ತೆರಿಗೆ ಭಯೋತ್ಪಾದನೆ ಕಳಂಕ ನಿವಾರಣೆಗೆ ಮುಂದಾದರೆ ಪ್ರಧಾನಿ ಮೋದಿ?
ರಾಷ್ಟ್ರೀಯ

ತೆರಿಗೆ ಭಯೋತ್ಪಾದನೆ ಕಳಂಕ ನಿವಾರಣೆಗೆ ಮುಂದಾದರೆ ಪ್ರಧಾನಿ ಮೋದಿ?

ನರೇಂದ್ರ ಮೋದಿಯ ಮೊದಲ ಅವಧಿ ಮತ್ತು ಎರಡನೇ ಅವಧಿಯ ಮೊದಲವರ್ಷದ ಪ್ರಥಮಾರ್ಧದಲ್ಲಿ ತೆರಿಗೆ ಇಲಾಖೆಯನ್ನು ತಮ್ಮ ರಾಜಕೀಯ ವಿರೋಧಿಗಳನ್ನು ಭಂಜಿಸಲು ಬಳಸಿಕೊಂಡಿದ್ದಾರೆ. ಇದನ್ನು ರಾಜಕೀಯ ಪರಿಭಾಷೆಯಲ್ಲಿ ‘ತೆರಿಗೆ ಭಯೋತ್ಪಾದನೆ’ ಎನ್ನಲಾಗುತ್ತದೆ.

ರೇಣುಕಾ ಪ್ರಸಾದ್ ಹಾಡ್ಯ

ಪಾರದರ್ಶಕ ತೆರಿಗೆ ವ್ಯವಸ್ಥೆ ಮತ್ತು ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವ ವ್ಯವಸ್ಥೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಹೊತ್ತಿನಲ್ಲಿ ಅವರು ಪ್ರಸ್ತಾಪಿಸಿರುವ ಹಲವು ಅಂಶಗಳು ನಮ್ಮ ತೆರಿಗೆ ವ್ಯವಸ್ಥೆ ಇನ್ನೂ ಸುಧಾರಣೆಯಾಗಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತವೆ. ಅಂದರೆ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಗ್ರಹಿಸಿ, ಒಂದು ಅವಧಿಗೆ ಅಂದರೆ ಐದು ವರ್ಷಗಳ ಕಾಲ ಆಡಳಿತ ನಡೆಸಿ, ಮತ್ತೊಂದು ಅವಧಿಗೆ ಆಯ್ಕೆಯಾಗಿ ಮತ್ತೊಂದು ವರ್ಷ ಪೂರೈಸಿದ ನಂತರ ತೆರಿಗೆ ಸುಧಾರಣೆ ಪ್ರಸ್ತಾಪಗಳನ್ನು ಮಾಡಿದ್ದಾರೆ. 2014ರ ಚುನಾವಣೆ ಹೊತ್ತಿನಲ್ಲಿ ತೆರಿಗೆದಾರರ ಸುರಕ್ಷತೆಗೆ ಒತ್ತು ನೀಡುವ ಭರವಸೆಯನ್ನು ಆರು ವರ್ಷಗಳ ನಂತರ ಈಡೇರಿಸುವ ಪ್ರಸ್ತಾಪ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ- ನರೇಂದ್ರ ಮೋದಿಯ ಮೊದಲ ಅವಧಿ ಮತ್ತು ಎರಡನೇ ಅವಧಿಯ ಮೊದಲವರ್ಷದ ಪ್ರಥಮಾರ್ಧದಲ್ಲಿ ತೆರಿಗೆ ಇಲಾಖೆಯನ್ನು ತಮ್ಮ ರಾಜಕೀಯ ವಿರೋಧಿಗಳನ್ನು ಭಂಜಿಸಲು ಬಳಸಿಕೊಂಡಿದ್ದಾರೆ. ಇದನ್ನು ರಾಜಕೀಯ ಪರಿಭಾಷೆಯಲ್ಲಿ ‘ತೆರಿಗೆ ಭಯೋತ್ಪಾದನೆ’ ಎನ್ನಲಾಗುತ್ತದೆ.

ಮೋದಿ ಸರ್ಕಾರವು ವಿರೋಧಿಗಳನ್ನು ಹಳಿಯಲು, ಭಿನ್ನದನಿಯನ್ನು ದಮನಿಸಲು ತೆರಿಗೆ ಇಲಾಖೆಯನ್ನು ಆಯುಧವಾಗಿ ಬಳಸಿಕೊಂಡ ಪ್ರಕರಣಗಳು ಲೆಕ್ಕವಿಲ್ಲದಷ್ಟಿವೆ. ತಮ್ಮ ಸರ್ಕಾರದ ನೀತಿಗಳನ್ನು ಖಂಡಿಸುವ ಮತ್ತು ತಮ್ಮ ರಾಜಕೀಯ ಪ್ರಾಬಲ್ಯವನ್ನು ವಿರೋಧಿಸುವ ಮತ್ತು ತಮ್ಮ ವೈಫಲ್ಯಗಳನ್ನು ಎತ್ತಿತೋರುವ ವಿರೋಧಿ ವರ್ಗಕ್ಕೆ ತೆರಿಗೆ ಭಯೋತ್ಪಾದನೆ ಅಸ್ತ್ರವನ್ನು ಬಳಸಿ, ದನಿ ಅಡಗಿಸುವ ಪ್ರಯತ್ನ ಮಾಡಲಾಗಿದೆ. ತೆರಿಗೆ ವಂಚನೆ ಹೆಸರಲ್ಲಿ ದಾಳಿ ನಡೆಸುವುದು, ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿ ಪತ್ತೆಯಾಗಿದೆ ಎಂದು ಸರ್ಕಾರಿ ಪರ ಮಾಧ್ಯಮಗಳಲ್ಲಿ ಬಿತ್ತರಿಸುವುದು, ನಂತರ ತನಿಖೆಯ ನೆಪ ಹೇಳಿ ಸುಧೀರ್ಘ ಅವಧಿಯವರೆಗೆ “ಸೃಷ್ಟಿಸಲಾದ” ತೆರಿಗೆ ವಂಚನೆಯನ್ನು ಜೀವಂತವಾಗಿಡುವುದು ನಂತರ, ಸಾಕ್ಷ್ಯಾಧಾರಗಳಿಲ್ಲವೆಂದು ಪ್ರಕರಣಕ್ಕೆ ತೇಪೆಹಚ್ಚುವುದು ನಡೆದೇ ಇದೆ.

ವಾಸ್ತವವಾಗಿ ತೆರಿಗೆ ವಂಚಿಸಿದ ಮತ್ತು ಶಿಕ್ಷೆಗೆ ಒಳಪಡಲೇಬೇಕಾದ, ಪ್ರಧಾನಿ ಮೋದಿ ಜತೆಗೆ ಅಂತಾರಾಷ್ಟ್ರ್ರೀಯ ವೇದಿಕೆಗಳನ್ನು ಹಂಚಿಕೊಂಡಿರುವ ತೆರಿಗೆ ವಂಚಕರು ದೇಶಬಿಟ್ಟು ಪರಾರಿಯಾಗಿದ್ದಾರೆ. ದೇಶಬಿಟ್ಟು ಪರಾರಿಯಾಗಲು ಮೋದಿ ಸರ್ಕಾರವೇ ನೆರವಾಗಿದೆ ಎಂಬ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಈ ಆರೋಪಗಳ ಸತ್ಯಾಸತ್ಯತೆ ಏನೇ ಇರಲಿ, ಮೋದಿ ಸರ್ಕಾರದ ಅಧಿಯಲ್ಲಿ ಮೂರು ಡಜನ್ ಗೂ ಹೆಚ್ಚು ವಂಚಕರು ಸುಮಾರು 60,000 ಕೋಟಿ ರುಪಾಯಿಗಳಷ್ಟು ವಂಚನೆ ಮತ್ತು ತೆರಿಗೆ ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾಗಿರುವುದನ್ನು ಮೋದಿ ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ.

ಈಗ ಇದ್ದಕ್ಕಿದ್ದಂತೆ ಪ್ರಧಾನಿ ಮೋದಿ ತೆರಿಗೆ ವ್ಯವಸ್ಥೆ ಸುಧಾರಣೆಗೆ ಮುಂದಾಗಿದ್ದಾರೆ. ಮತ್ತು ತೆರಿಗೆದಾರರನ್ನು ಗೌರವಿಸಲು ಮತ್ತು ತೆರಿಗೆದಾರರ ದೂರು ದುಮ್ಮಾನಗಳನ್ನು ಮುಖಾಮುಖಿ ರಹಿತವಾಗಿ ಇತ್ಯರ್ಥಪಡಿಸುವ ಪ್ರಸ್ತಾಪ ಮಾಡಿದ್ದಾರೆ.

ಪ್ರಧಾನಿ ಮೋದಿ ಪ್ರಸ್ತಾಪಿಸಿರುವ ಪಾರದರ್ಶಕ ತೆರಿಗೆ ವ್ಯವಸ್ಥೆ ಮತ್ತು ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವ ವೇದಿಕೆಯ ಸೃಷ್ಟಿಯ ಮೂಲ ಉದ್ದೇಶವೇ - ತೆರಿಗೆ ವ್ಯವಸ್ಥೆಯ ಆಶಯವು ತಡೆರಹಿತ, ಸಂಕಷ್ಟ ರಹಿತ ಮತ್ತು ಮುಖಾಮುಖಿ ರಹಿತವಾಗಿರಬೇಕು ಎಂಬುದಾಗಿದೆ. ಮುಖಾಮುಖಿ ರಹಿತ ತೆರಿಗೆ ತಗಾದೆ ವಿಲೇವಾರಿ ವ್ಯವಸ್ಥೆಯು ಸೆಪ್ಟೆಂಬರ್ 25ರಿಂದ ಜಾರಿಯಾಗಲಿದೆ. ರಾಷ್ಟ್ರನಿರ್ಮಾಣದಲ್ಲಿ ಪ್ರಾಮಾಣಿಕ ತೆರಿಗೆದಾರರ ಪಾತ್ರದೊಡ್ಡದು, ಅಂತಹವರನ್ನು ಗೌರವಿಸುವುದು ಸರ್ಕಾರದ ಕರ್ತವ್ಯ- ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಂದರೆ, ಸತತ ಆರು ವರ್ಷಗಳು ಕಳೆದರೂ ದೇಶದ ಪ್ರಾಮಾಣಿಕ ತೆರಿಗೆದಾರರು ಇನ್ನೂ ಸಂಕಷ್ಟ ಅನುಭವಿಸುತ್ತಿದ್ದಾರೆಂಬುದನ್ನು ಪರೋಕ್ಷವಾಗಿ ಮೋದಿ ಒಪ್ಪಿಕೊಂಡಿದ್ದಾರೆ. 2014 ಚುನಾವಣಾ ಪೂರ್ವದಲ್ಲಿನ ‘ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ’ ಘೋಷಣೆಯನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಅಂದರೆ, ಆರು ವರ್ಷಗಳ ನಂತರವೂ ಮೋದಿ ಸರ್ಕಾರ ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ ಎಂಬುದು ಇದರ ಅರ್ಥವೇ?

ಪ್ರಧಾನಿ ಮೋದಿ ಪಾರದರ್ಶಕತೆಗೆ ಒತ್ತು ನೀಡಿದ್ದಾರೆ. ಮೂರು ತಿಂಗಳಿಂದ ಇಡೀ ದೇಶವೇ ಪಾರದರ್ಶಕತೆಗಾಗಿ ಪ್ರಧಾನಿ ಮೋದಿ ಅವರಿಗೆ ದುಂಬಾಲು ಬಿದ್ದಿತ್ತು. ಕರೊನಾ ಸೋಂಕು ಪೀಡಿತರ ನೆರವಿಗಾಗಿ ದೇಣಿಗೆ ಸಂಗ್ರಹಿಸಲು ಪ್ರಧಾನಿ ಮೋದಿ ಘೋಷಿಸಿದ “ಪಿಎಂ- ಕೇರ್ಸ್”ನಲ್ಲಿ ಪಾರದರ್ಶಕತೆ ಇಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಬಹುಚರ್ಚಿತ ವಿಷಯವಾಗಿತ್ತು. ಪ್ರತಿಪಕ್ಷಗಳ ಟೀಕೆಗಳ ಜತೆಗೆ ನ್ಯಾಯಾಲಯದ ಕಟ್ಟೆಯನ್ನೂ ಹತ್ತಿತ್ತು. ಅಷ್ಟಾದರೂ ಪ್ರಧಾನಿ ಮೋದಿ “ಪಿಎಂ-ಕೇರ್ಸ್” ದೇಣಿಗೆಯ ಲೆಕ್ಕವನ್ನು ಕೊಟ್ಟಿಲ್ಲ. ಆದರೆ, ಪಿಎಂ-ಕೇರ್ಸ್ ನಿಧಿಯಿಂದ ಖರೀದಿಸಿದ ಪಿಪಿಇ ಕಿಟ್ ಸೇರಿದಂತೆ ಕರೊನಾ ಸಂಬಂಧಿತ ಪರಿಕರಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಂತೂ ದೇಶವ್ಯಾಪಿ ಕೇಳಿ ಬಂದಿದೆ.

ಪಿಎಂ-ಕೇರ್ಸ್ ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದೇ ಹೋದ ಕಾರಣಕ್ಕೆ ವ್ಯಾಪಕ ಟೀಕೆಗೆ ಒಳಗಾದಿದ್ದ ಮೋದಿ ಈಗ ಪಾರಾದರ್ಶಕತೆಗೆ ಹೆಚ್ಚು ಒತ್ತು ನೀಡಿದ್ದಾರೆ. ಅಂದರೆ, ಪಿಎಂ- ಕೇರ್ಸ್ ನಲ್ಲಿ ಹೋದ ಘನತೆಯು ಪಾರದರ್ಶಕ ತೆರಿಗೆ ವ್ಯವಸ್ಥೆ ಜಾರಿಯ ಹೊತ್ತಿಗೆ ವಾಪಸಾಗುತ್ತದಾ ಎಂಬುದು ಟ್ರಿಲಿಯನ್ ಡಾಲರ್ ಪ್ರಶ್ನೆ!

ಪ್ರಸ್ತುತ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ತೀವ್ರವಾಗಿ ಕುಸಿಯುತ್ತಿದ್ದು ಋಣಾತ್ಮಕ ಅಭಿವೃದ್ಧಿ ದಾಖಲಿಸುತ್ತಿದೆ. ಸ್ವಾತಂತ್ರ್ಯೋತ್ತರದಲ್ಲೇ ಅತಿ ಕನಿಷ್ಠ ಅಭಿವೃದ್ಧಿ ದಾಖಲಿಸುವ ಸಾಧ್ಯತೆ ಇದೆ ಎಂದು ಬಹುತೇಕ ರೇಟಿಂಗ್ ಏಜೆನ್ಸಿಗಳು, ಆರ್ಥಿಕ ತಜ್ಞರು, ಉದ್ಯಮ ವಲಯದ ದಿಗ್ಗಜರು ಮುನ್ನಂದಾಜು ಮಾಡಿದ್ದಾರೆ. ಈ ಹೊತ್ತಿನಲ್ಲಿ ಮೋದಿ ಸರ್ಕಾರವನ್ನು ಕೈಹಿಡಿಯಬೇಕಾದವರು ತೆರಿಗೆದಾರರು. ಹೀಗಾಗಿ ಮೋದಿ ತೆರಿಗೆ ಸುಧಾರಣೆಯ ಪ್ರಸ್ತಾಪವನ್ನು ಮಾಡುತ್ತಲೇ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಉಮೇದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ 1.5 ಕೋಟಿ ಜನರು ಮಾತ್ರವೇ ತೆರಿಗೆ ಪಾವತಿಸುತ್ತಿದ್ದಾರೆ. ಒಟ್ಟಾರೆ ದೇಶದ ಜನಸಂಖ್ಯೆಗೆ ಹೋಲಿಸಿದರೆ ತೆರಿಗೆದಾರರ ಪ್ರಮಾಣ ಕಡಿಮೆ ಇದೆ ಎಂಬ ಮೋದಿ ಅವರ ವಾದದಲ್ಲಿ ಹುರುಳಿದೆ.

ಆದರೆ, ತೆರಿಗೆ ವ್ಯಾಪ್ತಿ ವಿಸ್ತರಣೆಯಲ್ಲಿ ಖುದ್ಧು ಮೋದಿ ಸರ್ಕಾರವೇ ಎಡವಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಜಾರಿಯ ಉದ್ದೇಶವೇ ತೆರಿಗೆವ್ಯಾಪ್ತಿಯನ್ನು ವಿಸ್ತರಿಸುವುದಾಗಿತ್ತು. ಆದರೆ, ಯುಪಿಎ ಸರ್ಕಾರದ ಪ್ರಸ್ತಾವಿತ ಜಿಎಸ್ಟಿಯನ್ನು ಮನಸೋ ಇಚ್ಛೆ ಬದಲಾಯಿಸಿದ ಮೋದಿ ಸರ್ಕಾರ, ತೆರಿಗೆವ್ಯಾಪ್ತಿ ವಿಸ್ತರಣೆ ಮಾಡುವ ಬದಲಿಗೆ ತೆರಿಗೆ ವ್ಯವಸ್ಥೆಯನ್ನು ಕಗ್ಗಂಟು ಮಾಡಿತ್ತು. ಹಲವು ಹಂತಗಳ ತೆರಿಗೆಯನ್ನು ಸೃಷ್ಟಿಸಿ, ತೆರಿಗೆದಾರರಲ್ಲಿ ಅಷ್ಟೇ ಅಲ್ಲಾ ತೆರಿಗೆ ಇಲಾಖೆ ಸಿಬ್ಬಂದಿಯಲ್ಲೂ ಗೊಂದಲ ಸೃಷ್ಟಿಸಿತ್ತು. ಪದೇ ಪದೇ ತಿದ್ದುಪಡಿ ಮಾಡುತ್ತಾ ಮತ್ತಷ್ಟು ಸಂಕೀರ್ಣಗೊಳಿಸಿದೆ. ತತ್ಪರಿಣಾಮ ತೆರಿಗೆ ಸಂಗ್ರಹವು ಗುರಿ ಮೀರುವುದಿರಲಿ, ಗುರಿಯನ್ನೇ ಮುಟ್ಟಲಾಗಿಲ್ಲ.

ಆರು ವರ್ಷಗಳ ನಂತರವಾದರೂ ಮೋದಿ ಸರ್ಕಾರಕ್ಕೆ ತೆರಿಗೆ ವ್ಯವಸ್ಥೆಯಲ್ಲಿನ ವಾಸ್ತವಿಕ ಸಮಸ್ಯೆಗಳೇನು? ತೆರಿಗೆದಾರರು ಎದುರಿಸುತ್ತಿರುವ ಸಂಕಷ್ಟಗಳೇನು ಎಂಬುದರ ಅರಿವಾದಂತಿದೆ. ಅದರ ಫಲಶೃತಿಯಾಗಿ ಮೋದಿ ಸರ್ಕಾರ ಸುಧಾರಿತ ಪಾರದರ್ಶಕ ತೆರಿಗೆ ವ್ಯವಸ್ಥೆ ಜಾರಿಗೆ ತಂದು ತೆರಿಗೆದಾರರನ್ನು ಗೋಳುಹುಯ್ದುಕೊಳ್ಳುವ ಪ್ರವೃತ್ತಿಗೆ ಕೊನೆ ಹೇಳಲು ಮುಂದಾಗಿದೆ.

ಪ್ರಧಾನಿ ಮೋದಿ ಸರ್ಕಾರದ ಉದ್ದೇಶಿತ ಸುಧಾರಣೆಯಲ್ಲಿ ಮೇಲ್ನೋಟಕ್ಕೆ ಪ್ರಾಮಾಣಿಕತೆ ಕಾಣುತ್ತಿದೆ. ಆ ಪ್ರಮಾಣಿಕತೆಯ ಉದ್ದೇಶವು ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಮತ್ತು ಸ್ವಯಂಪ್ರೇರಣೆಯಿಂದ ತೆರಿಗೆ ಪಾವತಿಸುವವರನ್ನು ಉತ್ತೇಜಿಸುವುದಾಗಿದೆ. 2019-20ನೇ ವಿತ್ತೀಯ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮಾತ್ರ ಕೊರೊನಾ ಸಂಕಷ್ಟ ಇದ್ದರೂ ಮೊದಲ ಮೂರು ತ್ರೈಮಾಸಿಕಗಳಲ್ಲಿನ ತೆರಿಗೆ ಸಂಗ್ರಹವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಈ ಕಾರಣಕ್ಕಾಗಿಯೇ ರಾಜ್ಯಗಳಿಗೆ ಜಿಎಸ್ಟಿ ಪಾಲನ್ನು ನೀಡಲು ಹಿಂದುಮುಂದು ನೋಡುವಂತಾಗಿದೆ. 2020-21ನೇ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕವು ಕೊರೊನಾ ಸಂಕಷ್ಟಕ್ಕೆ ಬಲಿಯಾಗಿದೆ, ಎರಡನೇ ತ್ರೈಮಾಸಿಕದ ಅರ್ಧಭಾಗವು ಆಹುತಿಯಾಗಿದೆ. ಮುಂದಿನ ಏಳೂವರೆ ತಿಂಗಳು ತೆರಿಗೆ ಸಂಗ್ರಹದಲ್ಲಿ ನಿರ್ಣಾಯಕ ಅವಧಿಯಾಗಿದೆ. ತ್ವರಿತವಾಗಿ ಕರೊನಾ ಸೋಂಕಿಗೆ ಔಷಧಿ ಕಂಡು ಹಿಡಿದು, ಪರಿಸ್ಥಿತಿ ಸಾಮಾನ್ಯಸ್ಥಿತಿಗೆ ಮರಳಿದರೆ ಮಾತ್ರ ಮೋದಿ ಸರ್ಕಾರಕ್ಕೆ ತೆರಿಗೆ ಸಂಗ್ರಹ ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ತೆರಿಗೆ ಸಂಗ್ರಹವಿಲ್ಲದೇ ಬಜೆಟ್ ಮತ್ತು ಕೊರೊನಾ ಪ್ಯಾಕೇಜ್ ಘೋಷಿತ ಯೋಜನೆಗಳನ್ನು ಅನುಷ್ಠಾನಮಾಡುವುದು ಸಾಧ್ಯವಾಗಲಾರದು.

ಪ್ರಧಾನಿ ಮೋದಿ ಉತ್ತಮರೀತಿಯಲ್ಲಿ ತೆರಿಗೆದಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ತೆರಿಗೆ ಭಯೋತ್ಪಾನೆ ಮತ್ತು “ಪಿಎಂ-ಕೇರ್ಸ್”ನಲ್ಲಿನ ಅಪಾರದರ್ಶಕತೆಯನ್ನು ಈ ಮನವೊಲಿಸುವ ಪ್ರತಯ್ನವು ಮರೆಸುತ್ತದೆಯೇ?

Click here to follow us on Facebook , Twitter, YouTube, Telegram

Pratidhvani
www.pratidhvani.com