ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಸಾವು; ಸಂಬೀತ್ ಪಾತ್ರ ವಿರುದ್ದ ನೆಟ್ಟಿಗರ ಆಕ್ರೋಶ
ರಾಷ್ಟ್ರೀಯ

ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಸಾವು; ಸಂಬೀತ್ ಪಾತ್ರ ವಿರುದ್ದ ನೆಟ್ಟಿಗರ ಆಕ್ರೋಶ

ತ್ಯಾಗಿ ಅವರು ಸಾವನ್ನಪ್ಪುವ ಕೆಲವೇ ಗಂಟೆಗಳಿಗೂ ಮುನ್ನ ಖಾಸಗಿ ಸುದ್ದಿವಾಹಿನಿಯಲ್ಲಿನ ಚರ್ಚೆಯಲ್ಲಿ ಭಾಗವಹಿಸಿದ್ದನ್ನು ಕೇಂದ್ರವಾಗಿಟ್ಟುಕೊಂಡು, ಅಲ್ಲಿ ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ ಹಾಗೂ ತ್ಯಾಗಿ ಅವರ ನಡುವೆ ನಡೆದಂತಹ ವಾಗ್ವಾದವೇ ಹೃದಯಾಘಾತಕ್ಕೆ ಕಾರಣ ಎನ್ನುವ ವಾದ ಮಾಡಲಾಗುತ್ತಿದೆ.

ಪ್ರತಿಧ್ವನಿ ವರದಿ

ಕಾಂಗ್ರೆಸ್‌ ವಕ್ತಾರ ರಾಜೀವ್‌ ತ್ಯಾಗಿ ಅವರು ಗುರುವಾರ ಹೃದಾಯಘಾತದಿಂದ ಮೃತ ಪಟ್ಟಿರುವ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ತ್ಯಾಗಿ ಅವರು ಸಾವನ್ನಪ್ಪುವ ಕೆಲವೇ ಗಂಟೆಗಳಿಗೂ ಮುನ್ನ ಖಾಸಗಿ ಸುದ್ದಿವಾಹಿನಿಯಲ್ಲಿನ ಚರ್ಚೆಯಲ್ಲಿ ಭಾಗವಹಿಸಿದ್ದನ್ನು ಕೇಂದ್ರವಾಗಿಟ್ಟುಕೊಂಡು, ಅಲ್ಲಿ ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ ಹಾಗೂ ತ್ಯಾಗಿ ಅವರ ನಡುವೆ ನಡೆದಂತಹ ವಾಗ್ವಾದವೇ ಹೃದಯಾಘಾತಕ್ಕೆ ಕಾರಣ ಎನ್ನುವ ವಾದ ಮಾಡಲಾಗುತ್ತಿದೆ.

ಹಿಂದಿ ಸುದ್ದಿ ವಾಹಿನಿ ಆಜ್‌ ತಕ್‌ನಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ, ಸಂಬೀತ್‌ ಪಾತ್ರ ಅವರು ತ್ಯಾಗಿ ಅವರನ್ನು ʼಜೈಚಂದ್‌ʼ (ದೇಶದ್ರೋಹಿ) ಎಂದು ಹೀಯಾಳಿಸಿ ಅವರು ಇಟ್ಟದ್ದಂತಹ ತಿಲಕದ ಕುರಿತಾಗಿ ಅವಹೇಳನ ಮಾಡಿದ್ದರಿಂದ ಈ ದುರ್ಘಟನೆ ನಡೆಯಿತು ಎಂಬುದು ನೆಟ್ಟಿಗರ ವಾದ. ಚರ್ಚೆಯಲ್ಲಿ ವೈಯಕ್ತಿಕ ಅವಹೇಳನ ಮಾಡುವಷ್ಟು ಕೀಳು ಮಟ್ಟಕ್ಕೆ ಸಂಬೀತ್‌ ಪಾತ್ರ ಇಳಿದಿದ್ದಾರೆ, ಹಾಗಾಗಿ ರಾಜೀವ್‌ ತ್ಯಾಗಿ ಸಾವಿಗೆ ಅವರೇ ಕಾರಣರು, ಅವರನ್ನು ಕೂಡಲೇ ಬಂಧಿಸಬೇಕು ಎನ್ನು ಆಗ್ರಹವೂ ಕೇಳಿ ಬರುತಿದೆ.

ಸುದ್ದಿ ವಾಹಿನಿಯಲ್ಲಿ ಚರ್ಚೆಗಳ ಮೇಲೆ ಎದ್ದಿವೆ ಪ್ರಶ್ನೆಗಳು:

ಸುದ್ದಿವಾಹಿನಿಗಳಲ್ಲಿ ರಾಜಕೀಯ ಕುರಿತಾದಂತಹ ಚರ್ಚೆಗಳು ದಿಕ್ಕು ತಪ್ಪುವುದು ಸಾಮಾನ್ಯ. ಆದರೆ, ಅಲ್ಲಿಯೂ ಯಾವತ್ತೂ ವೈಯಕ್ತವಾಗಿ ಇನ್ನೊಬ್ಬರನ್ನು ದೂಷಿಸುವ ಮಟ್ಟಕ್ಕೆ ಈ ಚರ್ಚಾ ಕಾರ್ಯಕ್ರಮಗಳು ಇಳಿಯಬಾರದು ಎಂಬ ವಿಶ್ಲೇಷಣೆಯು ನಡೆಯುತ್ತಿದೆ.

ಚರ್ಚೆ ನಡೆಯಬೇಕಾದುದು ಅನಿವಾರ್ಯ. ಆದರೆ, ಅವುಗಳಿಗೆ ನೈತಿಕ ಹಾಗೂ ವೈಚಾರಿಕ ಚೌಕಟ್ಟುಗಳಿರಬೇಕು. ಅದರ ಹೊರತಾಗಿ, ತಮ್ಮ ವಾದವನ್ನು ಸರಿ ಎಂದು ನಿರೂಪಿಸಲು ಇತರರ ವೈಯಕ್ತಿಕ ದೂಷಣೆ ಎಷ್ಟರ ಮಟ್ಟಿಗೆ ಸರಿ? ಇಂತಹ ಸಂದರ್ಭದಲ್ಲಿ ಸಮನ್ವಯಕಾರರಾಗಿ ಇರಬೇಕಾದಂತಹ ಟಿವಿ ಆಂಕರ್‌ಗಳು ಚರ್ಚೆಯ ತೀವ್ರತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆಯೇ ಹೊರತು, ಚರ್ಚೆಯಿಂದ ಉತ್ತಮವಾದ ವಿಚಾರಗಳನ್ನು ಹೊರಗೆಳೆಯಲು ಪ್ರಯತ್ನಿಸದೇ ಇರುವುದು ನಮ್ಮ ದುರ್ದೈವ.

ಇತ್ತೀಚಿನ ಪ್ರೈಮ್‌ ಟೈಮ್‌ ಡಿಬೇಟ್‌ಗಳಲ್ಲಿ ಟಿಆರ್‌ಪಿಯ ಹಪಾಹಪಿ ಹಾಗೂ ರಾಜಕೀಯ ಪಕ್ಷಗಳ ವಕ್ತಾರರಿಗೆ ತಮ್ಮ ಹಾಗೂ ತಮ್ಮ ಪಕ್ಷದ ವರ್ಚಸ್ಸು ಹೆಚ್ಚಿಸುವ ಖಯಾಲಿ ಬಿಟ್ಟರೆ, ಅಲ್ಲಿ ಚರ್ಚೆಯಾಗುತ್ತಿರುವ ವಿಚಾರ ಏನು ಎಂಬುದರ ಕುರಿತು ಕಿಂಚಿತ್ತೂ ಮಾಹಿತಿ ಇದ್ದ ಹಾಗೆ ಕಾಣುತ್ತಿಲ್ಲ. ಒಟ್ಟಿನಲ್ಲಿ ರಾಜೀವ್‌ ತ್ಯಾಗಿ ಅವರ ಸಾವು ಸಾಕಷ್ಟು ವಿಚಾರಗಳ ಚರ್ಚೆಗಳನ್ನು ಮುನ್ನೆಲೆಗೆ ತಂದಿಟ್ಟಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com