ಒಂದು ಲಕ್ಷಕ್ಕೂ ಮೇಲ್ಪಟ್ಟ ಚಿನ್ನ ಖರೀದಿಗೆ ಟ್ಯಾಕ್ಸ್‌‌..!
ರಾಷ್ಟ್ರೀಯ

ಒಂದು ಲಕ್ಷಕ್ಕೂ ಮೇಲ್ಪಟ್ಟ ಚಿನ್ನ ಖರೀದಿಗೆ ಟ್ಯಾಕ್ಸ್‌‌..!

ಆಭರಣಗಳು, ಗೃಹ ಬಳಕೆ ವಸ್ತುಗಳು, ಬಟ್ಟೆ ಮತ್ತು ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ವರ್ಣಚಿತ್ರಗಳು, ಶಿಕ್ಷಣ ಸಂಸ್ಥೆಗಳಿಗೆ ಪಾವತಿ ಮಾಡಲು ಶುಲ್ಕ ಮತ್ತು ವಿವಿಧ ಸಂಸ್ಥೆಗಳಿಗೆ ಕೊಡಲಾಗುವ ದೇಣಿಗೆ, ದೇಶೀಯವಾಗಿ ನಡೆಸುವ ವ್ಯಾಪಾರ ವಹಿವಾಟು, ವಿದೇಶಿ ಪ್ರಯಾಣ, ಮತ್ತು 20 ಸಾವಿರ ರೂಪಾಯಿ ಹೋಟೆಲ್ ಬಿಲ್‌ಗಳೂ ಕೂಡ ಶೀಘ್ರದಲ್ಲೇ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಬರಲಿವೆ

ಕೃಷ್ಣಮಣಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೇಶದಲ್ಲಿ ಜನರ ಬಳಿ ವ್ಯವಹಾರ ಮಾಡಲು ಹಣದ ಸಮಸ್ಯೆ ತಲೆದೋರಿದ್ದು, ಆರ್ಥಿಕತೆ ಮತ್ತಷ್ಟು ಪಾತಾಳಕ್ಕೆ ಕುಸಿಯುವ ಭೀತಿ ಎದುರಾಗಿದೆ. ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್, ಜನರ ಬಳಿ ಹೆಚ್ಚು ಹಣ ಚಲಾವಣೆ ಆಗುವಂತೆ ಮಾಡಲು ಜನರಿಗೆ ನೇರವಾಗಿ ಹಣವನ್ನು ಕೊಡಿ, ಆಗ ಅವರು ವ್ಯವಹಾರ ಶುರು ಮಾಡುತ್ತಾರೆ ಎಂದು ಆರ್ಥಿಕ ಚೇತರಿಕೆಗೆ ಸಲಹೆ ನೀಡಿದ್ದರು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1 ಲಕ್ಷ ರೂಪಾಯಿಗಿಂತ ಹೆಚ್ಚಾಗಿ ಚಿನ್ನ ಖರೀದಿ ಮಾಡಿದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆಗೆ ಹೋಗಲಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಆದಾಯ ತೆರಿಗೆದಾರರನ್ನು ವಿಸ್ತರಣೆ ಮಾಡಲು ಹಾಗೂ ತೆರಿಗೆ ವಂಚಕರನ್ನು ಪತ್ತೆ ಮಾಡಲು ಮುಂದಾಗಿದ್ದು, 1 ಲಕ್ಷ ಮೇಲ್ಪಟ್ಟ ಚಿನ್ನಾಭರಣ ಖರೀದಿ ಹಾಗೂ 20,000 ರೂಪಾಯಿ ಹೋಟೆಲ್ ಬಿಲ್‌ಗಳನ್ನು ತೆರಿಗೆ ವ್ಯಾಪ್ತಿಯಲ್ಲಿ ಇಡುವುದಕ್ಕೆ ಮುಂದಾಗಿದೆ. ಹೆಚ್ಚು ಮೌಲ್ಯದ ವಹಿವಾಟಿನ ಅಂಕಿಅಂಶಗಳನ್ನು ಬಳಸಿಕೊಂಡು ತೆರಿಗೆ ವಂಚಕರನ್ನು ಹುಡುಕುವ ಮೂಲಕ ತೆರಿಗೆದಾರರ ವ್ಯಾಪ್ತಿಯನ್ನು ವಿಸ್ತರಣೆ ಮಾಡುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉದ್ದೇಶ ಎನ್ನಲಾಗಿದೆ.

ಆಭರಣಗಳು, ಗೃಹ ಬಳಕೆ ವಸ್ತುಗಳು, ಬಟ್ಟೆ ಮತ್ತು ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ವರ್ಣಚಿತ್ರಗಳು, ಶಿಕ್ಷಣ ಸಂಸ್ಥೆಗಳಿಗೆ ಪಾವತಿ ಮಾಡಲು ಶುಲ್ಕ ಮತ್ತು ವಿವಿಧ ಸಂಸ್ಥೆಗಳಿಗೆ ಕೊಡಲಾಗುವ ದೇಣಿಗೆ, ದೇಶೀಯವಾಗಿ ನಡೆಸುವ ವ್ಯಾಪಾರ ವಹಿವಾಟು, ವಿದೇಶಿ ಪ್ರಯಾಣ, ಮತ್ತು 20 ಸಾವಿರ ರೂಪಾಯಿ ಹೋಟೆಲ್ ಬಿಲ್‌ಗಳೂ ಕೂಡ ಶೀಘ್ರದಲ್ಲೇ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಬರಲಿವೆ ಎಂದು ಕೇಂದ್ರ ಸರ್ಕಾರ ಅಧಿಕೃತ ಟ್ವೀಟರ್‌ ಅಕೌಂಟ್‌ನಲ್ಲಿ ಘೋಷಣೆ ಮಾಡಿದೆ.

ತನ್ನ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯೊಳಗೆ ಎಲ್ಲಾ ವಹಿವಾಟು ನಡೆಯಬೇಕು ಎನ್ನುವ ಆಶಯ ಆದಾಯ ತೆರಿಗೆ ಇಲಾಖೆಯದ್ದಾಗಿದೆ. ಇದರಿಂದಾಗಿ ಹಣಕಾಸು ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳ ವ್ಯವಹಾರದ ಮೇಲೆ ಕಣ್ಣೀಡಲಿದೆ. ಹಾಗೂ ಐಟಿ ಇಲಾಖೆ ಹೆಚ್ಚು ಹೆಚ್ಚು ಹಣಕಾಸು ವಹಿವಾಟು ನಡೆಸುತ್ತಿರುವ ಜನರ ಡಾಟಾ ಸಂಗ್ರಹ ಮಾಡುವ ಕೆಲಸದಲ್ಲಿ ನಿರತವಾಗಿದೆ. ಅವರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆಯೋ ಇಲ್ಲವೋ ಎನ್ನುವುದನ್ನು ಖಾತರಿ ಮಾಡಿಕೊಳ್ಳಲು ನಿರ್ಧಾರ ಮಾಡಿದೆ. ಈ ನಿರ್ಧಾರ ತೆರಿಗೆ ಪಾವತಿದಾರರನ್ನು ಹೆಚ್ಚಳ ಮಾಡುವ ಉದ್ದೇಶ ಅಡಗಿದೆ ಎನ್ನಲಾಗಿದೆ.

ಆದಾಯ ತೆರಿಗೆ ಇಲಾಖೆ ವಕ್ತಾರರು ದಿ ಪ್ರಿಂಟ್‌ ನ್ಯೂಸ್‌ ಜೊತೆಗೆ ಮಾತನಾಡಿದ್ದು, ಇದರ ಸಂಪೂರ್ಣ ವಿವರ ಹಾಗೂ ದಂಡದ ವಿವರಗಳು ಅಧಿಸೂಚನೆಯಲ್ಲಿ ಲಭ್ಯವಾಗಲಿವೆ ಎಂದಿದ್ದಾರೆ. ಆದಾಯ ತೆರಿಗೆ ಇಲಾಖೆಯ ಮಾಹಿತಿ ಪ್ರಕಾರ 2019-20ರ ಆರ್ಥಿಕ ವರ್ಷದಲ್ಲಿ 6.4 ಕೋಟಿ ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ತಿಳಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾಷಣದಲ್ಲಿ ಉಲ್ಲೇಖಿಸಿರುವ ಸಂಖ್ಯೆಗಳ ಪ್ರಕಾರ, ಒಟ್ಟು 130 ಕೋಟಿ ಜನಸಂಖ್ಯೆಯಲ್ಲಿ ಕೇವಲ 1.5 ಕೋಟಿ ಭಾರತೀಯರು ಮಾತ್ರ ತಮ್ಮ ತೆರಿಗೆಯನ್ನು ಪಾವತಿಸುತ್ತಾರೆ ಎಂದಿದ್ದಾರೆ.

50 ಸಾವಿರ ಮೇಲ್ಪಟ್ಟ ವ್ಯವಹಾರಕ್ಕೂ ಟ್ಯಾಕ್ಸ್‌..!

ಹೌದು, ನೀವು 50 ಸಾವಿರ ಮೇಲ್ಪಟ್ಟು ವಿಮಾ ಪಾವತಿ ಮಾಡುತ್ತಿದ್ದರೂ ಆದಾಯ ತೆರಿಗೆ ಇಲಾಖೆ ನಿಗಾ ವಹಿಸಲಿದೆ. ಇದರಲ್ಲಿ ಆರೋಗ್ಯ ವಿಮಾ ಪಾಲಿಸಿ ಪ್ರೀಮಿಯಂ ಕೂಡ ಸೇರಿದೆ. ಇನ್ನೂ 20 ಸಾವಿರಕ್ಕಿಂದ ಹೆಚ್ಚಿನ ಆಸ್ತಿ ತೆರಿಗೆ ಪಾವತಿ ಹಾಗೂ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದ್ಯುತ್ ಬಳಕೆಯೂ ಆದಾಯ ತೆರಿಗೆ ಇಲಾಖೆ ಕಣ್ಗಾವಲಲ್ಲಿ ಸೇರಿದೆ. ಆನ್‌ಲೈನ್ ಮೂಲಕ ಅಥವಾ ನಗದು ಮೂಲಕ ಮಾಡಿದ ವ್ಯವಹಾರಗಳಿಗೆ ಈ ಮಿತಿಗಳು ಅನ್ವಯವಾಗುತ್ತದೆಯೇ ಎಂದು ಇನ್ನೂ ತಿಳಿಯಬೇಕಿದೆ.

ಹೆಚ್ಚಿನ ಜನರು ಆದಾಯ ತೆರಿಗೆ ನಿವ್ವಳಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಅನೇಕ ಜನರು ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿದೆ ಹೊಂದಿದೆ ಎನ್ನುತ್ತಾರೆ ತಜ್ಞರು. “ಈ ಬದಲಾವಣೆಗಳು ಜಾರಿಗೆ ಬಂದರೆ ತೆರಿಗೆ ಆಧಾರವನ್ನು ಹೆಚ್ಚಿಸಲು ಸಕರ್ಕಾರಕ್ಕೆ ಸಹಾಯ ಮಾಡುತ್ತದೆ. ಆದರೆ ಇದು ವ್ಯಾಪಾರ ಸಂಸ್ಥೆಗಳಿಗೆ ತೆರಿಗೆ ಅನುಸರಣೆ ಮಾಡಲೇ ಬೇಕಾದ ಹೊರೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಚಿನ್ನದ ಅಂಗಡಿ ಮಾಲೀಕರಿಗೆ ತೆರಿಗೆ ಪಾವತಿ ಮಾಡಲೇಬೇಕಾದ ಅನಿವಾರ್ಯತೆ ಎದುರಾದಾಗ ವ್ಯಾಪಾರ ಕಟ್ಟುನಿಟ್ಟಾಗುತ್ತದೆ. ಯಾವಾಗ ವ್ಯಾಪಾರಸ್ಥ ಕಟ್ಟುನಿಟ್ಟಾಗಿ ವ್ಯಾಪಾರ ಮಾಡಲು ಶುರು ಮಾಡುತ್ತಾನೋ ಗ್ರಾಹಕ ಹಿಂಜರಿಯುತ್ತಾನೆ. ಗ್ರಾಹಕ ವ್ಯಾಪಾರಕ್ಕೇ ಬಾರದಿದ್ದರೆ ವ್ಯವಹಾರ ಆಗುವುದು ಹೇಗೆ..? ಸರ್ಕಾರಕ್ಕೆ ತೆರಿಗೆ ಬರುವುದಾದರೂ ಹೇಗೆ..?. ಸರ್ಕಾರದ ಈಗಿನ ನಿರ್ಧಾರದಿಂದ ಎಲ್ಲರೂ ತೆರಿಗೆ ವ್ಯಾಪ್ತಿಗೆ ಬರುತ್ತಾರೆ ಎನ್ನುವುದು ನಿಜ. ವ್ಯಾಪಾರ ಆದರೆ ತಾನೆ ತೆರಿಗೆ ಪಾವತಿ ಒಳಕ್ಕೆ ಬರುವುದು..? ಎಲ್ಲರನ್ನೂ ತೆರಿಗೆ ವ್ಯಾಪ್ತಿಗೆ ತಂದು ಸಾಮಾಜಿಕ ಯೋಜನೆಗಳಾದ ಸಬ್ಸಿಡಿ ಯೋಜನೆಗಳು ರದ್ದು ಮಾಡುವ ಉದ್ದೇಶವೂ ಸರ್ಕಾರದ ಭಾಗ ಆಗಿರಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com