ಹಿಂದುತ್ವ- ಹಿಂದಿತ್ವ ರಾಜಕಾರಣದ ನಂಟು ಕನ್ನಡಿಗರಿಗೆ ದುಬಾರಿಯಾಯಿತೆ?
ರಾಷ್ಟ್ರೀಯ

ಹಿಂದುತ್ವ- ಹಿಂದಿತ್ವ ರಾಜಕಾರಣದ ನಂಟು ಕನ್ನಡಿಗರಿಗೆ ದುಬಾರಿಯಾಯಿತೆ?

ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶದಂತಹ ಇತರೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಮತ್ತೆ ಮತ್ತೆ ಯಾಕೆ ಹಿಂದಿ ಹೇರಿಕೆಯ ಉದ್ಧಟತನ ಪುನರಾವರ್ತನೆಯಾಗುತ್ತಿದೆ? ಎಂಬ ಪ್ರಶ್ನೆ ಕೇಳಿಕೊಂಡರೆ, ಹಲವು ಸೂಕ್ಷ್ಮ ಸಂಗತಿಗಳಿಗೆ ಕನ್ನಡಿಗರು ಮುಖಾಮುಖಿಯಾಗಬೇಕಾಗುತ್ತದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಿಂದಿ ಹೇರಿಕೆ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಡಿಎಂಕೆ ಸಂಸದೆ ಮತ್ತು ಕವಿ ಕನಿಮೋಳಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾನುವಾರ ತಮಗಾದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಹಿಂದಿ ಹೇರಿಕೆ ದಬ್ಬಾಳಿಕೆ, ಹಿಂದಿ ಮತ್ತು ಹಿಂದುತ್ವದ ಸಮೀಕರಣ ಮತ್ತು ಹಿಂದಿ, ಹಿಂದುತ್ವದೊಂದಿಗೆ ರಾಷ್ಟ್ರೀಯತೆ, ದೇಶಪ್ರೇಮವನ್ನು ತಳಕುಹಾಕುವ ಪ್ರವೃತ್ತಿಯ ವಿರುದ್ಧ ದೊಡ್ಡ ಮೊಟ್ಟದ ಆಕ್ರೋಶ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

“ಭಾನುವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಅಧಿಕಾರಿಯೊಬ್ಬರಿಗೆ, ‘ನೀವು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ, ತಮಗೆ ಹಿಂದಿ ಬರುವುದಿಲ್ಲ. ತಮಿಳು ಅಥವಾ ಇಂಗ್ಲಿಷಿನಲ್ಲಿ ಮಾತನಾಡಿ’ ಎಂದಾಗ, ಆ ಅಧಿಕಾರಿ, ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿದ್ದಾರೆ. ಅಂದರೆ, ಹಿಂದಿ ಮತ್ತು ಭಾರತೀಯತೆಯನ್ನು ಯಾವಾಗಿನಿಂದ ಸಮೀಕರಿಸಲಾಗಿದೆ? ಹಿಂದಿ ಎಂದರೆ ಭಾರತೀಯತೆ, ಭಾರತೀಯತೆ ಎಂದರೆ ಹಿಂದಿ ಎಂದು ಯಾವಾಗಿನಿಂದ ನಿರ್ಧರಿಸಲಾಗಿದೆ. ಇದು ಹಿಂದಿ ಹೇರಿಕೆ #hindiimposition ” ಎಂದು ಕನಿಮೋಳಿ ಟ್ವೀಟ್ ಮಾಡಿದ್ದರು. ಅವರ ಆ ಟ್ವೀಟ್ ಗೆ ಜಾಲತಾಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. #hindiimposition ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಕನಿಮೋಳಿಯವರಿಗೆ ಬೆಂಬಲವಾಗಿ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ತಮಗಾದ ಅಂತಹದ್ದೇ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪಿ ಚಿದಂಬರಂ ಅವರು ಇದು ಹೊಸದಲ್ಲ. ಇಂತಹ ಅನುಭವಗಳು ದಕ್ಷಿಣ ಭಾರತೀಯರಿಗೆ ಮಾಮೂಲಿ ಎಂದು ಪ್ರತಿಕ್ರಿಯಿಸಿದ್ದರೆ, ಎಚ್ ಡಿ ಕುಮಾರಸ್ವಾಮಿ ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಹಿಂದಿ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಬಾರದು ಎಂಬ ಕಾರಣಕ್ಕೆ ದಕ್ಷಿಣ ಭಾರತದ ಬಹಳಷ್ಟು ಮಹಾನ್ ನಾಯಕರು ಪ್ರಧಾನಿಯಾಗುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ. ಅದು ಕಾಮರಾಜ್ ಇರಬಹುದು, ಕರುಣಾನಿಧಿ ಇರಬಹುದು. ಸ್ವತಃ ದೇವೇಗೌಡರು ಕೂಡ ಈ ದಬ್ಬಾಳಿಕೆಗೆ ಒಳಗಾದವರೇ. ಅವರು ಪ್ರಧಾನಿಯಾದರೂ, ಹಿಂದಿ ಬರದು ಎಂಬ ಕಾರಣಕ್ಕೆ ಅವರ ಬಗ್ಗೆ ಗೇಲಿ ಮಾಡಿದ, ಮೂದಲಿಸಿದ ಪ್ರಸಂಗಗಳಿಗೆ ಕಡಿಮೆ ಇಲ್ಲ. ಹಿಂದಿ ಶ್ರೇಷ್ಠತೆ ವ್ಯಸನ, ಹಿಂದಿ ರಾಜಕಾರಣಗಳು ದಕ್ಷಿಣದ ನಾಯಕರ ಅವಕಾಶಗಳನ್ನು ಕಿತ್ತುಕೊಂಡಿದೆ ಎಂದಿದ್ದಾರೆ. ಇದು ಅಕ್ಷರಶಃ ನಿಜ ಕೂಡ. ದೇವೇಗೌಡರು ಪ್ರಧಾನಿಯಾಗಿದ್ದಾಗ ಬಹುಶಃ ಇತರೆ ಯಾವ ಪ್ರಧಾನಿಯೂ ಎದುರಿಸದೇ ಇದ್ದ ಪ್ರಮಾಣದಲ್ಲಿ ಮೂದಲಿಕೆ, ಗೇಲಿಯನ್ನು ಎದುರಿಸಿದ್ದಾರೆ. ಆ ಎಲ್ಲದರ ಹಿಂದೆ ಇದ್ದದ್ದು ಖಂಡಿತವಾಗಿಯೂ ಭಾಷೆಯ ಮೇಲರಿಮೆಯ ಹಿಂದಿ ಶ್ರೇಷ್ಠತೆಯ ವ್ಯಸನದ ಮಾಧ್ಯಮ ಮತ್ತು ಹಿಂದಿ ಭಾಷಿಗ ರಾಜಕೀಯ ವಲಯವೇ ಎಂಬುದು ನಿರ್ವಿವಾದ.

ಅತ್ತ ಕನಿಮೋಳಿ ಪ್ರಕರಣ ಕಾವೇರುತ್ತಿದ್ದರೆ, ಇತ್ತ ಬೆಂಗಳೂರು ಕಂಠೀರವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕರೋನಾ ಸುರಕ್ಷತಾ ಕೈ ತೊಳೆಯುವ ಯಂತ್ರ ಅಳವಡಿಕೆಯ ವೇಳೆ ಕನ್ನಡ ಹೊರತುಪಡಿಸಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಸೂಚನೆಗಳನ್ನು ಅಳವಡಿಸಿದ್ದು ಕೇಂದ್ರ ಬಿಜೆಪಿ ಸರ್ಕಾರದ ಹಿಂದಿ ಹೇರಿಕೆಯ ಮತ್ತೊಂದು ವರಸೆಗೆ ಸಾಕ್ಷಿಯಾಗಿದೆ. ಅದಕ್ಕಿಂತ ಉದ್ಧಟತನದ ವರಸೆ ಎಂದರೆ; ಹೀಗೆ ಕರ್ನಾಟಕದಲ್ಲಿ ಕನ್ನಡ ಬಳಕೆಯ ಬದಲು ಹಿಂದಿ ಮತ್ತು ಇಂಗ್ಲಿಷ್ ಏಕೆ ಬಳಸಿದ್ದೀರಿ? ಎಂದು ಪ್ರಶ್ನಿಸಿದವರಿಗೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ, “ಏಕೆಂದರೆ, ಇದು ಭಾರತ” ಎಂದು ಟ್ವೀಟ್ ಮಾಡಿರುವುದು. ಅಂದರೆ, ಅಶೋಕ್ ಕುಮಾರ್ ವರ್ಮಾ ಪ್ರಕಾರ, ಭಾರತವೆಂದರೆ ಹಿಂದಿ, ಹಿಂದಿ ಎಂದರೆ ಭಾರತ. ಹಾಗಾಗಿ ಭಾರತದಲ್ಲಿರುವವರೆಲ್ಲರಿಗೂ ಹಿಂದಿ ಗೊತ್ತಿರಲೇಬೇಕು. ಮತ್ತು ಹಿಂದಿ ಗೊತ್ತಿಲ್ಲ ಎಂದರೆ ಭಾರತೀಯರಲ್ಲ ಎಂದು. ಚೆನ್ನೈ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯ ವರಸೆಗೂ, ಬೆಂಗಳೂರು ರೈಲ್ವೆ ಅಧಿಕಾರಿಯ ವರಸೆಗೂ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರೂ ಭಾರತವನ್ನು ಹಿಂದಿಯೊಂದಿಗೂ, ಹಿಂದಿಯನ್ನು ರಾಷ್ಟ್ರೀಯತೆಯೊಂದಿಗೂ, ರಾಷ್ಟ್ರೀಯತೆಯನ್ನು ಭಾಷೆಯೊಂದಿಗೂ ಬೆಸೆದು ಹುಕುಂ ಚಲಾಯಿಸುತ್ತಿದ್ದಾರೆ.

ಇಲ್ಲೊಂದು ಸೂಕ್ಷ್ಮ ವಿಷಯವನ್ನು ಗಮನಿಸಬೇಕಿದೆ. ಚೆನ್ನೈನಲ್ಲಿ ಸಂಸದೆ ಕನಿಮೋಳಿಗೆ ಹಿಂದಿ ಮತ್ತು ರಾಷ್ಟ್ರೀಯತೆಯ ಸಮೀಕರಣದ ಪಾಠ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರತಿಕ್ರಿಯಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮುಖ್ಯಸ್ಥರು, ಕನಿಮೋಳಿಯವರಿಂದ ಘಟನೆಯ ವಿವರ ಪಡೆದು, ಕೂಡಲೇ ಆ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ ಮತ್ತು ತಮ್ಮ ಭದ್ರತಾ ಪಡೆ ಯಾವುದೇ ಸಂದರ್ಭದಲ್ಲಿಯೂ ಭಾಷಾ ತಾರತಮ್ಯ ಎಸಗುವುದಿಲ್ಲ ಎಂಬುದು ಸ್ಪಷ್ಟಪಡಿಸಿದ್ದಾರೆ. ಅದು ತಮಿಳುನಾಡಿನ ಬಲ. ಆದರೆ, ಕನ್ನಡವನ್ನು ಯಾಕೆ ಬಳಸಿಲ್ಲ ಎಂಬ ಕನ್ನಡಿಗರ ಪ್ರಶ್ನೆಗೆ, ಯಾಕೆಂದರೆ ಇದು ಭಾರತ ಎಂದು ಉದ್ಧಟತನ ಪ್ರದರ್ಶಿಸಿದ ಅಧಿಕಾರಿಯಾಗಲೀ, ನೈರುತ್ಯ ರೈಲ್ವೆಯಾಗಲೀ ಯಾವುದೇ ರೀತಿಯಲ್ಲೂ ತಮ್ಮ ಹೇಳಿಕೆಯನ್ನು ಹಿಂದೆ ಪಡೆದಿಲ್ಲ. ಬದಲಾಗಿ ‘ಎಲ್ಲಾ ವಿಷಯದಲ್ಲಿಯೂ ಭಾಷೆಯನ್ನು ತರುವುದನ್ನು ಬಿಡಿ’ ಎಂದು ಕನ್ನಡಿಗರಿಗೇ ಪಾಠ ಹೇಳಿದೆ. ಇದು ತಮಿಳುನಾಡಿಗೂ, ಕರ್ನಾಟಕಕ್ಕೂ ಇರುವ ವ್ಯತ್ಯಾಸ!

ಹಿಂದಿ ಹೇರಿಕೆಯ ವಿಷಯದಲ್ಲಿ ಕರ್ನಾಟಕದ ಕನ್ನಡಪರ ಸಂಘಟನೆಗಳು, ಸಾಹಿತಿ- ಚಿಂತಕರು, ಪ್ರಾದೇಶಿಕ ಅಸ್ಮಿತೆಯ ರಾಜಕಾರಣಿಗಳು ಸಾಂದರ್ಭಿಕವಾಗಿ ವಿರೋಧ ವ್ಯಕ್ತಪಡಿಸಿದರೂ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶದಂತಹ ಇತರೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಮತ್ತೆ ಮತ್ತೆ ಅಂತಹ ಉದ್ಧಟತನ ಪುನರಾವರ್ತನೆಯಾಗುತ್ತಿರುವುದು ಯಾಕೆ? ಎಂಬ ಪ್ರಶ್ನೆ ಕೇಳಿಕೊಂಡರೆ, ಹಲವು ಸೂಕ್ಷ್ಮ ಸಂಗತಿಗಳಿಗೆ ನಾವು, ಕನ್ನಡಿಗರು ಮುಖಾಮುಖಿಯಾಗಬೇಕಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ಬಿಜೆಪಿ ಮತ್ತು ಅದರ ಹಿಂದುತ್ವ ರಾಜಕಾರಣಕ್ಕೆ ಮಣೆಹಾಕಿದ ದಕ್ಷಿಣ ಭಾರತದ ಮೊದಲ ರಾಜ್ಯ ಎಂಬ ನಮ್ಮ ಹೆಗ್ಗಳಿಕೆಗೆ ಸಂಬಂಧಿಸಿದ್ದು. ಇಡೀ ದಕ್ಷಿಣ ಭಾರತದಲ್ಲಿ ‘ಹಿಂದುತ್ವ’, ‘ಹಿಂದಿತ್ವ’, ‘ಹಿಂದೂ ರಾಷ್ಟ್ರ’, ‘ಹಿಂದೂ ಸಂಸ್ಕೃತಿ’ ಮುಂತಾದ ಧರ್ಮಕೇಂದ್ರಿತ ನೆಲೆಯ ಮೇಲೆಯೇ ನಿಂತಿರುವ ಬಿಜೆಪಿಯ ರಾಜಕೀಯ ಸಿದ್ಧಾಂತವನ್ನು ಅಪ್ಪಿಕೊಂಡ ಮೊದಲ ದಕ್ಷಿಣ ಭಾರತೀಯ ರಾಜ್ಯ ಕರ್ನಾಟಕ. ಹಾಗೆ ಬಿಜೆಪಿಯ ಹಿಂದಿ ಮತ್ತು ಹಿಂದುತ್ವ ಅಪ್ಪಿಕೊಂಡಿದ್ದೇ ಹಿಂದಿ ಪ್ರದೇಶದ ರಾಜಕಾರಣವನ್ನು, ಹಿಂದಿ ಶ್ರೇಷ್ಠತೆಯ ವ್ಯಸನವನ್ನು ಕನ್ನಡಿಗರ ಮೇಲೆ ಹೇರಲು ರಹದಾರಿಯಾಯಿತು. ಇದು ನಮ್ಮ ರಾಜಕೀಯ ಆಯ್ಕೆಯ ಎಡವಟ್ಟಿನ ಫಲ.

ಹಾಗಾಗಿಯೇ, ಕನಿಮೋಳಿ ತಮ್ಮ ಚೆನ್ನೈ ವಿಮಾನ ನಿಲ್ದಾಣದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ, ಬಹುತೇಕ ದಕ್ಷಿಣ ಭಾರತೀಯ ನಾಯಕರು ಅವರ ಆತಂಕಕ್ಕೆ, ಕಾಳಜಿಗೆ ಸಹಮತ ವ್ಯಕ್ತಪಡಿಸಿದರೆ, ಮೂಲತಃ ಕನ್ನಡಿಗರಾದ, ಕರ್ನಾಟಕದ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಮಾತ್ರ, ಆ ಘಟನೆಯನ್ನು ಚುನಾವಣೆಗೆ ತಳಕು ಹಾಕಿ, “ವರ್ಷ ಮುಂಚೆಯೇ ತಮಿಳುನಾಡು ಚುನಾವಣಾ ಪ್ರಚಾರ ಶುರುವಾಯಿತು” ಎಂದು ಪ್ರತಿಕ್ರಿಯಿಸಿದ್ದಾರೆ. ಅಂದರೆ, ಬಿಜೆಪಿಯ ಈ ನಾಯಕರಿಗೆ, ದಕ್ಷಿಣ ಭಾರತದ ಅಸ್ಮಿತೆಯಾಗಲೀ, ತಮಿಳು, ಕನ್ನಡದಂತಹ ಭಾಷಾ ಅಸ್ಮಿತೆಯಾಗಲೀ ಮುಖ್ಯವಾಗುವುದಿಲ್ಲ. ಬದಲಾಗಿ ಹಿಂದಿ ಹೇರಿಕೆಯನ್ನು ಪರೋಕ್ಷವಾಗಿ ಸಮರ್ಥಿಸುವ ಚುನಾವಣಾ ರಾಜಕಾರಣ ಮುಖ್ಯವಾಗುತ್ತದೆ!

ಜೊತೆಗೆ ಕನಿಮೋಳಿಯವರ ವಿಷಯದಲ್ಲಿರಲಿ, ಕನಿಷ್ಟ ಬೆಂಗಳೂರು ರೈಲ್ವೆ ಅಧಿಕಾರಿಗಳ ಕನ್ನಡ ವಿರೋಧಿ ಉದ್ಧಟತನದ ಬಗ್ಗೆ ಕೂಡ ಕರ್ನಾಟಕದ ಬಿಜೆಪಿ ನಾಯಕರಾರೂ ಪ್ರತಿಕ್ರಿಯಿಸಿದ ವರದಿಗಳಿಲ್ಲ. ಹಾಗೇ ಕಾಂಗ್ರೆಸ್ ಬಹುತೇಕ ನಾಯಕರು ಕೂಡ ಈ ವಿಷಯದಲ್ಲಿ ಜಾಣ ಮೌನಕ್ಕೆ ಶರಣಾಗಿದ್ದಾರೆ. ಅಂದರೆ, ರಾಷ್ಟ್ರೀಯ ಪಕ್ಷಗಳ ದಾಸ್ಯ ಯಾವ ಮಟ್ಟಿಗಿದೆ ನಮ್ಮಲ್ಲಿ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ ಕೂಡ. ರಾಷ್ಟ್ರೀಯ ಪಕ್ಷಗಳ ಹಿಂದಿ ಶ್ರೇಷ್ಠತೆಯ ವ್ಯಸನಕ್ಕೆ ಮತ್ತು ದಕ್ಷಿಣ ಭಾರತೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುವ ವರಸೆಗೆ ನಮ್ಮ ರಾಜಕೀಯ ಮುಖಂಡರು ಎಷ್ಟರಮಟ್ಟಿಗೆ ಡೊಗ್ಗು ಸಲಾಮು ಹೊಡೆಯುತ್ತಿದ್ದಾರೆ ಎಂಬುದಕ್ಕೂ ಈ ಘಟನೆ ಮತ್ತೊಂದು ನಿದರ್ಶನ.

ಹಾಗೆ ನೋಡಿದರೆ, ಕರ್ನಾಟಕ ಮತ್ತು ಕನ್ನಡಿಗರ ಕುರಿತ ಬಿಜೆಪಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ, ಅಸಡ್ಡೆ, ಒಂದು ರೀತಿಯಲ್ಲಿ ಅಡಿಯಾಳುಗಳು ಎಂಬ ಧೋರಣೆಗೂ ರಾಜ್ಯದಲ್ಲಿ ಅವರಿಗೆ ಸಿಕ್ಕ ಜನಾದೇಶಕ್ಕೂ ನೇರ ಸಂಬಂಧವಿದೆ. ಹಾಗಾಗಿಯೇ ಜಿಎಸ್ ಟಿ ತೆರಿಗೆ ಪಾಲು ನೀಡುವುದರಿಂದ ಹಿಡಿದು ಕಳೆದ ವರ್ಷದ ನೆರೆ ಪರಿಹಾರದವರೆಗೆ ಹಲವು ಸಂದರ್ಭಗಳಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕನ್ನಡಿಗರ ವಿಷಯದಲ್ಲಿ ತನ್ನ ಆದ್ಯತೆ ಏನು ಎಂಬುದನ್ನು ತೋರಿಸಿಕೊಟ್ಟಿದೆ.

ಹಾಗಂತ, ಕೇವಲ ಬಿಜೆಪಿ ಮಾತ್ರ ಇಂತಹ ಧೋರಣೆ ಹೊಂದಿದೆ, ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷದ ಆಡಳಿತದಲ್ಲಿ ಕನ್ನಡಿಗರು ಮತ್ತು ಕರ್ನಾಟಕಕ್ಕೆ ಸಲ್ಲಬೇಕಾದ್ದೆಲ್ಲಾ ಸಲ್ಲುತ್ತಿತ್ತು ಎಂದೇನಲ್ಲ. ಆದರೆ, ಕಾಂಗ್ರೆಸ್ಸಿಗೂ, ಬಿಜೆಪಿಗೂ ಇರುವ ವ್ಯತ್ಯಾಸ ರಾಜಕಾರಣವನ್ನು ಯಾವ ನೆಲೆಯಲ್ಲಿ ಮಾಡುತ್ತಿವೆ ಎಂಬುದು. ಕಾಂಗ್ರೆಸ್ ರಾಜಕಾರಣದ ನೆಲೆ ಬೇರೆಯೇ. ಆದರೆ, ಬಿಜೆಪಿಗೆ ಧರ್ಮ, ಭಾಷೆ, ರಾಷ್ಟ್ರೀಯತೆಯೇ ನೆಲೆ. ಮತ್ತು ಅವೆಲ್ಲವೂ ಹಿಂದುತ್ವ ಮತ್ತು ಹಿಂದಿತ್ವವನ್ನೇ ಆಧಾರವಾಗಿಟ್ಟುಕೊಂಡ ರಾಜಕಾರಣದ ವರಸೆಗಳು. ಹಾಗಾಗಿ ಇಂತಹ ದಬ್ಬಾಳಿಕೆ, ತಾರತಮ್ಯಗಳನ್ನು ಎಸಗಿಯೂ ಧರ್ಮದ ಮೇಲೆ, ಕೋಮು ಧ್ರುವೀಕರಣದ ಮೇಲೆ ಎಲ್ಲವನ್ನೂ ಮರೆಮಾಚಿ ಗೆಲ್ಲುವುದು ಕೂಡ ಬಿಜೆಪಿಗೆ ಸಾಧ್ಯ. ಜೊತೆಗೆ ಏಕ ರಾಷ್ಟ್ರ, ಏಕ ಭಾಷೆ, ಏಕ ಧರ್ಮದ ನಂಬಿಕೆ ಮೇಲೆ ರಾಜಕಾರಣ ಮಾಡುವ ಬಿಜೆಪಿಗೆ, ಹಿಂದಿಯನ್ನು, ಹಿಂದುತ್ವವನ್ನು ರಾಜಕೀಯ ದಾಳವಾಗಿ ಬಳಸುವುದು ಮುಖ್ಯ ಮತ್ತು ಅದನ್ನು ಪ್ರಶ್ನಿಸುವವರನ್ನು ರಾಷ್ಟ್ರೀಯತೆ, ದೇಶಭಕ್ತಿಯ ಕಟಕಟೆಯಲ್ಲಿ ನಿಲ್ಲಿಸುವುದು ಕೂಡ ಅದಕ್ಕೆ ಕರಗತ ಕಲೆ.

ಹಾಗಾಗಿ, ತಮಿಳರು, ಮಲಯಾಳಿಗರು, ತೆಲುಗರು ಎದುರಿಸದೇ ಇರುವ ಸಂದಿಗ್ಧತೆ ಕನ್ನಡಿಗರಿಗೆ ಎದುರಾಗಿದೆ. ಹಿಂದುತ್ವ ರಾಜಕಾರಣವನ್ನು ಒಪ್ಪಿಕೊಂಡ ಮತ್ತು ಅಪ್ಪಿಕೊಂಡ ಪ್ರತಿಫಲ ಈಗ ಯಕಃಶ್ಚಿತ್ ಒಬ್ಬ ರೈಲ್ವೆ ಅಧಿಕಾರಿಯಿಂದ ರಾಷ್ಟ್ರೀಯತೆಯ, ದೇಶಪ್ರೇಮದ ಪಾಠ ಕೇಳಬೇಕಾಗಿದೆ. ಇದು ಕನ್ನಡಿಗರ ದುರ್ದೈವ!

Click here to follow us on Facebook , Twitter, YouTube, Telegram

Pratidhvani
www.pratidhvani.com