ಕೇರಳ- ಕರ್ನಾಟಕ: ಅಂತಾರಾಜ್ಯ ಗಡಿ ಮುಚ್ಚುವಾಗ ಇದ್ದ ಮುಂಜಾಗ್ರತೆ ತೆರವಿಗೆ ಇಲ್ಲದಾಯ್ತೇಕೆ?
ರಾಷ್ಟ್ರೀಯ

ಕೇರಳ- ಕರ್ನಾಟಕ: ಅಂತಾರಾಜ್ಯ ಗಡಿ ಮುಚ್ಚುವಾಗ ಇದ್ದ ಮುಂಜಾಗ್ರತೆ ತೆರವಿಗೆ ಇಲ್ಲದಾಯ್ತೇಕೆ?

ಕೇರಳ-ಕರ್ನಾಟಕ ಗಡಿ ನಿರ್ಬಂಧ ತೆರೆವು ಮಾಡಿದ್ದು ಹಲವರಿಗೆ ಸಂತಸ ತಂದಿದ್ದರೂ ಮುಂಜಾಗ್ರತೆ ವಹಿಸದೇ ಗಡಿ ನಿರ್ಬಂಧ ತೆರವು ಮಾಡಿದ ಜಿಲ್ಲಾಡಳಿತದ ಬಗ್ಗೆ ಸಾರ್ವಜನಿಕ ವಲಯದಿಂದ ಟೀಕೆಗಳು ಎದುರಾಗುತ್ತಿವೆ

ಕೋವರ್ ಕೊಲ್ಲಿ ಇಂದ್ರೇಶ್

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರೋನಾ ವೈರೆಸ್ ಸೋಂಕಿತರು ಮಾರ್ಚ್ ತಿಂಗಳಲ್ಲಿ ಕೇರಳದಲ್ಲಿ ಏಕಾಏಕೀ ಹೆಚ್ಚಾಗತೊಡಗಿದಾಗ ಮಾರ್ಚ್ 28ರ ಸುಮಾರಿಗೆ ಕೊಡಗು ಜಿಲ್ಲಾಡಳಿತವೂ ಕೇರಳವನ್ನು ಸಂಪರ್ಕಿಸುವ ಮಾಕುಟ್ಟ ಗಡಿ ರಸ್ತೆಯನ್ನು ಮಣ್ಣು ಹಾಕಿ ತಾತ್ಕಲಿಕವಾಗಿ ಮುಚ್ಚಿತು. ಆ ಸಂದರ್ಭದಲ್ಲಿ ಕೇರಳದಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಏರು ಗತಿಯಲ್ಲಿದ್ದವು. ಬರೇ ಕೊಡಗು ಮಾತ್ರವಲ್ಲ ಕರ್ನಾಟಕ ಸರ್ಕಾರ ಕೇರಳದಿಂದ ರಾಜ್ಯ ಪ್ರವೇಶಿಸುವ ಮತ್ತೊಂದು ಪ್ರಮುಖ ಗಡಿ ಮಂಗಳೂರು ಸಮೀಪದ ತಲಪಾಡಿಯನ್ನೂ ಸಂಪೂರ್ಣ ಮುಚ್ಚಿತು.

ಆದರೆ, ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರು. ಇತ್ತ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಗಡಿ ತೆರವು ಮಾಡುವಂತೆ ಪತ್ರ ಬರೆದರು. ಕೊಡಗಿನ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಯಾವುದೇ ಕಾರಣಕ್ಕೂ ಕೇರಳ-ಕರ್ನಾಟಕ ಗಡಿ ಸದ್ಯಕ್ಕೆ ತೆರೆಯೋದೆ ಇಲ್ಲ ಎಂದರು. ಇಷ್ಟೆಲ್ಲಾ ಪ್ರಹಸನಗಳು ನಡೆದು ಸರಿಸುಮಾರು ಇಂದಿಗೆ ಐದು ತಿಂಗಳುಗಳೇ ಸರಿದು ಹೋದವು. ಆದರೆ, ಇತ್ತೀಚೆಗೆ ರಾಜ್ಯಸರ್ಕಾರದ ಆದೇಶದ ಮೇರೆಗೆ ಕೊಡಗು ಜಿಲ್ಲಾಡಳಿತ ಮಣ್ಣಿನಿಂದ ಮುಚ್ಚಲ್ಪಟ್ಟಿದ್ದ ಕೇರಳ ಕರ್ನಾಟಕ ಗಡಿಯಾದ ಮಾಕುಟ್ಟ ರಸ್ತೆಯ ನಿರ್ಬಂಧವನ್ನು ತೆರವುಗೊಳಿಸಿದೆ.

ಶನಿವಾರ ರಾತ್ರಿಯೇ ರಸ್ತೆಗೆ ಸುರಿದಿದ್ದ ಮಣ್ಣು ತೆರವು ಮಾಡಿ ಮುಕ್ತ ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ. ಆದರೆ, ಈ ವಿಚಾರ ಕೇರಳ ಸರ್ಕಾರಕ್ಕೆ ಸಧ್ಯಕ್ಕೇನೂ ಖುಷಿಕೊಟ್ಟ ಹಾಗೇ ಕಂಡುಬರುತ್ತಿಲ್ಲ. ಬದಲಿಗೆ ಕೇರಳ ಸರ್ಕಾರ, ಕೇರಳ-ಕರ್ನಾಟಕ ಗಡಿಯಲ್ಲಿ ಬಂದೋಬಸ್ತ್ ಅನ್ನು ಮತ್ತಷ್ಟು ಬಿಗಿ ಮಾಡಿದೆ. ಕರ್ನಾಟಕದಿಂದ ಬರುವವರನ್ನು ಸೂಕ್ಷ್ಮಾತೀಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜ್ಯದೊಳಕ್ಕೆ ಪ್ರವೇಶ ಪಡೆಯಲು ಕರ್ನಾಟಕದ ಜನತೆಗೆ ಇ-ಪಾಸ್ ಕಡ್ಡಾಯ ಮಾಡಿದೆ. ಮಾಕುಟ್ಟ ಔಟ್ ಪೋಸ್ಟ್ ಮುಗಿದು ಕೇರಳ ಚೆಕ್ ಪೋಸ್ಟ್ ನ್ನಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಸರಕು ವಾಹನದಲ್ಲಿ ಚಾಲಕನೊಬ್ಬನೇ ಪ್ರಯಾಣಿಸಬೇಕು. ಅವನ ಜೊತೆಯಲ್ಲಿ ಇತರರು ಸಂಚರಿಸಿದರೆ ಆ ವಾಹನವನ್ನು ಕರ್ನಾಟಕಕ್ಕೆ ಹಿಂದಿರುಗಿ ಕಳುಹಿಸುವಷ್ಟರಮಟ್ಟಿಗಿನ ಮುಂಜಾಗ್ರತೆ ಕೇರಳ ವಹಿಸುತ್ತಿದೆ. ಆದರೆ, ಸಂಕಷ್ಟ ಬಂದಾಗ ವೆಂಕಟರಮಣ ಅಂಥ, ಕೇರಳ ಸಂಪರ್ಕಿಸುವ ಗಡಿ ಮುಚ್ಚಿ ಸಾರ್ವಜನಿಕರಿಂದ ಶಹಬ್ಬಾಶ್ ಎನಿಸಿಕೊಂಡಿದ್ದ ಜನಪ್ರತಿನಿಧಿಗಳು, ಕರೋನಾ ಸೋಂಕು ತನ್ನ ಕಬಂಧಬಾಹುವನ್ನು ಎಲ್ಲೆಡೆಗೂ ಚಾಚುವ ಹೊತ್ತಲ್ಲಿ ಬಂಧ್ ಮಾಡಿದ್ದ ಗಡಿ ತೆರವು ಮಾಡಿ ಆರಾಮವಾಗಿದ್ದಾರ ಎನಿಸಹತ್ತಿದೆ. ಸೋಂಕು ಚಿಕ್ಕದಾಗಿದ್ದಾಗ ದೊಡ್ಡಮಟ್ಟದ ನಿರ್ಧಾರ ತೆಗೆದುಕೊಂಡ ಜಿಲ್ಲಾಡಳಿತ ಸೋಂಕು ಮುಗಿಲುಮುಟ್ಟುವ ಸಮಯದಲ್ಲಿ ಗಡಿ ತೆರವು ಮಾಡಿದೆ ಅದು ಕೂಡಾ ಯಾವುದೇ ಮುಂಜಾಗರೂಕತಾ ಕ್ರಮಗಳಿಲ್ಲದೆ ಎನ್ನುವ ಮರ್ಮವೇ ಈಗ ಸಾರ್ವಜನಿಕರನ್ನು ಅತೀಯಾಗಿ ಕಾಡುತ್ತಿದೆ.

ಕೇರಳದ ಚೆಕ್ ಪೋಸ್ಟ್ ನ್ನಲ್ಲಿ ಅಲ್ಲಿನ ತಹಶೀಲ್ದಾರ್ ಇಂದ ಹಿಡಿದು ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಕರ್ನಾಟಕದಿಂದ ಬರುವವರ ಮೇಲೆ ಹದ್ದಿನ ಕಣ್ಣೀಟ್ಟು ಕೇರಳ ಗಡಿಯಲ್ಲಿ ಕಾಯುತ್ತಿದ್ದರೆ. ನಮ್ಮ ಕರ್ನಾಟಕ ಚೆಕ್ ಪೋಸ್ಟ್ ನ್ನಲ್ಲಿ ಯಾವ ಕೊವೀಡ್ ಪರೀಕ್ಷೆಯೂ ಇಲ್ಲ, ಫೀವರ್ ಪರೀಕ್ಷೆಯೂ ಇಲ್ಲ. ಅಲ್ಲಿನವರು ಇಲ್ಲಿಗೆ ಆರಾಮವಾಗಿ ಆಯಾ ರಾಮ್, ಗಯಾ ರಾಮ್ ಅಂಥ ಕೇರಳ ಕಡೆಯಿಂದ ಯಾರು ಬೇಕಾದರೂ ಬರಬಹುದು ಯಾರೂ ಬೇಕಾದರೂ ಹೋಗಬಹುದು ಎನ್ನುವಂತೆ ಮಾಡಿದೆ. ಐದು ತಿಂಗಳು ಗಡಿ ಬಂಧ್ ಮಾಡಿದ ಜಿಲ್ಲಾಡಳಿತ ಹೀಗೆ ಏಕಾಏಕೀ ಯಾವ ಮುಂಜಾಗ್ರತೆ ಕ್ರಮ ವಹಿಸದೆ, ಕನಿಷ್ಟ ಆರ್.ಟಿ.ಒ ಚೆಕ್ ಪೋಸ್ಟ್ ಕೂಡಾ ಇಲ್ಲಿ ಇಲ್ಲದಂತೆ ಮಾಡಿದೆ. ಮಾಕುಟ್ಟ ರಸ್ತೆ ಕರ್ನಾಟಕ ಕೇರಳದ 25 ಕಿಮೀ ರಸ್ತೆ ಐದು ತಿಂಗಳಿನಿಂದ ಬಂದ್ ಆಗಿದ್ದ ಕಾರಣ, ಈ ರಸ್ತೆಯ ಎರಡು ಬದಿಯಲ್ಲಿ ಅರಣ್ಯ ಪ್ರದೇಶವಾದ ಕಾರಣ, ರಸ್ತೆಗೆ ಅಪಾರ ಪ್ರಮಾಣದ ಎಲೆಗಳು ಸುರಿದು, ಚಿಕ್ಕ ರೆಂಬೆಗಳು ಮುರಿದು ಬಿದ್ದು ರಸ್ತೆಗೆ ಅಂಟಿಕೊಂಡಿವೆ. ರಸ್ತೆ ಮೊದಲೇ ಕಿರಿದಾಗಿದೆ. ಇಲ್ಲಿ ಸಂಚರಿಸುವ ವಾಹನಗಳು ಸ್ವಲ್ಪ ಸ್ಕಿಡ್ ಆದರೂ ಅಪಘಾತ ಕಟ್ಟಿಟ್ಟ ಬುತ್ತಿ.

ಪೆರುಂಬಾಡಿಯಿಂದ ಬೆಳ್ಳಿಗ್ಗೆ ಹತ್ತು ಘಂಟೆ ಸಮಯಕ್ಕೂ ಈ ರಸ್ತೆಯಲ್ಲಿ ಪ್ರಯಾಣಿಸಿದರೂ ವಿಪರೀತ ಮಂಜು ಮುಸುಕುವ ಕಾರಣ ರಸ್ತೆಯೇ ಕಾಣುವುದಿಲ್ಲ. ಇನ್ನು ಅರಣ್ಯ ಇಲಾಖೆಯಾಗಲೀ, ರಾಜ್ಯ ಹೆದ್ದಾರಿ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆಯಾಗಲಿ ಒಂದು ಮರದ ಕೊಂಬೆ ಕಡಿದಿಲ್ಲ. ರಸ್ತೆ ಬದಿಯಲ್ಲಿ ಮಳೆ-ಗಾಳಿಗೆ ಬಿದ್ದ ಮರಗಳು ಹಾಗೇ ಬಿದ್ದಿವೆ. ರಸ್ತೆಗೆ ಬಾಗಿದ ಮರಗಳು ಬಲಿಗಾಗಿ ಕಾಯುತ್ತಿವೆ. ರಸ್ತೆಯುದ್ದಕ್ಕೂ ಹಲವು ವಿದ್ಯುತ್ ತಂತಿಗಳು ತುಂಡಾಗಿ ನೇತಾಡುತ್ತಿವೆ. ಇನ್ನು ಕಾಡು ಯಾವುದು? ರಸ್ತೆಯಾವುದು ಎಂದು ಗುರುತಿಸಲಾಗದಷ್ಟು ಕಾಡು ರಸ್ತೆಯನ್ನು ಆವರಿಸಿದೆ. ಕೇರಳದ ಪ್ರಮುಖ ಓಣಂ ಹಬ್ಬ ಇನ್ನೇನು ಸಮೀಪಿಸುತ್ತಿದೆ. ಐದು ತಿಂಗಳಿನಿಂದ ಕೊಡಗು-ಕೇರಳ ಸಂಪರ್ಕ ಕಡಿದು ಹೋಗಿತ್ತು. ಇನ್ನು ಈ ಮಾರ್ಗದಲ್ಲಿ ಪ್ರಯಾಣ ಹೆಚ್ಚಾದರೆ ಈ ಕಾಡು ರಸ್ತೆ ಅದೆಷ್ಟು ಜನರನ್ನು ಅಪಾಯದಂಚಿಗೆ ತಳ್ಳುತ್ತದೋ ದೇವರೇ ಬಲ್ಲ.

ಕೇರಳ-ಕರ್ನಾಟಕ ಗಡಿ ನಿರ್ಬಂಧ ತೆರೆವು ಮಾಡಿದ್ದು ಹಲವರಿಗೆ ಸಂತಸ ತಂದಿದ್ದರೂ ಮುಂಜಾಗ್ರತೆ ವಹಿಸದೇ ಗಡಿ ನಿರ್ಬಂಧ ತೆರವು ಮಾಡಿದ ಜಿಲ್ಲಾಡಳಿತದ ಬಗ್ಗೆ ಸಾರ್ವಜನಿಕ ವಲಯದಿಂದ ಟೀಕೆಗಳು ಎದುರಾಗುತ್ತಿವೆ. ಇನ್ನಾದರೂ ಈ ಮಾಕುಟ್ಟ ರಸ್ತೆಯ ನಿರ್ವಹಣೆಯಾಗಲಿ. ಗಡಿಯಲ್ಲಿ ಅಗತ್ಯ ಮುಂಜಾಗ್ರತೆ ವಹಿಸಿ ಜಿಲ್ಲೆಯ ಹಾಗೂ ರಾಜ್ಯದ ಜನತೆಯ ಹಿತಕಾಯಲಿ ಎನ್ನುವುದು ಇಲ್ಲಿನ ಸ್ಥಳೀಯರ ಆಗ್ರಹ. ಗಡಿ ಮುಚ್ಚುವಾಗ ಇದ್ದ ಆಸಕ್ತಿಯನ್ನೇ ಗಡಿ ತೆರವು ಮಾಡಿದಾಗಲೂ ಉಳಿಸಿಕೊಳ್ಳಲಿ ಎನ್ನುವುದು ಕೊಡಗಿನ ಪ್ರಜ್ಞಾವಂತರ ಅಭಿಮತ. ಆದರೆ ಕೇರಳದಲ್ಲಿ ಕೋವಿಡ್‌-19 ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದ್ದು ರಾಜ್ಯದಲ್ಲಿ ಹೆಚ್ಚೇ ಆಗಿರುವುದರಿಂದ ಇದೀಗ ಕೇರಳ ಸರ್ಕಾರವೂ ತನ್ನ ಬಹುತೇಕ ಗಡಿಗಳನ್ನು ಮುಚ್ಚಿದೆ. ಅದರೆ ಪೆರುಂಬಾಡಿ ಗಡಿಯನ್ನು ತೆರೆದಿರುವುದು ತನ್ನ ರಾಜ್ಯದಿಂದ ಕರ್ನಾಟಕದ ಕಡೆಗೆ ಸರಕುಗಳನ್ನು ಸಾಗಿಸಲು ಮಾತ್ರ ಎನ್ನಲಾಗಿದೆ. ಅಲ್ಲದೆ ವೀರಾಜಪೇಟೆಯಲ್ಲಿರುವ ವ್ಯಾಪಾರಿಗಳು ಗಡಿ ತೆರೆಸಲು ಒತ್ತಡ ಹೇರಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ. ಅದೇನೇ ಇರಲಿ ಕೇರಳದಿಂದ ಆಗಮಿಸುವವರಿಗೆ ಗಡಿಯಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಬೇಕಿದೆ. ಇಲ್ಲದಿದ್ದರೆ ರಾಜ್ಯದಲ್ಲೇ ಅತ್ಯಂತ ಕಡಿಮೆ ಕೋವಿಡ್‌ ಸೋಂಕು ಪ್ರಕರಣಗಳನ್ನು ಹೊಂದಿರುವ ಕೊಡಗು ಜಿಲ್ಲೆ ಆ ಹೆಗ್ಗಳಿಕೆಯಿಂದ ದೂರಾಗುವುದು ಖಂಡಿತ.

Click here to follow us on Facebook , Twitter, YouTube, Telegram

Pratidhvani
www.pratidhvani.com