ರಾಹುಲ್ ಗಾಂಧಿ ಮಾತುಕತೆ ರಾಜಸ್ಥಾನ ಕಾಂಗ್ರೆಸ್ ಭವಿಷ್ಯವನ್ನು ಸುಭದ್ರಗೊಳಿಸಲಿದೆಯೇ?
ರಾಷ್ಟ್ರೀಯ

ರಾಹುಲ್ ಗಾಂಧಿ ಮಾತುಕತೆ ರಾಜಸ್ಥಾನ ಕಾಂಗ್ರೆಸ್ ಭವಿಷ್ಯವನ್ನು ಸುಭದ್ರಗೊಳಿಸಲಿದೆಯೇ?

ಕಾಂಗ್ರೆಸ್‌ ಹೈಕಮಾಂಡ್‌ ಕೊಟ್ಟಿರುವ ಆಶ್ವಾಸನೆಯಿಂದ ಸಚಿನ್‌ ಪೈಲಟ್‌ ತಣ್ಣಗಾಗಿದ್ದಾರೆ. ಆದರೆ‌ ಹೈಕಮಾಂಡ್‌ ಸಚಿನ್‌ ಪೈಲಟ್‌ ಮಾತಿಗೆ ಕಟ್ಟು ಬಿದ್ದು ಮೂವರ ಸಮಿತಿ ರಚನೆ ಮಾಡಿರುವುದರಿಂದ ಅಶೋಕ್‌ ಗೆಹ್ಲೋಟ್‌ ಬೇಸರ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಜೈಸಲ್ಮೇರ್‌ಗೆ ಹೋಗಿದ್ದಾರೆ ಎನ್ನಲಾಗಿದೆ.

ಕೃಷ್ಣಮಣಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಆಕ್ರೋಶವನ್ನು ತಣಿಸಲು ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ಸು ಸಾಧಿಸಿದ ಬಳಿಕ ಇಂದು ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಜೈಪುರಕ್ಕೆ ವಾಪಸ್‌ ಆಗಿದ್ದಾರೆ. ಒಂದು ತಿಂಗಳ ಬಳಿಕ ರಾಜಸ್ಥಾನಕ್ಕೆ ವಾಪಸ್‌ ಆಗಿರುವ ಸಚಿನ್‌ ಪೈಲಟ್‌, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾವುದೇ ಹುದ್ದೆಗೂ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ. ಇನ್ನೂ ಕಾಂಗ್ರೆಸ್‌ ಪಕ್ಷ ಸಾಕಷ್ಟು ಸ್ಥಾನಮಾನಗಳನ್ನು ಕೊಟ್ಟಿದೆ. ಈಗಲೂ ಪಕ್ಷ ಯಾವುದೇ ಕೆಲಸ ಹೇಳಿದರೂ ಮಾಡಲು ನಾನು ಸಿದ್ಧ ಎಂದಿದ್ದಾರೆ.

ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾದ ಬಳಿಕ ರಾಜಸ್ಥಾನಕ್ಕೆ ಪೈಲಟ್‌ ವಾಪಸ್‌ ಆಗಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಮೂವರು ಸದಸ್ಯರ ಸಮಿತಿ ರಚಿಸಲು ಒಪ್ಪಿಕೊಂಡ ಮೇಲೆ ಪೈಲಟ್‌ ವಾಪಸ್‌ ಆಗಿದ್ದಾರೆ. ಆದರೆ ಸಚಿನ್‌ ಪೈಲಟ್‌ ಕಾಂಗ್ರೆಸ್‌ ಹೈಕಮಾಂಡ್‌ಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಯಾವ ಮಾಹಿತಿಯನ್ನು ಕೊಟ್ಟಿರಬಹುದು. ಯಾವ ಮಾತನ್ನು ಕೇಳಿ ಕಾಂಗ್ರೆಸ್‌ ಹೈಕಮಾಂಡ್‌ ಮೂವರು ಸದಸ್ಯರ ಸಮಿತಿ ರಚನೆ ಮಾಡುತ್ತಿದೆ ಎನ್ನುವ ವಿಚಾರದ ಬಗಗೆ ಭಾರೀ ಚರ್ಚೆ ಆಗುತ್ತಿದೆ.

ಸಚಿನ್‌ ಪೈಲಟ್‌ ಬಂಡಾಯ ಶಮನ ಆಗಲು ಸ್ವತಃ ಬಿಜೆಪಿ ಮಾಜಿ ಮುಖ್ಯಮಂತ್ರಿ ವಸುಂದರ ರಾಜೇ ಅವರೇ ಕಾರಣ ಎನ್ನಲಾಗ್ತಿದೆ. ಬಿಜೆಪಿಗೆ ಸಚಿನ್‌ ಪೈಲಟ್‌ ಟೀಂ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಬಹುದು ಎನ್ನುವ ಕಾರಣಕ್ಕೆ ನಿಷ್ಠ ಶಾಸಕರ ಮೂಲಕ ಸಂದೇಶ ರವಾನಿಸಿದರು ಎನ್ನುವ ಮಾತುಗಳು ಕೇಲಿ ಬರುತ್ತಿವೆ. ಆದರೆ, ಕಾಂಗ್ರೆಸ್‌ ಒಳಗೇ ಒಂದು ಮಹತ್ವದ ಬೆಳವಣಿಗೆ ನಡೆದಿದ್ದು, ಎಲ್ಲರನ್ನು ಚಕಿತರನ್ನಾಗಿ ಮಾಡಿದೆ.

ದೆಹಲಿ ವಾಸ್ತವ್ಯ ಬಿಟ್ಟು ನಾನು ಕಾಂಗ್ರೆಸ್‌ನಲ್ಲೇ ಇರ್ತೇನೆ, ಅದೂ ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಎಂದು ಸಚಿನ್‌ ಪೈಲಟ್‌ ವಾಪಸ್ಸಾಗಿದ್ದಾರೆ. ಆದರೆ ಇದೇ ಸಮಯದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಜೈಪುರದಿಂದ 600 ಕಿಲೋ ದೂರದಲ್ಲಿರುವ ಜೈಸಲ್ಮೇರ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅದೂ ಕೂಡ ತನ್ನ ಬೆಂಬಲಕ್ಕೆ ನಿಂತಿದ್ದ 100 ಮಂದಿ ಶಾಸಕರ ಜೊತೆಗೆ ಎನ್ನುವುದು ಗಮನಿಸಬೇಕಾದ ವಿಚಾರ. ಕಾಂಗ್ರೆಸ್‌ ಹೈಕಮಾಂಡ್‌ ಸಚಿನ್‌ ಪೈಲಟ್‌ ಮಾತಿಗೆ ಕಟ್ಟು ಬಿದ್ದು ಮೂವರ ಸಮಿತಿ ರಚನೆ ಮಾಡಿರುವುದರಿಂದ ಅಶೋಕ್‌ ಗೆಹ್ಲೋಟ್‌ ಬೇಸರ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಜೈಸಲ್ಮೇರ್‌ಗೆ ಹೋಗಿದ್ದಾರೆ ಎನ್ನಲಾಗ್ತಿದೆ.

ರಾಜಸ್ಥಾನದಲ್ಲಿ ಇದೇ ಶುಕ್ರವಾರ (14/08/2020)ದಿಂದ ವಿಶೇಷ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಸದನದಲ್ಲಿ ಸಚಿನ್‌ ಪೈಲಟ್‌ ಹಾಗೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮುಖಾಮುಖಿ ಆಗಲಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಸಚಿನ್‌ ಪೈಲಟ್‌ ಹೇಳಿರುವ ಮಾತು ಮಹತ್ವ ಪಡೆದುಕೊಂಡಿದೆ. ನಾನು ಯಾವುದೇ ಆಧಿಕಾರಕ್ಕಾಗಿ ಹೋರಾಟ ಮಾಡಿದವನು ಅಲ್ಲ. ಆದರೆ, ನಾನು ವೈಯಕ್ತಿಕವಾಗಿ ನೊಂದಿದ್ದೇನೆ. ನನ್ನ ವಿರುದ್ಧ ಪದಗಳಿಂದಾಗಿ ನಾನು ದುಃಖಿತನಾಗಿದ್ದೇನೆ. ಆಘಾತ ಮತ್ತು ನೋವು ಅನುಭವಿಸುತ್ತಿದ್ದೇನೆ ಎಂದಿದ್ದಾರೆ ಸಚಿನ್ ಪೈಲಟ್.‌ ರಾಜಕೀಯದಲ್ಲಿ ವೈಯಕ್ತಿಕ ಕೆಟ್ಟ ಭಾವನೆಗಳಿಗೆ ಯಾವುದೇ ಅವಕಾಶ ಇರಬಾರದು ಎಂದಿದ್ದಾರೆ.

ಅಸಮಾಧಾನ ಶಮನ ತಾತ್ಕಾಲಿವೇ..?

ಕಾಂಗ್ರೆಸ್‌ ಹೈಕಮಾಂಡ್‌ ಕೊಟ್ಟಿರುವ ಆಶ್ವಾಸನೆಯಿಂದ ಸಚಿನ್‌ ಪೈಲಟ್‌ ತಣ್ಣಗಾಗಿದ್ದಾರೆ ಎನ್ನುವುದು ಸತ್ಯ. ಅವರ ಆಪ್ತ ಸ್ನೇಹಿತ ಶಾಸಕರು ಕೂಡ ಕಾಂಗ್ರೆಸ್‌ ಜೊತೆಗೆ ಇರುತ್ತಾರೆ. ಸಚಿನ್‌ ಪೈಲಟ್‌ ಸದ್ಯಕ್ಕೆ ಯಾವುದೇ ಹುದ್ದೆಯನ್ನು ಪಡೆಯದಿದ್ದರೂ ಆಪ್ತ ಶಾಸಕರನ್ನು ಮತ್ತೆ ಮಂತ್ರಿ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೀಗ ಜೈಪುರಕ್ಕೆ ಸಚಿನ್‌ ಪೈಲಟ್‌ ಆಗಮಿಸುತ್ತಿದ್ದಂತೆ ಜೈಸಲ್ಮೇರ್‌ಗೆ ಮುಖ್ಯಮಂತ್ರಿ ಪ್ರಯಾಣ ಮಾಡಿರುವುದರಲ್ಲೇ ಸ್ಪಷ್ಟ ಉತ್ತರವಿದ್ದು, ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಉದ್ಬವ ಆಗಿವೆ. ಇದು ಇದೇ ರೀತಿ ಮುಂದುವರಿದರೆ ಕಮಲ ಪಾಳಯಕ್ಕೆ ಸ್ವರ್ಗದ ಬಾಗಿಲು ತೆರೆದಂತೆಯೇ ಸರಿ.

ಒಂದೇ ಪಕ್ಷದಲ್ಲಿ ಎರಡು ಬಣಗಳಿದ್ದರೆ, ಯಾವುದೇ ಕಾರಣಕ್ಕೂ ಪಕ್ಷ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಒಬ್ಬರನ್ನು ಸೋಲಿಸಿ ತಾನು ಪ್ರಭಾವಿ ಎಂದು ಸಾಬೀತು ಮಾಡುವ ದುಸ್ಸಾಹಸಕ್ಕೆ ಸ್ವಂತ ಪಕ್ಷದವರೇ ಮುಂದಾದರೆ ಎದುರಾಳಿ ಪಕ್ಷದ ಗೆಲುವು ಸರಳವಾಗುತ್ತದೆ. ಇನ್ಮುಂದೆ ರಾಜಸ್ಥಾನ ಆಗುವುದು ಇದೆ. ಅಶೋಕ್‌ ಗೆಹ್ಲೋಟ್‌ ಅವರನ್ನು ಸೋಲಿಸಲು ಸಚಿನ್‌ ಪೈಲಟ್‌ ತಂತ್ರಗಾರಿಕೆ ಮಾಡಿದರೆ, ಸಚಿನ್‌ ಪೈಲಟ್‌ ಸೋಲಿಸಲು ಅಶೋಕ್‌ ಗೆಹ್ಲೋಟ್‌ ತಂತ್ರಗಾರಿಕೆ ಮಾಡುವುದು ಸರ್ವೇ ಸಾಮಾನ್ಯ. ಇದನ್ನು ಅರಿತಿರುವ ಕಾಂಗ್ರೆಸ್‌ ಹೈಕಮಾಂಡ್‌ ಸಚಿನ್‌ ಪೈಲಟ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಹುದ್ದೆ ಕೊಡುತ್ತದೆ ಎನ್ನಲಾಗ್ತಿದೆ.

ತಾತ್ಕಾಲಿಕವಾಗಿ ಸಚಿನ್‌ ಪೈಲಟ್‌ ಕೈ ಮೇಲಾಗಿದ್ದು, ಹೈಕಮಾಂಡ್‌ ಕಮಿಟಿ ರಚನೆ ಬಳಿಕ ಅಶೋಕ್‌ ಗೆಹ್ಲೋಟ್‌ ಏನು ಮಾಡಲಿದ್ದಾರೆ ಹಾಗೂ ಸಮಿತಿ ತನಿಖೆ ನಡೆಸಿದ ಬಳಿಕ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಇನ್ನೂ ಯೂಸ್‌ಲೆಸ್‌ ಫೆಲೋ ಎಂದು ಸ್ವಂತ ಪಕ್ಷದ ಸಚಿನ್‌ ಪೈಲಟ್‌ ಅವರನ್ನು ಹಿಯ್ಯಾಳಿಸಿದ್ದ ಮುಖ್ಯಮಂತ್ರಿ ಶುಕ್ರವಾರದ ಅಧಿವೇಶನದಲ್ಲಿ ಯಾವ ರೀತಿ ಸ್ವಾಗತಿಸುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ. ಆದರೆ ಇಷ್ಟಂತು ಸತ್ಯ. ರಾಜಸ್ಥಾನ ರಾಜಕೀಯಕ್ಕೆ ತಾತ್ಕಾಲಿಕ ಔಷಧಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಕಾದು ನೋಡಬೇಕು.

Click here to follow us on Facebook , Twitter, YouTube, Telegram

Pratidhvani
www.pratidhvani.com