ಜಿಡಿಪಿ ಕುಸಿತ: ಇನ್ಫಿ ನಾರಾಯಣಮೂರ್ತಿ ಅವರ ಆತಂಕಕ್ಕೆ ಕಾರಣವೇನು?
ರಾಷ್ಟ್ರೀಯ

ಜಿಡಿಪಿ ಕುಸಿತ: ಇನ್ಫಿ ನಾರಾಯಣಮೂರ್ತಿ ಅವರ ಆತಂಕಕ್ಕೆ ಕಾರಣವೇನು?

ಭಾರತದ ಆರ್ಥಿಕ ಅಭಿವೃದ್ದಿಯು ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯುವ ಅಪಾಯ ಇದೆ ಎಂದು ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೊಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸ್ವಾತಂತ್ರ್ಯೋತ್ತರದಲ್ಲೇ ಅತಿ ಕನಿಷ್ಠ ಅಭಿವೃದ್ಧಿ ದಾಖಲಾಗುವ ಅಪಾಯ ಇದೆ ಎಂದು ಹೇಳಿದ್ದಾರೆ

ಪ್ರತಿಧ್ವನಿ ವರದಿ

ಕರೋನಾ ಸೋಂಕು ಹರಡಿದ ನಂತರ ಸತತ ಕುಸಿತದ ಹಾದಿಯಲ್ಲಿರುವ ಭಾರತದ ಆರ್ಥಿಕ ಅಭಿವೃದ್ದಿಯು ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯುವ ಅಪಾಯ ಇದೆ ಎಂದು ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೊಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸ್ವಾತಂತ್ರ್ಯೋತ್ತರದಲ್ಲೇ ಅತಿ ಕನಿಷ್ಠ ಅಭಿವೃದ್ಧಿ ದಾಖಲಾಗುವ ಅಪಾಯ ಇದೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಅವರು ಪೂರ್ಣ ಲಾಕ್‌ಡೌನ್‌ ಮಾಡುವ ಕುರಿತಂತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.

ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಪ್ಪಿಸಲು ಮತ್ತು ಆರ್ಥಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳಲು ಪೂರಕವಾಗುವಂತೆ ನಾರಾಯಣಮೂರ್ತಿ ಅವರು ಸರ್ಕಾರಕ್ಕೆ ಮಾರ್ಗೊಪಾಯವನ್ನೂ ಸೂಚಿಸಿದ್ದಾರೆ. ಆರ್ಥಿಕತೆಯ ಎಲ್ಲಾ ಭಾಗೀದಾರರೂ, ಮುನ್ನೆಚ್ಚರಿಕೆಯೊಂದಿಗೆ ಪೂರ್ಣಪ್ರಮಾಣದಲ್ಲಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸರ್ಕಾರ ಅವಕಾಶ ನೀಡುವ ಹೊಸ ವ್ಯವಸ್ಥೆಯನ್ನು ರೂಪಿಸಬೇಕು ಎಂಬುದು ನಾರಾಯಣಮೂರ್ತಿ ಅವರ ಸಲಹೆ. ಕರೋನಾ ಸೋಂಕಿಗೆ ಇನ್ನೂ ಔಷಧ ಸಿದ್ಧವಾಗದ ಕಾರಣ, ಜನರು ಸೋಂಕಿನೊಂದಿಗೆ ಬದುಕಲು ಕಲಿಯಬೇಕು, ಆರ್ಥಿಕ ಚಟುವಟಿಕೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳಬಾರದೂ ಎಂದೂ ಹೇಳಿದ್ದಾರೆ.

ಭಾರತದ ಜಿಡಿಪಿ ಶೇ.5ರಷ್ಟು ಕುಗ್ಗುವ ನಿರೀಕ್ಷೆ ಇದೆ. ನಾವು ಸ್ವತಂತ್ರ್ಯೋತ್ತರದಲ್ಲೇ ಅತಿ ಕನಿಷ್ಠ ಮಟ್ಟದ ಆರ್ಥಿಕ ಅಭಿವೃದ್ಧಿ ದಾಖಲಿಸುವ ಆತಂಕ ನಮ್ಮ ಮುಂದಿದೆ ಎಂದಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಟ್ ಟೆಕ್ನಾಲಜಿ ಆಯೋಜಿಸಿದ್ದ ಡಿಜಿಟಲ್ ಕ್ರಾಂತಿ ಕುರಿತಾದ ವರ್ಚೂವಲ್ ಸಂವಾದದಲ್ಲಿ ಪಾಲ್ಗೊಂಡಿದ್ದ ನಾರಾಯಣಮೂರ್ತಿ, ಆರ್ಥಿಕತೆ ಹಳಿ ತಪ್ಪಿರುವುದು ಕೇವಲ ಭಾರತ ದೇಶದ್ದಷ್ಟೇ ಮಾತ್ರವಲ್ಲ, ಜಾಗತಿಕವಾಗಿ ಆರ್ಥಿಕತೆ ಕುಗ್ಗಿದೆ. ಜಾಗತಿಕ ವ್ಯಾಪಾರ ವಹಿವಾಟು ಕುಸಿದಿದೆ, ಜಾಗತಿಕ ಪ್ರಯಾಣವೂ ಬಹುತೇಕ ಅದೃಶ್ಯವಾಗಿದೆ. ಒಟ್ಟಾರೆ ಜಾಗತಿಕ ಜಿಡಿಪಿಯು ಶೇ.5ರಿಂದ 10ರಷ್ಟು ಕುಗ್ಗುವ ಸಾಧ್ಯತೆ ಇದೆ ಎಂದು ಮುನ್ನಂದಾಜು ಮಾಡಿದ್ದಾರೆ.

ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಮಾರ್ಚ್ 24 ರಂದು ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ತತ್ಪರಿಣಾಮ ಆರ್ಥಿಕ ಚಟುವಟಿಕೆ ಪೂರ್ಣ ಸ್ಥಗಿತಗೊಂಡಿತ್ತು. ಕರೋನಾ ಸೋಂಕು ಹರಡುವ ಮುನ್ನವೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಭಾರತಕ್ಕೆ ಕರೋನಾ ಸೋಂಕು ಮತ್ತಷ್ಟು ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡಿದೆ. ಈ ಅಂಶಗಳನ್ನು ಪ್ರಸ್ತಾಪಿಸಿದ ನಾರಾಯಣಮೂರ್ತಿ ಅವರು, ಈಗಾಗಲೇ ಸುಮಾರು 14 ಕೋಟಿ ಜನರ ಉದ್ಯೋಗದ ಮೇಲೆ ಕರೋನಾ ಸೋಂಕು ವ್ಯತಿರಿಕ್ತ ಪರಿಣಾಮ ಬೀರೀದೆ. ಹೀಗಾಗಿ ಸಾಮಾನ್ಯಸ್ಥಿತಿಗೆ ಹೊಸ ವ್ಯಾಖ್ಯಾನ ನೀಡಬೇಕಿದೆ. ಈ ಸಾಮಾನ್ಯಸ್ಥಿತಿಯು, ಕರೋನಾ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಲೇ ನಾವು ನಮ್ಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಮುಂದಡಿ ಇಡುವಂತಾಗಬೇಕು ಎಂದು ಸಲಹೆ ಮಾಡಿದ್ದರೆ. ಕರೋನಾ ಸೋಂಕಿಗೆ ಔಷಧಿ ಕಂಡು ಕಂಡು ಹಿಡಿದ ನಂತರ ಇಡೀ ದೇಶದ ಜನರಿಗೆ ಔಷಧ ನೀಡುವ ಸಲುವಾಗಿ ಆರೋಗ್ಯ ಮೂಲಭೂತಸೌಲಭ್ಯಗಳನ್ನು ಸೃಷ್ಟಿಸಬೇಕು, ಭಾರತವು ಆರೋಗ್ಯ ಮೂಲಭೂತ ಸೌಲಭ್ಯಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿಲ್ಲದಿರುವುದು ಐತಿಹಾಸಿಕ ಸತ್ಯ. ಆರ್ಥಿಕ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳಲು ಲಾಕ್‌ಡೌನ್‌ ಅವಧಿಯಲ್ಲಿ ನಗರ ಪ್ರದೇಶ ಬಿಟ್ಟು ತಮ್ಮ ಊರುಗಳಿಗೆ ಹಿಂತಿರುಗಿರುವ ವಲಸೆ ಕಾರ್ಮಿಕರನ್ನು ಮತ್ತೆ ನಗರಕ್ಕೆ ಕರೆತರಬೇಕು ಎಂದೂ ನಾರಾಯಣ ಮೂರ್ತಿ ಸಲಹೆ ಮಾಡಿದ್ದಾರೆ.

ನಾರಾಯಣಮೂರ್ತಿ ಅವರ ಆತಂಕಕ್ಕೆ ಕಾರಣವೇನು?

ಕರೋನಾ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆ ಮಾಡಿದ ನಂತರ ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಘೋಷಣೆಯನ್ನು ಏಕಾಏಕಿ ಮಾಡಿದ್ದರಿಂದ ಸಂಘಟಿತ ಮತ್ತು ಅಸಂಘಟಿತ ವಲಯದ ಉತ್ಪಾದನಾ ಚಟುವಟಿಕೆಗಳು ಸ್ಥಗಿತಗೊಂಡವು. ಹೀಗಾಗಿ ಆರ್ಥಿಕ ಚಟುವಟಿಕೆ ಪೂರ್ಣ ಸ್ಥಬ್ಧಗೊಂಡಿತು. ಈ ಕಾರಣಕ್ಕಾಗಿಯೇ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ನಿರೀಕ್ಷೆಗಿಂತ ಕೆಳಮಟ್ಟಕ್ಕೆ ಕುಸಿಯಿತು. ಲಾಕ್‌ಡೌನ್‌ ಘೋಷಣೆ ಮಾಡುವಾಗ ಉದ್ಯಮಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚಿಸಿದ್ದರೆ, ಲಾಕ್‌ಡೌನ್‌ ಘೋಷಣೆಯ ನಡುವೆಯು ಭಾಗಷಃ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಬಹುದಿತ್ತು. ನಾರಾಯಣ ಮೂರ್ತಿ ಅವರು ಸೇರಿದಂತೆ ಬಹುತೇಕ ಉದ್ಯಮಿಗಳು ಪೂರ್ಣ ಲಾಕ್‌ಡೌನ್‌ ಮಾಡುವುದಕ್ಕೆ ಒಲವಿರಲಿಲ್ಲ. ಸರ್ಕಾರ ಏಕಾಏಕಿ ಘೋಷಣೆ ಮಾಡಿದ್ದರಿಂದ ಅನಿವಾರ್ಯವಾಗಿ ಒಪ್ಪಿಕೊಂಡಿದ್ದರು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಭಾಗಷಃ ಉತ್ಪಾದನಾ ಕಾರ್ಯವನ್ನು ಮುಂದುವರೆಸಿದ್ದರೆ, ಆರ್ಥಿಕತೆ ಇಷ್ಟೊಂದು ಕೆಳಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಇದೇ ಮಾತನ್ನು ಬಜಾಜ್ ಆಟೋ ಮುಖ್ಯಸ್ಥ ರಾಜೀವ್ ಬಜಾಜ್ ಸೇರಿದಂತೆ ಬಹುತೇಕ ಉದ್ಯಮಿಗಳು ಹೇಳಿದ್ದಾರೆ.

ಈಗ ಕರೋನಾ ಸೋಂಕಿನೊಂದಿಗೆ ಹೊಂದಿಕೊಂಡು ಹೋಗಬೇಕೆಂದು ಹೇಳುವ ಸರ್ಕಾರವು ಲಾಕ್‌ಡೌನ್‌ ಘೋಷಣೆ ಮಾಡುವಾಗ ಒಂದಷ್ಟು ಸಮಾಲೋಚನೆ ನಡೆಸಿದ್ದರೆ, ದೇಶದ ಆರ್ಥಿಕತೆ ಚೇತರಿಸಿಕೊಂಡಿರುತ್ತಿತ್ತು, ಜತೆಗೆ ದೇಶದಲ್ಲಿ ಕರೋನಾ ಸೋಂಕು ಕುರಿತಂತೆ ಉದ್ಭವಿಸಿದ್ದ ಆರಂಭದ ಆತಂಕ ಮತ್ತು ಕ್ಷೋಭೆಗಳು ಇಲ್ಲವಾಗುತ್ತಿದ್ದವು. ಜನರಲ್ಲಿ ಹೆಚ್ಚಿನ ಸ್ಥೈರ್ಯ ಬರುತ್ತಿತ್ತು ಮತ್ತು, ಜನರೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಕಲಿಯುತ್ತಿದ್ದರು. ಏಕಾಏಕಿ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ, ಆರ್ಥಿಕ ಸ್ಥಿತಿಯೂ ಕುಸಿಯಿತು, ಜನರಲ್ಲಿ ಅರಿವು ಮೂಡಿಸುವ ಕೆಲಸವೂ ಆಗಲಿಲ್ಲ ಎಂಬುದು ಉದ್ಯಮಿಗಳ ಅಭಿಪ್ರಾಯ.

ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುವ ಪ್ರಮುಖ ಎಂಟು ವಲಯಗಳು ವಾರ್ಷಿಕ ಸರಾಸರಿ ಶೇ.7-8ರಷ್ಟು ಅಭಿವೃದ್ಧಿ ದಾಖಲಿಸುತ್ತಿವೆ. ಆದರೆ, ಲಾಕ್‌ಡೌನ್‌ ಪರಿಣಾಮ ಈ ಎಂಟು ವಲಯಗಳ ಮೇಲೆ ಎಷ್ಟು ತೀವ್ರವಾಗಿತ್ತೆಂದರೆ, 2020 ಏಪ್ರಿಲ್ ತಿಂಗಳಲ್ಲಿ ಶೇ.-37ರಷ್ಟು ಋಣಾತ್ಮಕ ಅಭಿವೃದ್ಧಿ ದಾಖಲಿಸಿವೆ. ಈ ಎಂಟು ವಲಯಗಳು ಚೇತರಿಸಿಕೊಂಡು ಸಾಮಾನ್ಯ ಸ್ಥಿತಿಗೆ ಬರಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಮೊದಲು ಋಣಾತ್ಮಕ ಅಭಿವೃದ್ಧಿ ದಾಟಿ ಧನಾತ್ಮಕ ಅಭಿವೃದ್ಧ ದಾಖಲಿಸಿಬೇಕಿದೆ. ನಂತರ ಸಾಮಾನ್ಯ ಅಭಿವೃದ್ಧಿ ಅಂದರೆ ವಾರ್ಷಿಕ ಶೇ.7-8ರಷ್ಟು ದಾಖಲಿಸಬಹುದಾಗಿದೆ.

ಅಸಂಘಟಿತ ವಲಯದಲ್ಲಿ ಈಗ ಕಾರ್ಮಿಕರ ಸಮಸ್ಯೆ ಎದುರಾಗಿದೆ. ವಲಸಿಗರು ಇನ್ನೂ ನಗರ ಪ್ರದೇಶಗಳಿಗೆ ವಾಪಾಸಾಗಿಲ್ಲ. ನರಗಪ್ರದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕು ವಲಸಿಗರಲ್ಲಿ ಆತಂಕವನ್ನುಂಟು ಮಾಡಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿವೆ, ಆದರೆ, ಚೇತರಿಕೆ ಆಗಿಲ್ಲ. ಚೇತರಿಕೆ ಆಗಲು ವಲಸೆ ಕಾರ್ಮಿಕರು ನಗರ ಪ್ರದೇಶಕ್ಕೆ ಹಿಂತಿರುಗಬೇಕು. ನಂತರವಷ್ಟೇ, ಆರ್ಥಿಕ ಚಟುವಟಿಕೆಗಳು ಪೂರ್ಣಪ್ರಮಾಣದಲ್ಲಿ ಗರಿಗೆದರುತ್ತವೆ. ಆರ್ಥಿಕತೆ ಚಟುವಟಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡರೆ ಚೇತರಿಕೆ ಬರಲು ಸಾಧ್ಯ. ಈ ಹಿನ್ನೆಲೆಯಲ್ಲೇ, ನಾರಾಯಣಮೂರ್ತಿ ಅವರು, ವಲಸೆ ಕಾರ್ಮಿಕರನ್ನು ವಾಪಾಸು ಕರೆತರುವುದಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com