ಹೈ ಪ್ರೊಫೈಲ್ ಪ್ರಕರಣ ಕಡತ ಕಣ್ಮರೆ ಪ್ರಧಾನಿ ಮೋದಿಯರಿಗೆ ಹೊಸದೇನಲ್ಲ!
ರಾಷ್ಟ್ರೀಯ

ಹೈ ಪ್ರೊಫೈಲ್ ಪ್ರಕರಣ ಕಡತ ಕಣ್ಮರೆ ಪ್ರಧಾನಿ ಮೋದಿಯರಿಗೆ ಹೊಸದೇನಲ್ಲ!

ಜನಸಾಮಾನ್ಯರ ನಂಬಿಕೆ ಮತ್ತು ವಿಶ್ವಾಸದ ಅಂತಿಮ ಆಯ್ಕೆಯಾದ ನ್ಯಾಯಾಲಯದ ನಡುಮನೆಯಲ್ಲೇ ಕಡತ ಕಳವಾಗುವುದೆಂದರೆ; ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುತ್ತಿರುವುದರ ಸ್ಪಷ್ಟ ಸೂಚನೆ. ಆದರೆ, ಹೀಗೆ ಕಡತ ಕಣ್ಮರೆಗೆ ಮೋದಿಯವರ ಆಡಳಿತದಲ್ಲಿ ದೊಡ್ಡ ಪರಂಪರೆಯೇ ಇದೆ ಎಂಬುದು ವಾಸ್ತವ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕಳೆದ ವಾರ ಎರಡು ಪ್ರಮುಖ ಕಡತಗಳು ಕಾಣೆಯಾದ ಸುದ್ದಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. ಒಂದು ಕಡೆ ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ವಿಜಯ್ ಮಲ್ಯಗೆ ಸಂಬಂಧಿಸಿದ ದಾಖಲೆಗಳು ಸುಪ್ರೀಂಕೋರ್ಟ್ ಕಡತದಿಂದಲೇ ಕಾಣೆಯಾದರೆ, ಮತ್ತೊಂದು ಕಡೆ ಲಡಾಕ್ ಗಡಿಯಲ್ಲಿ ಚೀನಾ ಆಕ್ರಮಣದ ಕುರಿತ ರಕ್ಷಣಾ ಸಚಿವಾಲಯದ ಅಧಿಕೃತ ಮಾಹಿತಿ, ಅದರ ವೆಬ್ ತಾಣದಿಂದ ದಿಢೀರ್ ನಾಪತ್ತೆಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೊದಲನೆಯ ಕಡತ ಕಾಣೆ ಪ್ರಕರಣ ಮೋದಿಯವರು ‘ಚೌಕಿದಾರ’ರಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಅಲ್ಲಿನ ಬಹುಕೋಟಿ ವಂಚನೆ ಪ್ರಕರಣದ ವಿಷಯದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದಾರೆ ಎಂಬುದಕ್ಕೆ ಸಾಕ್ಷಿಯಾದರೆ, ಎರಡನೆಯದು ದೇಶದ ಗಡಿ ಮತ್ತು ಸಮಗ್ರತೆಯ ವಿಷಯದಲ್ಲಿ ಈ ಸ್ವಯಂಘೋಷಿತ ಚೌಕಿದಾರರು ಎಷ್ಟು ಮುಕ್ತ ಮತ್ತು ಪ್ರಾಮಾಣಿಕತೆಯಿಂದ ಜನರ ಮುಂದೆ ವಾಸ್ತವಾಂಶ ಇಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ಹಾಗಾಗಿ ಸಹಜವಾಗೇ ಈ ಕಡತ ಕಳವು ಪ್ರಕರಣಗಳು ದೇಶಾದ್ಯಂತ ಮೋದಿ ಮತ್ತು ಬಿಜೆಪಿ ಸರ್ಕಾರದ ಆಡಳಿತ ವೈಖರಿಯ ಟೀಕೆ- ವ್ಯಂಗ್ಯ- ವಿಡಂಬನೆಯ ನೆಪವಾದವು.

ಪ್ರತಿಪಕ್ಷಗಳಂತೂ ಮೋದಿಯವರನ್ನೇ ಗುರಿಯಾಗಿಸಿಕೊಂಡು, ದೇಶದ ಸುಪ್ರೀಂಕೋರ್ಟಿನ ಕಡತಗಳನ್ನೇ ರಕ್ಷಿಸಲಾಗದವರು, ರಕ್ಷಣಾ ಇಲಾಖೆಯ ಕಡತವನ್ನೇ ಪಾರದರ್ಶಕವಾಗಿ ಇಡಲಾಗದವರು ದೇಶದ ಗಡಿಯನ್ನು, ಜನರನ್ನು ಹೇಗೆ ಸುರಕ್ಷಿತವಾಗಿಡಬಲ್ಲರು, ಜನರಿಗೆ ಹೇಗೆ ಪಾರದರ್ಶಕ ಆಡಳಿತ ನೀಡಬಲ್ಲರು ಎಂಬ ಪ್ರಶ್ನೆಗಳು ಎದ್ದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತೂ ಎಂದಿನಂತೆ, “ದೇಶ ಭಾವೋದ್ವೇಗಕ್ಕೆ ಒಳಗಾದಾಗೆಲ್ಲಾ ಕಡತ ಕಳವು ಆಗುವುದು ಸಹಜ” ಎನ್ನುವ ಮೂಲಕ ಜನರ ಕಣ್ಣಲ್ಲಿ ತಪ್ಪಿತಸ್ಥ ಎಂಬ ಭಾವನೆ ಮೂಡುವಾಗೆಲ್ಲಾ ಹೇಗೆ ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಮೋದಿ ಸರ್ಕಾರ ಕಡತ ಕಳವು, ಕಡತ ನಾಶ, ಕಡತ ಕಣ್ಮೆರೆಯಂತಹ ತಂತ್ರಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ ಎಂಬ ಬಗ್ಗೆ ಗಮನ ಸೆಳೆದಿದ್ದಾರೆ.

ಹಾಗೆ ನೋಡಿದರೆ, ರಾಹುಲ್ ಹೇಳುವಂತೆ ಮೋದಿಯವರ ಅಧಿಕಾರ ಅವಧಿಯಲ್ಲಿ ಕಡತ ಕಾಣೆ ಎಂಬುದೊಂದು ಪರಂಪರೆಯಂತೆ ಚಾಲ್ತಿಯಲ್ಲಿದೆ. ಅದು 2002ರ ಗುಜರಾತ್ ಗಲಭೆಯಿಂದ ಆರಂಭವಾಗಿ ಇತ್ತೀಚಿನ ವಿಜಯ್ ಮಲ್ಯ ಕಡತಗಳವರೆಗೆ ಈ ಪರಂಪರೆ ಹಬ್ಬಿದೆ. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಚಲನವಲನ, ಮೊಬೈಲ್ ಕರೆಗಳ ದಾಖಲೆ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು 2007ರಲ್ಲಿ ದಿಢೀರನೇ ನಾಶಪಡಿಸಲಾಗಿತ್ತು. ಸಾವಿರಾರು ಮಂದಿಯ ಹತ್ಯೆ, ಅತ್ಯಾಚಾರದಂತಹ ಅಮಾನುಷ ಘಟನೆಗಳು ನಡೆದ ಗುಜರಾತ್ ಗಲಭೆಗಳ ಹಿಂದೆ ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಗೃಹ ಸಚಿವರಾಗಿದ್ದ ಹರೇನ್ ಪಾಂಡ್ಯಾ ಅವರ ಕೈವಾಡ ಇದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾನಾವತಿ ಆಯೋಗದ ತನಿಖೆಯ ನಡುವೆಯೇ ಆಯೋಗಕ್ಕಾಗಲೀ, ಇತರ ತನಿಖಾ ಸಂಸ್ಥೆಗಳಿಗಾಗಲೀ ಯಾವ ಮಾಹಿತಿಯನ್ನೂ ನೀಡದೆ ಆ ದಾಖಲೆಗಳನ್ನು ಸುಟ್ಟುಹಾಕಲಾಗಿತ್ತು! ಆ ಬಳಿಕ, ಐದು ವರ್ಷಗಳಿಗೊಮ್ಮೆ ಕಡತ ನಾಶ ಮಾಡುವುದು ತಮ್ಮ ಸರ್ಕಾರದ ಮಾಮೂಲಿ ಕ್ರಿಯೆ ಎಂದು ಮೋದಿಯವರ ಗುಜರಾತ್ ಸರ್ಕಾರ ನಾನಾವತಿ ಆಯೋಗಕ್ಕೆ ಪ್ರತಿಕ್ರಿಯಿಸಿತ್ತು!

ಗುಜರಾತ್ ಗಲಭೆ ಮತ್ತು ಆ ಬಳಿಕದ ರಾಜಕೀಯ ಬೆಳವಣಿಗೆಗಳು ಮೋದಿಯವರ ರಾಜಕೀಯ ಏಳಿಗೆಗೆ ಹೇಗೆ ಕಾರಣವಾದವು ಎಂಬುದನ್ನು ಬಲ್ಲವರಿಗೆ, ಈ ದಾಖಲೆಗಳ ನಾಶ ಘಟನೆ ಎಂತಹ ಅಪಾಯದಿಂದ ಮೋದಿಯವರನ್ನು ಮತ್ತು ಅವರ ಸರ್ಕಾರವನ್ನು, ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಬಚಾವು ಮಾಡಿದವು ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಅಷ್ಟರಮಟ್ಟಿಗೆ ಕಡತ ಕಣ್ಮರೆ, ಅಥವಾ ನಾಶ ಎಂಬುದು ಪ್ರಧಾನಿ ಮೋದಿಯವರ ರಾಜಕೀಯ ಅಭ್ಯುದಯದ ಹಿಂದಿನ ತಂತ್ರಗಾರಿಕೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.

ಆ ಬಳಿಕ ದೇಶದ ಪ್ರಧಾನಿಯಾಗಿ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದ ಬಳಿಕ ಕೂಡ ಕಡತ ಕಣ್ಮರೆ ತಂತ್ರಗಾರಿಕೆ ಮುಂದುವರಿದಿದೆ. ಆದರೆ, ವಿಪರ್ಯಾಸಕರ ಸಂಗತಿಯೆಂದರೆ; ಇದೇ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದ ವರ್ಷಗಳಲ್ಲಿ ಇದೇ ಕಡತ ಕಣ್ಮರೆ ವಿಷಯವನ್ನು ಪದೇ ಪದೆ ಸಾರ್ವಜನಿಕ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಿದ್ದ ಮೋದಿಯವರು, ಎಂದಿನಂತೆ 70 ವರ್ಷಗಳ ಕಾಂಗ್ರೆಸ್ ಆಡಳಿತದ ವಿರುದ್ಧ ಆರೋಪಗಳ ಸುರಿಮಳೆಗರೆಯುತ್ತಿದ್ದರು. ಹಾಗೆ ಕಡತ ಕಣ್ಮರೆ ವಿಷಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಗುರಿಮಾಡಿ ಅವರು 2016ರಲ್ಲಿ ಮಾಡಿದ ಒಂದು ಭಾಷಣದಲ್ಲಿ, “ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಪ್ರತ್ಯೇಕ ಪುರಾತತ್ವ ಇಲಾಖೆಯನ್ನೇ ಆರಂಭಿಸಬೇಕು ಎಂದುಕೊಂಡಿರಲಿಲ್ಲ. 30-40 ವರ್ಷಗಳ ಹಳೆಯ ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ಹುಡಕಲು ಮತ್ತು ಕಾಣೆಯಾದ ಕಡತಗಳ ಪತ್ತೆಗಾಗಿ ನಾನು ಈಗ ಪುರಾತತ್ವ ಇಲಾಖೆಯನ್ನೇ ಸ್ಥಾಪಿಸಬೇಕಾಗಿದೆ. ಬಹುತೇಕ ಯೋಜನೆಗಳು ಕಡತಗಳಲ್ಲಿ ಮಾತ್ರ ಉಳಿದಿವೆ, ಇಲ್ಲವೇ ಯೋಜನಾ ಕಡತಗಳೇ ಮಾಯವಾಗಿವೆ” ಎಂದು ಹೇಳಿದ್ದರು.

ಈಗ ಮೋದಿಯವರ ಆ ಮಾತುಗಳು ಅವರಿಗೇ ತಿರುಗುಬಾಣವಾಗಿದ್ದು, ಅವರ ಸರ್ಕಾರದ ವಿರುದ್ಧ ಈಗ ಜನಸಾಮಾನ್ಯರೇ ಹೀಗೆ ಕಡತ ಮಾಯದ ಹಿಂದಿನ ಹಕೀಕತ್ತು ಕಂಡುಹಿಡಿಯಲು ಪ್ರತ್ಯೇಕ ತನಿಖಾ ವ್ಯವಸ್ಥೆಯನ್ನೇ ಹುಟ್ಟುಹಾಕಬೇಕಾಗಿದೆ ಎಂದು ವ್ಯಂಗ್ಯವಾಡತೊಡಗಿದ್ದಾರೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ದೇಶದ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಹೆಚ್ಚತೊಡಗಿದವು. ಸಾವಿರಾರು ಕೋಟಿ ರೂ. ಸಾಲ ಪಡೆದು, ಸಾಲ ವಾಪಸು ಮಾಡದೆ ಸರ್ಕಾರ, ಸಿಬಿಐ, ಇಡಿ, ಬ್ಯಾಂಕುಗಳ ಕಣ್ಣುತಪ್ಪಿಸಿ ವಿದೇಶಕ್ಕೆ ಹಾರಿದ ಬಹುಕೋಟಿ ಸಾಲಗಾರರು ಮತ್ತು ಕಾರ್ಪೊರೇಟ್ ಕುಳಗಳ ಪಟ್ಟಿ ಬೆಳೆಯುತ್ತಲೇ ಇದೆ. ಆ ಪೈಕಿ ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತಿತರ ವಂಚಕರಂತೂ ಬಹುತೇಕ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಸ್ನೇಹ ಬಳಗದಲ್ಲೇ ಗುರುತಿಸಿಕೊಂಡಿದ್ದವರು. ಹಲವು ರೀತಿಯಲ್ಲಿ ಬಿಜೆಪಿಯ ನಾಯಕರಿಂದ ಅನುಕೂಲ ಪಡೆದವರು ಮತ್ತು ಅನುಕೂಲ ಮಾಡಿಕೊಟ್ಟವರು ಕೂಡ!

ಆದರೆ, ಈ ಮಲ್ಯ ಬರೋಬ್ಬರಿ ಒಂಭತ್ತು ಸಾವಿರ ಕೋಟಿ ರೂ. ವಂಚನೆಗೆ ಸಂಬಂಧಿಸಿದ ಮಹತ್ವದ ಕಡತದ ದಾಖಲೆಗಳು ದೇಶದ ಸುಪ್ರೀಂಕೋರ್ಟಿನ ಕಡತದಿಂದಲೇ ಮಾಯವಾಗಿವೆ. ಹಾಗೇ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಕೂಡ ಬರೋಬ್ಬರಿ 15 ಸಾವಿರ ಕೋಟಿ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಪತ್ರಗಳು ಕೂಡ, ಅನುಮಾನಾಸ್ಪದವಾಗಿ ಬೆಂಕಿಗೆ ಆಹುತಿಯಾದವು. 2018ರ ಜೂನ್ ನಲ್ಲಿ ಆ ದಾಖಲೆಗಳನ್ನು ಇಟ್ಟಿದ್ದ ಜಾರಿ ಆದಾಯ ತೆರಿಗೆ ಇಲಾಖೆಗೆ ಸೇರಿದ ಮುಂಬೈನ ಕಟ್ಟಡಕ್ಕೆ ದಿಢೀರ್ ಬೆಂಕಿ ಬಿದ್ದಿತ್ತು!

ಒಂದು ಕಡೆ ಈ ವಂಚಕರ ವಿರುದ್ಧ ಪ್ರಧಾನಿ ಮೋದಿಯವರು ಚುನಾವಣಾ ಕಣದಲ್ಲಿ ಭಾರೀ ವೀರಾವೇಶದ ಭಾಷಣಗಳನ್ನು ಬಿಗಿಯುತ್ತಿರುವ ಹೊತ್ತಿಗೇ, ಆ ವಂಚಕರಿಗೆ ಬೆಂಬಲವಾಗಿ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಇತ್ತು. ಹಾಗಾಗಿ ಅವರು ದೇಶದ ಜನರ ಹಣವನ್ನು ನುಂಗಿ ನೀರುಕುಡಿದರು ಎಂದು ಹೇಳುತ್ತಿರುವ ಹೊತ್ತಿಗೇ ಅದೇ ವಂಚಕರು ಮೋದಿಯವರ ಸರ್ಕಾರದ ಕಣ್ಗಾವಲಿನಲ್ಲಿಯೇ ವಿದೇಶಕ್ಕೆ ಹಾರಿದ್ದರು ಮತ್ತು ಹಾಗೆ ಹಾರಿ ಹೋಗಲು ಅವರ ಸಂಪುಟದ ಕೆಲವು ಹಿರಿಯ ಸಚಿವರೇ ನೆರವಾಗಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಜೊತೆಗೆ, ಆ ವಂಚಕರ ವಂಚನೆಗಳಿಗೆ ಸಾಕ್ಷ್ಯಗಳಾಗಿದ್ದ ಪ್ರಮುಖ ದಾಖಲೆಗಳು ಮೋದಿಯವರ ಸರ್ಕಾರದ ಸುಪರ್ದಿಯಲ್ಲೇ ಕಾಣೆಯಾಗಿದ್ದವು!

ಇದೆಲ್ಲಕ್ಕಿಂತ ಬಹಳ ಮಹತ್ವದ ಮತ್ತೊಂದು ಕಡತ ಕಣ್ಮರೆ ಪ್ರಕರಣವೆಂದರೆ; ಅದು ರಾಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದ್ದು. ಫ್ರಾನ್ಸ್ ನಿಂದ ಅತ್ಯಾಧುನಿಕ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಪ್ರಧಾನಿ ಮೋದಿಯವರು ಹಸ್ತಕ್ಷೇಪ ಮಾಡಿದ್ದಾರೆ. ರಕ್ಷಣಾ ಇಲಾಖೆಯ ಮಾತುಕತೆಯ ಹೊರತಾಗಿ ಪ್ರತ್ಯೇಕವಾಗಿ ಮೋದಿಯವರು ಉದ್ಯಮಿ ಅಂಬಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರೆಂಚ್ ಅಧ್ಯಕ್ಷರೊಂದಿಗೆ ಪ್ರತ್ಯೇಕ ಭೇಟಿ ಮಾಡಿ ವ್ಯವಹಾರ ನಡೆಸಿದ್ದಾರೆ ಎಂಬುದು ಪ್ರಮುಖವಾಗಿ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳಿಂದ ಗಂಭೀರ ಆರೋಪ ಕೇಳಿಬಂದಿತ್ತು. ಆ ವಿಷಯವನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟಿನಲ್ಲಿ ಮೊಕದ್ದಮೆಯನ್ನೂ ಹೂಡಲಾಗಿತ್ತು.

ಬರೋಬ್ಬರಿ 56 ಸಾವಿರ ಕೋಟಿ ಬೃಹತ್ ಮೊತ್ತದ ಬಹುಕೋಟಿ ವ್ಯವಹಾರದಲ್ಲಿ ಕಿಕ್ ಬ್ಯಾಕ್ ಮತ್ತು ಭಾರೀ ಸ್ವಜನಪಕ್ಷಪಾತ ನಡೆದಿದೆ. ಆ ಹಿನ್ನೆಲೆಯಲ್ಲಿ ಈ ಖರೀದಿ ಒಪ್ಪಂದವನ್ನು ರದ್ದುಪಡಿಸಬೇಕು ಎಂಬುದು ದೂರಿನ ಸಾರಾಂಶವಾಗಿತ್ತು. ಈ ನಡುವೆ, 2019ರ ಮಾರ್ಚಿನಲ್ಲಿ ಪ್ರಕರಣದ ವಿಚಾರಣೆಯ ಹಂತದಲ್ಲಿಯೇ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟಿಗೆ ಒಂದು ಪ್ರಮಾಣಪತ್ರ ಸಲ್ಲಿಸಿ, ಒಪ್ಪಂದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಕಳೆದುಹೋಗಿವೆ. ಕಳೆದು ಹೋಗಿರುವ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ವರದಿಗಳನ್ನು ಪ್ರಕಟಿಸುತ್ತಿರುವ ಪತ್ರಿಕೆಗಳ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಲಾಗುವುದು ಎಂದು ಸ್ವತಃ ಕೇಂದ್ರ ಸರ್ಕಾರ ಹೇಳಿತ್ತು! ರಾಫೇಲ್ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಿ ಸರ್ಕಾರ ಹೇಗೆ ಉದ್ಯಮಿಯೊಬ್ಬರಿಗೆ ಅನುಕೂಲ ಮಾಡಿಕೊಡಲು ಒಪ್ಪಂದದ ಷರತ್ತುಗಳನ್ನು ಬದಲಾಯಿಸಿದೆ ಎಂಬುದನ್ನು ದ ಹಿಂದೂ ಪತ್ರಿಕೆ ಸರಣಿ ವರದಿಗಳ ಮೂಲಕ ಬಹಿರಂಗಪಡಿಸಿತ್ತು. ಆ ಹಿನ್ನೆಲೆಯಲ್ಲಿ ಪ್ರಕರಣರ ಮರು ವಿಚಾರಣೆಗೆ ಅರ್ಜಿದಾರರು ಮನವಿ ಮಾಡಿದ ಮೇರೆಗೆ ಸುಪ್ರೀಂಕೋರ್ಟ್ ಪ್ರಕರಣದ ಮರು ವಿಚಾರಣೆ ಕೈಗೆತ್ತಿಕೊಂಡಾಗ, ಕೇಂದ್ರ ಸರ್ಕಾರ ಕಡತ ಕಣ್ಮರೆಯ ವಿಷಯ ನ್ಯಾಯಾಲಯದ ಗಮನಕ್ಕೆ ತಂದಿತ್ತು!

ಹೀಗೆ ಬಹುಕೋಟಿ ಹಗರಣಗಳು, ಬ್ಯಾಂಕಿಂಗ್ ವಂಚನೆಗಳು, ಅಧಿಕಾರಸ್ಥರೇ ನಡೆಸಿದ ಗಲಭೆಗಳ ವಿಷಯದಲ್ಲಿ ಮಾತ್ರವಲ್ಲದೆ, ಕಡತ ಕಣ್ಮರೆ ತಂತ್ರಗಾರಿಕೆ ದೇಶದ ಆರ್ಥಿಕ ಬೆಳವಣಿಗೆ ದರ, ಜಿಡಿಪಿ ಅಂಕಿಅಂಶ, ಗ್ರಾಹಕ ಕೊಳ್ಳುವ ಶಕ್ತಿ ಸೂಚ್ಯಂಕ, ರೈತ ಆತ್ಮಹತ್ಯೆ, ಗುಂಪುಹಲ್ಲೆ ಸಾವು(ಮಾಬ್ ಲಿಂಚಿಂಗ್), ನಿರುದ್ಯೋಗ ಸೇರಿದಂತೆ ಸರ್ಕಾರದ ನೀತಿ-ನಿಲುವುಗಳ ವೈಫಲ್ಯ ತೋರುವ ಹಲವು ಸಂಗತಿಗಳ ವಿಷಯದಲ್ಲಿಯೂ ಪ್ರಯೋಗವಾಗುತ್ತಲೇ ಇದೆ.

ಹಾಗಾಗಿ, ಮಾಯವಾಗುವ ಕಡತಗಳ ಶೋಧಿಸಲು, ಅವು ಬಚ್ಚಿಟ್ಟುಕೊಂಡು ಜಾಗ ಮತ್ತು ಬೆಂಕಿ ಹಚ್ಚಿದ ಕೈಗಳ ಕುರಿತ ಸಂಶೋಧನೆ ನಡೆಸಲು ನಿಜವಾಗಿಯೂ ಪ್ರತ್ಯೇಕ ಇಲಾಖೆಗಳೇ ಬೇಕಿದೆ. ಸ್ವತಃ ಮೋದಿಯವರೇ ಹೇಳಿದಂತೆ ಕಡತ ಉತ್ಖನನಕ್ಕೆ ಪ್ರತ್ಯೇಕ ಪುರಾತತ್ವ ಇಲಾಖೆ ಸ್ಥಾಪನೆ ತುರ್ತಾಗಿ ಆಗಬೇಕಿದೆ. ಜನಸಾಮಾನ್ಯರು ಸರ್ಕಾರಿ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮತ್ತು ವಿಶ್ವಾಸ ಎಂಬ ಆಡಳಿತದ ಅಡಿಪಾಯ ಸಂಪೂರ್ಣ ಕುಸಿಯದಂತೆ ಕಾಯಲು ಕೂಡ ಪ್ರತ್ಯೇಕ ಕಣ್ಗಾವಲು ವ್ಯವಸ್ಥೆಯ ಜರೂರಿದೆ. ಏಕೆಂದರೆ, ಜನಸಾಮಾನ್ಯರ ನಂಬಿಕೆ ಮತ್ತು ವಿಶ್ವಾಸದ ಅಂತಿಮ ಆಯ್ಕೆಯಾದ ನ್ಯಾಯಾಲಯದ ನಡುಮನೆಯಲ್ಲೇ ಕಡತ ಕಳವಾಗುವುದೆಂದರೆ; ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುತ್ತಿರುವುದರ ಸ್ಪಷ್ಟ ಸೂಚನೆ. ಹಾಗೇ ದೇಶದ ಭದ್ರತೆ ಮತ್ತು ಸಮಗ್ರತೆಯ ವಿಷಯದಲ್ಲಿ ಜನರಿಗೆ ಅಭಯ ನೀಡಬೇಕಾದ ರಕ್ಷಣಾ ಸಚಿವಾಲಯವೇ ಸತ್ಯವನ್ನು ಮರೆಮಾಚತೊಡಗಿದರೆ ಅದೂ ಕೂಡ ಪ್ರಜಾಪ್ರಭುತ್ವದ ಆರೋಗ್ಯದ ಸೂಚನೆಯಲ್ಲ!

ಹಾಗಾಗಿ ಖಂಡಿತವಾಗಿಯೂ ಮೋದಿಯವರು ತಮ್ಮ ಈ ಹಿಂದಿನ ಮಾತುಗಳನ್ನು ಈಗ ಜಾರಿಗೆ ತರಬೇಕಾಗಿದೆ. ಅಕ್ಷರಶಃ ಕಡತ ಕಣ್ಮರೆಯಂತಹ ಮಾಯಾವಿ ಶಕ್ತಿಗಳ ಮೇಲೆ ಕಣ್ಗಾವಲು ವ್ಯವಸ್ಥೆ ಜಾರಿಯಾಗಬೇಕಿದೆ. ಆ ಮೂಲಕ ಕಡತ ಕಣ್ಮರೆ ಪರಂಪರೆಗೆ ಇತಿಶ್ರೀ ಹಾಡಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com