ಬಿಹಾರ ಚುನಾವಣಾ ಕಣದಲ್ಲಿ ಆರಂಭವಾಗಲಿದೆ ಅದಲುಬದಲು ಆಟ!
ರಾಷ್ಟ್ರೀಯ

ಬಿಹಾರ ಚುನಾವಣಾ ಕಣದಲ್ಲಿ ಆರಂಭವಾಗಲಿದೆ ಅದಲುಬದಲು ಆಟ!

ಸದ್ಯದ ಲೆಕ್ಕಾಚಾರಗಳ ಪ್ರಕಾರವೇ ಎಲ್ಲವೂ ನಡೆದರೆ; ಈ ಬಾರಿ ಕೂಡ ಬಿಹಾರದ ಚುನಾವಣಾ ಕಣದಲ್ಲಿ ಎಂದಿನಂತೆ ಅದಲುಬದಲು ಆಟ ರಂಗೇರಲಿದೆ. ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ ಬದಲಾಗಲಿದ್ದಾರೆ. ಮಾಂಝಿ ತಮ್ಮ ಪಕ್ಷದೊಂದಿಗೆ ಎನ್ ಡಿಎ ಕಡೆ ಹೋದರೆ, ಖಂಡಿತವಾಗಿಯೂ ನಿರೀಕ್ಷಿತ ಸ್ಥಾನ ಪಡೆಯಲಾಗದೆ ಎಲ್ ಜೆಪಿಯ ಚಿರಾಗ್ ಮಹಾಘಟಬಂಧನದ ಪಾಳೆಯಕ್ಕೆ ಜಿಗಿಯಲಿದ್ದಾರೆ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಬಿಹಾರದಲ್ಲಿ ಕರೋನಾ ಮತ್ತು ಪ್ರವಾಹದ ಸಂಕಷ್ಟದ ನಡುವೆಯೇ ಚುನಾವಣೆಯ ಗಾಳಿ ಜೋರಾಗಿ ಬೀಸತೊಡಗಿದೆ. ಕರೋನಾ ಸಂಕಷ್ಟಕ್ಕೆ ದೇಶ ಸಿಲುಕಿದ ಮೇಲೆ ಎದುರಾಗುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಸಂಕಷ್ಟದ ಹೊತ್ತಲ್ಲಿ ಚುನಾವಣೆ ನಡೆಸುವುದು ಬೇಡ, ಮುಂದೂಡುವುದು ಲೇಸು ಎಂಬ ಪ್ರತಿಪಕ್ಷಗಳು ಮತ್ತು ಸ್ವತಃ ಆಡಳಿತ ಮೈತ್ರಿಯ ಪಕ್ಷವೊಂದರ ಮನವಿಗೆ ಚುನಾವಣಾ ಆಯೋಗ ಸೊಪ್ಪು ಹಾಕಿಲ್ಲ. ನಿಗದಿಯಂತೆ ಅಕ್ಟೋಬರ್-ನವೆಂಬರ್ ವೇಳೆಗೆ ಚುನಾವಣೆ ನಡೆಸಲಾಗುವುದು ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಹಾಗಾಗಿ, ಸಹಜವಾಗೇ ಚುನಾವಣೆ ನಿಕ್ಕಿಯಾಗುತ್ತಿದ್ದಂತೆ ರಾಜಕೀಯ ಪಡಸಾಲೆಯಲ್ಲಿ ಬಿರುಸಿನ ತಯಾರಿಗಳು, ಸ್ಥಾನ ಹಂಚಿಕೆಯ ಚೌಕಾಸಿಗಳು ಗರಿಗೆದರಿವೆ. ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದಲ್ಲಂತೂ ಈ ಸ್ಥಾನ ಹಂಚಿಕೆಯ ಕಿತ್ತಾಟ ಕೈಮೀರಿ ಹೋಗಿದ್ದು, ಮಿತ್ರಪಕ್ಷಗಳ ನಡುವೆ ಪರಸ್ಪರ ಬಹಿರಂಗ ಕೆಸರೆರಚಾಟಕ್ಕೆ ಕಾರಣವಾಗಿದೆ. ಬುಧವಾರವಷ್ಟೇ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ ಸಿ ತ್ಯಾಗಿ, ತಮ್ಮ ಮೈತ್ರಿ ಏನಿದ್ದರೂ ಬಿಜೆಪಿಯೊಂದಿಗೆ ವಿನಃ ಎಲ್ ಜೆಪಿಯೊಂದಿಗೆ ಅಲ್ಲ ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ಎಲ್ ಜೆಪಿ ಹೊರಗಿಟ್ಟು ಚುನಾವಣೆಗೆ ಹೋಗುವ ಸೂಚನೆ ನೀಡಿದ್ದಾರೆ. ಅದೇ ಹೊತ್ತಿಗೆ ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಕೂಡ ತಿರುಗೇಟು ನೀಡಿದ್ದು, ಬಿಜೆಪಿ ಮತ್ತು ಅದರ ಹೈಕಮಾಂಡ್ ನೊಂದಿಗೆ ತಮಗೆ ಸ್ವತಃ ಜೆಡಿಯು ನಾಯಕ ಹಾಗೂ ಸಿಎಂ ನಿತೀಶ್ ಕುಮಾರ್ ಅವರಿಗಿಂತ ಹೆಚ್ಚು ಸಂಪರ್ಕವಿದ್ದು, ಯಾವುದೇ ಕ್ಷಣದಲ್ಲಿ ಅವರೊಂದಿಗೆ ಚರ್ಚಿಸಬಲ್ಲೆ. ಹಾಗಾಗಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ನಾಯಕತ್ವ ಹೊರತುಪಡಿಸಿ ಚುನಾವಣೆ ಎದುರಿಸುವುದಿಲ್ಲ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗೆ ನೋಡಿದರೆ, ಕಳೆದ ಒಂದು ವರ್ಷದಿಂದಲೇ ಜೆಡಿಯು ಮತ್ತು ಎಲ್ ಜೆಪಿ ನಡುವಿನ ಮೈತ್ರಿ ಹಳಸಿದ್ದು, ಬಿಹಾರದಲ್ಲಿ ಸದ್ಯಕ್ಕೆ ರಾಜ್ಯ ಸರ್ಕಾರ ಮತ್ತು ನಿತೀಶ್ ಆಡಳಿತದ ಪ್ರಮುಖ ಟೀಕಾಕಾರರಾಗಿ ಅವರದೇ ಮೈತ್ರಿ ಎಲ್ ಜೆಪಿಯ ನಾಯಕ ಚಿರಾಗ್ ಹೊರಹೊಮ್ಮಿದ್ದಾರೆ. ಸರ್ಕಾರದ ನೀತಿ ಮತ್ತು ನಿಲುವುಗಳ ಬಗ್ಗೆ, ವೈಫಲ್ಯಗಳ ಬಗ್ಗೆ ಕಳೆದ ಒಂದು ವರ್ಷದಿಂದ ಚಿರಾಗ್ ಬಹಿರಂಗವಾಗಿಯೇ ಟೀಕಿಸತೊಡಗಿದ್ದಾರೆ ಮತ್ತು ಒಂದು ವರ್ಷದಿಂದ ಸಿಎಂ ಅವರೊಂದಿಗೆ ತಮ್ಮ ಸಂಪರ್ಕ ಕಡಿತವಾಗಿದೆ ಎಂದು ಬುಧವಾರ ಕೂಡ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆ ಮೂಲಕ ಎನ್ ಡಿಎ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಈವರೆಗಿನ ವದಂತಿಗಳಿಗೆ ಚಿರಾಗ್ ಅಧಿಕೃತತೆಯ ಮುದ್ರೆಯೊತ್ತಿದ್ಧಾರೆ.

ಈ ನಡುವೆ, ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಪೈಕಿ, ಈ ಹಿಂದಿನ ಚುನಾವಣೆಯಂತೆಯೇ ತನಗೆ 42 ಸ್ಥಾನಗಳನ್ನು ಬಿಟ್ಟುಕೊಡಬೇಕು. ಸ್ಥಾನ ಹಂಚಿಕೆಯ ಬಗ್ಗೆ ಪ್ರತಿ ಬಾರಿ ಚೌಕಾಸಿ ಮಾಡುವ ಪ್ರಶ್ನೆಯೇ ಇಲ್ಲ. ಆ ಬಗ್ಗೆ ಕಳೆದ ಚುನಾವಣೆಯಲ್ಲಿಯೇ ಬಿಜೆಪಿಯೊಂದಿಗೆ ಮಾತುಕತೆ ಅಂತಿಮವಾಗಿದೆ. ಈಗ ಮತ್ತೆ ಆ ಪ್ರಶ್ನೆ ಉದ್ಭವವಾಗಬಾರದು ಎನ್ನುವ ಮೂಲಕ ಚಿರಾಗ್ ಹಿಂದಿನಷ್ಟೇ ಸ್ಥಾನ ನೀಡಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಆದರೆ, ಕಳೆದ ಚುನಾವಣೆಯ ಬಳಿಕ ಈ ನಡುವೆ ಮೈತ್ರಿಯೊಂದಿಗೆ ಮರುಮದುವೆಯಾಗಿರುವ ನಿತೀಶ್ ಕುಮಾರ್ ಅವರ ಜೆಡಿಯು, ತನಗೆ ಕನಿಷ್ಟ 120 ಸ್ಥಾನ ಬಿಟ್ಟುಕೊಡಬೇಕು ಎಂದು ಬಿಜೆಪಿಯೊಂದಿಗೆ ಚೌಕಾಸಿ ಮಾಡುತ್ತಿದ್ದರೆ, ಬಿಹಾರದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಬಿಜೆಪಿ, ಸ್ವತಃ ಈ ಬಾರಿ ಕನಿಷ್ಟ 102 ಸ್ಥಾನಗಳಲ್ಲಾದರೂ ಕಣಕ್ಕಿಳಿಯಲು ಸಜ್ಜಾಗಿದೆ. ಆ ಲೆಕ್ಕಾಚಾರಗಳ ಪ್ರಕಾರ, ಎಲ್ ಜೆಪಿಗೆ ಉಳಿಯುವುದು ಕೇವಲ 21 ಸ್ಥಾನ ಮಾತ್ರ. ಆದರೆ, ಚಿರಾಗ್ ಅಂತಹ ಹೊಂದಾಣಿಕೆಯ ತಾವು ಸಿದ್ಧವಿಲ್ಲ ಎಂಬ ಸಂದೇಶವನ್ನು ಈಗಾಗಲೇ ರವಾನಿಸಿದ್ದು, ಒಂದು ವೇಳೆ ಸ್ಥಾನ ಹಂಚಿಕೆ ವೇಳೆ ತಮಗೆ ನಿರೀಕ್ಷಿತ ಸ್ಥಾನ ಸಿಗದೇ ಹೋದರಲ್ಲಿ ಮೈತ್ರಿ ತೊರೆದು ಎಲ್ಲಾ 243 ಸ್ಥಾನಗಳಿಗೂ ಕಣಕ್ಕಿಳಿಯಲು ಕೂಡ ಪಕ್ಷ ಸಿದ್ಧ ಎಂಬ ಮಾತುಗಳನ್ನೂ ಈ ಹಿಂದೆಯೇ ಆಡಿದ್ದಾರೆ.

ಈ ನಡುವೆ, ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟದ ನಾಯಕರೊಂದಿಗೆ ಚಿರಾಗ್ ಸಖ್ಯ ಹೊಂದಿದ್ದು, ಯಾವುದೇ ಕ್ಷಣದಲ್ಲಿ ಪಾಳೆಯ ಬದಲಾಯಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ನಡುವೆ ಸ್ವತಃ ಕಾಂಗ್ರೆಸ್ ಪಕ್ಷವೇ ಚಿರಾಗ್ ಅವರನ್ನು ಸಂಪರ್ಕಿಸಿದ್ದು ಮಹಾಘಟಬಂಧನಕ್ಕೆ ಆಹ್ವಾನಿಸಿದೆ ಎಂದು ಹೇಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿರುವ ಚಿರಾಗ್, ಪಕ್ಷಾತೀತವಾಗಿ ನನಗೆ ಸ್ನೇಹಿತರಿದ್ದಾರೆ. ಹಿತೈಷಿಗಳಿದ್ದಾರೆ. ಹಾಗಂದ ಮಾತ್ರಕ್ಕೆ ನಾನು ಮೈತ್ರಿ ಬದಲಾಯಿಸುತ್ತೇನೆ ಎಂದೇನಲ್ಲ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಲ್ಲಿ ನನಗೆ ಅಪಾರ ನಂಬಿಕೆ ಇದೆ. ಸದ್ಯ ನಾನು ಎನ್ ಡಿಎಯಲ್ಲಿಯೇ ಇದ್ದೇನೆ ಎಂದಿದ್ದಾರೆ. ಆದರೆ, ಮುಂದೆ ಮಹಾಘಟಬಂಧನ್ ಕಡೆ ಹೆಜ್ಜೆ ಹಾಕುವುದಿಲ್ಲ ಎಂದೇನೂ ಹೇಳಿಲ್ಲ.

ಅಷ್ಟಕ್ಕೂ ಚಿರಾಗ್ ಮತ್ತು ಅವರ ಪಕ್ಷ ಜೆಡಿಯು ಮತ್ತು ನಿತೀಶ್ ಕುಮಾರ್ ವಿರುದ್ಧ ಹೀಗೆ ಸಿಡಿದೇಳಲು ಕಾರಣ; ಕಳೆದ ಲೋಕಸಭಾ ಚುನಾವಣೆಗೆ ಮುನ್ನ ನಿತೀಶ್ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಪಕ್ಷದ ನಾಯಕ ಪಶುಪತಿನಾಥ್ ಪರಸ್ ಅವರಿಗೆ ಲೋಕಸಭಾ ಕಣಕ್ಕಿಳಿಸಿ, ಅವರನ್ನು ಗೆಲ್ಲಿಸಿದ ಬಳಿಕ ತೆರವಾದ ಸಂಪುಟ ಸ್ಥಾನಕ್ಕೆ ಪಕ್ಷದ ಮತ್ತೊಬ್ಬರಿಗೆ ಅವಕಾಶ ನೀಡಿಲ್ಲ. ಮೈತ್ರಿ ಸರ್ಕಾರದಲ್ಲಿ ಪಕ್ಷಕ್ಕೆ ನೀಡಿದ್ದು ಏಕೈಕ ಸಚಿವ ಸ್ಥಾನ. ಆದರೆ, ಲೋಕಸಭಾ ಚುನಾವಣೆ ಕಾರಣಕ್ಕೆ ಆದ ಬದಲಾವಣೆಯಿಂದಾಗಿ ಆ ಸ್ಥಾನ ಕೂಡ ಕೈತಪ್ಪಿತು. ಆ ಹಿನ್ನೆಲೆಯಲ್ಲಿ ಪಕ್ಷದ ಮತ್ತೊಬ್ಬ ಶಾಸಕರಿಗೆ ಅವಕಾಶ ನೀಡಿ ಎಂದರೆ ಸಿಎಂ ಗಮನವನ್ನೇ ಕೊಡಲಿಲ್ಲ. ಹಾಗಾಗಿ 2019ರ ಲೋಕಸಭಾ ಚುನಾವಣೆಯ ಬಳಿಕ ಮೈತ್ರಿಕೂಟದ ಸಮಸ್ಯೆಗಳ ಬಗ್ಗೆ, ತಮ್ಮ ಅಹವಾಲುಗಳ ಬಗ್ಗೆ ಚರ್ಚಿಸಲು ಸೂಕ್ತ ವೇದಿಕೆಯೇ ಇಲ್ಲವಾಗಿದೆ. ಅವಕಾಶವೇ ಇಲ್ಲದೇ ಹೋಗಿದೆ. ಹಾಗಾಗಿ ಸಾರ್ವಜನಿಕವಾಗಿ ಮಾತನಾಡುವುದು ಅನಿವಾರ್ಯವಾಯಿತು ಎಂದು ಸ್ವತಃ ಚಿರಾಗ್ ಹೇಳಿದ್ದಾರೆ.

ಈ ನಡುವೆ, ಚಿರಾಗ್ ಹೀಗೆ ಸರ್ಕಾರದ ಭಾಗವಾಗಿದ್ದೂ ಪ್ರತಿಪಕ್ಷದಂತೆ ವರ್ತಿಸುತ್ತಿರುವುದರ ಹಿಂದೆ ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಅವರನ್ನು ಪ್ರಶ್ನಾತೀತ ನಾಯಕನಾಗಿ ಬೆಳೆಯದಂತೆ ಕಟ್ಟಿಹಾಕುವ ಬಿಜೆಪಿಯ ಒಳತಂತ್ರಗಾರಿಕೆ ಇದೆ. ತಮ್ಮದೇ ಮೈತ್ರಿಯ ಸಿಎಂ ಆದರೂ ನಿತೀಶ್ ತಮ್ಮನ್ನೇ ಮೀರಿಸಿ ಏಕಪಕ್ಷೀಯವಾಗಿ ನಡೆದುಕೊಳ್ಳುವುದು ಮೈತ್ರಿಗಷ್ಟೇ ಅಲ್ಲ; ಸ್ವತಃ ಬಿಜೆಪಿ ಪಕ್ಷಕ್ಕೂ ಪೆಟ್ಟು. ಹಾಗಾಗಿ ಸಿಎಂಗೆ ಕಡಿವಾಣ ಹಾಕಲು ಬಿಜೆಪಿ ಚಿರಾಗ್ ಅವರನ್ನು ಬಳಸಿಕೊಂಡಿದೆ ಎಂಬ ಮಾತುಗಳೂ ಇವೆ. ಚಿರಾಗ್ ಕೂಡ ಬಿಜೆಪಿ ಹೈಕಮಾಂಡ್ ನೊಂದಿಗೆ ತನಗೆ ಸ್ವತಃ ಸಿಎಂ ನಿತೀಶ್ ಅವರಿಗಿಂತ ಆಪ್ತ ಸಂಪರ್ಕವಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಬಿಜೆಪಿಯ ತಂತ್ರಗಾರಿಕೆ ಮತ್ತು ಚಿರಾಗ್ ನಡುವಿನ ನಂಟಿನ ಬಗ್ಗೆಯೂ ರಾಜ್ಯ ರಾಜಕಾರಣದಲ್ಲಿ ಚರ್ಚೆ ಆರಂಭವಾಗಿದೆ.

ಆಡಳಿತ ಮೈತ್ರಿಯ ಒಳಸುಳಿಗಳು ಒಂದುಕಡೆಯಾದರೆ, ಮತ್ತೊಂದು ಕಡೆ ಪ್ರತಿಪಕ್ಷ ಮಹಾಘಟಬಂಧನದಲ್ಲೂ ಬಿರುಕುಗಳು ಎದ್ದುಕಾಣಲಾರಂಭಿಸಿವೆ. ಮೈತ್ರಿಯ ಪ್ರಮುಖ ಪಕ್ಷ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ವರಸೆಯ ಬಗ್ಗೆ ಮೈತ್ರಿ ಪಕ್ಷಗಳ ನಡುವೆಯೇ ತೀವ್ರ ಅಸಮಾಧಾನವಿದೆ. ಹಾಗಾಗಿ ಯಾವುದೇ ಕಾರಣಕ್ಕೂ ತೇಜಸ್ವಿ ಯಾದವ್ ನೇತೃತ್ವದಲ್ಲಿ ಈ ಬಾರಿ ಮೈತ್ರಿಕೂಟ ಚುನಾವಣೆಗೆ ಹೋಗುವುದು ಸಲ್ಲದು ಎಂದು ಪ್ರಭಾವಿ ನಾಯಕ ಜಿತಿನ್ ರಾಮ್ ಮಾಂಝಿ ಈಗಾಗಲೇ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆಗೂ ಮಾತುಕತೆ ನಡೆಸಿದ್ದಾರೆ. ಮಹಾಘಟಬಂಧನದ ಸೀಟು ಹಂಚಿಕೆಯ ಕುರಿತು ಸಮನ್ವಯ ಸಮಿತಿ ರಚನೆಯಾಗಬೇಕು. ಸಮನ್ವಯ ಸಮಿತಿ ಮೂಲಕವೇ ಸ್ಥಾನ ಹಂಚಿಕೆ ನಿರ್ಧಾರವಾಗಬೇಕು ಎಂದು ಮಾಂಝಿ ಪಟ್ಟುಹಿಡಿದಿದ್ದಾರೆ. ಆದರೆ, ಅವರ ಮಾತಿಗೆ ತಿಂಗಳುಗಳು ಉರುಳಿದರೂ ಯಾರೂ ಸೊಪ್ಪು ಹಾಕಿಲ್ಲ. ಹಾಗಾಗಿ, ಯಾವುದೇ ಕ್ಷಣದಲ್ಲಿ ಮಾಂಝಿ ಅವರ ಎಚ್ ಎ ಎಂ(ಎಸ್) ಪಕ್ಷ ಮಹಾಘಟಬಂಧನದ ಬಂಧನ ಕಡಿದುಕೊಂಡು, ಎನ್ ಡಿಎ ತೆಕ್ಕೆಗೆ ಸರಿಯಬಹುದು ಎನ್ನಲಾಗುತ್ತಿದೆ.

ಅಂದರೆ, ಸದ್ಯದ ಲೆಕ್ಕಾಚಾರಗಳ ಪ್ರಕಾರವೇ ಎಲ್ಲವೂ ನಡೆದರೆ; ಈ ಬಾರಿ ಕೂಡ ಬಿಹಾರದ ಚುನಾವಣಾ ಕಣದಲ್ಲಿ ಎಂದಿನಂತೆ ಅದಲುಬದಲು ಆಟ ರಂಗೇರಲಿದೆ. ಅಲ್ಲಿದ್ದವರು ಇಲ್ಲಿಗೆ, ಇಲ್ಲಿದ್ದವರು ಅಲ್ಲಿಗೆ ಬದಲಾಗಲಿದ್ದಾರೆ. ಮಾಂಝಿ ತಮ್ಮ ಪಕ್ಷದೊಂದಿಗೆ ಎನ್ ಡಿಎ ಕಡೆ ಹೋದರೆ, ಖಂಡಿತವಾಗಿಯೂ ನಿರೀಕ್ಷಿತ ಸ್ಥಾನ ಪಡೆಯಲಾಗದೆ ಎಲ್ ಜೆಪಿಯ ಚಿರಾಗ್ ಮಹಾಘಟಬಂಧನದ ಪಾಳೆಯಕ್ಕೆ ಜಿಗಿಯಲಿದ್ದಾರೆ!

Click here to follow us on Facebook , Twitter, YouTube, Telegram

Pratidhvani
www.pratidhvani.com