ಕರಿಪುರ ವಿಮಾನ ನಿಲ್ದಾಣ ಲ್ಯಾಂಡಿಂಗ್‌ಗೆ ಅಸುರಕ್ಷಿತ: 2011 ರಲ್ಲೇ ನೀಡಲಾಗಿತ್ತು ಎಚ್ಚರಿಕೆ
ರಾಷ್ಟ್ರೀಯ

ಕರಿಪುರ ವಿಮಾನ ನಿಲ್ದಾಣ ಲ್ಯಾಂಡಿಂಗ್‌ಗೆ ಅಸುರಕ್ಷಿತ: 2011 ರಲ್ಲೇ ನೀಡಲಾಗಿತ್ತು ಎಚ್ಚರಿಕೆ

ಕರಿಪುರ ವಿಮಾನ ನಿಲ್ದಾಣ ಅಸಮರ್ಪಕ ವ್ಯವಸ್ಥೆ ಹೊಂದಿದ್ದು, ಇಲ್ಲಿ ವಿಮಾನಗಳನ್ನು ಇಳಿಸಲು ಅವಕಾಶ ನೀಡಬಾರದು. ವಿಶೇಷವಾಗಿ ಮಳೆಯ ವಾತಾವಾರಣದಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಬಾರದೆಂದು ನಾಗರಿಕ ವಿಮಾನಯಾನ ಸಚಿವಾಲಯವು ರಚಿಸಿದ ಸುರಕ್ಷತಾ ಸಲಹಾ ಸಮಿತಿಯ ಸದಸ್ಯ ಕ್ಯಾಪ್ಟನ್ ಮೋಹನ್ ರಂಗನಾಥನ್ ಒಂಬತ್ತು ವರ್ಷಗಳ ಹಿಂದೆ ಎಚ್ಚರಿಕೆ ನೀಡಿದ್ದರು.

ಪ್ರತಿಧ್ವನಿ ವರದಿ

ಕ್ಯಾಲಿಕಟ್‌ ಕರಿಪುರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

127 ಪ್ರಯಾಣಿಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಲಿಕಟ್‌ ವಿಮಾನ ನಿಲ್ದಾಣದಲ್ಲಿ ಇಳಿದ ವಿಮಾನ ಲ್ಯಾಂಡ್‌ ಮಾಡುವ ವೇಳೆ ರನ್‌ವೇಯಿಂದ ಜಾರಿತ್ತು. ಅಪಘಾತದ ತೀವ್ರತೆಗೆ ವಿಮಾನ ಎರಡು ಭಾಗವಾಗಿ ವಿಮಾನದ ಮುಂಭಾಗ ಬೆಂಕಿಗೆ ಆಹುತಿಯಾಗಿದ್ದು ಮುಂಭಾಗದಲ್ಲಿ ಕುಳಿತಿದ್ದ 2 ಪೈಲಟ್‌ ಹಾಗೂ 16 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಲಾಕ್‌ಡೌನ್‌ ಹಿನ್ನಲೆಯಲ್ಲಿ ವಿದೇಶಗಳಲ್ಲಿ ಬಾಕಿಯಾಗಿದ್ದ ಭಾರತೀಯರನ್ನು ಕರೆತರಲು ಆರಂಭಿಸಲಾಗಿದ್ದ ವಂದೇ ಭಾರತ್‌ ಮಿಶನ್‌ ಅಡಿಯಲ್ಲಿ ಏರ್‌ ಇಂಡಿಯಾ ಬೋಯಿಂಗ್‌ 737, IX-1344 ಸಂಖ್ಯೆಯಲ್ಲಿ ಕಾರ್ಯಾಚರಿಸುವ ವಿಮಾನ ದುಬೈನಿಂದ 184 ಪ್ರಯಾಣಿಕರನ್ನು ಹಾಗೂ 6 ಮಂದಿ ಸಿಬ್ಬಂದಿಗಳನ್ನು ಹೊತ್ತು ಭಾರತಕ್ಕೆ ಮರಳಿತ್ತು. ಶುಕ್ರವಾರ ರಾತ್ರಿ ಸುಮಾರು 7:40 ಹೊತ್ತಿಗೆ ಲ್ಯಾಂಡ್‌ ಮಾಡುವ ಸಂಧರ್ಭದಲ್ಲಿ ರನ್‌ವೇಯಿಂದ ಜಾರಿ ಕಮರಿಗೆ ಇಳಿದಿದೆ.

ಭಾರೀ ಮಳೆ ಇದ್ದುದರಿಂದ ಹಾಗೂ ಕ್ಯಾಲಿಕಟ್‌ ವಿಮಾನ ನಿಲ್ದಾಣ ಹವಾಮಾನ ವೈಪರೀತ್ಯ ಹಾಗೂ ಮಳೆಯ ವಾತಾವರಣದಲ್ಲಿ ಲ್ಯಾಂಡ್‌ ಮಾಡಲು ಅಷ್ಟೊಂದು ಯೋಗ್ಯವಲ್ಲದ ರನ್‌ವೇ ಹೊಂದಿರುವುದರಿಂದ ಪೈಲಟ್‌, ವಿಮಾನವನ್ನು ನೇರವಾಗಿ ರನ್‌ವೇಗೆ ಇಳಿಸದೆ ಎರಡು ಸುತ್ತು ವಿಮಾನ ನಿಲ್ದಾಣದ ಸುತ್ತಲೂ ಹಾರಾಡಿಸಿದ್ದರು. ಅದಾಗ್ಯೂ, ಪೈಲಟ್‌ನ ಪ್ರಯತ್ನಗಳೆಲ್ಲಾ ವಿಫಲಗೊಂಡು ರನ್‌ವೇಯಿಂದ ಜಾರಿ ಕಮರಿಗೆ ಇಳಿದಿದೆ. ಅಪಘಾತದ ತೀವೃತೆಗೆ ವಿಮಾನ ಎರಡು ಭಾಗಗೊಂಡು ಮುಂಭಾಗಕ್ಕೆ ಬೆಂಕಿ ತಗುಲಿದೆ. ಹಾಗಾಗಿ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಹೆಚ್ಚಿನ ಅಪಾಯ ಉಂಟಾಗಿದೆ ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ. ‌

ಮೃತಪಟ್ಟ ಪೈಲಟ್‌ ದೀಪಕ್‌ ವಸಂತ್‌
ಮೃತಪಟ್ಟ ಪೈಲಟ್‌ ದೀಪಕ್‌ ವಸಂತ್‌

ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಅಪಘಾತಕ್ಕೊಳಗಾದ ವಿಮಾನದ ʼಬ್ಲಾಕ್‌ ಬಾಕ್ಸ್‌ʼ ಪತ್ತೆಯಾಗಿದೆ. ವಿಮಾನ ಅಪಘಾತಕ್ಕೆ ಸರಿಯಾದ ಕಾರಣ ಕಂಡುಕೊಳ್ಳಲು ಈ ಬ್ಲ್ಯಾಕ್‌ ಬಾಕ್ಸ್‌ ನಿರ್ಣಾಯಕವಾಗಲಿದೆ

ವಿಮಾನ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಸ್ಥರು ಹಾಗೂ ಗಾಯಗೊಳಗಾದ ಪ್ರಯಾಣಿಕರಿಗೆ ಸಾಂತ್ವನ ಹಾಗೂ ಸಹಾಯ ಮಾಡಲು ಏರ್‌ ಇಂಡಿಯಾದ ʼಏಂಜಲ್ಸ್‌ ಆಫ್‌ ಏರ್‌ ಇಂಡಿಯಾʼ ತಂಡ ಕೇರಳಕ್ಕೆ ಆಗಮಿಸಿವೆ. 2010 ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದ ಬಳಿಕ ಏರ್‌ ಇಂಡಿಯಾ ಈ ತಂಡವನ್ನು ರಚಿಸಿತ್ತು.

ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ ಹತ್ತು ಲಕ್ಷ ಪರಿಹಾರ ಧನ ನೀಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ.

ಆಘಾತಕಾರಿ ಅಂಶವೇನೆಂದರೆ, ಕ್ಯಾಲಿಕಟ್‌ ಕರಿಪುರ್‌ ವಿಮಾನ ನಿಲ್ದಾಣದ ಅಸುರಕ್ಷತೆಯ ಕುರಿತಂತೆ 9 ವರ್ಷದ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಕರಿಪುರ ವಿಮಾನ ನಿಲ್ದಾಣ ಅಸಮರ್ಪಕ ವ್ಯವಸ್ಥೆ ಹೊಂದಿದ್ದು, ಇಲ್ಲಿ ವಿಮಾನಗಳನ್ನು ಇಳಿಸಲು ಅವಕಾಶ ನೀಡಬಾರದು. ವಿಶೇಷವಾಗಿ ಮಳೆಯ ವಾತಾವಾರಣದಲ್ಲಿ, ರನ್‌ವೇ ಒದ್ದೆಯಾಗಿರುವಂತಹ ಸಂಧರ್ಭದಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಬಾರದೆಂದು ನಾಗರಿಕ ವಿಮಾನಯಾನ ಸಚಿವಾಲಯವು ರಚಿಸಿದ ಸುರಕ್ಷತಾ ಸಲಹಾ ಸಮಿತಿಯ ಸದಸ್ಯ ಕ್ಯಾಪ್ಟನ್ ಮೋಹನ್ ರಂಗನಾಥನ್ ಒಂಬತ್ತು ವರ್ಷಗಳ ಹಿಂದೆ ಎಚ್ಚರಿಕೆ ನೀಡಿದ್ದರು.

ಮಂಗಳೂರು ವಿಮಾನ ಅಪಘಾತ ನಡೆದ ಬಳಿಕ ನಾನು ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಲಾಗಿದೆ. ಬೆಟ್ಟದ ಮೇಲಿರುವ ಈ ವಿಮಾನ ನಿಲ್ದಾಣದ ರನ್‌ವೇ ಇಳಿಜಾರಿನಿಂದ ಕೂಡಿದೆ. ಅಲ್ಲದೆ ರನ್‌ವೆ ಕೊನೆಯಲ್ಲಿರುವ ಬಫರ್‌ ಝೋನ್‌ ಅಸಮರ್ಪಕವಾಗಿದೆ ಎಂದು ನಾನು ಎಚ್ಚರಿಕೆ ನೀಡಿದ್ದೆ ಎಂದು ರಂಗನಾಥನ್‌ ಹೇಳಿದ್ದಾರೆ.

ಸಾಮಾನ್ಯವಾಗಿ 240 ಮೀಟರ್‌ ಬಫರ್‌ ಝೋನ್‌ ಹೊಂದಿರಬೇಕು ಆದರೆ ಈ ವಿಮಾನ ನಿಲ್ದಾಣದಲ್ಲಿ 90 ಮೀಟರ್‌ ಬಫರ್‌ ಝೋನ್‌ ಇದೆ. ಅಲ್ಲದೆ ರನ್‌ವೇ ಬದಿಯ ಎರಡೂ ಬದಿಯಲ್ಲೂ 100 ಮೀಟರ್‌ ಸ್ಥಳಾವಕಾಶ ಇರಬೇಕಾದಲ್ಲಿ, ಇಲ್ಲಿ 75 ಮೀಟರ್‌ ಮಾತ್ರ ಇದೆ ಎಂದು ಅವರು ಹೇಳಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ರನ್‌ವೇಯ ಎರಡೂ ಬದಿಗಳಲ್ಲಿ ರಬ್ಬರ್‌ ತುಣುಕುಗಳು ಪತ್ತೆಯಾದ ಕುರಿತು, ರನ್‌ವೇಯಲ್ಲಿ ಬಿರುಕುಗಳು ಮೂಡಿರುವ ಕುರಿತು, ರನ್‌ವೇ ಅಂಚಿನಲ್ಲಿ 1.5 ಮೀ ಎತ್ತರದಲ್ಲಿ ನೀರು ಸಂಗ್ರಹವಾಗಿರುವುದು ಸೇರಿದಂತೆ 8 ಅಸಮರ್ಪಕ ವ್ಯವಸ್ಥೆಗಳನ್ನು ಪಟ್ಟಿಮಾಡಿ, ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಕರಿಪುರ್‌ ವಿಮಾನ ನಿಲ್ದಾನದ ನಿರ್ದೇಶಕರಿಗೆ 2019ರಲ್ಲಿಯೇ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಆ ನೋಟೀಸ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

2015 ರಲ್ಲಿ ರನ್‌ವೇಯಲ್ಲಿ ಕೆಲವು ಸಮಸ್ಯೆಗಳನ್ನು ಇದ್ದದ್ದು ನಿಜ, ಆದರೆ ಆ ಸಮಸ್ಯೆಗಳನ್ನು ಪರಿಹರಿಸಿದ ನಂತರ, 2019 ರಲ್ಲಿ ಅದಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಅನುಮತಿ ನೀಡಿತ್ತು. ಏರ್ ಇಂಡಿಯಾದ ಜಂಬೋ ಜೆಟ್‌ಗಳು ಕೂಡಾ ಅಲ್ಲಿಗೆ ಇಳಿಯುತ್ತಿದ್ದವು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಧ್ಯಕ್ಷ ಅರವಿಂದ್ ಸಿಂಗ್ ಹೇಳಿದ್ದಾರೆ.

ವಿಮಾನವು ಯಾವ ರನ್‌ವೇಯಲ್ಲಿ ಇಳಿಯಬೇಕಿತ್ತೋ ಅಲ್ಲಿ ಇಳಿಯಲು ಸಾಧ್ಯವಾಗಲಿಲ್ಲ, ಬಳಿಕ ಮತ್ತೊಂದು ರನ್‌ವೇನಲ್ಲಿ ಇಳಿಯಲು ಪ್ರಯತ್ನಿಸಲಾಯಿತು, ಅಲ್ಲಿ ಅಪಘಾತ ಸಂಭವಿಸಿದೆ. ನಾವು ಪರಿಸ್ಥಿತಿಯನ್ನು ವಿಚಾರಣೆ ಮಾಡುತ್ತಿದ್ದೇವೆ ಮತ್ತು ವಿಮಾನ ನಿಲ್ದಾಣವು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ನಾಗ್ಪುರದಲ್ಲಿ ಪರ್ಯಾಯ ಸೌಲಭ್ಯವೂ ಪ್ರಗತಿಯಲ್ಲಿದೆ ಅರವಿಂದ್ ಸಿಂಗ್ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com