ಉತ್ತರ ಪ್ರದೇಶದ ಇನ್ನೋರ್ವ ಸಚಿವ ಕರೋನಾದಿಂದ ಸಾವು..!
ರಾಷ್ಟ್ರೀಯ

ಉತ್ತರ ಪ್ರದೇಶದ ಇನ್ನೋರ್ವ ಸಚಿವ ಕರೋನಾದಿಂದ ಸಾವು..!

ಉತ್ತರ ಪ್ರದೇಶದಲ್ಲಿ ಎರಡನೇ ಮಂತ್ರಿ ಕರೋನಾಗೆ ಬಲಿಯಾಗಿದ್ದಾರೆ. 15 ದಿನಗಳ ಅಂತರದಲ್ಲಿ ಯೋಗಿ ಆದಿತ್ಯನಾಥ್‌ ಕ್ಯಾಬಿನೆಟ್‌ನ ಇಬ್ಬರು ಸಚಿವರು ಸಾವನ್ನಪ್ಪಿರುವುದು ಆತಂಕಕಾರಿಯಾಗಿದೆ.

ಕೃಷ್ಣಮಣಿ

ದೇಶದಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಚೇತನ್‌ ಚೌವ್ಹಾಣ್‌ ಕೋವಿಡ್‌ 19 ಸೋಂಕಿಗೆ ಬಲಿಯಾಗಿದ್ದಾರೆ. ಜುಲೈ 12ರಂದು ಕೋವಿಡ್‌ 19 ಸೋಂಕಿನ ಗುಣಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಂಜಯ್‌ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಶನಿವಾರ ಸಚಿವರ ಆರೋಗ್ಯ ಸ್ಥಿತಿ ಏರುಪೇರು ಆಗಿತ್ತು. ನಂತರ ಕಿಡ್ನಿ ಫೇಲ್ಯೂರ್‌ ಆಗಿತ್ತು. ಜೀವರಕ್ಷಕ ಸಾಧನ ಅಳವಡಿಕೆ ಮಾಡಲಾಗಿತ್ತು. ಆದರೆ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ.

ಚೇತನ್‌ ಚೌವ್ಹಾಣ್‌ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರನಾಗಿದ್ದು, 12 ವರ್ಷಗಳ ಕಾಲ ಭಾರತಕ್ಕಾಗಿ ಆಟವಾಡಿದ ಚೇತನ್‌ ಚೌವ್ಹಾಣ್‌, 22 ವರ್ಷದವನಾಗಿದ್ದಾದ ನ್ಯೂಜಿಲೆಂಡ್‌ ಪಾದಾರ್ಪಣೆ ಮಾಡಿದ್ದರು. ಒಟ್ಟು 40 ಟೆಸ್ಟ್‌ ಪಂದ್ಯಗಳನ್ನಾಡಿ ನಿವೃತ್ತಿ ಹೊಂದಿದ ಬಳಿಕ 1981ರಲ್ಲಿ ನಿವೃತ್ತಿ ಪಡೆದಿದ್ದರು. ಆ ಬಳಿಕ 1981ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದರು. 31.57 ಸರಾಸರಿಯಲ್ಲಿ 2084 ರನ್‌ ಗಳಿಸಿದ್ದರು. 16 ಅರ್ಧ ಶತಕ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ್ದ 97 ರನ್‌ ಅತ್ಯಧಿಕ ಗರಿಷ್ಠ ಸ್ಕೋರ್‌ ಆಗಿದೆ.

73 ವರ್ಷದ ಚೇತನ್‌ ಚೌವ್ಹಾಣ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭಾರತೀಯ ಕ್ರಿಕೆಟ್‌ ಹಾಗೂ ರಾಜಕೀಯಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ನಿಮ್ಮಿಂದ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿಗೆ ಶಕ್ತಿ ಬಂದಿತ್ತು. ನಿಮ್ಮ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ನಿಮ್ಮ ಕುಟುಂಬಕ್ಕೆ ಕರುಣಿಸಲಿ ಎಂದಿದ್ದಾರೆ.

ಚೇತನ್‌ ಚೌವ್ಹಾಣ್‌ ಕರೋನಾ ಸೋಂಕಿನಿಂದ ಅಸುನೀಗುವ ಮೊದಲೇ ತಾಂತ್ರಿಕ ಶಿಕ್ಷಣ ಸಚಿವೆ ಕಮಲಾ ರಾಣಿ ವರುಣ್‌ ಕೂಡ ಕೋವಿಡ್‌ 19ನಿಂದಲೇ ಸಾವನ್ನಪ್ಪಿದ್ದರು. ಇದೀಗ ಉತ್ತರ ಪ್ರದೇಶದಲ್ಲಿ ಎರಡನೇ ಮಂತ್ರಿ ಕರೋನಾಗೆ ಬಲಿಯಾಗಿದ್ದಾರೆ. 15 ದಿನಗಳ ಅಂತರದಲ್ಲಿ ಯೋಗಿ ಆದಿತ್ಯನಾಥ್‌ ಕ್ಯಾಬಿನೆಟ್‌ನ ಇಬ್ಬರು ಸಚಿವರು ಸಾವನ್ನಪ್ಪಿರುವುದು ಆತಂಕಕಾರಿಯಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com