ಕಡೆಗೂ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಬಗೆಹರಿಸಿದ ರಾಹುಲ್ ಗಾಂಧಿ
ರಾಷ್ಟ್ರೀಯ

ಕಡೆಗೂ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಬಗೆಹರಿಸಿದ ರಾಹುಲ್ ಗಾಂಧಿ

ಅಶೋಕ್ ಗೆಹ್ಲೋಟ್ ಜೊತೆಯೂ ಮಾತನಾಡಿರುವ ರಾಹುಲ್ ಗಾಂಧಿ ಎರಡೂ ಪಾಳೆಯದ ಸಾಮರ್ಥ್ಯ ಮತ್ತು ದೌರ್ಬಲ್ಯ ಅರಿತು ಇಬ್ಬರ ನಡುವೆ ಸಮನ್ವಯ ಸಾಧಿಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲು ಸೂಚಿಸಿದ್ದಾರೆ. ಇನ್ನು ಮುಂದೆ ಈ ಸಮನ್ವಯ ಸಮಿತಿಯೇ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಕು

ಯದುನಂದನ

ಕಾಂಗ್ರೆಸ್ ನಾಯಕರೇ ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಇಷ್ಟು ಸುಲಭವಾಗಿ ಬಗೆಹರಿಯುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಅವರ ಎಲ್ಲಾ ಅಂದಾಜು, ನಿರೀಕ್ಷೆಗಳಿಗೂ ಮೀರಿದ ಬೆಳವಣಿಗೆಯಾಗಿ ರಾಜಸ್ಥಾನ ಕಾಂಗ್ರೆಸಿಗೆ ಕವಿದಿದ್ದ ಕಾರ್ಮೋಡ ಕರಗಿದೆ. ಇದು ಸಾಧ್ಯವಾಗಿದ್ದು ನಾಯಕ ರಾಹುಲ್ ಗಾಂಧಿ ಮಧ್ಯಸ್ಥಿಕೆಯಿಂದ. ಬಂಡಾಯದ ಬಾವುಟ ಹಾರಿಸಿದ್ದ ಸಚಿನ್ ಪೈಲಟ್ ತಣ್ಣಗಾಗಲು ಹಲವು ಕಾರಣಗಳಿವೆ. ಜೊತೆಗೆ ತಮ್ಮ ವಿರುದ್ಧ ಸಚಿನ್ ಪೈಲಟ್ ಬಂಡೇಳಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ‌ಕೂಡ ಕಾರಣಕರ್ತರಾಗಿದ್ದಾರೆ. ಅಂತಿಮವಾಗಿ ಅಖಾಡಕ್ಕಿಳಿದ ರಾಹುಲ್ ಗಾಂಧಿ ಎರಡೂ ಪಾಳೆಯದ ದೌರ್ಬಲ್ಯಗಳನ್ನು ಪತ್ತೆ ಹಚ್ಚಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವರ ಸಹೋದರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜೊತೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಚಿನ್ ಪೈಲಟ್‌ ಹಿಂತಿರುಗಿದ್ದೇಕೆ?

ಮಗನ ಬೆಳವಣಿಗೆಗಾಗಿ ತನ್ನ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಅಶೋಕ್ ಗೆಹ್ಲೋಟ್ ಅವರ ಸರ್ಕಾರವನ್ನು ಬಲಿ‌ ತೆಗೆದುಕೊಳ್ಳಲೇಬೇಕು ಎಂದು ನಿಶ್ಚಯಿಸಿದ್ದರು ಸಚಿನ್ ಪೈಲಟ್. ಇದೇ ಹಿನ್ನಲೆಯಲ್ಲಿ ತಿಂಗಳ ಹಿಂದೆ ಬೆಂಬಲಿಗ ಬಂಡಾಯ ಶಾಸಕರೊಂದಿಗೆ ದೆಹಲಿ ವಿಮಾನ ಏರಿದ್ದ ಸಚಿನ್ ಪೈಲಟ್ ತಿಂಗಳುಗಳ‌ ಕಾಲ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಖೆಡ್ಡಾ ತೋಡುವುದರಲ್ಲೇ ನಿರತರಾಗಿದ್ದರು. ಆದರೆ ಆಗಲಿಲ್ಲ. ಏಕೆಂದರೆ ಅವರ ಬಳಿ ಸಂಖ್ಯೆ ಇರಲಿಲ್ಲ. ಸಚಿನ್ ಪೈಲಟ್ ಬಣದಲ್ಲಿ ಅವರು ಸೇರಿದಂತೆ ಇದ್ದಿದ್ದೇ 19 ಮಂದಿ ಕಾಂಗ್ರೆಸ್ ಶಾಸಕರು. ಸರ್ಕಾರ ರಚನೆ ಮಾಡುವುದಾದರೆ ಬೆಂಬಲಿಸುವುದಾಗಿ 3 ಮಂದಿ ಪಕ್ಷೇತರರು ಮುಂದೆ ಬಂದಿದ್ದರು. ಈ 22 ಮತ್ತು ಬಿಜೆಪಿಯ 75 ಶಾಸಕರು ಸೇರಿದರೂ 97 ಜನ ಆಗುತ್ತಿದ್ದರಷ್ಟೇ.

ಇನ್ನೊಂದೆಡೆ ಸಚಿನ್ ಪೈಲಟ್ ಬಣದ 19 ಮಂದಿ ಅವಿಶ್ವಾಯ ಗೊತ್ತುವಳಿ ವಿರುದ್ಧ ಮತ ಚಲಾಯಿಸಿದ್ದರೂ ಅಶೋಕ್ ಗೆಹ್ಲೋಟ್ ಸರ್ಕಾರ ಬದುಕುಳಿಯುತ್ತಿತ್ತು. ಏಕೆಂದರೆ 200 ಶಾಸಕ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 101. ಅಶೋಕ್ ಗೆಹ್ಲೋಟ್ ಸರ್ಕಾರದ ಬಳಿ ಇರುವ ಶಾಸಕರ ಸಂಖ್ಯೆ 102. ಆದ್ದರಿಂದಲೇ ದೆಹಲಿಯಲ್ಲಿ ಇದ್ದುಕೊಂಡು ಇನ್ನೊಂದಿಷ್ಟು ಶಾಸಕರನ್ನು ಸೆಳೆಯಲು ಸಚಿನ್ ಪೈಲಟ್ ಬಹಳ ಕಸರತ್ತು ನಡೆಸಿದರು. ಆದರೆ ಅನುಭವಿ ಅಶೋಕ್ ಗೆಹ್ಲೋಟ್ ತನ್ನ ಬೆಂಬಲಿಗರನ್ನು ಭದ್ರವಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗೆ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಾಗದ ಸಚಿನ್ ಪೈಲಟ್ ಮೆತ್ತಗಾಗಬೇಕಾಯಿತು. ಸಚಿನ್ ಪೈಲಟ್ ಏಕೆ ಶಾಸಕರನ್ನು ಸೆಳೆಯಲು ಸಾಧ್ಯವಾಗಲಿಲ್ಲ ಎಂದರೆ ಅದಕ್ಕೆ ಬಿಜೆಪಿಯ ನಿರುತ್ಸಾಹ ಕಾರಣವಾಗಿತ್ತು.

ಬಿಜೆಪಿಗೆ ತೀವ್ರ ಮುಖಭಂಗ

ಕಾಂಗ್ರೆಸ್ ರಾಜಸ್ಥಾನದಲ್ಲಿ ಸರ್ಕಾರ ಉಳಿಸಿಕೊಳ್ಳಲು ಮಾತ್ರ ಯಶಸ್ವಿಯಾಗಿಲ್ಲ. ಬಿಜೆಪಿಗೆ ಭಾರೀ ಮುಖಭಂಗವನ್ನು ಉಂಟುಮಾಡಿದೆ. ಇದಕ್ಕೆ ಬಿಜೆಪಿಯ ದುರಾಸೆ ಮತ್ತು ಅತ್ಯುತ್ಸಾಹಗಳೂ ಕಾರಣ. ಮಧ್ಯಪ್ರದೇಶದಲ್ಲಿ ಆದಂತೆ ಎಲ್ಲವೂ ನಾವು ಅಂದುಕೊಂಡಂತೆಯೇ ಆಗಿಬಿಡುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು. 'ಆಪರೇಷನ್ ಕಮಲ' ಶುರುಮಾಡಿಬಿಟ್ಟರೆ ಶಾಸಕರನ್ನು ಸೆಳೆಯುವುದು ಸುಲಭ ಅಂದುಕೊಂಡಿತ್ತು. ಆದರೆ ಈ ರಾಜಕೀಯ ಪ್ರಹಸನ ಬಗೆಹರಿಸಲು ನ್ಯಾಯಾಲಯ ಹೆಚ್ಚು ದಿನ‌ ತೆಗೆದುಕೊಂಡಿದ್ದರಿಂದ, ನ್ಯಾಯಾಲಯದ ಎದುರು 'ತಾಂತ್ರಿಕವಾಗಿ ಸರಿ ಇರಬೇಕು' ಎನ್ನುವ ಕಾರಣಕ್ಕೆ ಸಚಿನ್ ಪೈಲಟ್ ಬಣದ ಶಾಸಕರು ಬಿಜೆಪಿ ಜೊತೆ ಅಂತರ ಕಾಯ್ದುಕೊಂಡಿದ್ದರಿಂದ, ಪ್ರಾದೇಶಿಕ ಪಕ್ಷ ಹುಟ್ಟುಹಾಕುವ ಸುದ್ದಿ ಹರಡಿದ್ದರಿಂದ, ಬಿಜೆಪಿ ನಾಯಕರೇ ಮುಂದೆ ಬರುತ್ತಿಲ್ಲ, ನಾಳೆ ಸರ್ಕಾರ ರಚನೆ ಆಗುತ್ತೋ ಇಲ್ಲವೋ ಎನ್ನುವ ಅನುಮಾನ ಶಾಸಕರನ್ನು ಕಾಡತೊಡಗಿದ್ದರಿಂದ ಹಾಗೂ ಸಚಿನ್ ಪೈಲಟ್ ನಿಜಕ್ಕೂ ನಮ್ಮ ಪಕ್ಷ ಸೇರುವರಾ ಎಂಬ ಗುಮಾನಿ ಬಂದಿದ್ದರಿಂದ ಬಿಜೆಪಿ ಉತ್ಸಾಹ ಕಳೆದುಕೊಂಡಿತು.

ವಸುಂಧರಾ ರಾಜೇ ವಿರೋಧ

ಇನ್ನೊಂದೆಡೆ ಸಚಿನ್ ಪೈಲಟ್ ಬಿಜೆಪಿ ಸೇರುವುದಕ್ಕೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯ ವಿರೋಧ ವ್ಯಕ್ತಪಡಿಸಿದರು. ಇನ್ನೇನು ಅಂತಿಮ‌ ಸ್ವರೂಪ ಪಡೆದುಕೊಳ್ಳುತ್ತಿದೆ ಎನ್ನುವ ಹಂತದಲ್ಲಿ ದೆಹಲಿಗೆ ಆಗಮಿಸಿದ ವಸುಂಧರಾ ರಾಜೇ, ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ, ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ 'ಯಾವ ಕಾರಣಕ್ಕೂ ತನ್ನ‌ ರಾಜಕೀಯ ವೈರಿ ಸಚಿನ್ ಪೈಲಟ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಡಿ' ಎಂಬ ಒತ್ತಡ ಹೇರಿದರು. ಒಂದೊಮ್ಮೆ ಅನಿವಾರ್ಯವಾಗಿ ಬಿಜೆಪಿಗೆ ಬರಮಾಡಿಕೊಂಡರೂ ತಾನೇ ಮುಖ್ಯಮಂತ್ರಿ ಆಗಬೇಕು. ತನ್ನ ಕೈಕೆಳಗೆ ಸಚಿನ್ ಪೈಲಟ್ ಕೆಲಸ ಮಾಡಬೇಕು' ಎಂದು ಪಟ್ಟು ಹಾಕತೊಡಗಿದರು. ಹಿರಿಯ ನಾಯಕಿ ವಸುಂಧರಾ ರಾಜೇ ಅವರ ಒತ್ತಡಕ್ಕೆ ಮಣಿದ ಬಿಜೆಪಿ ಅಳಿದುಳಿದ ಆಸಕ್ತಿಯನ್ನು ಕಳೆದುಕೊಂಡಿತು. ಆಗ ಸಚಿನ್ ಪೈಲಟ್ ಅಕ್ಷರಶಃ ಅತಂತ್ರರಾಗಿದ್ದರು.

ಅಖಾಡಕ್ಕಿಳಿದ ರಾಹುಲ್ ಗಾಂಧಿ

ಸಚಿನ್ ಪೈಲಟ್ ಮುಂದಿದ್ದ ದಾರಿಗಳು ಮುಚ್ಚಿಹೋಗಿವೆ ಎಂಬ ಮಾಹಿತಿ ಅರಿತ ರಾಹುಲ್ ಗಾಂಧಿ ಅವರು ಪರಿಸ್ಥಿತಿಯನ್ನು ತಮ್ಮ ಪರವಾಗಿ ಮಾಡಿಕೊಳ್ಳಬೇಕೆಂದು ಅಖಾಡಕ್ಕಿಳಿದರು. ಸಚಿನ್ ಪೈಲಟ್ ಗೆ ಬುಲಾವ್ ಕೊಟ್ಟರು. ಜೊತೆಗೆ ಸಚಿನ್ ಪೈಲಟ್ ಕಷ್ಟ ಹೇಳಿಕೊಳ್ಳಲು ಕಿವಿ ಕೊಟ್ಟರು. ಅಶೋಕ್ ಗೆಹ್ಲೋಟ್ ಅವರಿಂದ ಆಗುತ್ತಿರುವ ಅವಮಾನ, ಕಡೆಗಣನೆಗಳೆಲ್ಲವನ್ನೂ ಸಚಿನ್ ಪೈಲಟ್ ತೋಡಿಕೊಂಡರು. ಸಚಿನ್ ಪೈಲಟ್ ಸಮಸ್ಯೆಗಳನ್ನು ಆಲಿಸಿದ ರಾಹುಲ್ ಗಾಂಧಿ ಸಮಸ್ಯೆ ಮುಂದುವರೆಯದಂತೆ ಭರವಸೆ ನೀಡಿದರು.‌ ಅಷ್ಟೇಯಲ್ಲ ಅದಕ್ಕಾಗಿ ಸಂಧಾನ ಸೂತ್ರವನ್ನೂ ಸಿದ್ದಪಡಿಸಿದರು.

ರಾಹುಲ್ ಗಾಂಧಿ ಎಣೆದ ಸಂಧಾನ ಸೂತ್ರ

ಈಗಾಗಲೇ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದ್ದ ಸಚಿನ್ ಪೈಲಟ್ ಅವರನ್ನು ಗೌರವಯುತವಾಗಿ ಮತ್ತದೇ ಸ್ಥಾನಕ್ಕೆ ಕರೆತರುವುದು ಹಾಗೂ ಅಶೋಕ್ ಗೆಹ್ಲೋಟ್ ಅವರಿಗೆ ಮೂಗುದಾರ ಹಾಕುವುದು ರಾಹುಲ್ ಗಾಂಧಿ ಅವರ ಸಂಧಾನ ಸೂತ್ರದ ಸಾರವಾಗಿವೆ. ಅಶೋಕ್ ಗೆಹ್ಲೋಟ್ ಜೊತೆಯೂ ಮಾತನಾಡಿರುವ ರಾಹುಲ್ ಗಾಂಧಿ ಎರಡೂ ಪಾಳೆಯದ ಸಾಮರ್ಥ್ಯ ಮತ್ತು ದೌರ್ಬಲ್ಯ ಅರಿತು ಇಬ್ಬರ ನಡುವೆ ಸಮನ್ವಯ ಸಾಧಿಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲು ಸೂಚಿಸಿದ್ದಾರೆ. ಇನ್ನು ಮುಂದೆ ಈ ಸಮನ್ವಯ ಸಮಿತಿಯೇ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸೂಚಿಸುವ ಮೂಲಕ‌ ಅಶೋಕ್ ಗೆಹ್ಲೋಟ್ ಅವರಿಗೆ ಮೂಗುದಾರ ಹಾಕಿದ್ದಾರೆ. ಸಚಿನ್ ಪೈಲಟ್ ಅವರನ್ನು ಕಡೆಗಣಿಸಿದ್ದು ವಾಸ್ತವವಾದ ಕಾರಣ ಅಶೋಕ್ ಗೆಹ್ಲೋಟ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲಿಗೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್ ಪಕ್ಷದ ಪಾಲಿಗೆ ನಿರಾಳವನ್ನುಂಟುಮಾಡಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com