ಹಿಂದುತ್ವದ ಧ್ವೇಷವನ್ನು ಫೇಸ್ಬುಕ್ ಬೆಂಬಲಿಸುತ್ತಿದೆ- ವಾಲ್ ಸ್ಟ್ರೀಟ್ ಜರ್ನಲ್ ವರದಿ
ರಾಷ್ಟ್ರೀಯ

ಹಿಂದುತ್ವದ ಧ್ವೇಷವನ್ನು ಫೇಸ್ಬುಕ್ ಬೆಂಬಲಿಸುತ್ತಿದೆ- ವಾಲ್ ಸ್ಟ್ರೀಟ್ ಜರ್ನಲ್ ವರದಿ

ಸಾಮಾಜಿಕ ಜಾಲತಾಣದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಬಿಜೆಪಿಯವರ ಹಾಗೂ ಹಿಂದೂ ರಾಷ್ಟ್ರೀಯವಾದಿಗಳ ಧ್ವೇಷ ಭಾಷಣಗಳಿಗೆ ಫೇಸ್‌ಬುಕ್‌ ತಡೆ ನೀಡುತ್ತಿಲ್ಲ

ಪ್ರತಿಧ್ವನಿ ವರದಿ

ಭಾರತದಲ್ಲಿ ಬಿಜೆಪಿಯೊಂದಿಗೆ ಫೇಸ್‌ಬುಕ್‌ ಸಖ್ಯ ಹೊಂದಿದೆಯೆಂಬ ಆರೋಪಕ್ಕೆ ಮತ್ತಷ್ಟು ಪುರಾವೆಗಳು ಸಿಗುತ್ತಿವೆ. ಫೇಸ್‌ಬುಕ್‌ ಕಮ್ಯುನಿಟಿ ಸ್ಟಾಂಡರ್ಡ್‌ ಅಡಿಯಲ್ಲಿ ಬಿಜೆಪಿ ಹಾಗೂ ಹಿಂದುತ್ವ ಕಾರ್ಯಕರ್ತರು ಹರಡುವ ಧ್ವೇಷ ಪೋಸ್ಟ್‌ಗಳನ್ನು ನಿಯಂತ್ರಿಸುತ್ತಿಲ್ಲ ಎಂದು ಅಮೇರಿಕಾದ ಹೆಸರಾಂತ ನಿಯತಕಾಲಿಕೆ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ಸಾಮಾಜಿಕ ಜಾಲತಾಣದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಬಿಜೆಪಿಯವರ ಹಾಗೂ ಹಿಂದೂ ರಾಷ್ಟ್ರೀಯವಾದಿಗಳ ಧ್ವೇಷ ಭಾಷಣಗಳಿಗೆ ಫೇಸ್‌ಬುಕ್‌ ತಡೆ ನೀಡುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

Hate-Speech Rules Collide With Indian Politics ಎಂಬ ಹೆಸರಲ್ಲಿ ಆಗಸ್ಟ್‌ 14 ರಂದು ವಾಲ್‌ ಸ್ಟ್ರೀಟ್‌ ಜರ್ನಲ್ ಪ್ರಕಟಿಸಿದ ವರದಿಯಲ್ಲಿ ಹೇಗೆ ಫೇಸ್‌ಬುಕ್‌ ಹಿಂದೂ ರಾಷ್ಟ್ರೀಯವಾದ ಹೆಸರಲ್ಲಿ ಹಿಂದುತ್ವ ಭಯೋತ್ಪಾದಕರು ಹರಡುವ ಧ್ವೇಷ ಭಾಷಣಗಳನ್ನು ಅನುವು ಮಾಡಿಕೊಡುತ್ತಿದೆ ಹಾಗೂ ಅದನ್ನು ಹಂಚುವ ಅಕೌಂಟ್‌ಗಳನ್ನು ನಿಷೇಧಿಸದೆ ಉಳಿಸುತ್ತದೆ ಎಂಬುದನ್ನು ಸವಿವರವಾಗಿ ಹೇಳಿದೆ.

ಮುಸ್ಲಿಮರ ವಿರುದ್ಧ ಸತತ ಧ್ವೇಷ ಕಾರುವ ಪೋಸ್ಟ್‌ ಹಂಚುವ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌, ಸೇರಿದಂತೆ ಹಲವು ಹಿಂದುತ್ವ ನಾಯಕರ ಖಾತೆಯ ವಿರುದ್ಧ ಫೇಸ್‌ಬುಕ್‌ ಗಂಭೀರ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. ನರೇಂದ್ರ ಮೋದಿ ಸರ್ಕಾರದ ಕಡೆಗೆ ಫೇಸ್‌ಬುಕ್‌ ಒಲವು ತೋರಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಪ್ರಚೋದನಕಾರಿ ಟೀಕೆಗಳಿಗೆ ಹೆಸರುವಾಸಿಯಾಗಿರುವ ಇತರ ಇಬ್ಬರು ವಿವಾದಾತ್ಮಕ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ ಮತ್ತು ಸಂಸದ ಅನಂತ್‌ಕುಮಾರ್ ಹೆಗ್ಡೆ ಅವರ ಪೋಸ್ಟ್‌ಗಳ ಬಗ್ಗೆ ಇದೇ ರೀತಿಯ ಆರೋಪಗಳನ್ನು ಮಾಡಲಾಗಿದೆ.

ಈ ಕುರಿತಂತೆ ರಾಹುಲ್‌ ಗಾಂಧಿ ಕೂಡಾ ಟ್ವೀಟ್‌ ಮಾಡಿದ್ದು, ಫೇಸ್‌ಬುಕ್‌, ವಾಟ್ಸಪ್‌ನ್ನು ಬಿಜಪಿ ಹಾಗೂ ಆರೆಸ್ಸಸ್‌ ನಿಯಂತ್ರಿಸುತ್ತಿದೆ ಎಂದಿದ್ದಾರೆ.

ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಕಾರಣವಾದ ಮಿಶ್ರಾ ʼಗೋಲಿ ಮಾರೋ ಸಾಲೊ ಕಿʼ ಭಾಷಣದ ಕುರಿತಂತೆಯೂ ಫೇಸ್‌ಬುಕ್‌ ಇದೇ ಆರೋಪಗಳನ್ನು ಎದುರಿಸಿತ್ತು. ಅಲ್ಲದೆ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಪರವಾದ ವಿಚಾರಗಳನ್ನು ಹೆಚ್ಚು ಜನರನ್ನು ತಲುಪುವಂತೆ ಫೇಸ್‌ಬುಕ್‌ ಮಾಡಿತ್ತು ಎಂದೂ 2018 ರಲ್ಲಿ ಕೆಲವು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಉದ್ಯಮಿ ಗೆಳೆಯ ಮುಕೇಶ್‌ ಅಂಬಾನಿ ಕಂಪೆನಿಗೆ ಫೇಸ್‌ಬುಕ್‌ ಬಂಡವಾಳ ಹೂಡಿರುವುದೂ ಈ ವರದಿಗಳನ್ನೆಲ್ಲಾ ಪುಷ್ಟೀಕರಿಸುವಂತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com