕರಣ ಒಪ್ಪಂದವನ್ನು ಮುಂದಿನ 35 ವರ್ಷಗಳವರೆಗೆ ಮಾಡಿಕೊಳ್ಳಲಾಗುತ್ತಿದೆ.

ರೈಲುಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ಮುಂದಿನ ಡಿಸೆಂಬರ್‌ 2021 ರಿಂದ ಎರಡು ಫ್ರೈಟ್‌ ಕಾರಿಡಾರ್‌ ಮಾರ್ಗಗಳನ್ನೂ ಪರಿಚಯಿಸಲಾಗುತ್ತಿದೆ. ಪ್ರಸ್ತುತ ರೈಲ್ವೇ ಇಲಾಖೆಯಲ್ಲಿ ಎಲ್ಲಾ ಬಿಡುವಿಲ್ಲದ ಮಾರ್ಗಗಳಲ್ಲಿ ರೈಲು ಆಸನಗಳ ಬೇಡಿಕೆ ಲಭ್ಯಕ್ಕಿಂತ ಹೆಚ್ಚಿನದಾಗಿದೆ. ಇದರಿಂದಾಗಿ ಪ್ರಯಾಣಿಕರ ಕಾಯುವ ಅವಧಿ ಅತ್ಯಂತ ಹೆಚ್ಚಾಗಿದ್ದು ಪ್ರಮುಖ ಮಾರ್ಗಗಳಲ್ಲಿ ಶೀಘ್ರ ಟಿಕೇಟ್‌ ಸಿಗುವುದೇ ದುರ್ಲಭವಾಗಿದೆ. ಹೊಸ, ಆಧುನಿಕ ರೈಲುಗಳನ್ನು ಪರಿಚಯಿಸಲು ತರಬೇತುದಾರರು ಮತ್ತು ಎಂಜಿನ್‌ಗಳಂತಹ ರೋಲಿಂಗ್ ಸ್ಟಾಕ್‌ನಲ್ಲಿ ಭಾರಿ ಹೂಡಿಕೆ ಅಗತ್ಯವಿದೆ. ತದನಂತರ ಕಾರ್ಯಾಚರಣೆಯ ವೆಚ್ಚವಿದೆ, ಇದರಲ್ಲಿ ವಿದ್ಯುತ್, ಮಾನವಶಕ್ತಿ ಮತ್ತು ಎಲ್ಲಾ ಇತರ ಸಾಮಗ್ರಿಗಳು ಸೇರಿವೆ. ಅಂತಹ ಸನ್ನಿವೇಶದಲ್ಲಿ, ಉತ್ತಮ ಆನ್‌ಬೋರ್ಡ್ ಸೇವೆಗಳು ಮತ್ತು ವೇಗದ ರೈಲುಗಳಂತಹ ನವೀಕರಿಸಿದ ಸೌಲಭ್ಯಗಳನ್ನು ನೀಡುವುದರಿಂದ ಭಾರತೀಯ ರೈಲ್ವೆಗೆ ಭಾರಿ ಆಧುನೀಕರಣ ವೆಚ್ಚವಾಗುತ್ತದೆ. ಅಂದ ಹಾಗೆ, ಪ್ರಯಾಣಿಕರ ರೈಲುಗಳನ್ನು ಓಡಿಸುವುದು ಭಾರತೀಯ ರೈಲ್ವೆಗೆ ನಷ್ಟವನ್ನುಂಟುಮಾಡುವ ವ್ಯವಹಾರವಾಗಿದೆ. ಇದು ಸರಾಸರಿ ಟಿಕೆಟ್‌ಗಳ ಮೂಲಕ ಶೇಕಡಾ 57 ರಷ್ಟು ವೆಚ್ಚವನ್ನು ಮಾತ್ರ ಮರುಪಡೆಯುತ್ತದೆ. ಉಳಿದವು ಅದರ ಸರಕು ಸಾಗಣೆ ಕಾರ್ಯಾಚರಣೆಗಳ ಗಳಿಕೆಯ ಮೂಲಕ ಪಡೆಯುತ್ತಿದೆ. ಈ ಸನ್ನಿವೇಶದಲ್ಲಿ, ಅದರ ನಷ್ಟವನ್ನು ಕಡಿತಗೊಳಿಸಲು ಮತ್ತು ಆ ಅವಕಾಶವನ್ನು ಹಣ ಸಂಪಾದಿಸುವ ಉದ್ಯಮವಾಗಿ ಪರಿವರ್ತಿಸಲು, ಭವಿಷ್ಯದಲ್ಲಿ ಪರಿಚಯಿಸಬೇಕಾದ ಕೆಲವು ರೈಲುಗಳನ್ನು ಖಾಸಗಿ ಕಂಪನಿಗಳು ನಡೆಸುತ್ತವೆ ಎಂದು ಸರ್ಕಾರ ನಿರ್ಧರಿಸಿದೆ.

ಈ ಕ್ರಮವು ಖಾಸಗಿ ಕಂಪೆನಿಗಳು ಭರಿಸಬೇಕಾದ ರೋಲಿಂಗ್ ಸ್ಟಾಕ್ ಮತ್ತು ಇತರ ಖರ್ಚುಗಳ ಮೂಲಕ ರೈಲ್ವೆ ವ್ಯವಸ್ಥೆಯಲ್ಲಿ ಒಟ್ಟು 30,000 ಕೋಟಿ ರೂ. ಹೂಡಿಕೆ ಆಗಲಿದೆ. ಖಾಸಗಿ ಕಂಪೆನಿಗಳು ಪರಿಚಯಿಸಿದ ರೈಲುಗಳು ಭಾರತೀಯ ರೈಲ್ವೆ ನೀಡುವ ಕೊಡುಗೆಗಳಿಂದ ಒಂದು ನಿರ್ದಿಷ್ಟ ಅಪ್‌ಗ್ರೇಡ್ ಆಗಿರಬೇಕು ಎಂಬುದು ಒಂದೇ ಪೂರ್ವಭಾವಿ ಷರತ್ತು. ರೈಲ್ವೆ ಇದಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡದೆಯೇ ಪ್ರಯಾಣಿಕರಿಗೆ ಉತ್ತಮ ರೈಲು ಸೇವೆಗಳ ಆಯ್ಕೆಯನ್ನು ನೀಡುವ ಉದ್ದೇಶವಿದೆ. ಕಳೆದ ವರ್ಷ, ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ ನೇತೃತ್ವದ ಸಮಿತಿ ಈ ಪ್ರಕ್ರಿಯೆಯನ್ನು ಚುರುಕುಗೊಳಿಸಿತು. ರೈಲ್ವೆ ಮಂಡಳಿಯ ಅಧ್ಯಕ್ಷರು, ಆರ್ಥಿಕ ವ್ಯವಹಾರಗಳು, ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳು ಮತ್ತು ರೈಲ್ವೆ ಮಂಡಳಿಯ ಹಣಕಾಸು ಆಯುಕ್ತರು ಸಮಿತಿಯ ಇತರ ಸದಸ್ಯರಾಗಿದ್ದರು. ಈ ಯೋಜನೆಗಾಗಿ, ಪ್ರಮುಖ ನಗರ ಕೇಂದ್ರಗಳಾದ ಪಾಟ್ನಾ, ಸಿಕಂದ್ರಾಬಾದ್, ಬೆಂಗಳೂರು, ಜೈಪುರ, ಪ್ರಯಾಗರಾಜ್, ಹೌರಾ, ಚೆನ್ನೈ, ಚಂಡೀಗಢ ಮತ್ತು ದೆಹಲಿ ಮತ್ತು ಮುಂಬೈಗೆ ತಲಾ ಎರಡು ಮಾರ್ಗಗಳನ್ನು ಆಧರಿಸಿ ಮಾರ್ಗಗಳನ್ನು 12 ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಕ್ಲಸ್ಟರ್ ಸ್ವತಂತ್ರ ವ್ಯವಹಾರ ಯೋಜನೆಯಾಗಿದ್ದು, ನಿರ್ವಹಿಸಲು ಖಾಸಗಿ ಕಂಪೆನಿಗಳನ್ನು ಬಿಡ್‌ ಮೂಲಕ ಆಹ್ವಾನಿಸುತ್ತದೆ. ದೆಹಲಿ -2 ಕ್ಲಸ್ಟರ್‌ನ ಯೋಜನಾ ವೆಚ್ಚ 2,329 ಕೋಟಿ ರೂ. ಇದು 12 ಮಾರ್ಗಗಳನ್ನು ಹೊಂದಿದೆ, ಮತ್ತು ಮಾರ್ಗಗಳ ಸರಾಸರಿ ಅಂತರವು ಸುಮಾರು 925 ಕಿ.ಮೀ. ಪ್ರತಿ ಕ್ಲಸ್ಟರ್ ಸೂಚಕ ಯೋಜನೆಯ ವೆಚ್ಚ ಮತ್ತು ಸರಾಸರಿ ರೈಲು ದೂರ 900-1052 ಕಿ.ಮೀ.ಆಗಿರಲಿದೆ.

ರೈಲುಗಳು ಮತ್ತು ಎಂಜಿನ್‌ಗಳು ಸಾಮಾನ್ಯವಾಗಿ ಸುಮಾರು ಮೂರು ದಶಕಗಳ ಬಾಳಿಕೆ ಬರುತ್ತವೆ ಎಂಬ ಅಂಶವನ್ನು ಆಧರಿಸಿ 35 ವರ್ಷಗಳ ಒಪ್ಪಂದದ ಅವಧಿ ನಿರ್ಧರಿಸಲಾಗಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಬಿಡ್ಡಿಂಗ್ ಪ್ರಕ್ರಿಯೆಯು ಮುಕ್ತಾಯಗೊಳ್ಳಲಿದೆ. ಅದರ ನಂತರ, 12 ರೈಲುಗಳ ಮೊದಲ ಓಡಾಟ 2022- 23ರೊಳಗೆ ಆರಂಬಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ನಂತರ 2023- 2024 ರಲ್ಲಿ 45 ರೈಲುಗಳು, 2025-26 ರಲ್ಲಿ 50 ರೈಲುಗಳು ಮತ್ತು ಅಂತಿಮವಾಗಿ ಉಳಿದ 20 ರೈಲುಗಳು 2026-27ರಲ್ಲಿ ಓಡಾಟ ಆರಂಭಿಸಲಿವೆ. ಕೇಂದ್ರ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಖಾಸಗೀ ಕಂಪೆನಿಗಳ ಪ್ರತಿನಿಧಿಗಳ ಜತೆ ಕಳೆದ ಬುಧವಾರ ದೆಹಲಿಯಲ್ಲಿ ಈ ಕುರಿತ ಪ್ರೀ ಬಿಡ್ಡಿಂಗ್‌ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ಕಾರವು ರೈಲು ಪ್ರಯಾಣ ದರಗಳನ್ನು ಖಾಸಗೀ ಕಂಪೆನಿಗಳೇ ನಿರ್ಧರಿಸಲಿವೆ ಎಂದು ಸ್ಪಷ್ಟನೆ ನೀಡಿದೆ. ಇದರಿಂದ ದೇಶದ ಬಡ ಮತ್ತು ಮದ್ಯಮ ವರ್ಗದ ಜನತೆಗೆ ಹೆಚ್ಚಿನ ಅನಾನುಕೂಲ ಅಗುವ ಸಂಭವವೇ ಇದೆ. ಖಾಸಗೀ ಕಂಪೆನಿಗಳು ಉತ್ತಮ ಸೇವೆ ನೀಡುತ್ತೇವೆ ಎಂಬ ಟೈಟಲ್‌ ನೊಂದಿಗೆ ದುಪ್ಪಟ್ಟು ದರ ನಿಗದಿ ಮಾಡುವ ಸಾದ್ಯತೆ ಇದ್ದೇ ಇದೆ. ಈಗಲೇ ಬಸ್‌ ಗಳ ಪ್ರಯಾಣ ದರದಲ್ಲಿ ಹಬ್ಬಗಳ ಸೀಸನ್‌ ನಲ್ಲಿ ಖಾಸಗೀ ಬಸ್‌ ಗಳವರು ಎರಡು ಮೂರು ಪಟ್ಟು ದರ ಹೆಚ್ಚಿಸಿ ಪ್ರಯಾಣಿಕರ ಸುಲಿಗೆ ಮಾಡುತ್ತಿರುವುದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ಇನ್ನು ರೈಲು ಎಂದ ಕೂಡಲೇ ಅವುಗಳ ವಿನ್ಯಾಸ, ಬಣ್ಣ ಕ್ಕೆ ತಕ್ಕಂತೆ ದರವೂ ಐಷಾರಾಮಿ ಆಗಿರಲಿದೆ ಎಂಬುದು ಶ್ರೀ ಸಾಮಾನ್ಯನ ಆತಂಕವಾಗಿದೆ.

ಪ್ರಸ್ತುತ ದೇಶದಲ್ಲಿ ರೈಲ್ವೇ ಪ್ರಯಾಣ ದರವನ್ನು ನಿಗದಿ ಮಾಡುತ್ತಿರುವುದು ರೈಲ್ವೇ ಡೆವಲಪ್‌ಮೆಂಟ್‌ ಅಥಾರಿಟಿ ಎಂಬ ಸಂಸ್ಥೆ. ಇದು ಟ್ರಾಯ್‌ ಮಾದರಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದೇ ಸಂಸ್ಥಗೆ ಮುಂದೆ ಖಾಸಗೀ ಕಂಪೆನಿಗಳ ರೈಲು ಪ್ರಯಾಣ ದರ ನಿಗದಿಯನ್ನೂ ಮಾಡುವ ಅಧಿಕಾರವಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೇ ಇಲಾಖೆ ವಕ್ತಾರರು ನಾವು ಹೆಚ್ಚಿನ ನಿಬಂಧನೆಗಳನ್ನು ಹೇರಿದರೆ ಖಾಸಗೀ ಕಂಪೆನಿಗಳು ಬಿಡ್‌ ನಲ್ಲಿ ಭಾಗವಹಿಸಲು ಆಸಕ್ತಿಯನ್ನೇ ತೋರದಿರಬಹುದು. ಅಲ್ಲದೆ ಪ್ರಯಾಣ ದರವನ್ನು ಸರ್ಕಾರ ನಿಗದಿಪಡಿಸುವ ಬದಲಿಗೆ ಖಾಸಗೀ ಕಂಪೆನಿಗಳೇ ಸ್ಪರ್ಧಾತ್ಮಕತೆಯ ಮೂಲಕ ನಿಗದಿ ಪಡಿಸಿಕೊಳ್ಳುವುದು ಆರೋಗ್ಯಕರ ಬೆಳವಣಿಗೆ ಎಂದೂ ಅವರು ಹೇಳಿದರು. ಈಗ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಇರುವಂತೆಯೇ ಖಾಸಗೀ ರೈಲುಗಳು ಕಾರ್ಯ ನಿರ್ವಹಿಸಬೇಕಿದೆ ಎಂದೂ ಅವರು ಹೇಳಿದರು. ಅಲ್ಲದೆ ಒಂದು ವೇಳೆ ದುಬಾರಿ ದರ ವಿಧಿಸಿದರೆ ಸರ್ಕಾರ ಮದ್ಯ ಪ್ರವೇಶ ಮಾಡಲಿದೆ ಎಂದೂ ಅವರು ಹೇಳುತ್ತಾರೆ. ಆದರೆ ಈ ಹಿಂದೆ ಖಾಸಗೀ ಟೆಲಿಕಾಂ ಕಂಪೆನಿಗಳು ಒಂದು ಜಿಬಿ 4 ಜಿ ಡೇಟಾಕ್ಕೆ 200 ರೂಪಾಯಿ ಶುಲ್ಕ ವಿಧಿಸುತಿದ್ದುದು ನಮಗೆ ಗೊತ್ತೇ ಇದೆ. ಈ ರೈಲು ಪ್ರಯಾಣ ದರವೂ ಹೀಗಾಗಬಹುದು ಎಂಬುದು ಪ್ರಜ್ಞಾವಂತರ ಆತಂಕ.

Click here to follow us on Facebook , Twitter, YouTube, Telegram

Pratidhvani
www.pratidhvani.com